Advertisement

ವಿಜಯಪುರ:ಕಸಾಪ ಜಿಲ್ಲಾ ಗದ್ದುಗೆಗೆ 12 ಸ್ಪರ್ಧಿಗಳು

07:07 PM Apr 09, 2021 | Team Udayavani |

ವಿಜಯಪುರ: ಕನ್ನಡಿಗರ ಪ್ರಾಥಿನಿಧಿಕ ಸಂಸ್ಥೆ ಎಂದೇ ಕರೆಸಿಕೊಳ್ಳುತ್ತಿರುವ ಕನ್ನಡ ಸಾಹಿತ್ಯ ಪರಿಷತ್‌ ಚುನಾವಣೆ ರಂಗೇರುವ ಮುನ್ಸೂಚನೆ ದೊರೆತಿದೆ. ರಾಜ್ಯ ಮಟ್ಟದಲ್ಲಿ ಘಟಾನುಘಟಿಗಳು ಕಣಕ್ಕೆ ಇಳಿದಿದ್ದಾರೆ. ಇತ್ತ ಜಿಲ್ಲಾಧ್ಯಕ್ಷ ಸ್ಥಾನಕ್ಕೆ ರಾಜಕೀಯ ಮುಖಂಡರು, ಸಾಮಾಜಿಕ ಕಾರ್ಯಕರ್ತರು, ಪತ್ರಕರ್ತರು, ಸರ್ಕಾರಿ ನೌಕರರು, ನಿವೃತ್ತ ನೌಕರರು ಹೀಗೆ ವಿವಿಧ ವರ್ಗ ಹಾಗೂ ರಂಗಗಳ 12 ಸ್ಪಸ್ಪರ್ಧಿಗಳು ಜಿಲ್ಲಾ ಘಟಕದ ಗದ್ದುಗೆ ಏರಲು ಸ್ಪರ್ಧೆಗೆ ಇಳಿದಿದ್ದಾರೆ.

Advertisement

ನಾಮಪತ್ರ ಸಲ್ಲಿಕೆಗೆ ಕೊನೆಯ ದಿನವಾಗಿದ್ದ ಏ.7ರವರೆಗೆ 12 ಜನರಿಂದ 21 ನಾಮಪತ್ರ ಸಲ್ಲಿಕೆಯಾಗಿದ್ದವು. ಏ.8 ರಂದು ನಡೆದ ನಾಮಪತ್ರ ಪರಿಶೀಲನೆ ನಡೆಸಿದ್ದು, ಎಲ್ಲ ನಾಮಪತ್ರಗಳೂ ಸ್ವೀಕೃತವಾಗಿವೆ ಎಂದು ಕಸಾಪ ಜಿಲ್ಲಾ ಚುನಾವಣಾ ಅಧಿಕಾರಿ ಪರಮಾನಂದ ಕೊಂತಿಕಲ್‌ ತಿಳಿಸಿದ್ದಾರೆ.

ನಾಮಪತ್ರ ಹಿಂಪಡೆಯಲು ಏ.12 ಕೊನೆ ದಿನವಾಗಿದ್ದು, ಸ್ಪರ್ಧೆಯಲ್ಲಿ ಇರುವ 12 ಜನರಲ್ಲಿ ಹಲವರು ತಮ್ಮ ನಾಯಕ ಗೌರವದ ಸುರಕ್ಷತೆಗಾಗಿ ಛಾಯಾ ಅಭ್ಯರ್ಥಿಗಳಾಗಿ ನಾಮಪತ್ರ ಸಲ್ಲಿಸಿದ್ದಾರೆ ಎನ್ನಲಾಗಿದೆ. ಹೀಗಾಗಿ ಕೊನೆ ಕ್ಷಣದಲ್ಲಿ ಕನಿಷ್ಠ 6-7 ಸ್ಪ ರ್ಧಿಗಳು ತಮ್ಮ ಬೆಂಬಲ ವ್ಯಕ್ತಪಡಿಸಿ, ನಾಮಪತ್ರ ಹಿಂಪಡೆಯುವ ನಿರೀಕ್ಷೆ ಇದೆ.

ಈ ಮಧ್ಯೆ ನಾಮಪತ್ರ ಸಲ್ಲಿಸಿದವರಲ್ಲಿ ಜೆಡಿಎಸ್‌ ಜಿಲ್ಲಾಧ್ಯಕ್ಷ ಮಲ್ಲಿಕಾರ್ಜುನ ಯಂಡಿಗೇರಿ ಈ ಹಿಂದಿನ ಮೂರು ಅವಧಿಗೆ ಅಂದರೆ ಸುಮಾರು ಒಂದು ದಶಕದ ಕಾಲ ಕಸಾಪ ಜಿಲ್ಲಾಧ್ಯಕ್ಷ ಸ್ಥಾನದಲ್ಲಿದ್ದಾರೆ. ಇದೀಗ ನಾಲ್ಕನೇ ಅವಧಿಗೆ ಮತ್ತೆ ಸ್ಪರ್ಧೆಗೆ ಇಳಿದಿದ್ದಾರೆ. ಇದರ ಮಧ್ಯೆ ವಿವಿಧ ಕಾರ್ಯಕ್ರಮಗಳ ಮೂಲಕ ಸಾಂಸ್ಕೃತಿಕವಾಗಿ ಗುರುತಿಸಿಕೊಂಡಿರುವ ಕೆಪಿಸಿಸಿ ಮಾಜಿ ಕಾರ್ಯದರ್ಶಿ ಹಾಸಿಂಪೀರ ವಾಲೀಕಾರ ಕೂಡ ಸ್ಪರ್ಧೆ ಬಯಸಿ ನಾಮಪತ್ರ ಸಲ್ಲಿಸಿದ್ದು, ಗಮನ ಸೆಳೆಯುವಂತೆ ಮಾಡಿದೆ.

ಇದಲ್ಲದೇ ಕಳೆದ ಬಾರಿ ನಾಮಪತ್ರ ಸಲ್ಲಿಸಿ ಕೊನೆ ಕ್ಷಣದಲ್ಲಿ ಸ್ಪರ್ಧೆಯಿಂದ ಹಿಂದೆ ಸರಿದಿದ್ದ ಶರಣ ಸಾಹಿತ್ಯ ಪರಿಷತ್‌ ಜಿಲ್ಲಾಧ್ಯಕ್ಷ ಜಂಬುನಾಥ ಕಂಚಾಣಿ, ಕಳೆದ ಬಾರಿ ಯಂಡಿಗೇರಿಗೆ ಸ್ಪರ್ಧೆ ನೀಡಿದ್ದ ಶಿಕ್ಷಕರ ಸಂಘದ ನಿರ್ದೇಶಕ ಶಿವಾನಂದ ಮಂಗಾನವರ, ವಕೀಲ ಮಲ್ಲಿಕಾರ್ಜುನ ಭೃಂಗೀಮಠ ಈ ಬಾರಿ ಮತ್ತೆ
ತಮ್ಮ ಉಮೇದುವಾರಿಕೆ ದಾಖಲಿಸಿದ್ದಾರೆ. ಕಸಾಪ ಜಿಲ್ಲಾಧ್ಯಕ್ಷ ಸ್ಥಾನದ ಮೇಲೆ ಕಣ್ಣಿಟ್ಟು ಚುಟುಕು ಸಾಹಿತ್ಯ ಪರಿಷತ್‌ ಮೂಲಕ ಜಿಲ್ಲೆಯಲ್ಲಿ ಚಟುವಟಿಕೆ ನಡೆಸಿದ್ದ ಗ್ರಾ.ಪಂ ಕಾರ್ಯದರ್ಶಿ ಬಂಡೆಪ್ಪ ತೇಲಿ ನಾಮಪತ್ರ ಸಲ್ಲಿಸಿದ್ದಾರೆ.

Advertisement

ಇದರ ಹೊರತಾಗಿ ಇದೇ ಮೊದಲ ಬಾರಿಗೆ ಕಸಾಪ ಕಣಕ್ಕೆ ಧುಮುಕಲು ಮುಂದಾಗಿರುವ ಹೊಸ ಮುಖಗಳಲ್ಲಿ ಯುವ ಪತ್ರಕರ್ತ ಕಲ್ಲಪ್ಪ ಶಿವಶರಣ, ಕಸಾಪ ಜಿಲ್ಲಾ ಕಾರ್ಯದರ್ಶಿಯಾಗಿರುವ ಉಪನ್ಯಾಸಕ ಬಸವರಾಜ ಕುಂಬಾರ, ಇನ್ನೋರ್ವ ಉಪನ್ಯಾಸಕ ಮಹಾದೇವ ರೆಬಿನಾಳ, ಬಸವರಾಜ ಶಿವಪ್ಪ ಸುಕಾಲಿ, ಶ್ರೀಶೈಲ ಆಳೂರ, ಮುತ್ತಣ್ಣ ರಾಮಣ್ಣ ಕಬಾಡೆ ಕೂಡ ಕಸಾಪ ಜಿಲ್ಲಾಧ್ಯಕ್ಷ ಸ್ಥಾನದ ಗದ್ದುಗೆ ಏರಲು ನಾಮಪತ್ರ ಸಲ್ಲಿಸಿದ್ದು, ನಾಮಪತ್ರಗಳೂ
ಸ್ವೀಕೃತಿಯಾಗಿವೆ.

ಕನ್ನಡ ಸಾಹಿತ್ಯ ಪರಿಷತ್‌ ಜಿಲ್ಲಾಧ್ಯಕ್ಷ ಸ್ಥಾನಕ್ಕೆ ನಾಮಪತ್ರ ಸಲ್ಲಿಕೆಯಾಗಿದ್ದ 12 ಜನರ ನಾಮಪತ್ರಗಳು ಸ್ವೀಕೃತಿಯಾಗಿವೆ. ನಾಮಪತ್ರ ಹಿಂಪಡೆಯಲು ಏ.12 ಕೊನೆ ದಿನ. ಉಮೇದುವಾರಿಕೆ ಹಿಂಪಡೆದ ಬಳಿಕ ಕಣದಲ್ಲಿ ಉಳಿಯುವ ಸ್ಪರ್ಧಿಗಳ ನಿಖರ ಚಿತ್ರಣ ಸಿಗಲಿದೆ.
ಪರಮಾನಂದ ಕೊಂತಿಕಲ್‌
ಚುನಾವಣಾ ಅಧಿಕಾರಿ, ಕಸಾಪ

*ಜಿ.ಎಸ್‌.ಕಮತರ

Advertisement

Udayavani is now on Telegram. Click here to join our channel and stay updated with the latest news.

Next