Advertisement

Vijayanagara: ಅನುದಾನ ಇಲ್ಲದೇ, ಜನರು ಅಭಿವೃದ್ಧಿ ಕೇಳಿದ್ರೆ ಏನು ಮಾಡಲಿ: ಕಾಂಗ್ರೆಸ್‌ ಶಾಸಕ

09:39 PM Nov 18, 2024 | Team Udayavani |

ಬಳ್ಳಾರಿ (ಹೊಸಪೇಟೆ): ಕಲ್ಯಾಣ ಕರ್ನಾಟಕ ಪ್ರದೇಶಾಭಿವೃದ್ಧಿ ಮಂಡಳಿಯ ಅನುದಾನ ಹಂಚಿಕೆಯಲ್ಲಿ ವಿಜಯನಗರ ಕ್ಷೇತ್ರಕ್ಕೆ ಭಾರಿ ಅನ್ಯಾಯವಾಗಿದ್ದು, ಅನುದಾನವೇ ಇಲ್ಲದೇ, ಕ್ಷೇತ್ರವನ್ನು ಹೇಗೆ ಅಭಿವೃದ್ಧಿ ಮಾಡೋಕೆ ಆಗುತ್ತದೆ ಎಂದು ಆಡಳಿತಾರೂಢ ಕಾಂಗ್ರೆಸ್ ಪಕ್ಷದ ವಿಜಯನಗರ ಶಾಸಕ ಎಚ್.ಆರ್.ಗವಿಯಪ್ಪ, ಸರ್ಕಾರದ ವಿರುದ್ಧವೇ ಅಸಮಾಧಾನ ಹೊರಹಾಕಿದ್ದಾರೆ.

Advertisement

ಹೊಸಪೇಟೆ ನಗರದಲ್ಲಿ ಸೋಮವಾರ ಮಾಧ್ಯಮಗಳೊಂದಿಗೆ ಮಾತನಾಡಿ, ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದು ಒಂದುವರೆ ವರ್ಷವಾದರೂ, ಅನುದಾನವೇ ನೀಡುತ್ತಿಲ್ಲ. ಕಲ್ಯಾಣ ಕರ್ನಾಟಕ ಪ್ರದೇಶಾಭಿವೃದ್ಧಿ ಮಂಡಳಿಯ ಅನುದಾನ ಹಂಚಿಕೆಯಲ್ಲಿ ವಿಜಯನಗರ ಕ್ಷೇತ್ರಕ್ಕೆ ಭಾರಿ ಅನ್ಯಾಯವಾಗಿದೆ.

ಬಿಜೆಪಿ ಶಾಸಕರು ತಂದ ಅನುದಾನದಲ್ಲೇ ಅಭಿವೃದ್ಧಿ ಕಾರ್ಯ: 
ಕೆಕೆಆರ್‌ಡಿಬಿಯಿಂದ ವಿಜಯನಗರ ಜಿಲ್ಲೆಗೆ ಒಟ್ಟು 348 ಕೋಟಿ ರೂ. ಅನುದಾನ ಬಿಡುಗಡೆಯಾಗಿದ್ದು, ಈ ಪೈಕಿ ಜಿಲ್ಲೆಯ ಬೇರೆ ಬೇರೆ ಕ್ಷೇತ್ರಗಳಿಗೆ 60, 70  ಕೋಟಿ ಅನುದಾನ ನೀಡಿದ್ದರೆ ವಿಜಯನಗರ ಕ್ಷೇತ್ರಕ್ಕೆ ಕೇವಲ 22 ಕೋಟಿ ಅನುದಾನ ಬಿಡುಗಡೆಯಾಗಿದೆ. ಇದರಲ್ಲಿ ಜಿಲ್ಲಾಸ್ಪತ್ರೆ ಕಟ್ಟಡಕ್ಕೆ 12 ಕೋಟಿ ರೂ. ಅನುದಾನ ನೀಡಿದ್ದು, ಇನ್ನುಳಿದ 10 ಕೋಟಿ ಅನುದಾನದಲ್ಲಿ ಕ್ಷೇತ್ರದಲ್ಲಿ ಯಾವ್ಯಾವ ಕೆಲಸ ಮಾಡೋಕೆ ಆಗುತ್ತದೆ ಎಂದು ಸರ್ಕಾರದ ವಿರುದ್ಧ ಬಹಿರಂಗವಾಗಿಯೇ ಅಸಮಾಧಾನ ವ್ಯಕ್ತಪಡಿಸಿರುವ ಶಾಸಕ  ಎಚ್.ಆರ್.ಗವಿಯಪ್ಪ, ಹಿಂದಿನ ಬಿಜೆಪಿ ಶಾಸಕರು ತಂದಿದ್ದ ಅನುದಾನದಲ್ಲೇ ಕಳೆದ ಒಂದುವರೆ ವರ್ಷ ಅಭಿವೃದ್ಧಿ ಕೆಲಸ ಕಾರ್ಯಗಳು ನಡೆದಿವೆ ಎಂದು ತಿಳಿಸಿದ್ದಾರೆ.

ಜಿಲ್ಲಾ ಉಸ್ತುವಾರಿ ಸಚಿವ ಜಮೀರ್ ವಿರುದ್ಧವೂ ಅಸಮಾಧಾನ: 
ಅಭಿವೃದ್ಧಿ ಕುರಿತು ಕ್ಷೇತ್ರದ ಜನರು ನನ್ನನ್ನು ಕೇಳುತ್ತಿದ್ದಾರೆ. ಆದರೆ, ಅನುದಾನವೇ ಇಲ್ಲದೇ ನಾನೇನು ಮಾಡಲಿ ಎಂದು ಅಸಹಾಯಕತೆ ವ್ಯಕ್ತಪಡಿಸಿರುವ ಶಾಸಕ ಗವಿಯಪ್ಪ, ಸರ್ಕಾರ, ಈಗಲಾದರೂ ನಮಗೆ ಅನುದಾನ ನೀಡಿ, ಅಭಿವೃದ್ಧಿ ಕೆಲಸ ಮಾಡಲು ಅನುವು ಮಾಡಿಕೊಡಬೇಕು. ಅಲ್ಲದೇ, ಜಿಲ್ಲೆಗೆ ಬರುವ ಅನುದಾನದಲ್ಲಿ ಶೇ.25 ಅನುದಾನವನ್ನು ಜಿಲ್ಲಾ ಕೇಂದ್ರದ ಅಭಿವೃದ್ಧಿಗೆ ಮೀಸಲಿಡಬೇಕು ಎಂದು ಶಾಸಕ ಅಸಮಾಧಾನ ವ್ಯಕ್ತಪಡಿಸಿದರು.

ಇದು ಜಿಲ್ಲಾ ಉಸ್ತುವಾರಿ ಸಚಿವ ಜಮೀರ್ ಅಹ್ಮದ್ ಖಾನ್ ಅವರ ಕೈಯಲ್ಲಿರುತ್ತದೆ. ಆದರೆ, ಜಿಲ್ಲಾ ಉಸ್ತುವಾರಿ ಸಚಿವ ಜಮೀರ್ ಅಹ್ಮದ್ ಖಾನ್, ಆ ರೀತಿ ಮಾಡಿಲ್ಲ ಎಂದು ಉಸ್ತುವಾರಿ ಸಚಿವರ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿರುವ ಗವಿಯಪ್ಪ, ಬೇಕಿದ್ದರೆ ಜಿಲ್ಲಾ ಉಸ್ತುವಾರಿ ಸಚಿವರೇ ತಮ್ಮ ವಿವೇಚನೆಗೆ ಬಂದಂತೆ ಅನುದಾನವನ್ನು ಬಳಸಲಿ, ನಾನು ಕೇಳಲ್ಲ ಎಂದು ಸಚಿವ ಜಮೀರ್ ವಿರುದ್ಧ ಪರೋಕ್ಷವಾಗಿ ಚಾಟಿ ಬೀಸಿದ್ದಾರೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next