ವಿಜಯಪುರ: ಜಿಲ್ಲೆಯ ನಿಡಗುಂದಿ ತಾಲೂಕಿನ ಆಲಮಟ್ಟಿ ಬಳಿ ಚಲಿಸುವ ರೈಲಿನಿಂದ 6 ವರ್ಷದ ಮಗು ಕೆಳಗೆ ಬಿದ್ದು ಗಂಭೀರವಾಗಿ ಗಾಯಗೊಂಡಿದೆ. ಗಾಯಾಳು ಮಗುವನ್ನು ಜಿಲ್ಲಾ ಸರ್ಕಾರಿ ಆಸ್ಪತ್ರೆಗೆ ದಾಖಲಿಸಿ, ಚಿಕಿತ್ಸೆ ಕೊಡಿಸಲಾಗುತ್ತಿದೆ. ಆದರೆ ಮಗುವನ್ನು ಕಳೆದುಕೊಂಡ ಕುಟುಂಬದವರು ಈವರೆಗೆ ಎಲ್ಲಿಯೂ ದೂರು ನೀಡದ ಕಾರಣ ಪ್ರಕರಣ ಅನುಮಾನ ಮೂಡಿಸುತ್ತಿದೆ.
ಪ್ರಾಥಮಿಕ ಮಾಹಿತಿ ಪ್ರಕಾರ ಭಾನುವಾರ ಮಧ್ಯಾಹ್ನ 4 ಗಂಟೆ ಸುಮಾರಿಗೆ ಹುಬ್ಬಳ್ಳಿ-ಸೋಲಾಪುರ ಎಕ್ಸಪ್ರೆಸ್ ರೈಲಿನಲ್ಲಿ ಈ ಘಟನೆ ಜರುಗಿದೆ. 6 ವರ್ಷದ ಮಗು ನಿಡಗುಂದಿ ತಾಲೂಕಿನ ಬೇನಾಳದ ಯಲ್ಲಾಲಿಂಗೇಶ್ವರ ಮಠದ ಬಳಿ ಚಲಿಸುವ ರೈಲಿನಿಂದ ಕೆಳಗೆ ಬಿದ್ದಿತ್ತು.
ಬಿದ್ದ ಅಳುತ್ತಿರುವುದನ್ನು ಗಮಿನಿಸಿದ ಬೇನಾಳ ಗ್ರಾಮದ ಜಮೀನುಗಳಲ್ಲಿ ಕೆಲಸ ಮಾಡುತ್ತಿದ್ದ ರೈತರು, ಗಾಯಾಳು ಮಗುವನ್ನು ನಿಡಗುಂದಿ ಪಟ್ಟಣದ ಸಮುದಾಯ ಆರೋಗ್ಯ ಕೇಂದ್ರದ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಿದ್ದಾರೆ.
ಇದನ್ನೂ ಓದಿ:Miracle: ವಿಮಾನದಲ್ಲಿ ಉಸಿರಾಟ ನಿಲ್ಲಿಸಿದ 2 ವರ್ಷದ ಕಂದಮ್ಮ: ಮುಂದೆ ನಡೆದದ್ದೇ ಪವಾಡ
ಪ್ರಾಥಮಿಕ ಚಿಕಿತ್ಸೆ ನೀಡಿರುವ ನಿಡಗುಂದಿಯ ಡಾ.ಪ್ರಕಾಶ ಘೋಡಕಿಂಡಿ, ಹೆಚ್ಚಿನ ಚಿಕಿತ್ಸೆಗೆ ಜಿಲ್ಲಾ ಆಸ್ಪತ್ರೆಗೆ ಶಿಫಾರಸು ಮಾಡಿದ್ದು, ರಾತ್ರಿ 11-30ಕ್ಕೆ ಸ್ಥಳಕ್ಕೆ ಬಂದ ರೈಲ್ವೇ ಪೊಲೀಸರು ಹಾಗೂ ಮಕ್ಕಳ ರಕ್ಷಣಾ ಘಟಕದ ಅಧಿಕಾರಿಗಳ ಸುಪರ್ದಿಯಲ್ಲಿ ಬೆಳಿಗ್ಗೆ 4 ಗಂಟೆ ಸುಮಾರಿಗೆ ಆಂಬ್ಯುಲೆನ್ಸ್ ಮೂಲಕ ವಿಜಯಪುರ ಸರ್ಕಾರಿ ಜಿಲ್ಲಾ ಆಸ್ಪತ್ರೆಗೆ ಸಾಗಿಸಲಾಗಿದೆ.
ಚಲಿಸುವ ರೈಲಿನಿಂದ ಮಗು ಬಿದ್ದ ಕಾರಣ ಗಂಭೀರವಾಗಿ ಗಾಯಗೊಂಡಿದ್ದು, ಘಟನೆಯಿಂದ ಮಾನಸಿಕವಾಗಿಯೂ ಆಘಾತಕ್ಕೊಳಗಾಗಿದೆ. ತಲೆಯ ಮೇಲ್ಭಾಗದಲ್ಲಿ 12 ಹೊಲಿಗೆ ಹಾಕುವ ಮಟ್ಟಕ್ಕೆ ಗಾಯಗಳಾಗಿವೆ. ಬೆನ್ನು ಮೂಳೆಗೂ ಗಂಭೀರ ಪೆಟ್ಟಾಗಿರುವುದು ಎಕ್ಸ್-ರೇ ದಲ್ಲಿ ಪತ್ತೆಯಾಗಿದೆ. ಉಳಿದಂತೆ ದೇಹದ ಇತರೆ ಕಡೆಗಳಲ್ಲೂ ಗಾಯಗಳಾಗಿವೆ. ಚಿಕಿತ್ಸೆ ಮುಂದುವರೆದಿದೆ.
ಘಟನೆಯಿಂದ ಆಘಾತಕ್ಕೆ ಒಳಗಾಗಿರುವ ಮಗು ತನ್ನ ಹೆಸರನ್ನು ಗಣೇಶ ಉಚ್ಚಿ ಎಂದೂ, ಮಹಾರಾಷ್ಟ್ರದ ಪುಣೆ ಮೂಲ ಎಂದೂ, ಮರಾಠಿ ಭಾಷೆಯಲ್ಲಿ ಕೆಲವು ತೊದಲು ಮಾತನಾಡಿದೆ. ಇಷ್ಟರ ಹೊರತಾಗಿ ಮಗುವಿನ ಕುರಿತು ಹೆಚ್ಚಿನ ಮಾಹಿತಿ ಸಿಗುತ್ತಿಲ್ಲ.
ಮಗು ಗಂಭೀರ ಗಾಯಗೊಂಡಿರುವ ಕಾರಣ ಪೊಲೀಸರು ಹಾಗೂ ಮಕ್ಕಳ ರಕ್ಷಣಾ ಘಟಕದವರು ಮಗುವಿನ ಆರೋಗ್ಯದ ಕಡೆಗೆ ಹೆಚ್ಚಿನ ಒತ್ತು ನೀಡಿದ್ದಾರೆ. ಮಗುವಿನ ಆರೋಗ್ಯದ ಚೇತರಿಕೆಯ ಅಗತ್ಯದ ಹಿನ್ನೆಲೆಯಲ್ಲಿ ರೈಲ್ವೇ ಪೊಲೀಸರು ತುತಾರ್ಗಿ ಘಟನೆಯ ತನಿಖೆಗೆ ಇಳಿದಿಲ್ಲ.
ಆದರೆ ಮಗುವಿನ ಪಾಲಕರ ಪತ್ತೆಗೆ ಮಹಾರಾಷ್ಟ್ರದ ಪುಣೆ ರೈಲ್ವೇ ಪೊಲೀಸರು ಸೇರಿದಂತೆ ಇತರೆ ಕಡೆಗಳ ನಿಲ್ದಾಣ, ಠಾಣೆಗಳಿಗೆ ಮಾಹಿತಿ ರವಾನಿಸಿದ್ದಾರೆ.
ಅನುಮಾನ ಮೂಡಿಸಿದ ಬೆಳವಣಿಗೆ: 6 ವರ್ಷದ ಮಗು ಚಲಿಸುವ ರೈಲಿನಿಂದ ಬಿದ್ದಿರುವ ಪ್ರಕರಣ ಹಲವು ಅನುಮಾನಗಳಿಗೆ ಕಾರಣವಾಗಿದೆ. ಭಾನುವಾರ ಮಧ್ಯಾಹ್ನವೇ ಚಲಿಸುವ ರೈಲಿನಿಂದ ಮಗು ಬಿದಿದ್ದರೂ ಈವರೆಗೆ ಮಗುವನ್ನು ಕಳೆದುಕೊಂಡ ಬಗ್ಗೆ ಪಾಲಕರು ಎಲ್ಲಿಯೂ ಮಾಹಿತಿ ನೀಡಿಲ್ಲ. ಯಾವುದೇ ರೈಲು ನಿಲ್ದಾಣಗಳಲ್ಲಿ ಮಾಹಿತಿ ನೀಡಿಲ್ಲ, ಪೊಲೀಸ್ ಠಾಣೆಗಳಲ್ಲೂ ದೂರು ದಾಖಲಿಸಿಲ್ಲ.
ಒಂದೊಮ್ಮೆ ಮಗು ಚಲಿಸುವ ರೈಲಿನಿಂದ ಆಯತಪ್ಪಿ ಕೆಳಗೆ ಬಿದ್ದಿದ್ದರೆ ಮಗುವಿನ ಪಾಲಕರು ಮುಂದಿನ ನಿಲ್ದಾಣದಲ್ಲೇ ರೈಲ್ವೇ ಅಧಿಕಾರಿಗಳಿಗೆ, ಪೊಲೀಸರಿಗೆ ಮಾಹಿತಿ ನೀಡಬೇಕಿತ್ತು. ಆದರೆ ಮಗು ರೈಲ್ವೇಯಿಂದ ಬಿದ್ದು ಸುಮಾರು 20 ಗಂಟೆಗಳಾಗಿವೆ. ಆದರೆ ಈವರೆಗೆ ಎಲ್ಲಿಯೂ ಪಾಲಕರು ತಮ್ಮ ಮಗು ರೈಲ್ವೇ ಪ್ರಯಾಣದ ವೇಳೆ ಕಾಣೆಯಾದ ಬಗ್ಗೆ, ಚಲಿಸುವ ರೈಲ್ವೆಯಿಂದ ಕೆಳಗೆ ಬಿದ್ದಿರುವ ಬಗ್ಗೆ ಮಾಹಿತಿ ನೀಡಿಲ್ಲ.
ಪರಿಣಾಮ ಇಡೀ ಬೆಳವಣಿಗೆಯನ್ನು ಗಮನಿಸಿದರೆ ಮಗುವನ್ನು ದೂರದಿಂದ ಸಾಗಿಸಿ ತಂದು, ಬೇನಾಳ ಬಳಿ ಉದ್ದೇಶಪೂರ್ವಕವಾಗಿಯೇ ಚಲಿಸುವ ರೈಲಿನಿಂದ ಎಸೆಯಲಾಗಿದೆಯೇ ಎಂಬ ಅನುಮಾನ ಮೂಡುತ್ತಿದೆ.
ಮಗು ಚಲಿಸುವ ರೈಲಿನಿಂದ ಆಯತಪ್ಪಿ ಕೆಳಗೆ ಬಿತ್ತೋ, ಹತ್ಯೆಯ ಉದ್ದೇಶದಿಂದ ಯಾರಾದರೂ ಚಲಿಸುವ ರೈಲಿನಿಂದ ಮಗುವನ್ನು ಎಸೆದರೆ ಎಂಬ ಹಲವು ಅನುಮಾನಗಳಿಗೆ ರೈಲ್ವೇ ಪೊಲೀಸರ ತನಿಖೆಯಿಂದ ನಿಖರ ಉತ್ತರ ಸಿಗಬೇಕಿದೆ.