ವಿಜಯಪುರ: 81 ರ ಇಳಿವಯಸ್ಸಿನ ವೃದ್ಧರೊಬ್ಬರು ಐದನೇ ಸ್ನಾತಕೋತ್ತರ ಪರೀಕ್ಷೆ ಬರೆಯುವ ಮೂಲಕ ಯುವ ವಿದ್ಯಾರ್ಥಿ ಸಮೂಹ ಹುಬ್ಬೇರಿಸುವಂತೆ ಮಾಡಿದ್ದಾರೆ. ಇಗ್ನೋ ವಿಶ್ವವಿದ್ಯಾಲಯದಿಂದ ಆಂಗ್ಲಭಾಷೆಯಲ್ಲಿ ಎಂ.ಎ. ಪದವಿ ಪಡೆಯುವುದಕ್ಕಾಗಿ ಅಂತಿಮ ವರ್ಷದ ಪರೀಕ್ಷೆ ಬರೆದಿದ್ದಾರೆ.
ನೆರೆಯ ಬಾಗಲಕೋಟೆ ಜಿಲ್ಲೆಯ ಇಳಕಲ್ ತಾಲೂಕಿನ ಗುಡೂರು ಬಳಿಯ ಎಸ್.ಸಿ.ಹಳ್ಳಿ ಗ್ರಾಮದ ನಿಂಗಯ್ಯ ಒಡೆಯರ ಎಂಬ ಹಿರಿಯ ನಾಯಕರೇ ಈ ಶೈಕ್ಷಣಿಕ ಸಾಧನೆಗೆ ಮುಂದಾಗಿರುವ ಮಾದರಿ ಹಿರಿಯ ವಿದ್ಯಾರ್ಥಿ.
ಸರಕಾರಿ ಸೇವೆಯಿಂದ ವಯೋ ನಿವೃತ್ತಿಯಾದ ಬಳಿಕ ಓದುವ ಹವ್ಯಾಸ ಬೆಳೆಸಿಕೊಂಡ ನಿಂಗಯ್ಯ ಒಡೆಯರ, ತನ್ನ ಓದನ್ನು ಶೈಕ್ಷಣಿಕ ಸಾಧನೆಗೆ ಬಳಸಿಕೊಳ್ಳಲು ಮುಂದಾದರು. ಇದಕ್ಕಾಗಿ ಈಗಾಗಲೇ ಕನ್ನಡ, ಹಿಂದಿ ಮತ್ತು ಇಂಗ್ಲೀಷ ವಿಷಯದಲ್ಲಿ ಕರ್ನಾಟಕ ವಿಶ್ವವಿದ್ಯಾಲಯದಿಂದ ಸ್ನಾತಕೋತ್ತರ ಪದವಿ ಪಡೆದಿದ್ದಾರೆ.
ಇದೀಗ ಇಂದಿರಾ ಗಾಂಧಿ ಮುಕ್ತ ವಿಶ್ವವಿದ್ಯಾಲಯ (ಇಗ್ನೋ) ದಿಂದ ಎಂ.ಎ. ಇಂಗ್ಲೀಷ್ ಅಂತಿಮ ವರ್ಷದ ಪರೀಕ್ಷೆ ಬರೆಯುತ್ತಿದ್ದಾರೆ. ಇದು ನಿಂಗಯ್ಯ ಅವರ 5ನೇ ಸ್ನಾತಕೋತ್ತರ ಪರೀಕ್ಷೆ ಎಂಬುದು ಗಮನೀಯ.
Related Articles
ಇಗ್ನೋ ಮೂಲಕವೇ ಅದಾಗಲೇ ಸಮಾಜಶಾಸ್ತ್ರ ವಿಷಯದಲ್ಲಿ ಸ್ನಾತಕೋತ್ತರ ಪದವಿ ಪಡೆದಿದ್ದಾರೆ. ಆದರೂ ಇವರಿಗೆ ಶೈಕ್ಷಣಿಕ ಓದು ಹಾಗೂ ಪರೀಕ್ಷೆ ಎದುರಿಸುವ ಹಂಬಲ ಕಡಿಮೆಯಾಗದ ಕಾರಣ ಎಂ.ಎ. ಇಂಗ್ಲೀಷ ಪರೀಕ್ಷೆಗೆ ಬರೆಯುವ ಮೂಲಕ ವಿದ್ಯಾರ್ಥಿ ಯುವ ಸಮೂಹಕ್ಕೆ ಮಾದರಿಯಾಗಿದ್ದಾರೆ.
ವಿಜಯಪುರ ನಗರದಲ್ಲಿರುವ ಬಿಎಲ್‍ಡಿಇ ನರ್ಸಿಂಗ್ ಕಾಲೇಜಿನಲ್ಲಿ ನಡೆಯುತ್ತಿರುವ ಇಗ್ನೋ ಸ್ನಾತಕೋತ್ತರ ಪರೀಕ್ಷೆಯಲ್ಲಿ ಎಂ.ಎ. ಪರೀಕ್ಷೆ ಬರೆಯುತ್ತಿರುವ ನಿಂಗಯ್ಯ, ತಮ್ಮ ವಯಸ್ಸಿನ ಕಾರಣಕ್ಕೆ ಇದೀಗ ಪರೀಕ್ಷಾ ಕೇಂದ್ರದಲ್ಲಿ ಆಕರ್ಷಕ ವ್ಯಕ್ತಿಯಾಗಿದ್ದು, ಮಾತ್ರವಲ್ಲ ಯುವ ವಿದ್ಯಾರ್ಥಿಗಳಲ್ಲಿ ಪರೀಕ್ಷೆ ಬರೆಯುವ ಸ್ಫೂರ್ತಿ ತುಂಬುವ ಚೈತನ್ಯವಾಗಿ ಹೊರ ಹೊಮ್ಮಿದ್ಧಾರೆ.
ತಮ್ಮ ಈ ಸಾಧನೆಗೆ ಪತ್ನಿಯ ಪ್ರೋತ್ಸಾಹವೇ ಕಾರಣ ಎಂದು ಹೆಮ್ಮೆಯಿಂದ ಮುಗುಳುನಗೆ ಬೀರುವ ನಿಂಗಯ್ಯ ಅವರ ಓದುವ ಹವ್ಯಾಸ, ಪರೀಕ್ಷೆ ಬರೆಯುವ ಉಮೇದು ಕಂಡು ಇಗ್ನೋ ಪ್ರಾಂತ ನಿರ್ದೇಶಕ ಡಾ. ಎ.ವರದರಾಜನ, ಸಹಾಯಕ ನಿರ್ದೇಶಕ ಡಾ. ಬಿ.ಎನ್.ದೇವೇಂದ್ರ ಅಚ್ಚರಿ ಹಾಗೂ ಸಂತಸ ವ್ಯಕ್ತಪಡಿಸಿದ್ದಾರೆ.
ನಿಂಗಯ್ಯ ಅವರ ಜೀವನೋತ್ಸಾಹಕ್ಕೆ ಬಿ.ಎಲ್.ಡಿ. ಇ ನರ್ಸಿಸಿಂಗ್ ಕಾಲೇಜಿನ ಪ್ರಾಚಾರ್ಯ ಡಾ. ಶಾಲ್ಮೊನ್ ಚೋಪಡೆ, ಇಗ್ನೋ ಸಹ ಸಂಯೋಜಕ ಡಾ. ಸತೀಶ ನಡಗಡ್ಡಿ ಸಂತಸ ವ್ಯಕ್ತಪಡಿಸಿ, ಇಳಿವಯದಲ್ಲೂ ಪರೀಕ್ಷೆ ಬರೆಯುವ ಹುಮ್ಮಸ್ಸು ಕಂಡು, ಅಭಿನಂದಿಸಿದ್ದಾರೆ.