Advertisement

Vijayapur City Corporation Budget; ನಗರದ ಜನತೆಗೆ ಸುಳ್ಳು ಹೇಳಿದ ಮೇಯರ್: ಲೋಣಿ ಆರೋಪ

01:08 PM Feb 22, 2024 | Team Udayavani |

ವಿಜಯಪುರ: ವಿಜಯಪುರ ಮಹಾನಗರ ಪಾಲಿಕೆ ಬಜೆಟ್‍ನಲ್ಲಿ ಈ ಬಾರಿ ಹಿಂದಿನ ವರ್ಷಕ್ಕಿಂತ ಬಜೆಟ್ ಗಾತ್ರ ಭಾರಿ ಪ್ರಮಾಣದಲ್ಲಿ ಕುಗ್ಗಿದೆ. ಇದರೊಂದಿಗೆ ಮೇಯರ್ ಬಜೆಟ್ ಮೂಲಕ ನಗರದ ಜನರಿಗೆ ಬಹುತೇಕ ಸುಳ್ಳು ಮಾಹಿತಿ ನೀಡಿದ್ದಾರೆ ಎಂದು ಮಹಾನಗರ ಪಾಲಿಕೆ ಮಾಜಿ ಸದಸ್ಯ ರವೀಂದ್ರ ಲೋಣಿ ದೂರಿದರು.

Advertisement

ಗುರುವಾರ ನಗರದಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ನಗರಸಭೆಯಿಂದ ಮಹಾನಗರ ಪಾಲಿಕೆಯಾಗಿ ಮೇಲ್ದರ್ಜೆಗೇರಿ ದಶಕವಾಗಿದೆ. ಆದರೆ ನಗರದ ಜನರಿಗೆ ಮಹಾನಗರ ಪಾಲಿಕೆ ಸೌಲಭ್ಯ ನೀಡದೆ ವಂಚನೆ ಮಾಡುತ್ತಿದೆ ಎಂದು ಟೀಕಿಸಿದರು.

ಪ್ರಸಕ್ತ ಆರ್ಥಿಕ ವರ್ಷದ ಬಜೆಟ್ ಅಂಕಿಸಂಖ್ಯೆಗಳಲ್ಲಿ ಭಾರಿ ವ್ಯತ್ಯಾಸ ಕಂಡು ಬಂದಿದೆ. ಅಧಿಕಾರಿಗಳು ನೀಡಿದ ಅಂಕಿಸಂಖ್ಯೆಗಳನ್ನೇ ಇರಿಸಿಕೊಂಡು ಉಪ ಮೇಯರ್ ಮೂಲಕ ಪಾಲಿಕೆ ಮೇಯರ್ ಸುಳ್ಳು ಹೇಳಿಕೆ ನೀಡಿದ್ದಾರೆ ಎಂದರು.

ಪಾಲಿಕೆಗೆ ಈ ಬಾರಿ 159.42 ಕೋಟಿ ಆದಾಯ ಎಂದಿದ್ದಾರೆ. ಕಳೆದ ಬಾರಿ ಆಡಳಿತಾಧಿಕಾರಿ ಇದ್ದಾಗ 204 ಕೋಟಿ ರೂ. ಬಜೆಟ್ ಇದ್ದು, ಈ ಬಾರಿ ಸುಮಾರು 50 ಕೋಟಿ ರೂ. ಕೊರತೆ ಬಜೆಟ್ ಮಂಡಿಸಿದ್ದಾರೆ. ವಾಸ್ತವವಾಗಿ ಬಜೆಟ್ ಗಾತ್ರ ವರ್ಷದಿಂದ ವರ್ಷಕ್ಕೆ ಹೆಚ್ಚುತ್ತಾ ಸಾಗಬೇಕು. ಆದರೆ ಈ ಬಾರಿ ಹಿಂದಿಗಿಂತ ಕುಸಿತದ ಬಜೆಟ್ ಮಂಡಿಸಲಾಗಿದೆ ಎಂದು ದೂರಿದರು.

80 ಸಾವಿರ ಆಸ್ತಿಗಳಿದ್ದು, 15 ಸಾವಿರ ಗುಂಟಾ ಆಸ್ತಿ ಇವೆ. ಸ್ವಯಂ ಘೋಷಿತ ಆಸ್ತಿಯಲ್ಲೂ ತೆರಿಗೆ ಸಂಗ್ರಹದಲ್ಲಿ ವಿಫಲವಾಗಿದ್ದಾರೆ. ಅಧಿಕೃತ, ಅನಧಿಕೃತ ಆಸ್ತಿ ಸೇರಿದಂತೆ ನಗರಪಾಲಿಕೆ ವ್ಯಾಪ್ತಿಯಲ್ಲಿ ಒಟ್ಟು 95 ಸಾವಿರ ಆಸ್ತಿ ಇವೆ. ಆದರೂ ಮಹಾಪೌರರು ನಗರದ ಜನರಿಗೆ ಬಜೆಟ್ ಮೂಲಕ ಸುಳ್ಳು ಮಾಹಿತಿ ನೀಡಿದ್ದಾರೆ. ಆದಾಯ ತೆರಿಗೆ ಸಂಗ್ರಹದ ವಿಷಯದಲ್ಲಿ ತಪ್ಪು ಮಾಹಿತಿ ನೀಡಿದ್ದಾರೆ ಎಂದು ಆರೋಪಿಸಿದರು.

Advertisement

ಬಿಜೆಪಿ ಸರ್ಕಾರವಿದ್ದಾಗ ನಗರದ ಅಭಿವೃದ್ಧಿಗಾಗಿ ಪಾಲಿಕೆಗೆ ನೂರಾರು ಕೋಟಿ ರೂ. ಅನುದಾನ ನೀಡಿತ್ತು. ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದಿದ್ದು, ಘಟಾನುಘಟಿಗಳು ಸೇರಿ ಜಿಲ್ಲೆಯ 6 ಶಾಸಕರು ಕಾಂಗ್ರೆಸ್ ಪಕ್ಷದಿಂದ ಆಯ್ಕೆಯಾಗಿದ್ದರೂ ಐತಿಹಾಸಿಕ ಮಹಾನಗರ ಅಭಿವೃದ್ಧಿಗೆ ಈ ಸರ್ಕಾರದಿಂದ ಅನುದಾನ ನೀಡಿಲ್ಲ ಎಂದು ಕುಟುಕಿದರು.

ಐತಿಹಾಸಿಕ ಮಹಾನಗರದಲ್ಲಿ ಪ್ರವಾಸೋದ್ಯಮಕ್ಕೆ ಒತ್ತು ನೀಡುವ ಬದಲು ಒತ್ತುವರಿ ತೆರವಿಗೆ ಕ್ರಮ ಕೈಗೊಂಡಿಲ್ಲ. ಪಾಲಿಕೆ ಮೂಲಕ ನಗರದಲ್ಲಿ ಕಮಾನುಗಳ ನಿರ್ಮಾಣದ ಘೋಷಣೆ ಮಾಡಿರುವುದೇ ವ್ಯರ್ಥ. ಬದಲಾಗಿ ಪಾಲಿಕೆ ಮೇಯರ್ ಮನೆ ಹತ್ತಿರ ಇರುವ ಇಬ್ರಾಹಿಂ ರೋಜಾ ಸೇರಿದಂತೆ ನಗರದಲ್ಲಿರುವ ಪಾರಂಪರಿಕ ಸ್ಮಾರಕಗಳ ಒತ್ತುವರಿ-ಅತಿಕ್ರಮಣ ತೆರವಿಗೆ ಆದ್ಯತೆ ನೀಡಬೇಕು. ಸ್ಮಾರಕಗಳ ಸಂಪರ್ಕ ರಸ್ತೆಗಳ ಅಭಿವೃದ್ಧಿಗೆ ಗಮನ ಹರಿಸಬೇಕು ಎಂದು ಸಲಹೆ ನೀಡಿದರು.

ನಗರದಲ್ಲಿ ಸರ್ಕಾರಿ ಜಮೀನು, ಸ್ಥಳಗಳ ಅತಿಕ್ರಮಣ ಹಾಗೂ ಬೇನಾಮಿ ಆಸ್ತಿಗಳಿದ್ದು, ಕಾನೂನು ಬಾಹಿರವಾಗಿ ಒತ್ತುವರಿಯಾಗಿರುವ ಇಂತಹ ಆಸ್ತಿಗಳ ರಕ್ಷಣೆಗೆ ಆದ್ಯತೆ ನೀಡಬೇಕು. ಇಲ್ಲವಾದಲ್ಲಿ ಈ ಬಗ್ಗೆ ಉಗ್ರ ಹೋರಾಟ ಮಾಡುವುದಾಗಿ ಎಚ್ಚರಿಸಿದರು.

ವಿಜಯಪುರ ನಗರಕ್ಕೆ ನಿತ್ಯವೂ 53 ಎಂ.ಎಲ್. ನೀರು ಅಗತ್ಯವಿದ್ದರೂ 71 ಎಂಎಲ್ ಲಭ್ಯವಿದೆ. ಅಗತ್ಯಕ್ಕಿಂತ 10 ಎಂಎಲ್ ನೀರು ಹೆಚ್ಚುವರಿ ಲಭ್ಯವಿದ್ದರೂ ನೀರು ನಿರ್ವಹಣೆಯಲ್ಲಿ ಪಾಲಿಕೆ ಸೋತಿರುವುದೇ ನಗರದಲಲಿ ನೀರಿನ ಗಂಭೀರ ಸಮಸ್ಯೆ ಎದುರಾಗಲು ಕಾರಣ ಎಂದು ಹರಿಹಾಯ್ದರು.

ಕೃಷ್ಣೆಯ ಲಿಂಗದಳ್ಳಿ ಜಾಕ್‍ವೆಲ್ ನಿಂದ ವಿಜಯಪುರ ನಗರಕ್ಕೆ ಬರುವ ಮಾರ್ಗಮಧ್ಯೆ ಸುಮಾರು 10 ಹಳ್ಳಿಗಳಿದ್ದು, ಅಕ್ರಮವಾಗಿ ನೀರನ್ನು ಕೊಳ್ಳೆ ಹೊಡೆಯುತ್ತಿದ್ದಾರೆ. ರಾಜಕೀಯ ಒತ್ತಡದ ಪರಿಣಾಮ ಇದನ್ನು ನಿರ್ವಹಣೆ ಮಾಡುತ್ತಿಲ್ಲ. ಪರಿಣಾಮ ನೀರಿನ ಅಗತ್ಯ ಲಭ್ಯತೆ ಇದ್ದರೂ ನೀರಿನ ಕೊರತೆ ಎದುರಿಸುವ ದುಸ್ಥಿತಿ ಎದುರಾಗಿದೆ ಎಂದು ದೂರಿದರು.

ನಗರದಲ್ಲಿ ಕುಡಿಯುವ ನೀರಿನ 24*7 ಯೋಜನೆ ವಾಸ್ತವವಾಗಿ ಅಪೂರ್ಣವಾಗಿದ್ದು, ಎರಡು ವರ್ಷ ಪರಿಸ್ಥಿತಿ ಪರಿಶೀಲನೆ ನಡೆಸಬೇಕೆಂಬ ನಿಯಮ ಇದ್ದರೂ ಯಾರೂ ಗಮನ ಹರಿಸುತ್ತಿಲ್ಲ. ಜನತೆಗೆ ವಾಸ್ತ ಸ್ಥಿತಿ ಮುಚ್ಚಿಟ್ಟು ವಂಚಿಸಿದೆ. ನಗರದ ಕುಡಿಯುವ ನೀರಿನ ವಿಷಯದಲ್ಲಿ ಆಡಳಿತ ವ್ಯವಸ್ಥೆಯ ಸಂಪೂರ್ಣ ವೈಫಲ್ಯವಾಗಿದೆ ಎಂದು ದೂರಿದರು.

ಮಹಾನಗರ ಪಾಲಿಕೆಯಿಂದ ಸಿದ್ಧೇಶ್ವರ ಶ್ರೀಗಳ ಹೆಸರಿನಲ್ಲಿ ವೃತ್ತ ನಿರ್ಮಾಣದ ಕುರಿತು ನಿರ್ಣಯಿಸಿರುವ ಕುರಿತು ನಗರದ ಜನರು ನಿರ್ಧರಿಸುತ್ತಾರೆ. ಬಯಲಲ್ಲಿ ಬಯಲಾದ ಸಂತನ ಆಶಯಕ್ಕೆ ವಿರುದ್ಧವಾದ ಯಾವ ನಡೆಯುವು ಸಹ್ಯವಲ್ಲ ಎಂದರು.

Advertisement

Udayavani is now on Telegram. Click here to join our channel and stay updated with the latest news.

Next