Advertisement
ಮೇಲ್ಮನೆ ವಿಪಕ್ಷ ನಾಯಕರಾಗಿರುವ ಎಸ್.ಆರ್.ಪಾಟೀಲ ಹಾಗೂ ಸುನೀಲಗೌಡ ಪಾಟೀಲ ಅವಧಿ 2022, ಜ.5ರಂದು ಮುಕ್ತಾಯವಾಗಲಿದೆ. ಕಾಂಗ್ರೆಸ್ ತೆಕ್ಕೆಯಲ್ಲಿರುವ ತೆರವಾಗುವ ಈ ಸ್ಥಾನಗಳಿಗೆ ಚುನಾವಣಾ ಆಯೋಗ ಚುನಾವಣೆ ದಿನಾಂಕ ಪ್ರಕಟಿಸಿದೆ.
Related Articles
Advertisement
ಇದನ್ನೂ ಓದಿ:ಬಿಟ್ ಕಾಯಿನ್ ವಿಚಾರದಲ್ಲಿ ಯಾರ ಮೇಲಾದ್ರೂ ಆಪಾದನೆಯಿದ್ರೆ ತಕ್ಷಣ ಕ್ರಮ : ಈಶ್ವರಪ್ಪ
ಆಗ ಬಿಜೆಪಿಯಿಂದ ಉಚ್ಛಾಟನೆಗೊಂಡಿದ್ದ ಯತ್ನಾಳ 2018ರ ವಿಧಾನಸಭೆ ಚುನಾವಣೆಯಲ್ಲಿ ಬಿಜೆಪಿ ಸೇರಿದ್ದರು. ಅಲ್ಲದೇ ವಿಜಯಪುರ ವಿಧಾನಸಭೆ ಕ್ಷೇತ್ರಕ್ಕೆ ಟಿಕೆಟ್ ಖಚಿತಪಡಿಸಿಕೊಂಡು ಮೇಲ್ಮನೆ ಸ್ಥಾನಕ್ಕೆ ರಾಜೀನಾಮೆ ನೀಡಿದ್ದರು. ಯತ್ನಾಳ ಅವರಿಂದ ತೆರವಾಗಿದ್ದ ಸ್ಥಾನಕ್ಕೆ 2018ರಲ್ಲಿ ನಡೆದ ಉಪ ಚುನಾವಣೆಯಲ್ಲಿ ಮಾಜಿ ಸಚಿವ ಎಂ.ಬಿ.ಪಾಟೀಲ ಅವರ ಸಹೋದರ ಸುನೀಲಗೌಡ ಪಾಟೀಲ ಕಾಂಗ್ರೆಸ್‌ನಿಂದ ಸ್ಪರ್ಧಿಸಿ ಗೆದ್ದಿದ್ದರು.
ಆಗ ರಾಜ್ಯದಲ್ಲಿ ಮೈತ್ರಿ ಸರ್ಕಾರ ಅಧಿಕಾರದಲ್ಲಿದ್ದ ಕಾರಣ ಜೆಡಿಎಸ್ ಜತೆ ಕಾಂಗ್ರೆಸ್ ಮೈತ್ರಿ ಮಾಡಿಕೊಂಡಿತ್ತು. 8111 ಮತಗಳಲ್ಲಿ 4819 ಮತ ಪಡೆದಿದ್ದ ಮೈತ್ರಿ ಪಕ್ಷಗಳ ಕಾಂಗ್ರೆಸ್ ಅಭ್ಯರ್ಥಿ ಸುನೀಲಗೌಡ ಪಾಟೀಲ 2040 ಮತಗಳ ಭಾರೀ ಅಂತರದಿಂದ ಗೆಲುವು ಸಾಧಿಸಿದ್ದರು. ವಿಜಯಪುರ ಪಾಲಿಕೆ ಸದಸ್ಯರಾಗಿದ್ದ ಬಿಜೆಪಿ ಉಮೇದುವಾರ ಗೂಳಪ್ಪ ಶೆಟಗಾರ 2779 ಪಡೆದು ಹೀನಾಯ ಸೋಲುಂಡಿದ್ದರು.
ಕಾಂಗ್ರೆಸ್‌ನಿಂದ ಯಾರು?
ಸ್ಥಳೀಯ ಸಂಸ್ಥೆಗಳ ಮೇಲ್ಮನೆ ಚುನಾವಣೆ ಟಿಕೆಟ್ ಆಕಾಂಕ್ಷಿಗಳಿಂದ ಅ.30ರೊಳಗೆ 1 ಲಕ್ಷ ರೂ. ಶುಲ್ಕವನ್ನು ಡಿಡಿ ಸಹಿತ ಅರ್ಜಿ ಸಲ್ಲಿಸುವಂತೆ ಕೆಪಿಸಿಸಿ ಅರ್ಜಿ ಆಹ್ವಾನಿಸಿತ್ತು. ಹಾಲಿ ಸದಸ್ಯರಾದ ಎಸ್.ಆರ್.ಪಾಟೀಲ, ಸುನೀಲಗೌಡ ಪಾಟೀಲ ಮಾತ್ರವಲ್ಲ ಕೆಪಿಸಿಸಿ ವಕ್ತಾರ ಎಸ್.ಎಂ.ಪಾಟೀಲ ಗಣಿಹಾರ ಅರ್ಜಿ ಸಲ್ಲಿಸಿದ್ದಾರೆ.
ಇನ್ನು ಬಿಜೆಪಿಯಲ್ಲೂ ಆಕಾಂಕ್ಷಿಗಳ ಸಂಖ್ಯೆ ದೊಡ್ಡದಿದೆ. ಕಳೆದ ತಿಂಗಳು ಬಿಜೆಪಿ ಸೂಚನೆ ಮೇರೆಗೆ ಮೇಲ್ಮನೆ ಸದಸ್ಯ ಪ್ರದೀಪ ಶೆಟ್ಟರ್ ಹಾಗೂ ಪಕ್ಷದ ರಾಜ್ಯ ಪ್ರಧಾನ ಕಾರ್ಯದರ್ಶಿ ಮಹೇಶ ಟೆಂಗಿನಕಾಯಿ ಅವರು ಜಿಲ್ಲೆಗೆ ಆಗಮಿಸಿ ಮಂಡಲ ಅಧ್ಯಕ್ಷರ ಸಭೆ, ಆಕಾಂಕ್ಷಿಗಳ ಮಾಹಿತಿ ಸಂಗ್ರಹಿಸಿದ್ದಾರೆ.
ಇದಲ್ಲದೇ ನ. 21ರಂದು ಜನಸ್ವರಾಜ್ ಕಾರ್ಯಕ್ರಮ ನಡೆಯಲಿದೆ. ಈ ಹಿನ್ನೆಲೆ ನ. 12ರಂದು ಪೂರ್ವಭಾವಿ ಸಭೆಯಲ್ಲಿ ಪಾಲ್ಗೊಳ್ಳಲು ಬಿಜೆಪಿ ಪ್ರಧಾನ ರಾಜ್ಯ ಕಾರ್ಯದರ್ಶಿ ಎನ್.ರವಿಕುಮಾರ, ರಾಜ್ಯ ಕಾರ್ಯದರ್ಶಿ, ನವೀನಕುಮಾರ ಅವರು ಜಿಲ್ಲೆಗೆ ಭೇಟಿ ನೀಡಲಿದ್ದಾರೆ. ಆಗ ಮೇಲ್ಮನೆ ಚುನಾವಣೆ ಟಿಕೆಟ್ ಆಕಾಂಕ್ಷಿಗಳು ಹಾಗೂ ಪಕ್ಷದ ಮುಖಂಡರೊಂದಿಗೆ ಈ ಬಗ್ಗೆ ಚರ್ಚೆ ನಡೆಯುವ ಸಾಧ್ಯತೆ ಇದೆ.
ವಿಜಯಪುರ ಜಿಲ್ಲೆ ಬಿಜೆಪಿ ಜಿಲ್ಲಾಧ್ಯಕ್ಷ ಆರ್.ಎಸ್.ಪಾಟೀಲ ಕೂಚಬಾಳ, ಕಳೆದ ಬಾರಿಯ ಪರಾಜಿತ ಅಭ್ಯರ್ಥಿ ಗೂಳಪ್ಪ ಶೆಟಗಾರ, ಬಾಗಲಕೋಟೆ ಜಿಲ್ಲೆಯಲ್ಲಿ ಪ್ರಕಾಶ ತಪಶೆಟ್ಟಿ, ಪಿ.ಎಚ್.ಪೂಜಾರ, ಎಸ್.ಪಿ.ಪಾಟೀಲ, ಅರವಿಂದ ಮಂಗಳೂರು, ಜಗದೀಶ ಗುಡಗುಂಟಿ, ಮಲ್ಲಿಕಾರ್ಜುನ ಚರಂತಿಮಠ ಇವರು ತಮ್ಮನ್ನು ಪರಿಗಣಿಸುವಂತೆ ಕೋರಿಕೆ ಸಲ್ಲಿಸಿದ್ದಾರೆ.
ನಾನು ಸೇರಿದಂತೆ ಅವಳಿ ಜಿಲ್ಲೆಯಲ್ಲಿ ಸುಮಾರು 10-12 ಜನರು ಟಿಕೆಟ್ ಆಕಾಂಕ್ಷಿಗಳಿದ್ದೇವೆ. ಪಕ್ಷದ ವರಿಷ್ಠರು ಚುನಾವಣೆ ವೀಕ್ಷಕರನ್ನು ನೇಮಿಸಿದ್ದು, ಮಾಹಿತಿಯನ್ನೂ ಸಂಗ್ರಹಿಸಿದ್ದಾರೆ. ಪಕ್ಷದ ತೀರ್ಮಾನಕ್ಕೆ ಎಲ್ಲರೂ ತಲೆ ಬಾಗಬೇಕು. -ಆರ್.ಎಸ್. ಪಾಟೀಲ, ಕೂಚಬಾಳ, ಜಿಲ್ಲಾಧ್ಯಕ್ಷರು, ಬಿಜೆಪಿ, ವಿಜಯಪುರ
ಅಲ್ಪಸಂಖ್ಯಾತರು ಕಾಂಗ್ರೆಸ್ ಪಕ್ಷಕ್ಕೆ ಬೆನ್ನೆಲುಬಾಗಿ ನಿಂತಿದ್ದು, ಉತ್ತರ ಕರ್ನಾಟಕದಲ್ಲಿ ಎಲ್ಲಿಯೂ ಮೇಲ್ಮನೆಗೆ ಅವಕಾಶ ನೀಡಿಲ್ಲ. ಹೀಗಾಗಿ ನಮ್ಮ ಸಮುದಾಯಕ್ಕೆ ರಾಜಕೀಯ ಪ್ರಾತಿನಿಧ್ಯ ನೀಡಲು ನನಗೆ ಟಿಕೆಟ್ ನೀಡಿ ಎಂದು ಮನವಿ ಮಾಡಿಕೊಂಡಿದ್ದೇವೆ. -ಎಸ್.ಎಂ.ಪಾಟೀಲ, ಗಣಿಹಾರ, ಕಾಂಗ್ರೆಸ್ ಟಿಕೆಟ್ ಆಕಾಂಕ್ಷಿ, ವಿಜಯಪುರ
-ಜಿ.ಎಸ್. ಕಮತರ