Advertisement
ಉಡುಪಿ ಸನಿಹದ ಮಣಿಪಾಲದಲ್ಲಿದ್ದುಕೊಂಡು ವಿಶ್ವದ ಗಮನ ಸೆಳೆಯುವಂಥ ಸಾಧನೆಯನ್ನು ಮಾಡಿದ ವಿಜಯನಾಥ ಶೆಣೈ ಇತ್ತೀಚೆಗೆ ನಮ್ಮನ್ನಗಲಿದ್ದಾರೆ. ಸಂಸ್ಕೃತಿ, ಸಂಗೀತ, ನೃತ್ಯ, ಯಕ್ಷಗಾನ, ಚಿತ್ರಕಲೆ ಹೀಗೆ ಹತ್ತುಹಲವು ಕ್ಷೇತ್ರಗಳ ವಿಶ್ವಪ್ರಸಿದ್ಧಿಯ ಕಲಾಕಾರರನ್ನು ಉಡುಪಿಗೆ ಕರೆಸಿದ ಅಸಾಧಾರಣ ಸಂಘಟಕ ವಿಜಯನಾಥ ಶೆಣೈ. ಕಳೆದ ಮೂರು ದಶಕಗಳಿಂದ ಹಸ್ತಶಿಲ್ಪ , ಸಂಸ್ಕೃತಿಗ್ರಾಮಗಳ ಕಟ್ಟೋಣದಲ್ಲಿ ನಿರತರಾಗಿದ್ದರು. ಅವರು ದೇಶ-ವಿದೇಶಗಳ ವಿದ್ವಾಂಸರೊಂದಿಗೆ ನಡೆಸಿದ ಕನ್ನಡ ಮತ್ತು ಇಂಗ್ಲಿಷ್ ಭಾಷೆಯ ಪತ್ರೋತ್ತರಗಳು ಮುದ್ರಣಗೊಂಡಿದ್ದು ಸಾಹಿತ್ಯಕ್ಕೇ ಅಮೂಲ್ಯ ಕೊಡುಗೆ ಎನಿಸಿವೆ !
ವಿಜಯನಾಥ ಶೆಣೈ ಅವರ ಬದುಕಿನ ಸಾರವೇ ಎಂಬಂತಿದ್ದ ಹೆರಿಟೇಜ್ ವಿಲೇಜ್ ನಮ್ಮೆಲ್ಲರ “ಅನುಭವ ಮಂಟಪ’ವಾಗಿತ್ತು. ಇಂದು “ಅನುಭವ ಮಂಟಪ’ದಲ್ಲಿ ಶೆಣೈ ಅವರು ಇಲ್ಲ ಎನ್ನುವ ಆಲೋಚನೆಯೇ ಅನಿರೀಕ್ಷಿತ ಭಾವಸಂಘರ್ಷಕ್ಕೆ ನನ್ನನ್ನು ಈಡುಮಾಡಿದೆ.
Related Articles
Advertisement
ಕಾರ್ಪೊರೇಟ್ ಜಗತ್ತಿನಿಂದ ಹಿಡಿದು ಚಹಾ ಮಾರುವ ಸಣ್ಣ ಗೂಡಂಗಡಿಯವರೆಗೂ, ಅಂತಾರಾಷ್ಟ್ರೀಯ ಕಲಾವಿದನೊಬ್ಬನ ಮಾಸ್ಟರ್ ಪೀಸ್ ಕಲಾಕೃತಿಯಿಂದ ಹಿಡಿದು ರಸ್ತೆಬದಿಯಲ್ಲಿ ಮಾರಾಟಕ್ಕಿಟ್ಟಿರುವ ಕುಂಬಾರನ ಮಡಕೆಗಳವರೆಗೆ ಪ್ರತಿಯೊಂದು ವಿಷಯಗಳನ್ನು ಒಂದಿನಿತೂ ಹೆಚ್ಚುಕಡಿಮೆಯಿಲ್ಲದೆ ಸಮಾನ ಉತ್ಸಾಹದಿಂದ ಮಾತನಾಡಬಲ್ಲವರಾಗಿದ್ದರು.
ಸಮಾಜದ ಎಲ್ಲ ಸ್ತರದ, ಎಲ್ಲ ರೀತಿಯ ವ್ಯಕ್ತಿಗಳೂ ಹೆರಿಟೇಜ್ ವಿಲೇಜ್‌ನ ಅಂಗಣದಲ್ಲಿ ಸೇರಿ ಮಾತನಾಡುವುದು, ಅಭಿಪ್ರಾಯಗಳನ್ನು ಹಂಚಿಕೊಳ್ಳುವುದು, ಮುಕ್ತವಾಗಿ ಚರ್ಚಿಸುವುದು ಎಷ್ಟು ಸಾಮಾನ್ಯವಾಗಿತ್ತೆಂದರೆ, ಹೆರಿಟೇಜ್ ವಿಲೇಜ್ ಎನ್ನುವುದು ಎಲ್ಲರನ್ನೂ ಎಲ್ಲವನ್ನೂ ಸೇರಿಸಿಕೊಂಡ ಒಂದು ಸಾಂಸ್ಕƒತಿಕ ವೇದಿಕೆಯಾಗಿತ್ತು.
ಹೆರಿಟೇಜ್ ವಿಲೇಜ್‌ನ ಆರಂಭಿಕ ದಿನಗಳಲ್ಲಿ ಅವರೊಡನೆ ನಾನು ಕೂಡಾ ಊರೂರು ಅಲೆಯುತ್ತಿದ್ದುದರಿಂದ ಅವರ ಪ್ರತಿಯೊಂದು ಆಸಕ್ತಿ, ಅಭಿಪ್ರಾಯ, ಚಟುವಟಿಕೆ ಎಲ್ಲವನ್ನೂ ತೀರಾ ಹತ್ತಿರದಿಂದ ಕಂಡವನಾಗಿದ್ದು, ಅಂದಿನಿಂದ ಇಂದಿನವರೆಗೂ ಅವರಲ್ಲಿನ ಅಸಾಧ್ಯ ಉತ್ಸಾಹ ನನ್ನನ್ನು ಸದಾ ಕಾಡುತ್ತಿದೆ. ಸಮಾಜವಾದಿಗಳು, ಬುದ್ಧಿಜೀವಿಗಳು, ಮಠಾಧಿಪತಿಗಳು, ಶಿಕ್ಷಕರು, ಸಾಹಿತಿಗಳು, ಕಲಾವಿದರು, ರಂಗಕರ್ಮಿಗಳು, ಪತ್ರಿಕೋದ್ಯಮಿಗಳು, ಸಂಶೋಧಕರು, ವೈದ್ಯರು, ಇಂಜಿನಿಯರುಗಳು, ಅಷ್ಟೇ ಅಲ್ಲ, ಹಳ್ಳಿಯ ಒಬ್ಬ ಮೇಸಿŒ, ರೈತ, ನಾಟಿವೈದ್ಯ,… ಹೀಗೆ ಅಸಾಮಾನ್ಯರಿಂದ ಹಿಡಿದು ಸಾಮಾನ್ಯರವರೆಗಿನ ಎಲ್ಲರನ್ನೂ ಏಕರೀತಿಯಿಂದ ಮಾತನಾಡಿಸುವ, ಅವರ ವೈಶಿಷ್ಟ್ಯವನ್ನು ಸಮಾನವಾಗಿ ಗುರುತಿಸುವ, ಸರಿಕಾಣದ್ದನ್ನು ಖಂಡಿಸುವ ಅಸಾಧಾರಣ ವ್ಯಕ್ತಿತ್ವ ಅವರದಾಗಿತ್ತು.
ಶೆಣೈ ಅವರು ಏನಾಗಿದ್ದರು ಎಂದು ಹೇಳುವುದೇ ಕಷ್ಟ. ಸಂಗೀತದ ಬಗ್ಗೆ ಅವರಿಗೆ ಅಪಾರ ಜ್ಞಾನವಿತ್ತು; ಹಾಗೆಂದು ಸಂಗೀತಕಾರರಾಗಿರಲಿಲ್ಲ. ಚಿತ್ರಕಲೆಯ ಬಗ್ಗೆ ಅವರು ತಿಳಿಯದ ಸಂಗತಿಯಿಲ್ಲ; ಹಾಗೆಂದು ಅವರು ಸ್ವತಃ ಚಿತ್ರಕಾರರಲ್ಲ. ಯಕ್ಷಗಾನದ ಪಾರಂಪರಿಕ ಸೊಗಸಿನ ಬಗೆಗಿನ ಕಾಳಜಿಯಿಂದ ಯಕ್ಷಗಾನದ ಕುರಿತು ಲಕ್ಷಣ ಗ್ರಂಥ ಬರೆಸುವ ಬಗ್ಗೆ ಯೋಚಿಸಿದ್ದರು; ಆದರೆ, ಅವರು ಸ್ವತಃ ಯಕ್ಷಗಾನ ಕಲಾವಿದರಲ್ಲ. ಕನ್ನಡ ಮತ್ತು ಇಂಗ್ಲಿಷಿನ ಅನೇಕ ಸಾಹಿತ್ಯ ಕೃತಿಗಳ ಆಳವಾದ ಓದಿನ ಅನುಭವ ಇರುತ್ತ ಅನೇಕ ಸಾಹಿತ್ಯಿಕ ಕಾರ್ಯಕ್ರಮಗಳನ್ನು ಸಂಘಟಿಸಿದ್ದರು; ಆದರೆ ಅವರು ಸ್ವತಃ ಕವಿಯೂ ಅಲ್ಲ, ಕತೆಗಾರರೂ ಆಗಿರಲಿಲ್ಲ. ಆಧ್ಯಾತ್ಮಿಕ ಪಂಥಗಳ ಬಗ್ಗೆ ವಿಶೇಷವಾದ ಆಸಕ್ತಿ ಅವರಿಗಿತ್ತು ; ಆದರೆ, ಮೂರ್ತಿಪೂಜೆಯ ದೇಗುಲಗಳ ಮುಂದೆ ಅವರು ಮನಃಪೂರ್ವಕ ನಮಸ್ಕರಿಸುತ್ತಿದ್ದರೋ ಹೇಳುವುದು ಅಸಾಧ್ಯ. ಶುಷ್ಟ ವೈಚಾರಿಕರೋ ಎಂದು ಕೇಳಿದರೇ ಅದೂ ಅಲ್ಲ ; ಎಷ್ಟೋ ವಿಚಾರಗಳನ್ನು ಅತ್ಯಂತ ಭಾವುಕರಾಗಿ ಗ್ರಹಿಸುತ್ತಿದ್ದರು.
ಎಲ್ಲವನ್ನೂ ಭಾವನೆಗಳಲ್ಲಿಯೇ ನೋಡುತ್ತಿದ್ದರೋ ಎಂದು ಕೇಳುವಿರಾದರೆ ಹಾಗೂ ಅಲ್ಲ, ವಿಚಾರಶೀಲತೆಯ ಒಳ ಹರಿವೊಂದು ಅವರ ಮಾತುಗಳಲ್ಲಿ ಇದ್ದೇ ಇರುತ್ತಿತ್ತು. ಅವರು ಎಷ್ಟೋ ಏನೋ ಎಂಬುದನ್ನು ಅವರ ಸ್ವಭಾವದಿಂದಾಗಲಿ, ಅವರ ಚಟುವಟಿಕೆಯಿಂದಾಗಲಿ ಅವರು ಇಂಥವರು ಎಂದು ಹೇಳುವುದು ಕಷ್ಟ. ಅವರು ಎಲ್ಲವೂ ಆಗಿದ್ದರೂ ಏನೂ ಅಲ್ಲದವರಂತೆ ಇರುತ್ತಿದ್ದುದರಲ್ಲಿಯೇ ಅವರ ಶ್ರೇಷ್ಠತೆಯನ್ನು ಅರ್ಥಮಾಡಿಕೊಳ್ಳಬೇಕಾಗಿದೆ. ತನ್ನ ಸುತ್ತಮುತ್ತಲ ಜಗತ್ತಿನ ಪ್ರತಿಯೊಂದು ಆಗುಹೋಗುಗಳಿಗೂ ಸ್ಪಂದಿಸಿದ ಸೂಕ್ಷ್ಮವಾಗಿ ಸಂವೇದಿಸುತ್ತಿದ್ದ ಅಪರೂಪದ ವ್ಯಕ್ತಿ ಅವರು. ಲಂಡನ್‌ನ ಪಾರಂಪರಿಕ ಬೀದಿಯ ಕಟ್ಟಡಕ್ಕೆ ಧಕ್ಕೆಯಾದರೂ, ಉಡುಪಿಯ ಹಳೆಯ ಸೊಗಸಿನ ಕಟ್ಟಡವನ್ನು ಕೆಡಹಿದರೂ ಅವುಗಳ ಬಗ್ಗೆ ಸಮಾನರೀತಿಯ ಕಾಳಜಿ ಅವರಿಂದ ವ್ಯಕ್ತವಾಗುತ್ತಿತ್ತು. ಅವರು ನಡೆಸಿದ ಪತ್ರವ್ಯವಹಾರದ ಆಳ-ಹರಹನ್ನು ಅಳೆಯುವುದೇ ಸಾಧ್ಯವಿಲ್ಲವೇನೋ.
ಅವರ ಈ ಸೂಕ್ಷ್ಮ ಸಂವೇದನೆಯಿಂದಲೇ ಪುರಾತನ ವಾಸ್ತುಶಿಲ್ಪ, ಕಲೆ ಮತ್ತು ಸಂಸ್ಕƒತಿಯ ಕುರಿತಾದ ಅವರ ಪ್ರೀತಿಗೆ ಹಸ್ತಶಿಲ್ಪ ರೂಪು ಪಡೆಯಿತು. ಅದು ಮುಂದೆ ಇನ್ನಷ್ಟು ವಿಸ್ತಾರವಾಗಿ ಹೆರಿಟೇಜ್ ವಿಲೇಜ್‌ನ ಮಟ್ಟಕ್ಕೆ ಬೆಳೆದು, ಸಮಾಜದಲ್ಲಿ ಒಂದು ಹೊಸ ರೀತಿಯ ಸಾಂಸ್ಕƒತಿಕ ಆಲೋಚನೆಯ ಅಲೆಯನ್ನು ಸೃಷ್ಟಿಸಿತು.
– ಪುರುಷೋತ್ತಮ ಅಡ್ವೆ**
ಸ್ಥಾವರ ಕಂಬಗಳ ನಡುವಿನ ಜಂಗಮ
ಪಂಡಿತ್ ಭೀಮಸೇನ್ ಜೋಶಿಯವರ “ಶುದ್ಧ್ ಕಲ್ಯಾಣ್’ ಆಲಾಪನೆ; ಕರಾವಳಿಯ ನೆಲದಿಂದಲೇ ಅರಳಿದ ಸುಂದರವಾದ ಹೂವಿನಂತಿರುವ “ಹಸ್ತಶಿಲ್ಪ’ ಮನೆ. “ತದೇಜತಿ ತನ್ನೈಜತಿ ತದ್ದೂರೇ ತದ್ವಂತಿಕೇ’ ಈಶೋಪನಿಷದ್ವಾಕ್ಯ; “ಭೂಮಿಗೀತ’ದ ಗೋಪಾಲಕೃಷ್ಣ ಅಡಿಗರಂಥ ಕವಿ- ಲೇಖಕರ ಸಖ್ಯ. ಬಿ.ವಿ. ಕಾರಂತರ ಪ್ರತಿಭೆಯ ಮುರಲಿ ಉಲಿದ “ಗೋಕುಲ ನಿರ್ಗಮನ’; ಸೂರಾಲು ಮಣ್ಣಿನ ಅರಮನೆ ಕುಸಿದಾಗ ಯಾತನೆಪಡುವ ಮನ. ಸುರಗಿಕಟ್ಟೆ ಹೆರಿಯ ಗಾಣಿಗರ ಬಯಲಾಟದ ಹೆಜ್ಜೆಗಳಲ್ಲಡಗಿದ ಕಲೆ; ರವಿವರ್ಮನ ಕಲಾಕೃತಿಗಳನ್ನು ನೆನಪಿಸಲೊಂದು ನೆಲೆ. ಸಿತಾರ್ ಮಾಂತ್ರಿಕ ಪಂಡಿತ್ ರವಿಶಂಕರರ ಕಡಲತಡಿಯ ನಿಸ್ವನ. ಪರ್ಯಾಯೋತ್ಸವದ ಸೃಷ್ಟಿಶೀಲ ಸ್ತಬ್ಧಚಿತ್ರಗಳ ಸಡಗರದ ಪಯಣ. ದೇವರನ್ನೇ ತಮ್ಮೊಳಗೆ ಅಡಗಿಸಿಕೊಂಡಂತಿರುವ ದೇಗುಲದ ಕಲಾತ್ಮಕ ಕಂಬಗಳು. ಇಲ್ಲಿದ್ದು ಎಲ್ಲೆಲ್ಲೂ ಹರಡಿಕೊಳ್ಳಬೇಕೆಂದು ಬಯಸುವ ಮನಸಿನ ತೀವ್ರ ಹಂಬಲ.
.
.
ಮೇಲ್ನೋಟಕ್ಕೆ ಅಸಂಗತವೆನ್ನಿಸುವ ಇಂಥ ಹಲವಾರು ವಾಕ್ಯಗಳನ್ನು ಹೊಸೆಯಬಹುದು. ಆದರೆ, ಇವು ಸಂಗತವೆನ್ನಿಸಬೇಕಾದರೆ ಆ ವಾಕ್ಯಗಳನ್ನು ಮಣಿಪಾಲದ “ಹಸ್ತಶಿಲ್ಪ’ ವಿಜಯನಾಥ ಶೆಣೈಯವರ ಬದುಕಿನ ಹಿನ್ನೆಲೆಯಲ್ಲಿಟ್ಟು ಓದಬೇಕು. ನೃತ್ಯ, ಶಿಲ್ಪ , ಸಂಗೀತ, ಸಂಸ್ಕೃತಿ, ಸಾಹಿತ್ಯ, ಅಧ್ಯಾತ್ಮ, ವಾಸ್ತುಶಿಲ್ಪ ಮುಂತಾದ ಹತ್ತುಹಲವು ಕ್ಷೇತ್ರಗಳ ಬಗೆಗೆ ತನ್ನ ಸುಪ್ತಪ್ರಜ್ಞೆಯಲ್ಲಿರುವ ಗುಪ್ತಗಾಮಿನಿಯ ಪ್ರವಹನಕ್ಕಾಗಿ ಸಮಷ್ಟಿ ಸಮಾಜವೇ ಮಹಾಪಾತ್ರವೊಂದನ್ನು ಆರಿಸಿಕೊಂಡಂತೆ ನಮ್ಮ ನಡುವೆ ಇದ್ದವರು ವಿಜಯನಾಥ ಶೆಣೈ. ಹತ್ತಿಪ್ಪತ್ತು ಕಲಾತ್ಮಕ ಕಟ್ಟೋಣಗಳ “ಹೆರಿಟೇಜ್ ವಿಲೇಜ್’ನ ಚೌಕಿಮನೆಯ ಮೊಗಸಾಲೆಯಲ್ಲಿ ಕುಳಿತಿದ್ದಾರೆಂದರೆ, ಅವರ ಮುಂದೆ ಕಾರ್ಯಕೌಶಲದ ಕ್ಯಾನ್‌ವಾಸ್ ಮಾಯೆಯಂತೆ ಜಗದಗಲ ಹರಡಿಕೊಂಡಿದೆಯೆಂದು ಬಲ್ಲವರು ಮಾತ್ರ ಬಲ್ಲರು. ಸಂಘಟನೆಯೆಂಬುದು ಅವರ ಮಟ್ಟಿಗೆ ಪರಿಚಾರಿಕೆಯಲ್ಲ, ಅದೊಂದು ಜೀವನ ಸಂಸ್ಕಾರ. ವಿಜಯನಾಥ ಶೆಣೈಯವರು ತೀವ್ರ ಮೋಹದಿಂದ ತಾವು ಕಟ್ಟಿದ ಸಂಘ-ಸಂಸ್ಥೆ-ಸ್ಥಾವರ-ಸಮಾರಂಭಗಳನ್ನು
ತ್ಯಜಿಸಿ ಇದ್ದಕ್ಕಿದ್ದಂತೆ ನಿರ್ಮೋಹದ ವೈರಾಗ್ಯವನ್ನಪ್ಪುತ್ತ ಬಂದವರು. ನಿರ್ಮೋಹ ಬೇಡವೆನ್ನಿಸಿದಾಗ ಮತ್ತೂಂದನ್ನು ಕಟ್ಟಿ ಅದರೊಳಗೇ ತನ್ಮಯರಾಗುತ್ತ ಬಂದವರು. ಮೋಹ- ನಿರ್ಮೋಹಗಳಲ್ಲಿ ಲೋಲುಪನಾಗದೆ ಮೋಹವನ್ನು ನಿರ್ಮೋಹ ದಿಂದಲೂ ನಿರ್ಮೋಹವನ್ನು ಮೋಹದಿಂದಲೂ ಜಯಿಸಿದವರು ವಿಜಯನಾಥ ಶೆಣೈ. ಶೆಣೈಯವರು ತಾವೇ ಕಟ್ಟಿದ “ಹೆರಿಟೇಜ್ ವಿಲೇಜ್’ನೊಳಗೆ ಕಂಬಗಳ ನಡುವಿನ ಜಂಗಮನಂತೆ ನಡೆದಾಡುತ್ತಿದ್ದರೆಂದರೆ, ಅವರ ಕತೃìತ್ವದ ಹೆಜ್ಜೆಗಳು ಎಲ್ಲಿಂದ ಆರಂಭವಾದವು ಎಂಬುದನ್ನು ಹುಡುಕುವುದು ಅಷ್ಟೊಂದು ಸುಲಭವಲ್ಲ. ಸಂಸ್ಕೃತ ವಿದ್ವಾಂಸರೊಂದಿಗೂ ನವ್ಯ ಸಾಹಿತಿಗಳೊಂದಿಗೂ ಏಕಕಾಲದಲ್ಲಿ ನಿಕಟರಾಗಿದ್ದುಕೊಂಡು ಬಂದಿದ್ದ ವಿಜಯನಾಥ ಶೆಣೈಯವರಿಗೆ ದೇಶೀಯ ಮತ್ತು ಪಾಶ್ಚಾತ್ಯ ಶಾಸ್ತ್ರ-ಸಾಹಿತ್ಯದ ಅಪಾರ ಓದು ಇತ್ತು. ಆದರೆ, ಸಂಸ್ಕೃತಿ “ಕಟ್ಟುವ’ ಕಾಯಕದಲ್ಲಿ ನಿರತರಾಗಿದ್ದವರಿಗೆ “ಕತೆ-ಕವಿತೆ’ ಕಟ್ಟಲು ಸಮಯವೇ ಸಿಕ್ಕಿರಲಿಲ್ಲ. ಅವರ ಅಕ್ಷರ ಚಿಂತನೆಗಳೇನಾದರೂ ಸಿಗುವುದಿದ್ದರೆ ಪತ್ರಗಳಲ್ಲಿ ಮಾತ್ರ. ವಿಜಯನಾಥ ಶೆಣೈಯವರ ಕೃತಿಗಳು:
ನೆನಪಿನ ಶಿಲ್ಪಗಳು (ಆತ್ಮಕಥನ), ಪತ್ರವಾತ್ಸಲ್ಯ, ಪತ್ರಾವಳಿ (ವಿವಿಧ ಕ್ಷೇತ್ರಗಳ ವಿದ್ವಾಂಸರೊಂದಿಗೆ ನಡೆಸಿದ ಪತ್ರೋತ್ತರ), ಪತ್ರಸಂವಾದ (ಇತಿಹಾಸತಜ್ಞ ಮುಕುಂದ ಪ್ರಭುಗಳೊಂದಿಗೆ ನಡೆಸಿದ ಸಾಂಸ್ಕೃತಿಕ ಜಿಜ್ಞಾಸೆ), ಇನ್‌ಸ್ಕೈಬ್‌ಡ್ ಹೆರಿಟೇಜ್ (ದೇಶ-ವಿದೇಶಗಳ ವಿದ್ವಾಂಸರೊಂದಿಗೆ ನಡೆಸಿದ ಇಂಗ್ಲಿಶ್ ಪತ್ರಸಂವಾದ) ವಿಜಯನಾಥ ಶೆಣೈಯವರ ಕ್ರಿಯಾಶೀಲತೆಯನ್ನು ಕಂಡು ಬೆರಗುಗೊಂಡಿದ್ದ ಯು. ಆರ್. ಅನಂತಮೂರ್ತಿಯವರು ಒಂದು ಕವಿತೆಯನ್ನೇ ಬರೆದಿದ್ದರು. ಅದು ಅವರ “ಮಿಥುನ’ ಕವಿತಾಸಂಕಲನದಲ್ಲಿ ಪ್ರಕಟವಾಗಿದೆ.