“ಸಿಲ್ಲಿ ಲಲ್ಲಿ’ ಖ್ಯಾತಿಯ ನಿರ್ದೇಶಕ ವಿಜಯಪ್ರಸಾದ್ ಹಾಗೂ ರವಿಶಂಕರ್ ಗೌಡ ಮತ್ತೆ ಒಂದಾಗುತ್ತಿದ್ದಾರೆ. ಹಾಗಂತ ಇನ್ನೊಂದು ಧಾರಾವಾಹಿಗೇನಾದರೂ ಪ್ಲಾನ್ ಮಾಡುತ್ತಿದ್ದಾರಾ ಅಂದುಕೊಳ್ಳುವಂತಿಲ್ಲ. ಇವರಿಬ್ಬರು ಹೊಸ ಸಿನಿಮಾ ಮಾಡುತ್ತಿದ್ದಾರೆ. “ನೀರ್‌ದೋಸೆ’ ಬಳಿಕ ವಿಜಯ್‌ಪ್ರಸಾದ್ ಯಾವ ಚಿತ್ರ ಮಾಡುತ್ತಾರೆ ಎಂಬ ಪ್ರಶ್ನೆಗಳಿದ್ದವು. ಅದಕ್ಕೆ ಉತ್ತರ ಅವರ ಹೊಸ ಸಿನಿಮಾ.
ಒಂದು ಕಾಲದಲ್ಲಿ ಕಿರುತೆರೆ ಪ್ರೇಕ್ಷಕರನ್ನು ನಕ್ಕು ನಗಿಸಿದ್ದ ಈ ಜೋಡಿ, ಈಗ “ಲೇಡಿಸ್ ಟೈಲರ್’ ಎಂಬ ಚಿತ್ರಕ್ಕೆ ಕೈ ಹಾಕಿದೆ. ಚಿತ್ರದ ಶೀರ್ಷಿಕೆ ಕೇಳಿದರೆ, ಅದೊಂದು ಮನರಂಜನಾತ್ಮಕ ಸಿನಿಮಾ ಅಂತ ಪ್ರತ್ಯೇಕವಾಗಿ ಹೇಳುವ ಅಗತ್ಯವಿಲ್ಲ. ಅಂದಹಾಗೆ, ಇದು ಯೋಗರಾಜ್‌ಭಟ್ ಮೂವೀಸ್ ಬ್ಯಾನರ್‌ನಲ್ಲಿ ತಯಾರಾಗುತ್ತಿದೆ. ಸನತ್ ಹಾಗೂ ಸುಧೀರ್ “ಲೇಡಿಸ್ ಟೈಲರ್’ಗೆ ಹಣ ಹಾಕುತ್ತಿದ್ದಾರೆ.
ವಿಜಯಪ್ರಸಾದ್ ಮತ್ತು ರವಿಶಂಕರ್‌ಗೌಡ ಅಂದಮೇಲೆ, ಇದು ಔಟ್ ಅಂಡ್ ಔಟ್ ಕಾಮಿಡಿ ಸಿನಿಮಾ ಅನ್ನೋದು ಗ್ಯಾರಂಟಿ. ಸದ್ಯಕ್ಕೆ ನಾಯಕಿಯ ಹುಡುಕಾಟ ನಡೆಯುತ್ತಿದೆ. ಚಿತ್ರದ ನಾಯಕಿ 125 ಕೆಜಿ ತೂಕವಿದ್ದು, ದಪ್ಪಗಿರಬೇಕಂತೆ. ಅಂತಹ ಹುಡುಗಿಗಾಗಿ ಹುಡುಕಾಟ ಮಾಡುತ್ತಿರುವುದಾಗಿ ಹೇಳುತ್ತಾರೆ ವಿಜಯಪ್ರಸಾದ್. “ಕಥೆ ಮತ್ತು ಪಾತ್ರ ದಪ್ಪಗಿರುವ ಮತ್ತು ತುಂಬಾ ತೂಕವಾಗಿರುವ ನಾಯಕಿಯನ್ನೇ ಡಿಮ್ಯಾಂಡ್ ಮಾಡಿದ್ದಕ್ಕೆ ಆ ರೀತಿಯ ನಾಯಕಿಗೆ ಹುಡುಕಾಟ ನಡೆಯುತ್ತಿದೆ.
ಅದೊಂದು ಮುಸ್ಲಿಂ ಹೆಣ್ಣುಮಗಳ ಪಾತ್ರ. ಅದಕ್ಕಾಗಿ ಕನ್ನಡದ ಕೆಲ ನಟಿಯರನ್ನು ಕೇಳಿದ್ದಾಗಿದೆ. ಆದರೆ, ಯಾರೊಬ್ಬರೂ ಆ ಪಾತ್ರ ಮಾಡೋಕೆ ಒಪ್ಪುತ್ತಿಲ್ಲ. ಪಾತ್ರ ಓಕೆ ಆದರೆ, ತೂಕ ಅಷ್ಟೊಂದು ಯಾಕೆ ಎನ್ನುವವರೇ ಜಾಸ್ತಿ. ಆ ಕಾರಣಕ್ಕೆ ಫೇಸ್‌ಬುಕ್‌ನಲ್ಲಿ 125 ಕೆಜಿ ತೂಕವಿರುವ, ದಪ್ಪವಿರುವ ನಾಯಕಿ ಬೇಕಾಗಿದ್ದಾರೆ ಎಂದು ಸ್ಟೇಟಸ್ ಹಾಕಿದ್ದೇನೆ. ಆಸಕ್ತಿ ಇದ್ದವರು ಫೋಟೋ ಕಳುಹಿಸಬಹುದು ಎಂಬ ನಿರೀಕ್ಷೆ ಇದೆ.
ಮೊದಲ ಆದ್ಯತೆ ಕನ್ನಡದವರಿಗೆ. ಒಂದು ವೇಳೆ, ಇಲ್ಲಿ ಸಿಗದೇ ಹೋದಲ್ಲಿ, ಪರಭಾಷೆಯತ್ತ ಮುಖ ಮಾಡ್ತೀನಿ’ ಎಂಬುದು ನಿರ್ದೇಶಕ ವಿಜಯ್ ಪ್ರಸಾದ್ ಮಾತು.ವಿಜಯಪ್ರಸಾದ್‌ಗೆ ಕೆಲ ನಟಿಯರ ಬಗ್ಗೆ ಬೇಸರವೂ ಇದೆ. ಯಾಕೆ, ನಟಿಯರು ಪಾತ್ರಕ್ಕೆ ತಯಾರಾಗುವುದಿಲ್ಲವೋ ಗೊತ್ತಿಲ್ಲ. ಬಾಲಿವುಡ್‌ನಲ್ಲಿ ಅಮೀರ್ ಖಾನ್, ಕಾಲಿವುಡ್‌ನಲ್ಲಿ ಅನುಷ್ಕಾಶೆಟ್ಟಿ, ವಿಕ್ರಂ ಇಂಥವರೆಲ್ಲರೂ ಪಾತ್ರಕ್ಕಾಗಿ ಸಾಕಷ್ಟು ತಯಾರಿ ಮಾಡುವಾಗ, ಇಲ್ಲಿನವರೇಕೆ ಅಂತಹ ಪ್ರಯೋಗಕ್ಕಿಳಿಯಲ್ಲ ಎಂಬ ಬಗ್ಗೆ ಬೇಜಾರಿದೆ.
ಹಾಗಂತ ನಾನು ಯಾವ ನಟಿಯರನ್ನೂ ದೂರುವುದಿಲ್ಲ. ನನ್ನ “ಲೇಡಿಸ್ ಟೈಲರ್’ ಪಕ್ಕಾ ಮನರಂಜನೆಯ ಸಿನಿಮಾ. ಇದರೊಂದಿಗೆ ಕಾಡುವ ಕಥೆಯೂ ಹೌದು. ಇಲ್ಲೊಂದು ಪುಟ್ಟ ಪ್ರೇಮಕಥೆಯು ಬಿಚ್ಚಿಕೊಳ್ಳುತ್ತಲೇ ಒಂದಷ್ಟು ಸಂದೇಶಗಳನ್ನು ಕೊಡುತ್ತಾ ಹೋಗುತ್ತದೆ. “ಸಿದ್ಲಿಂಗು’ ಚಿತ್ರದಲ್ಲಿ ಕಾರು ತಗೋಬೇಕು ಎಂಬ ಹುಡುಗನೊಬ್ಬನ ಜರ್ನಿ ಸ್ಟೋರಿ ತೋರಿಸಿದ್ದೆ. “ನೀರ್‌ದೋಸೆ’ಯಲ್ಲಿ ಮುಖವಾಡ ಹಾಕಿ ಬದುಕೋದು ಹೇಗೆಂಬುದನ್ನು ಹೇಳಿದ್ದೆ.
“ಲೇಡಿಸ್ ಟೈಲರ್’ನಲ್ಲಿ ಜಾತಿ ಕುರಿತಾಗಿ ಹೇಳುತ್ತಿದ್ದೇನೆ. ಹಾಗಂತ ಅತಿಯಾದ ಬೋಧನೆ ಇರುವುದಿಲ್ಲ. ಒಂದು ಗಂಭೀರ ವಿಷಯವನ್ನು ಹಾಸ್ಯವಾಗಿ, ನವಿರಾಗಿ ಹೇಳಲು ಹೊರಟಿದ್ದೇನೆ ಎನ್ನುತ್ತಾರೆ ನಿರ್ದೇಶಕರು. ಚಿತ್ರದಲ್ಲಿ ಹಿರಿಯ ಕಲಾವಿದ ಶಿವರಾಮ್, ಕಿರುತೆರೆ ನಟ ವೆಂಕಟ್‌ರಾವ್, “ಗಾಳಿಪಟ’ ಭಾವನಾ ರಾವ್, ವೀಣಾಸುಂದರ್, ಸುಮನ್ ರಂಗನಾಥ್ ಸೇರಿದಂತೆ ಇತರರು ಇದ್ದಾರೆ. ಅನೂಪ್ ಸೀಳಿನ್ ಸಂಗೀತವಿದೆ. ಜ್ಞಾನಮೂರ್ತಿ ಕ್ಯಾಮೆರಾ ಹಿಡಿಯಲಿದ್ದಾರೆ. ಏಪ್ರಿಲ್‌ನಲ್ಲಿ ಸಿನಿಮಾಗೆ ಚಾಲನೆ ಸಿಗಲಿದೆ.