ವಿಜಯಪುರ: ಬಂಜಾರ ಸಮಾಜದ ಬಗ್ಗೆ ನನಗೆ ಗೌರವವಿದೆ. ಬಂಜಾರ ಸಮಾಜದವರು ಯಾರು, ಅವರ ವೋಟ್ ನನಗೆ ಬೇಡ ಎಂದು ಎಲ್ಲಿಯೂ ಹೇಳಿಕೆ ನೀಡಿಲ್ಲ ಎಂದು ವಿಜಯಪುರ ಕ್ಷೇತ್ರದ ಬಿಜೆಪಿ ಘೋಷಿತ ಅಭ್ಯರ್ಥಿ-ಸಂಸದ ರಮೇಶ ಜಿಗಜಿಣಗಿ ಸ್ಪಷ್ಟಪಡಿಸಿದ್ದಾರೆ.
ಈ ಕುರಿತು ಮಾಧ್ಯಮಗಳಿಗೆ ಪ್ರಕಟಣೆ ನೀಡಿರುವ ಅವರು, ಚುನಾವಣೆ ಹಿನ್ನೆಲೆಯಲ್ಲಿ ಕಾಂಗ್ರೆಸ್‍ನ ಕೆಲವರು ದುರುದ್ದೇಶದಿಂದ ತಪ್ಪು ಸಂದೇಶವನ್ನು ಬಿತ್ತುತ್ತಿದ್ದಾರೆ. ಬಂಜಾರ ಸಮಾಜದ ಬಿಜೆಪಿ ಟಿಕೆಟ್ ಆಕಾಂಕ್ಷಿಯೊಬ್ಬರು ಪಕ್ಷದ ಕಚೇರಿಗೆ ಮುತ್ತಿಗೆ ಹಾಕಿ ನನ್ನ ವಿರುದ್ಧ ಪ್ರತಿಭಟನೆ ನಡೆಸಿದ್ದರು. ನನ್ನ ಬಗ್ಗೆ ಅನಗತ್ಯ ಆರೋಪ ಮಾಡಿದ್ದರ ಕುರಿತು ಮಾಧ್ಯಮದವರಿಗೆ ಪ್ರತಿಕ್ರಿಯೆ ನೀಡುವಾಗ ನಾನು ಬಂಜಾರ ಸಮಾಜಕ್ಕೆ ಅವಮಾನ ಮಾಡಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.
ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದವರು ನಮ್ಮ ಜಿಲ್ಲೆಯವರಲ್ಲ. ನೆರೆಯ ಬಾಗಲಕೋಟೆ ಜಿಲ್ಲೆಯಿಂದ ಕರೆತಂದಿದ್ದರು. ಅಭ್ಯರ್ಥಿ ಬದಲಿಸಿ ಎಂದು ಈಗ ಹೇಳುವ ಬದಲು ಪಕ್ಷಕ್ಕಾಗಿ ಶ್ರಮಿಸಿದರೆ ಭವಿಷ್ಯದಲ್ಲಿ ಅವರಿಗೆ ಅವಕಾಶಗಳು ಲಭಿಸುತ್ತವೆ ಎಂದು ಹೇಳಿಕೆ ನೀಡಿದ್ದೇನೆ ಎಂದು ಸಮಜಾಯಿಷಿ ನೀಡಿದ್ದಾರೆ.
ನನ್ನ ರಾಜಕೀಯ ಜೀವನದಲ್ಲಿ ಇದುವರೆಗೆ ನಾನು ಯಾವುದೇ ಸಮಾಜದವರಿಗೂ ಅನ್ಯಾಯ, ಅವಮಾನ ಮಾಡಿಲ್ಲ. ಬದಲಾಗಿ ಎಲ್ಲ ಸಮಾಜದವರನ್ನು ಹೆಗಲ ಮೇಲೆ ಹೊತ್ತುಕೊಂಡು ಗೌರವದಿಂದ ನಡೆದುಕೊಂಡಿದ್ದೇನೆ ಎಂದು ಸ್ಪಷ್ಟಪಡಿಸಿದ್ದಾರೆ.
ಕಾಂಗ್ರೆಸ್ ಪಕ್ಷದವರು ದುರುದ್ದೇಶದ ನಡೆಸಿರುವ ರಾಜಕೀಯ ಅಪಪ್ರಚಾರಕ್ಕೆ ಬಂಜಾರ ಸಮಾಜದವರು ಕಿವಿಗೊಡಬಾರದು, ಸದಾಕಾಲ ಬಂಜಾರಾ ಸಮಾಜದೊಂದಿಗೆ ಇರುತ್ತೇನೆ ಎಂದು ತಿಳಿಸಿದರು.