ಬಸವನಬಾಗೇವಾಡಿ: ವಿಜಯಪುರ ಅನೇಕ ಶರಣರು, ಸಂತರು, ಮಹಾನ್ ಪುರುಷರು ಜನ್ಮವೆತ್ತಿದ ಪವಿತ್ರ ಜಿಲ್ಲೆ. ಜಿಲ್ಲೆಯಲ್ಲಿ ಅನೇಕ ಪವಾಡಗಳು ನಿರಂತರ ನಡೆದುಕೊಂಡು ಬರುತ್ತಿವೆ ಎಂದು ಮಾಜಿ ಸಚಿವ ಶಾಸಕ ಶಿವಾನಂದ ಪಾಟೀಲ ಹೇಳಿದರು.
ಮಣ್ಣೂರ ಗ್ರಾಮದಲ್ಲಿ ಗುರುವಾರ ನಡೆದ ರಾಚೋಟೇಶ್ವರ ಮೂರ್ತಿ ಪ್ರತಿಷ್ಠಾಪನೆ, ಕುಂಭಮೇಳ, ವಿವಿಧ ಧಾರ್ಮಿಕ ಕಾರ್ಯಕ್ರಮಗಳ ಉದ್ಘಾಟನೆ ನೆರವೇರಿಸಿ ಅವರು ಮಾತನಾಡಿದರು.
ಈ ಭಾಗದಲ್ಲಿ ಜನ್ಮವೆತ್ತಿದ ಅನೇಕ ಶರಣರು, ಸಂತರು, ಪವಾಡ ಪುರುಷರು ಸಮಾಜಕ್ಕೆ ತಮ್ಮದೇಯಾದ ಕೊಡುಗೆ ನೀಡುವ ಮೂಲಕ ಸಮಾಜದಲ್ಲಿ ಸಮಾನತೆ, ಐಕ್ಯತೆ, ಭಾವೈಕ್ಯತೆ ಸೇರಿದಂತೆ ಅನೇಕ ಕಾರ್ಯ ಕೈಗೊಳ್ಳುವ ಮೂಲಕ ಅನೇಕ ಧಾರ್ಮಿಕ, ಸಾಮಾಜಿಕ, ಶೈಕ್ಷಣಿಕ ಕ್ರಾಂತಿ ಮಾಡಿದ್ದಾರೆ ಎಂದರು.
ಪಟ್ಟಣದ ವಿರಕ್ತಮಠದ ಸಿದ್ದಲಿಂಗ ಶ್ರೀ ಸಾನ್ನಿಧ್ಯ ವಹಿಸಿ ಮಾತನಾಡಿ, 200 ವರ್ಷಗಳ ಹಿಂದೆ ಈ ಗ್ರಾಮದಲ್ಲಿ ಪವಾಡ ಪುರುಷ ರಾಚೋಟೇಶ್ವರರು ಅನೇಕ ಪವಾಡ ಮಾಡುವ ಮೂಲಕ ಈ ಭಾಗದ ಜನರಿಗೆ ಆರಾಧ್ಯ ದೈವರಾಗಿದ್ದಾರೆ. ಅನೇಕ ಶರಣರು, ಪವಾಡ ಪುರುಷರ ತತ್ವಾದರ್ಶ ಜೀವನದಲ್ಲಿ ಅಳವಡಿಸಿಕೊಳ್ಳಬೇಕು. ಇಂತಹ ಧಾರ್ಮಿಕ ಕಾರ್ಯಕ್ರಮಗಳು ಮೇಲಿಂದ ಮೇಲೆ ಮಾಡುವುದರಿಂದ ಜೀವನದಲ್ಲಿ ಬದಲಾವಣೆ ಆಗುತ್ತವೆ. ಅಲ್ಲದೇ ಶಾಂತಿ-ನೆಮ್ಮದಿಯಿಂದ ಬದುಕಲು ಸಾಧ್ಯ ಎಂದರು.
ಕಿತ್ತೂರಿನ ವಿಜಯಮಹಾಂತ ಶ್ರೀ, ಮಣ್ಣೂರಿನ ಹಿರೇಮಠದ ವೇ.ಮೂ. ಸಂಗಯ್ಯ ಸಾನ್ನಿಧ್ಯ, ಬಂಡೆಪ್ಪ ತಳೆವಾಡ ಅಧ್ಯಕ್ಷತೆ ವಹಿಸಿದ್ದರು. ಮುಖ್ಯ ಅತಿಥಿಯಾಗಿ ಬಿಜೆಪಿ ಮುಖಂಡ ಅಪ್ಪುಗೌಡ ಪಾಟೀಲ (ಮನಗೂಳಿ), ಪಿಕಾರ್ಡ್ ಬ್ಯಾಂಕ್ ಅಧ್ಯಕ್ಷ ಈರಣ್ಣ ಪಟ್ಟಣಶೆಟ್ಟಿ, ಎಪಿಎಂಸಿ ನಿರ್ದೇಶಕ ಶೇಖರ ಗೊಳಸಂಗಿ, ಜಗದೀಶ ಕೊಟ್ರಶೆಟ್ಟಿ, ಬಸಪ್ಪ ಕಾರಜೋಳ, ಶ್ರೀಶೈಲ ಬಾರಿಕಾಯಿ, ಕಾಶಿನಾಥ ಕುಲಕರ್ಣಿ, ಶಾಂತಪ್ಪ ಮೂಲಿಮನಿ, ಚನ್ನಪ್ಪ ಜುಗತಿ, ಸಾಬಣ್ಣ ಹೊಸಮನಿ, ಮಲ್ಲು ಉನ್ನಿಬಾವಿ ಇತರರು ಭಾಗವಹಿಸಿದ್ದರು. ವೈ.ಸಿ. ಕಾರಜೋಳ ಸ್ವಾಗತಿಸಿದರು. ಎಚ್ .ಬಿ. ಬಾರಿಕಾಯಿ ಪ್ರಾಸ್ತಾವಿಕ ಮಾತನಾಡಿ ಕಾರ್ಯಕ್ರಮ ನಿರೂಪಿಸಿದರು. ರಾಮಣ್ಣ ಹೊಸಮನಿ ವಂದಿಸಿದರು.