Advertisement

ಬಸವನಾಡಿನಲ್ಲಿ ಹೆಚ್ಚಿದ ಸಹಕಾರಿ ಸಿರಿ

11:57 AM Nov 14, 2019 | |

„ಜಿ.ಎಸ್‌. ಕಮತರ
ವಿಜಯಪುರ:
ಕನ್ನಡ ಸಾರಸ್ವತ ಲೋಕಕ್ಕೆ ವಚನ ಸಾಹಿತ್ಯ ಮೂಲಕ ಕೊಡುಗೆ ನೀಡಿರುವ ಬಸವನಾಡು ಸಹಕಾರಿ ರಂಗದಲ್ಲೂ ತನ್ನ ಛಾಪು ಮೂಡಿಸಿದೆ. ಜಿಲ್ಲೆಯಲ್ಲಿ ಹಲವು ಸಹಕಾರಿ ಬ್ಯಾಂಕ್‌ಗಳು ಶತಮಾನೋತ್ಸವ ಆಚರಿಕೊಂಡಿರುವುದೇ ಇದಕ್ಕೆ ಜೀವಂತ ನಿದರ್ಶನ.

Advertisement

ಜಿಲ್ಲೆಯಲ್ಲಿ ಆದರಲ್ಲೂ ಕೃಷಿ ವ್ಯವಸ್ಥೆಯಲ್ಲಿ ಅನ್ನದಾತರಿಗೆ ತುರ್ತು ಆರ್ಥಿಕ ಪರಿಸ್ಥಿತಿ ಸಂದರ್ಭದಲ್ಲಿ ಹಣಕಾಸು ಸಮಸ್ಯೆ ನೀಗಿಸುವಲ್ಲಿ ಪ್ರಮುಖ ಪಾತ್ರ ವಹಿಸಿದ್ದು, ವಚನ ಪಿತಾಮಹ ಎಂದೇ ಕೀರ್ತಿ ಪಡೆದ ರಾವ್‌ ಬಹಾದ್ದೂರ್‌ ಡಾ| ಫ.ಗು. ಹಳಕಟ್ಟಿ ಅವರ ಸಾರಥ್ಯದಲ್ಲಿ ಸ್ಥಾಪಿತವಾಗಿದ್ದ ಸಿದ್ದೇಶ್ವರ ಸಹಕಾರಿ ಬ್ಯಾಂಕ್‌ ಈಗಾಗಲೇ ಶತಮಾನೋತ್ಸವ ಆಚರಿಸಿಕೊಂಡಿದ್ದು, ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್‌ ಶತಕದ ಹೊಸ್ತಿಲಲ್ಲಿ ನಿಂತಿರುವುದು ಬಸವನಾಡು ಸಹಕಾರಿ ರಂಗಕ್ಕೆ ನೀಡಿರುವ ಅನುಪಮ ಸೇವೆಯ ಪ್ರತೀಕ.

ಜಿಲ್ಲೆಯಲ್ಲಿ 288 ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ (ಪಿಕೆಪಿಎಸ್‌) ಬ್ಯಾಂಕ್‌ಗಳಲ್ಲಿ ಹಲವು ಕಾರಣಗಳಿಂದ ಹಿನ್ನಡೆ ಅನುಭವಿಸುತ್ತಿರುವ 2 ಸಂಸ್ಥೆಗಳನ್ನು ಹೊರತು ಪಡಿಸಿದರೆ ಜಿಲ್ಲೆಯ ಸಹಕಾರಿ ವ್ಯವಸ್ಥೆಯಲ್ಲಿ 286 ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಬ್ಯಾಂಕ್‌ಗಳು ಅತ್ಯಂತ ಯಶಸ್ವಿ ಹಾದಿಯಲ್ಲಿವೆ. 2 ಲಕ್ಷ ಅನ್ನದಾತರಿಗೆ ಪಿಕೆಪಿಎಸ್‌ ಬ್ಯಾಂಕ್‌ಗಳು ಈವರೆಗೆ 822 ಕೋಟಿ ರೂ. ಕೃಷಿ ಸಾಲ ನೀಡಿವೆ. ಬಹುತೇಕ ಸಹಕಾರಿ ಸಂಘಗಳು ಸ್ವಂತ ಕಟ್ಟಡ ಹಾಗೂ ದಾಸ್ತಾನು ಮಳಿಗೆ, ಗೋದಾಮು ಹೊಂದಿವೆ.

ಜಿಲ್ಲೆಯ ಉಕ್ಕಲಿ, ತಿಕೋಟಾ, ಹೊರ್ತಿ, ಕುದರಿಸಾಲವಾಡಗಿ, ಹಿಟ್ನಳ್ಳಿ ಸೇರಿದಂತೆ ಹಲವು ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘಗಳು ಗರಿಷ್ಠ ಮಟ್ಟದ ಆಡಳಿತ ನಿರ್ವಹಣೆಯಿಂದ ಮಾದರಿ ಎನಿಸಿವೆ. ಇದು ಜಿಲ್ಲೆಯಲ್ಲಿನ ಸಹಕಾರಿ ವ್ಯವಸ್ಥೆಯ ಬಲವರ್ಧನೆಯ ಜೀವಂತ ನಿದರ್ಶನ.

ಕೃಷಿ ಹೊರತಾಗಿ ಇತರೆ ಸಹಕಾರಿ ವಲಯದಲ್ಲಿರುವ 1,221 ವಿವಿಧ ಸಹಕಾರಿ ಬ್ಯಾಂಕ್‌ ಗಳಲ್ಲಿ ಕಾರಣಾಂತರಗಳಿಂದ 29 ಬ್ಯಾಂಕ್‌ಗಳು ಸ್ಥಗಿತಗೊಂಡಿದ್ದರೆ, 125 ಬ್ಯಾಂಕ್‌ಗಳು ಲಿಕ್ವಿಡೇಶನ್‌ ಆಗಿವೆ. 21 ಅರ್ಬನ್‌ ಬ್ಯಾಂಕ್‌ಗಳಲ್ಲಿ 19 ಬ್ಯಾಂಕ್‌ಗಳು ಅತ್ಯಂತ ಸುಸ್ಥಿತಿಯಲ್ಲಿ ವಹಿವಾಟು ನಡೆಸುತ್ತಿವೆ. ಇದರ ಹೊರತಾಗಿಯೂ 1,350 ಸಹಕಾರಿ ಬ್ಯಾಂಕ್‌ಗಳು ಜಿಲ್ಲೆಯ ಆರ್ಥಿಕ ಸ್ಥಿತಿ ಸುಧಾರಿಸುವಲ್ಲಿ ನೆರವಾಗಿವೆ.

Advertisement

ಕಳೆದ ಮಾರ್ಚ್‌ ಅಂತ್ಯಕ್ಕೆ ಜಿಲ್ಲೆಯ 19 ಅರ್ಬನ್‌ ಬ್ಯಾಂಕ್‌ಗಳು 1,49,841 ಸದಸ್ಯರನ್ನು ಹೊಂದಿದ್ದು, 1,763.88 ಕೋಟಿ ರೂ. ದುಡಿಯುವ ಬಂಡವಾಳ ಹೊಂದಿವೆ. 995.55 ಕೋಟಿ ರೂ. ಸಾಲ ನೀಡುವ ಮೂಲಕ ದುರ್ಬಲರ ಆರ್ಥಿಕ ಪ್ರಗತಿಗೆ ಸಹಕಾರ ನೀಡಿವೆ.

ಜಿಲ್ಲೆಯ ಸಹಕಾರಿ ವ್ಯವಸ್ಥೆಗೆ ಮಹಿಳಾ ಸ್ವಸಹಾಯ ಗುಂಪುಗಳ ಕೊಡುಗೆಯೂ ಅನನ್ಯವಾಗಿದೆ. ಜಿಲ್ಲೆಯಲ್ಲಿ ಈವರೆಗೆ 8552 ಸ್ವ-ಸಹಾಯ ಗುಂಪುಗಳ ರಚನೆಯಾಗಿದ್ದು, 2.56 ಕೋಟಿ ರೂ. ಉಳಿತಾಯ ಮಾಡಿವೆ. ಇದರಿಂದ 6,096 ಗುಂಪುಗಳಿಗೆ 66.98 ಕೋಟಿ ಸಾಲದ ಜೋಡಣೆ ಮಾಡಿದೆ. ಮತ್ತೂಂದೆಡೆ 3116 ಜಂಟಿ ಬಾಧ್ಯತೆಯೊಂದಿಗೆ ರಚನೆಯಾಗಿರುವ 3116 ಗುಂಪುಗಳಲ್ಲಿ 2782 ಗುಂಪುಗಳಿಗೆ 27.87 ಕೋಟಿ ರೂ. ಸಾಲದ ಜೋಡಣೆ ಕಲ್ಪಿಸಲಾಗಿದೆ.

ಕಳೆದ ಮಾರ್ಚ್‌ ಅಂತ್ಯಕ್ಕೆ 1025 ಸ್ವ-ಸಹಾಯ ಗುಂಪುಗಳಿಂದ 8.21 ಕೋಟಿ ರೂ., 883 ಜಂಟಿ ಬಾಧ್ಯತಾ ಗುಂಪುಗಳಿಂದ 7.24 ಕೋಟಿ ರೂ. ಸಾಲ ಬಾಕಿ ಇದೆ. ಇದಲ್ಲದೇ ಜಿಲ್ಲೆಯ ಸಹಕಾರಿ ವ್ಯವಸ್ಥೆ ಬಲವರ್ಧನೆಗೆ ಶತಮಾನದಿಂದ ಟೊಂಕ ಕಟ್ಟಿರುವ ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್‌ ಸಂಪೂರ್ಣವಾಗಿ ಕೋರ್‌ ಬ್ಯಾಂಕಿಂಗ್‌ ವ್ಯವಸ್ಥೆಯಡಿ ಕಾರ್ಯ ನಿರ್ವಹಿಸುತ್ತಿದ್ದು, ಡಿಜಿಟಲ್‌ ಬ್ಯಾಂಕಿಂಗ್‌ನ ವಿವಿಧ ಸೇವೆ ಸೇರಿದಂತೆ ತನ್ನ ಎಲ್ಲ ಆರ್ಥಿಕ ವಹಿವಾಟನ್ನು ಗಣಕೀಕೃತ ವ್ಯವಸ್ಥೆಯಡಿ ಜಾರಿಗೊಳಿಸುವ ಮೂಲಕ ಆಧುನಿಕ ತಂತ್ರಜ್ಞಾನಕ್ಕೆ ತನ್ನನ್ನು ಒಗ್ಗಿಸಿಕೊಂಡು ಯಶಸ್ವಿಯಾಗಿ ಮುನ್ನಡೆಯುತ್ತಿವೆ.

Advertisement

Udayavani is now on Telegram. Click here to join our channel and stay updated with the latest news.

Next