ಬೆಳಗಾವಿ: ಹರಿಹರ ಪೀಠದ ವಚನಾಂದ ಸ್ವಾಮೀಜಿ ಸೆಲೆಬ್ರಿಟಿ ಸ್ವಾಮೀಜಿ ಆಗಿದ್ದಾರೆ. ಅವರು ಬಂದಾಗ ಕರೆದುಕೊಂಡಿದ್ವಿ ಅವರು ಹೋದಾಗ ಕೈಬಿಟ್ಟಿದ್ದೇವೆ ಅಷ್ಟೇ ಎಂದು ಮಾಜಿ ಶಾಸಕ, ಪಂಚಮಸಾಲಿ ಸಮುದಾಯದ ರಾಜ್ಯಾಧ್ಯಕ್ಷ ವಿಜಯಾನಂದ ಕಾಶಪ್ಪನವರ ವಾಗ್ದಾಳಿ ನಡೆಸಿದರು.
ನಗರದಲ್ಲಿ ಗುರುವಾರ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಪಂಚಮಸಾಲಿ ಸಮಾಜವನ್ನ ಜಾಗೃತಿ ಮೂಡಿಸುತ್ತಿದ್ದೇವೆ. ಹರಿಹರ ಪೀಠದ ಸ್ವಾಮೀಜಿ ಬಗ್ಗೆ ಜಾಸ್ತಿ ಏನು ಹೇಳಲು ಆಗುವುದಿಲ್ಲ.
ಸಮಾಜ ಬೇಕು ಎಂದರೆ ಅವರು ಇರಬೇಕು. ಸಮಾಜದ ಕಟ್ಟಕಡೆಯ ಮನುಷ್ಯನಿಗೆ ಅನ್ಯಾಯ ಆದಾಗ ಅವರ ಜೊತೆಗೆ ಇರಬೇಕು. ಅವರು ಬಂದಾಗ ನಾವು ಸ್ವಾಗತ ಮಾಡುತ್ತೇವೆ. ಯಾವಾಗ ಬೇಕಾದರೂ ಬರಲಿ. ಅವರು ಬರದಿದ್ದಾಗ ನಾವು ಏನೂ ಮಾಡಲು ಆಗುವುದಿಲ್ಲ ಎಂದರು.
ಒಂದೇ ಸಂಘಟನೆ ಒಂದೇ ಪೀಠ ಇರಲಿ. ಗುರುಗಳು ಬೇಕಾದರೆ ಎಷ್ಟು ಜನವಾದರೂ ಇರಲಿ. ಅದನ್ನು ಒಂದು ಮಾಡುವ ಪ್ರಯತ್ನ ನಾವು ಮಾಡುತ್ತಿದ್ದೇವೆ. ಕೆಲವಷ್ಟು ಜನ ಬೇರೆ ಮಾಡುವ ಪ್ರಯತ್ನ ಮಾಡುತ್ತಿದ್ದಾರೆ. ಮುರಗೇಶ ನಿರಾಣಿ ಅವರು ಸಚಿವರಾದ ಬಳಿಕ ಧೋರಣೆ ಬದಲಾಗಿದೆ. ಹೋರಾಟ ನಿಲ್ಲಿಸಲು ಪ್ರಯತ್ನ ಮಾಡಿದ್ದರು. ಈಗ ಬಾಯಿಗೆ ಬಂದಂತೆ ಮಾತನಾಡುತ್ತಿದ್ದಾರೆ. ಈಗ ಅಧಿಕಾರದ ವ್ಯಾಮೋಹ ಹುಚ್ಚು ಹಿಡಿದಿದೆ. ಅದಕ್ಕೆ ಹೀಗೆ ಬಾಯಿಗೆ ಬಂದಂತೆ ಮಾತನಾಡುತ್ತಾರೆ. ಸಮಾಜಕ್ಕೆ ಸ್ಪಂದಿಸಿದವರು ನಾಯಕರಾಗುತ್ತಾರೆ. ಯಾರು ಸ್ಪಂದಿಸುವುದಿಲ್ಲವೋ ಅವರು ನಾಲಾಯಕ್ ಆಗುತ್ತಾರೆ ಎಂದು ನಿರಾಣಿ ವಿರುದ್ಧ ಪರೋಕ್ಷವಾಗಿ ವಾಗ್ದಾಳಿ ನಡೆಸಿದರು.
ಬೆಳಗಾವಿ ಲೋಕಸಭೆ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದ ಪರವಾಗಿ ಪ್ರಚಾರ ಮಾಡುತ್ತಿದ್ದೇನೆ ಎಂದು ಕಾಶಪ್ಪನವರ ಹೇಳಿದರು.