Advertisement

ವಿಜಯಪುರ: ಬಯಲು ಶೌಚಕ್ಕೆ ಹೋದವರಿಗೆ ಹೂವಿನ ಹಾರ ಹಾಕಿ ಜಾಗೃತಿ ಮೂಡಿಸಿದ ಜಿ.ಪಂ. ಅಧ್ಯಕ್ಷೆ

09:59 PM Sep 05, 2020 | mahesh |

ವಿಜಯಪುರ: ಸ್ವಚ್ಛ ಭಾರತ ಅಭಿಯಾನದ ಅಂಗವಾಗಿ ಸರ್ಕಾರಗಳು ಬಯು ಶೌಚ ಮುಕ್ತ ಪರಿಸರ ನಿರ್ಮಾಣಕ್ಕೆ ಕೋಟ್ಯಂತರ ರೂ. ಖರ್ಚು ಮಾಡಿದರೂ ಜಿಲ್ಲೆಯಲ್ಲಿ ಇನ್ನೂ ಬಯಲು ಶೌಚಾಲಯ ಜೀವಂತವಾಗಿದೆ. ಈ ಹಿನ್ನೆಲೆಯಲ್ಲಿ ಶನಿವಾರ ನಗರದ ಹೊರ ವಲಯದಲ್ಲಿರುವ ಇಟ್ಟಂಗಿಹಾಳ ಗ್ರಾಮದಲ್ಲಿ ಬಯಲು ಶೌಚಾಲಯಕ್ಕೆ ಹೋಗಿದ್ದವರಿಗೆ ಜಿ.ಪಂ. ಅಧ್ಯಕ್ಷೆ ಹೂವಿನ ಹಾರ ಹಾಕಿ ಸನ್ಮಾನಿಸುವ ಮೂಲಕ ಜನರಲ್ಲಿ ಜಾಗೃತಿಗೆ ಮುಂದಾಗಿದ್ದಾರೆ.

Advertisement

ಶುಕ್ರವಾರ ರಾತ್ರಿ ಜಿ.ಪಂ. ಅಧ್ಯಕ್ಷೆ ಸುಜಾತಾ ಕಳ್ಳಿಮನಿ ಸಂಚಾರಿ ಕುರಿಗಾರರ ಸಮಸ್ಯೆ ಆಲಿಸಲು ಇಟ್ಟಂಗಿಹಾಳ ಬಳಿ ಕುರಿದೊಡ್ಡಿ ಅಡವಿ ವಾಸ್ತವ್ಯ ಮಾಡಿದ್ದರು. ಈ ಹಂತದಲ್ಲಿ ಶನಿವಾರ ಬೆಳಿಗ್ಗೆ ಇಟ್ಟಂಗಿಹಾಳ ಗ್ರಾಮಕ್ಕೆ ತೆರಳಿದ ಅವರಿಗೆ ಬಯಲು ಶೌಚಾಲಯಕ್ಕೆ ಹೋಗಿ-ಬರುವವರ ದರ್ಶನವಾಗಿದೆ. ಇದರಿಂದ ತಕ್ಷಣವೇ ಗ್ರಾಮದಲ್ಲಿ ಬಯಲು ಶೌಚಾಲಯ ಮುಕ್ತ ಪರಿಸರ ನಿರ್ಮಾಣಕ್ಕೆ ಜನರಲ್ಲಿ ಜಾಗೃತಿ ಮೂಡಿಸಲು ಮುಂದಾದ ಜಿ.ಪಂ. ಅಧ್ಯಕ್ಷೆ ಸುಜಾತಾ ಅವರು ಬಯಲು ಶೌಚಾಲಯಕ್ಕೆ ಹೊರಟವರಿಗೆ, ಹೋಗಿ ಬಂದವರಿಗೆ ಹೂ ಹಾರ ಹಾಕುವ ಮೂಲಕ ಶೌಚಾಲಯ ಬಳಕೆಯ ಮಹತ್ವ ಹಾಗೂ ಬಯಲು ಶೌಚಾಲಯದ ನಕಾರಾತ್ಮಕ ಫಲಿತಾಂಶಗಳ ಕುರಿತು ತಿಳುವಳಿಕೆ ನೀಡಿದರು.

ಪ್ರತಿ ಕುಟುಂಬಕ್ಕೂ ಶೌಚಾಲಯ ನಿರ್ಮಿಸಿಕೊಳ್ಳಲು ಸರ್ಕಾರ ಸಹಾಯಧನ ನೀಡಲಾಗುತ್ತಿದ್ದು, ಗ್ರಾ.ಪಂ. ಮೂಲಕ ಇದರ ಸೌಲಭ್ಯ ಪಡೆಯಲು ಅವಕಾಶವಿದೆ. ಜಿಲ್ಲೆಯ ಪ್ರತಿ ಕುಟುಂಬದವರೂ ಈ ಸೌಲಭ್ಯ ಪಡೆದು, ಶೌಚಾಲಯ ನಿರ್ಮಾಣ ಮಾಡಿಕೊಂಡು, ಅದರ ಬಳಕೆಗೆ ಮುಂದಾಗಬೇಕು. ಇದರೊಂದಿಗೆ ಜಿಲ್ಲೆಯನ್ನು ಬಯಲು ಶೌಚಮುಕ್ತ ಮಾಡುವ ಸರ್ಕಾರದ ಸಂಕಲ್ಪಕ್ಕೆ ಕೈ ಜೋಡಿಸಬೇಕು ಎಂದು ಮನವಿ ಮಾಡಿದರು.

ಜಿ.ಪಂ. ಅಧ್ಯಕ್ಷೆ ಬಯಲು ಶೌಚಕ್ಕೆ ಹೋಗಿ ಬಂದವರಿಗೆ ಹೂಹಾರ ಹಾಕುವುದನ್ನು ದೂರದಿಂದಲೇ ನೋಡಿದ ಕೆಲವರು, ಮಹಿಳೆಯಿಂದ ಹೂಹಾರ ಹಾಕಿಸಿಕೊಳ್ಳುವ ಮುಜುಗುರದಿಂದ ತಪ್ಪಿಸಿಕೊಳ್ಳಲು ತಂಬಿಗೆ ಹಿಡಿದವರು ಮರಳಿ ಮನೆಯತ್ತ ಓಡಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next