Advertisement

ಅನುದಾನ ಪಡೆಯಲು ಅಗತ್ಯ ದಾಖಲೆಗಳ ಸಲ್ಲಿಕೆ ಅವಶ್ಯ

04:18 PM Jun 08, 2019 | Team Udayavani |

ವಿಜಯಪುರ: ಕಾಲೇಜುಗಳು ನ್ಯಾಕ್‌ನಿಂದ ದೊರೆಯುವ ವಿಫುಲ ಅವಕಾಶ ಬಾಚಿಕೊಳ್ಳುವುದು ಇಂದಿನ ಅಗತ್ಯ ಹಾಗೂ ತುರ್ತು ಕೆಲಸವೂ ಆಗಿದೆ. ಹೀಗಾಗಿ ಕಾಲೇಜುಗಳು ಶೈಕ್ಷಣಿಕ ಗುಣಮಟ್ಟ ಹೆಚ್ಚಿಸಿ ಉತ್ತಮ ಶಿಕ್ಷಣ ನೀಡಲು ಮುಂದಾಗಬೇಕು ಎಂದು ಅಕ್ಕಮಹಾದೇವಿ ಮಹಿಳಾ ವಿಶ್ವ ವಿದ್ಯಾಲಯ ಕುಲಸಚಿವೆ ಪ್ರೊ| ಆರ್‌.ಸುನಂದಮ್ಮ ಕಾಲೇಜು ಮುಖ್ಯಸ್ಥರಿಗೆ ಸಲಹೆ ನೀಡಿದರು.

Advertisement

ಶುಕ್ರವಾರ ಅಕ್ಕಮಹಾದೇವಿ ಮಹಿಳಾ ವಿಶ್ವವಿದ್ಯಾಲಯದ ಜ್ಞಾನಶಕ್ತಿ ಆವರಣದ ಕನ್ನಡ ಅಧ್ಯಯನ ವಿಭಾಗದ ಸಭಾಂಗಣದಲ್ಲಿ ರಾಷ್ಟ್ರೀಯ ಮೌಲ್ಯಮಾಪನ ಮತ್ತು ಬೆಂಗಳೂರು ನ್ಯಾಕ್‌ ಮಾನ್ಯತಾ ಮಂಡಳಿ ಸಹಯೋಗದಲ್ಲಿ ಕರ್ನಾಟಕ ರಾಜ್ಯ ಅಕ್ಕಮಹಾದೇವಿ ಮಹಿಳಾ ವಿಶ್ವವಿದ್ಯಾನಿಲಯದಿಂದ ಹಮ್ಮಿಕೊಂಡಿದ್ದ ನ್ಯಾಕ್‌ ಪರಿಷ್ಕೃತ ಮಾನ್ಯತೆ ಅರಿವು ಕಾರ್ಯಾಗಾರಕ್ಕೆ ಚಾಲನೆ ನೀಡಿ ಮಾತನಾಡಿದ ಅವರು, ನ್ಯಾಕ್‌ ಮಾನ್ಯತೆ ಪಡೆಯುವಲ್ಲಿ ಅನುಸರಿಸಬೇಕಿರುವ ಕೆಲವು ಪ್ರಮುಖ ಹಾಗೂ ಕಡ್ಡಾಯ ನಿಯಮ ಮತ್ತು ಕ್ರಮಗಳನ್ನು ಕುರಿತಾಗಿ ಪ್ರತಿ ಕಾಲೇಜಿನ ಅಧ್ಯಾಪಕರು ಅರಿಯುವ ಅಗತ್ಯವಿದೆ ಎಂದರು.

ಕಾಲೇಜುಗಳು ರೂಸಾ, ಯುಜಿಸಿ ಹಾಗೂ ಐಸಿಎಸ್‌ಎಸ್‌ಆರ್‌ ಸೇರಿದಂತೆ ವಿವಿಧ ಮೂಲಗಳಿಂದ ಅನುದಾನ ಪಡೆಯಬೇಕಾದರೆ ಅನುದಾನಕ್ಕೆ ಪಡೆಯಲು ಬೇಕಿರುವ ಅಗತ್ಯ ದಾಖಲೆ ಮತ್ತು ಮಾಹಿತಿಯನ್ನು ಸೂಕ್ತವಾಗಿ ಕ್ರಮದಲ್ಲಿ ನೀಡಲೇಬೇಕು. ಈ ಕುರಿತು ಪ್ರಾಚಾರ್ಯರು, ಅಧ್ಯಾಪಕರು ಅರಿತುಕೊಳ್ಳಬೇಕು. ಇದು ಸದ್ಯದ ಎಲ್ಲ ಕಾಲೇಜು ಮತ್ತು ವಿಶ್ವವಿದ್ಯಾಲಯಗಳಿಗೆ ತುರ್ತು ಪರಿಸ್ಥಿತಿ ಎಂದರು.

ವಿಶ್ವವಿದ್ಯಾಲಯ ಸಂಶೋಧನೆಯನ್ನು ಪ್ರಧಾನವಾಗಿ ಇಟ್ಟುಕೊಂಡರೇ ಕಾಲೇಜುಗಳು ಸಮುದಾಯವನ್ನು ಪ್ರಧಾನವಾಗಿ ಇರಿಸಿಕೊಂಡಿರಬೇಕು. ಸಮುದಾಯದೊಂದಿಗೆ ಬೆರೆಯಬೇಕು ಮತ್ತು ಸಮುದಾಯ ಕೇಂದ್ರಿತ ಕಾಲೇಜುಗಳಾಗಬೇಕು. ನ್ಯಾಕ್‌ ನೀಡಿದ ಸಲಹೆಗಳನ್ನು ಆಯಾ ಕಾಲೇಜಿನ ಪ್ರಾಚಾರ್ಯರು ತಮ್ಮ ತಮ್ಮ ಉಪನ್ಯಾಸಕರೊಂದಿಗೆ ಚರ್ಚಿಸಿರಿ ಎಂದರು.

ಬೆಂಗಳೂರಿನ ನ್ಯಾಕ್‌ ಮಂಡಳಿ ಉಪ ಸಲಹೆಗಾರ ಡಾ| ಡಿ.ಕೆ. ಕಾಂಬಳೆ ನ್ಯಾಕ್‌ನ ಆಡಳಿತ ವ್ಯವಸ್ಥೆ, ಅಂತರ್ಜಾಲ ಕಾರ್ಯವ್ಯವಸ್ಥೆಯ ಬಳಕೆ ವಿಧಾನವನ್ನು ಪ್ರಾಯೋಗಿಕವಾಗಿ ತಿಳಿಸಿದರು. ಕಾಲೇಜು ನೋಂದಣಿ, ಆಡಳಿತ ವ್ಯವಸ್ಥೆ, ಗುಣಮಟ್ಟ, ದಾಖಲೆಗಳನ್ನು ಹೇಗೆ ಅಂತರ್ಜಾಲಕ್ಕೆ ಒಳಪಡಿಸಬೇಕು ಎಂಬುದರ ಕುರಿತು ವಿವರಿಸಿದರು.

Advertisement

ಅಧ್ಯಕ್ಷತೆ ವಹಿಸಿದ್ದ ವಿಶ್ವ ವಿದ್ಯಾಲಯ ಆರ್ಥಿಕ ಅಧಿಕಾರಿ ಪ್ರೊ| ಎಸ್‌.ಬಿ. ಮಾಡಗಿ ಮಾತನಾಡಿ, ಕಾಲೇಜುಗಳು ಗುಣಮಟ್ಟ ಸೇವೆ ಮತ್ತು ವ್ಯವಸ್ಥಿತವಾದ ಕಟ್ಟಡ, ಸಿಬ್ಬಂದಿ, ಕಲಿಕೆಗೆ ಪೂರಕ ವಾತಾವರಣ ಹೊಂದಿರಬೇಕು. ನ್ಯಾಕ್‌ ಮಂಡಳಿ ಈ ಬಾರಿ ಶೇ.70 ದತ್ತಾಂಶವನ್ನು ಮತ್ತು ದಾಖಲಾತಿ ಪ್ರಮಾಣ ಪತ್ರಗಳನ್ನು ಅಂತರ್ಜಾಲದ ಮೂಲಕವೇ ಪಡೆದುಕೊಳ್ಳುತ್ತದೆ. ಶೇ. 30 ಮಾಹಿತಿ ಮತ್ತು ದಾಖಲೆಗಳನ್ನು ಮಂಡಳಿ ಅಧಿಕಾರಿಗಳೇ ಭೇಟಿ ನೀಡಿ ಪರಿಶೀಲಿಸುತ್ತದೆ. ಈಗಿನ ನ್ಯಾಕ್‌ ವ್ಯವಸ್ಥೆಯೂ ತುಂಬಾ ಕಠಿಣ ಹಾಗೂ ವ್ಯವಸ್ಥಿತವಾದ ಅಂತರ್ಜಾಲ ವ್ಯವಹಾರ ಹೊಂದಿದೆ. ಇದರಿಂದ ಕಾಲೇಜು ಆಡಳಿತ ಮಂಡಳಿ, ಪ್ರಾಚಾರ್ಯರು ಭಯ ಪಡಬೇಕಾಗಿಲ್ಲ, ಆದರೇ ನ್ಯಾಕ್‌ ಮಂಡಳಿ ಕಾರ್ಯಸೂಚಿ ಮಾಹಿತಿಯನ್ನು ಸಂಪೂರ್ಣವಾಗಿ ಅರಿತುಕೊಳ್ಳಬೇಕು ಎಂದರು.

ನ್ಯಾಕ್‌ ಮಂಡಳಿ ಉಪ ಸಲಹೆಗಾರ ಡಾ| ಶ್ಯಾಮ ಸಿಂಗ್‌ ಸಂಪನ್ಮೂಲ ವ್ಯಕ್ತಿಯಾಗಿ ಮಾತನಾಡಿದರು.

ಐ.ಕ್ಯೂ.ಎ.ಸಿ. ನಿರ್ದೇಶಕ ಎಸ್‌.ಬಿ. ಕಾಮಶೆಟ್ಟಿ ಪ್ರಾಸ್ತಾವಿಕ ಮಾತನಾಡಿದರು. ವಿದ್ಯಾರ್ಥಿನಿ ಸೌಮ್ಯ ಪ್ರಾರ್ಥಿಸಿದರು. ಡಾ| ಪ್ರಕಾಶ ಬಡಿಗೇರ ವಂದಿಸಿದರು. ಸೈಯದ್‌ ಮುಬಿನಾ ಮುಶ್ರೀಫ್‌ ನಿರೂಪಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next