ಬಳ್ಳಾರಿ: ವಿಜಯನಗರ ಶ್ರೀಕೃಷ್ಣದೇವರಾಯ ವಿಶ್ವವಿದ್ಯಾಲಯದ 7ನೇ ಘಟಿಕೋತ್ಸವ ಮೇ 14 ರಂದು ನಗರದ ಜೋಳದರಾಶಿ ದೊಡ್ಡನಗೌಡ ರಂಗಮಂದಿರದಲ್ಲಿ ನಡೆಯಲಿದೆ ಎಂದು ವಿವಿ ಕುಲಪತಿ ಪ್ರೊ. ಎಂ.ಎಸ್. ಸುಭಾಶ್ ಹೇಳಿದರು.
ನವದೆಹಲಿಯ ಅಖೀಲ ಭಾರತ ತಾಂತ್ರಿಕ ಶಿಕ್ಷಣ ಮಂಡಳಿ ಅಧ್ಯಕ್ಷ, ಕನ್ನಡಿಗರಾದ ಪ್ರೊ. ಅನಿಲ್ ಡಿ.ಸಹಸ್ರಬುಧೆ ಘಟಿಕೋತ್ಸವ ಭಾಷಣ ಮಾಡಲಿದ್ದಾರೆ. ರಾಜ್ಯಪಾಲ, ವಿವಿ ಕುಲಾಧಿಪತಿ ವಜುಭಾಯಿ ವಾಲಾ ಅಧ್ಯಕ್ಷತೆ ವಹಿಸಲಿದ್ದು, ಉನ್ನತ ಶಿಕ್ಷಣ ಸಚಿವ, ಸಮ ಕುಲಾಧಿಪತಿ ಜಿ.ಟಿ.ದೇವೇಗೌಡ ಪದವಿ ಪ್ರದಾನ ಮಾಡಲಿದ್ದಾರೆ ಎಂದು ತಿಳಿಸಿದರು.
ವಿಎಸ್‌ಕೆ ವಿವಿಗೆ ಈ ಹಿಂದೆ 12ಬಿ ಮಾನ್ಯತೆ ಸಿಕ್ಕಿರಲಿಲ್ಲ. ಇದರಿಂದ ವಿವಿಗೆ ಪ್ರತಿ ವರ್ಷ ರೂಸಾದಿಂದ ಬರುವ ಸುಮಾರು 20 ಕೋಟಿ ರೂ.ಅನುದಾನ ದೊರೆಯುತ್ತಿರಲಿಲ್ಲ. ಇದಕ್ಕೆ ವಿವಿಯಲ್ಲಿನ ಅಸೋಸಿಯೇಟ್ ಪ್ರೊಫೆಸರ್, ಬೋಧಕೇತರ ಸಿಬ್ಬಂದಿ ಕೊರತೆ ಕಾರಣವಾಗಿತ್ತು. ಯುಜಿಸಿ ನಿಯಮಗಳ ಪ್ರಕಾರ ಸುಮಾರು 20 ಕೋರ್ಸ್‌ಗಳಿಗೆ ಶೇ.25 ರಷ್ಟು ಸಿಬ್ಬಂದಿ ಇರಬೇಕು. ಸಹಾಯಕ ಪ್ರಾಧ್ಯಾಪಕರು ಇದ್ದರೂ, ಅಸೋಸಿಯೇಟ್ ಪ್ರೊಫೆಸರ್‌ಗಳ ಕೊರತೆ ಇತ್ತು. ಕಳೆದ ವರ್ಷ 28 ಅಸೋಸಿಯೇಟ್ ಪ್ರೊಫೆಸರ್‌ಗಳ ನೇಮಕಾತಿಯಿಂದ ಈ ಕೊರತೆ ನೀಗಿದಂತಾಗಿದೆ. ಕಳೆದ ವರ್ಷ ರಾಷ್ಟ್ರಮಟ್ಟದ ಕ್ರೀಡಾಕೂಟದಲ್ಲಿ ವಿವಿ ವಿದ್ಯಾರ್ಥಿಗಳು ಉತ್ತಮ ಪ್ರದರ್ಶನ ತೋರಿರುವುದು 12ಬಿ ಮಾನ್ಯತೆ ದೊರೆಯಲು ನೆರವಾಗಲಿದೆ. ಕಳೆದ ಏಪ್ರಿಲ್ನಲ್ಲಿ ಯುಜಿಸಿ ತಜ್ಞರ ಸಮಿತಿ ವಿವಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಶೀಘ್ರದಲ್ಲೇ ವಿವಿಗೆ 12ಬಿ ಮಾನ್ಯತೆಯೊಂದಿಗೆ, ನ್ಯಾಕ್ ವತಿಯಿಂದಲೂ ಮಾನ್ಯತೆ ದೊರೆಯುವ ನಿರೀಕ್ಷೆಯಿದೆ ಎಂದು ವಿವರಿಸಿದರು.
ವಿವಿಯಿಂದ ಕಳೆದ ವರ್ಷ ಕೇವಲ 3 ಪಿಎಚ್‌ಡಿ ಪದವಿ ಪ್ರದಾನ ಮಾಡಲಾಗಿತ್ತು. ಈ ಬಾರಿ 26 ಪದವಿಗಳನ್ನು ಪ್ರದಾನ ಮಾಡಲಾಗುತ್ತಿದೆ. ಸ್ನಾತಕ ಪದವಿ ಪರೀಕ್ಷೆಯಲ್ಲಿ ಉತ್ತೀರ್ಣರಾದವರ ಪ್ರಮಾಣ ಪ್ರತಿಶತ ಶೇ.75ಕ್ಕೆ ಏರಿಕೆಯಾಗಿದೆ. ಸ್ನಾತಕೋತ್ತರ ಕೋರ್ಸ್‌ಗಳಲ್ಲಿ ಪ್ರತಿಶತ ಶೇ.93 ರಷ್ಟು ವಿದ್ಯಾರ್ಥಿಗಳು ಉತ್ತೀರ್ಣರಾಗುತ್ತಿದ್ದಾರೆ. ಸ್ನಾತಕ ಕೋರ್ಸ್‌ಗಳಲ್ಲಿ 80, ಸ್ನಾತಕೋತ್ತರ ಕೋರ್ಸ್‌ಗಳಲ್ಲಿ 121 ವಿದ್ಯಾರ್ಥಿಗಳು ರ್‍ಯಾಂಕ್ ಪಡೆದಿದ್ದಾರೆ. ಸ್ನಾತಕ ಕೋರ್ಸ್‌ನಲ್ಲಿ 18, ಸ್ನಾತಕೋತ್ತರ ಕೋರ್ಸ್‌ಗಳಲ್ಲಿ 54 ವಿದ್ಯಾರ್ಥಿಗಳು ಉತ್ತಮ ಸಾಧನೆಯಿಂದಾಗಿ ಚಿನ್ನದ ಪದಕ ಪಡೆದಿದ್ದಾರೆ. ವಿವಿಧ ಖಾಸಗಿ ಕಂಪನಿಗಳಿಂದ ವಿವಿಯ ಸುಮಾರು 200 ವಿದ್ಯಾರ್ಥಿಗಳಿಗೆ ಉದ್ಯೋಗ ಅವಕಾಶ ಲಭಿಸಿದೆ ಎಂದು ತಿಳಿಸಿದರು.
Advertisement
ಸೋಮವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ವಿಎಸ್‌ಕೆ ವಿವಿ ಸ್ಥಾಪನೆಯಾಗಿ 10 ವರ್ಷಗಳು ಪೂರ್ಣಗೊಂಡಿವೆ. ದಶಕದ ಹಿಂದೆ 900 ಇದ್ದ ಸ್ನಾತಕೋತ್ತರ ವಿದ್ಯಾರ್ಥಿಗಳ ಸಂಖ್ಯೆ ಇಂದು 2 ಸಾವಿರ ತಲುಪಿದೆ ಎಂದರು.
Related Articles
Advertisement
ದಾದಿ ಹೃದಯ ಮೋಹಿನಿಯವರಿಗೆ ಗೌರವ ಡಾಕ್ಟರೇಟ್: ವಿಜಯನಗರ ಶ್ರೀಕೃಷ್ಣದೇವರಾಯ ವಿವಿಯಿಂದ ಈ ಬಾರಿ ರಾಜಸ್ಥಾನ ಮೂಲದ ಬ್ರಹ್ಮಕುಮಾರಿ ಸಂಸ್ಥೆಯ ಹೆಚ್ಚುವರಿ ಮುಖ್ಯಸ್ಥೆ ರಾಜಯೋಗಿನಿ ದಾದಿ ಹೃದಯ ಮೋಹಿನಿ ಅವರಿಗೆ ಗೌರವ ಡಾಕ್ಟರೇಟ್ ಪದವಿ ಪ್ರದಾನ ಮಾಡಲಾಗಿದೆ. ಸ್ಥಳೀಯವಾಗಿ ರಂಗಭೂಮಿ ಕಲಾವಿದ ಬೆಳಗಲ್ಲು ವೀರಣ್ಣ, ರಾಜ್ಯಮಟ್ಟದಲ್ಲಿ ಶಿವಮೊಗ್ಗದ ಮಂಜುನಾಥ ಭಂಡಾರಿ, ಧಾರವಾಡದ ವೆಂಕಟೇಶ ಕುಮಾರ, ಮಾರ್ಕಂಡೇಯ ಯಲ್ಲಪ್ಪ ದೊಡ್ಡಮನಿ, ರಾಷ್ಟ್ರಮಟ್ಟದಲ್ಲಿ ರಾಜಸ್ಥಾನ ಮೂಲದ ಬ್ರಹ್ಮಕುಮಾರಿ ಸಂಸ್ಥೆಯ ಹೆಚ್ಚುವರಿ ಮುಖ್ಯಸ್ಥೆ ರಾಜಯೋಗಿನಿ ದಾದಿ ಹೃದಯ ಮೋಹಿನಿ ಸೇರಿ ಒಟ್ಟು ಐದು ಅರ್ಜಿಗಳನ್ನು ರಾಜ್ಯಪಾಲರ ಆಯ್ಕೆ ಸಮಿತಿಗೆ ಕಳುಹಿಸಿಕೊಡಲಾಗಿತ್ತು. ಅದರಲ್ಲಿ ರಾಜ್ಯಪಾಲರು ಶಿಕ್ಷಣ, ಸಮಾಜ ಸೇವೆ, ಅಧಾತ್ಮ ಸೇವೆ ಪರಿಗಣಿಸಿ ರಾಜಯೋಗಿನಿ ದಾದಿ ಹೃದಯ ಮೋಹಿನಿ ಅವರ ಹೆಸರನ್ನು ಅಂತಿಮಗೊಳಿಸಿದ್ದು, ಮೇ 14 ರಂದು ವಿವಿಯಿಂದ ಗೌರವ ಡಾಕ್ಟರೇಟ್ ಪ್ರದಾನ ಮಾಡಲಾಗುವುದು ಎಂದರು.
ಆಡಳಿತ ವಿಭಾಗದ ಕುಲಸಚಿವೆ ಪ್ರೊ. ತುಳುಸಿಮಾಲಾ, ಮೌಲ್ಯಮಾಪನಾ ಕುಲಸಚಿವ ಕೆ.ರಮೇಶ್ ಸುದ್ದಿಗೋಷ್ಠಿಯಲ್ಲಿದ್ದರು.
ಬಳ್ಳಾರಿ ಇಲ್ಲಿನ ವಿಜಯನಗರ ಶ್ರೀಕೃಷ್ಣದೇವರಾಯ ವಿಶ್ವವಿದ್ಯಾಲಯದಲ್ಲಿನ ನೇಮಕಾತಿ ಪ್ರಕ್ರಿಯೆಗೆ ಸಂಬಂಧಿಸಿದಂತೆ ಕುಲಪತಿ ಪ್ರೊ. ಎಂ.ಎಸ್.ಸುಭಾಶ್, ಆಡಳಿತ ವಿಭಾಗದ ಕುಲಸಚಿವೆ ಪ್ರೊ. ಬಿ.ಕೆ.ತುಳುಸಿಮಲಾ ಅವರ ಮಧ್ಯೆ ಹಲವು ದಿನಗಳಿಂದ ನಡೆಯುತ್ತಿದ್ದ ಶೀತಲ ಸಮರ ಸೋಮವಾರ ಬಹಿರಂಗಗೊಂಡಿದೆ. ಸೋಮವಾರ ಸುದ್ದಿಗೋಷ್ಠಿಯಲ್ಲಿ ಬೋಧಕ, ಬೋಧಕೇತರ ಹುದ್ದೆಗಳ ನೇಮಕಾತಿ ಪ್ರಕ್ರಿಯೆಗೆ ಸಂಬಂಧಿಸಿದಂತೆ ಪತ್ರಕರ್ತರು ಕೇಳಿದ ಪ್ರಶ್ನೆಯೊಂದಕ್ಕೆ ಉತ್ತರಿಸುತ್ತಿದ್ದ ಕುಲಸಚಿವೆ ಪ್ರೊ. ಬಿ.ಕೆ.ತುಳುಸಿಮಾಲಾ ಅವರನ್ನು ಕುಲಪತಿ ಪ್ರೊ. ಎಂ.ಎಸ್. ಸುಭಾಶ್ ಅವರು ಸುದ್ದಿಗೋಷ್ಠಿಯಿಂದಲೇ ಹೊರಹೋಗುವಂತೆ ಸೂಚಿಸಿದರು. ಇದರಿಂದ ಕುಲಸಚಿವೆ ತುಳುಸಿಮಾಲಾ ಅವರು, ‘ಕುಲಪತಿಗಳ ಸೂಚನೆ ಮೇರೆಗೆ ಸುದ್ದಿಗೋಷ್ಠಿಯಿಂದ ನಾನು ಹೊರ ನಡೆಯುತ್ತಿದ್ದೇನೆ’ ಎಂದು ಹೇಳಿ ಹೊರನಡೆದರು.
ಇದರಿಂದ ಇಬ್ಬರ ನಡುವೆ ನಡೆಯುತ್ತಿದ್ದ ಶೀತಲ ಸಮರ ಬಹಿರಂಗವಾಯಿತು. ಬಳಿಕ ಮಾತನಾಡಿದ ಕುಲಪತಿ ಪ್ರೊ. ಎಂ.ಎಸ್.ಸುಭಾಶ್, ನೇಮಕಾತಿ ಪ್ರಕ್ರಿಯೆಗೆ ಸಂಬಂಧಿಸಿದಂತೆ ಇಬ್ಬರು ವಿಭಿನ್ನ ರೀತಿಯ ಹೇಳಿಕೆ ನೀಡುವುದರಿಂದ ವಿನಾಕಾರಣ ಗೊಂದಲ ಸೃಷ್ಟಿಸಿದಂತಾಗಲಿದೆ. ಅನಾವಶ್ಯಕ ಚರ್ಚೆಗಳು ಆಗಬಾರದು ಎಂಬ ಉದ್ದೇಶದಿಂದ ಕುಲಸಚಿವೆ ತುಳುಸಿಮಾಲಾ ಅವರನ್ನು ಸುದ್ದಿಗೋಷ್ಠಿಯಿಂದ ಹೊರ ಹೋಗುವಂತೆ ಸೂಚಿಸಿದ್ದೇನೆ ಎಂದರು. ವಿವಿಯಲ್ಲಿನ ಬೋಧಕ, ಬೋಧಕೇತರ ಹುದ್ದೆಗಳ ನೇಮಕಾತಿಗೆ 2018ರಲ್ಲೇ ಅಧಿಸೂಚನೆ ಹೊರಡಿಸಲಾಗಿತ್ತು. ಆಗ 28 ಅಸೋಸಿಯೇಟ್ ಪ್ರೊಫೆಸರ್ ಹುದ್ದೆಗಳ ನೇಮಕಾತಿ ನಡೆಯಿತಾದರೂ, ನಾನಾ ತೊಂದರೆಯಿಂದ ಬೋಧಕೇತರ ಹುದ್ದೆಗಳ ನೇಮಕಾತಿ ತಡೆಹಿಡಿಯಲಾಗಿತ್ತು. ಇದೀಗ ಎಲ್ಲ ಅಡೆತಡೆಗಳನ್ನು ಸರಿಪಡಿಸಿ ಪುನಃ ನೇಮಕಾತಿ ಪ್ರಕ್ರಿಯೆ ಮುಂದುವರಿಸಲಾಗಿದೆ. ಆದರೆ, ಕುಲಪತಿಗಳ ನಿವೃತ್ತಿಗೆ ಇನ್ನು ಆರು ತಿಂಗಳು ಇರುವಾಗ ನೇಮಕಾತಿ ಪ್ರಕ್ರಿಯೆ ನಡೆಸಲು ಅವಕಾಶವಿಲ್ಲ ಎಂದು ಕುಲಸಚಿವೆ ತುಳುಸಿಮಾಲಾ ಅವರು ಪ್ರಕ್ರಿಯೆಯಿಂದ ದೂರ ಉಳಿದಿದ್ದಾರೆ. ಹಲವು ಬಾರಿ ಅವರೊಂದಿಗೆ ಚರ್ಚಿಸಿದರೂ ಸ್ಪಂದಿಸುತ್ತಿಲ್ಲ. ಜತೆಗೆ ಸರ್ಕಾರಕ್ಕೆ ಹಲವು ಪತ್ರಗಳನ್ನು ಬರೆದಿದ್ದಾರೆ. ಆದರೆ, ನೇಮಕಾತಿ ಪ್ರಕ್ರಿಯೆ ತಡೆಯುವಂತೆ ಯಾರಿಂದಲೂ ಆಕ್ಷೇಪಣೆ ಬಂದಿಲ್ಲ.
ಹಾಗಾಗಿ ನೇಮಕಾತಿ ಪ್ರಕ್ರಿಯೆ ಮುಂದುವರಿಸಲಾಗುತ್ತಿದೆ ಎಂದು ವಿವರಿಸಿದರು. ಕುಲಸಚಿವೆ ತುಳುಸಿಮಾಲಾ ಅವರು ರಜೆ ಮೇಲೆ ತೆರಳಿದ್ದರಿಂದ ಅವರ ಅಧಿಕಾರವನ್ನು ತಾತ್ಕಾಲಿಕವಾಗಿ ಮೌಲ್ಯಮಾಪನಾ ಕುಲಸಚಿವರು ನಿರ್ವಹಿಸಿದ್ದರು. ಪುನಃ ಅವರು ಬಂದ ಬಳಿಕ ಅಧಿಕಾರ ನೀಡಲಾಗಿದೆ. ನೇಮಕಾತಿ ಪ್ರಕ್ರಿಯೆಯಲ್ಲಿ ತೊಡಗಿಸಿಕೊಳ್ಳದ ಹಿನ್ನೆಲೆಯಲ್ಲಿ ರಾಜ್ಯ ಸರ್ಕಾರ, ಉನ್ನತ ಶಿಕ್ಷಣ ಇಲಾಖೆಗೆ ಎರಡ್ಮೂರು ಬಾರಿ ಪತ್ರ ಬರೆಯಲಾಗಿದೆ. ಕುಲಸಚಿವರು ಸ್ಪಂದಿಸದ ಹಿನ್ನೆಲೆಯಲ್ಲಿ ಅವರನ್ನು ಬಿಟ್ಟು ನೇಮಕಾತಿ ಪ್ರಕ್ರಿಯೆ ನಡೆಸುವಂತೆ ಉನ್ನತ ಶಿಕ್ಷಣ ಇಲಾಖೆ ಕಾರ್ಯದರ್ಶಿ ಮೌಖೀಕವಾಗಿ ಸೂಚಿಸಿದ್ದಾರೆ. ಈ ಹಿನ್ನೆಲೆಯಲ್ಲಿ ಪ್ರಕ್ರಿಯೆ ನಡೆಸಲಾಗುತ್ತಿದೆ ಎಂದರು. ಉತ್ತರ ಕರ್ನಾಟಕ ಬಗ್ಗೆ ಕಾಳಜಿಯಿಲ್ಲ: ದಕ್ಷಿಣ ಕರ್ನಾಟಕದ ಬೆಂಗಳೂರು, ಮೈಸೂರು ಭಾಗದವರಿಗೆ ಉತ್ತರ ಕರ್ನಾಟಕದ ಸಮಸ್ಯೆಗಳ ಬಗ್ಗೆ ಕಾಳಜಿಯಿಲ್ಲ. ನೇಮಕಾತಿ ಪ್ರಕ್ರಿಯೆ ಸ್ಥಗಿತಗೊಂಡರೆ ಉತ್ತರ ಕರ್ನಾಟಕದ ಅದರಲ್ಲೂ ಹೈ.ಕ ಭಾಗಕ್ಕೆ ತುಂಬಾ ಅನ್ಯಾಯವಾಗಲಿದೆ. ಒಟ್ಟಾರೆ ಕುಲಪತಿಗಳ ಅವಧಿಯಲ್ಲಿ ನೇಮಕಾತಿ ಪ್ರಕ್ರಿಯೆ ನಡೆಯಬಾರದು ಎಂಬ ಉದ್ದೇಶ ಕುಲಸಚಿವರದ್ದಾಗಿದೆ. ಹಾಗಾಗಿ ಪ್ರಕ್ರಿಯೆಯಲ್ಲಿ ಪಾಲ್ಗೊಳ್ಳುತ್ತಿಲ್ಲ ಎಂದ ಪ್ರೊ. ಎಂ.ಎಸ್.ಸುಭಾಶ್ ಮೈಸೂರು ಭಾಗದ ಕುಲಸಚಿವೆ ತುಳುಸಿಮಾಲಾ ಅವರಿಗೆ ಉತ್ತರ ಕರ್ನಾಟಕ ಬಗ್ಗೆ ಕಾಳಜಿಯಿಲ್ಲ ಎಂದು ಪರೋಕ್ಷವಾಗಿ ಅಸಮಾಧಾನ ವ್ಯಕ್ತಪಡಿಸಿದರು. ವಿವಿಯಲ್ಲಿನ ಆಡಳಿತ ವಿಷಯಕ್ಕೆ ಸಂಬಂಧಿಸಿದಂತೆ ತಮ್ಮ ಸ್ವಪ್ರತಿಷ್ಠೆಯನ್ನೆಲ್ಲ ಮನೆಯಲ್ಲಿ ಬಿಟ್ಟು, ಯಾವುದೇ ಗೊಂದಲಕ್ಕೆ ಅವಕಾಶ ನೀಡದೆ ಉತ್ತಮ ಆಡಳಿತ ನಡೆಸಿಕೊಂಡು ಹೋಗಬೇಕು ಎಂದು ಸೂಚಿಸಲಾಗಿದೆ ಎಂದು ತಿಳಿಸಿದರು.