ವಿಜಯಪುರ: ಅಂತಾರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆ ಅಂಗವಾಗಿ ಜಿಲ್ಲೆಯಲ್ಲಿ ಮುದ್ದೇಬಿಹಾಳ ತಾಲೂಕಿನ ವಿರೇಶ ನಗರದಿಂದ ಆಲಮಟ್ಟಿಯವರೆಗೆ ರವಿವಾರ ಬೃಹತ್ ಮಾನವ ಸರಪಳಿ ನಿರ್ಮಿಸಲಾಯಿತು. ಸಾವಿರಾರು ವಿದ್ಯಾರ್ಥಿಗಳು, ನಾಗರಿಕರೊಂದಿಗೆ ಜಿಲ್ಲೆಯ ಹಿರಿಯರು ಅಧಿಕಾರಿಗಳು ಸಹ ಮಾನವ ಸರಪಳಿಗೆ ಕೈ ಜೋಡಿಸಿ ಗಮನ ಸೆಳೆದರು.
ಸಂವಿಧಾನದ ಆಶಯಗಳಾದ ಸ್ವಾತಂತ್ರ್ಯ ಸಮಾನತೆ, ಭ್ರಾತೃತ್ವದಂತಹ ಆದರ್ಶಗಳನ್ನು ಸಾರ್ವಜನಿಕರಲ್ಲಿ ಗಟ್ಟಿಗೊಳಿಸುವ ನಿಟ್ಟಿನಲ್ಲಿ ರಾಜ್ಯ ಸರ್ಕಾರ ಬೀದರ್ ನಿಂದ ಚಾಮರಾಜನಗರದವರೆಗೆ ಮಾನವ ಸರಪಳಿ ರಚನೆ ಕಾರ್ಯಕ್ರಮ ಆಯೋಜಿಸಿದೆ. ಇದರ ಭಾಗವಾಗಿ ಜಿಲ್ಲೆಯಲ್ಲಿ ರಾಯಚೂರು ಗಡಿಭಾಗದ ಮುದ್ದೇಬಿಹಾಳ ತಾಲೂಕಿನ ವಿರೇಶನಗರದಿಂದ ನಿಡಗುಂದಿ ತಾಲೂಕಿನ ಆಲಮಟ್ಟಿಯಯವರೆಗೆ ಸುಮಾರು 62 ಕೀ.ಮಿ. ಮಾನವ ಸರಪಳಿ ನಿರ್ಮಾಣ ಮಾಡಲಾಯಿತು.
ಆಲಮಟ್ಟಿ ಜಲಾಶಯ ಮುಂಭಾಗದ ಸೇತುವೆ ಮೇಲೆ ಜಿಲ್ಲಾಧಿಕಾರಿ ಟಿ.ಭೂಬಾಲನ್, ಜಿಲ್ಲಾ ಪಂಚಾಯಿತಿಯ ಮುಖ್ಯ ಕಾರ್ಯನಿರ್ವಹಣಾಧಿಕಾರಿ ರಿಷಿ ಆನಂದ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಋಷಿಕೇಶ ಸೋನಾವಣೆ ಸೇರಿದಂತೆ ವಿವಿಧ ಇಲಾಖೆಯ ಅಧಿಕಾರಿಗಳು ಸಾರ್ವಜನಿಕರೊಂದಿಗೆ ಭಾಗವಹಿಸಿದರು.
ಅಲ್ಲದೇ, ಮಾರ್ಗದುದ್ದಕ್ಕೂ ಶಾಲಾ ವಿದ್ಯಾರ್ಥಿಗಳು, ಮಹಿಳಾ ಸ್ವಸಹಾಯದ ಸಂಘಗಳು ವಿವಿಧ ಸಂಘ ಸಂಸ್ಥೆಗಳ ಸದಸ್ಯರು, ಪದಾಧಿಕಾರಿಗಳು ಕೂಡ ಪಾಲ್ಗೊಂಡು ಮಾನವ ಸರಪಳಿ ಕಟ್ಟಿದರು.