ಬಳ್ಳಾರಿ: ಅಖಂಡ ಬಳ್ಳಾರಿ ಜಿಲ್ಲೆಯನ್ನು ವಿಭಜಿಸಿ ವಿಜಯನಗರ ಜಿಲ್ಲೆ ಹೊಸದಾಗಿ ಆಸ್ತಿತ್ವಕ್ಕೆ ಬಂದಿದ್ದು, ಈ ಜಿಲ್ಲೆಗೆ ಮೂಲಸೌಕರ್ಯಗಳ ಕಲ್ಪಿಸುವಿಕೆ, ಇಲಾಖೆಗಳ ಆಸ್ತಿ ಹಂಚುವಿಕೆ ಮತ್ತು ಜಿಲ್ಲಾಮಟ್ಟದ ಕಚೇರಿಗಳ ಸ್ಥಾಪನೆ ಸೇರಿದಂತೆ ಸಮಗ್ರವಾಗಿ ವಿಜಯನಗರ ಜಿಲ್ಲೆ ಕಾರ್ಯನಿರ್ವಹಣೆಗೆ ಸಂಬಂಧಿಸಿದಂತೆ ನೀಲನಕ್ಷೆ ತಯಾರಿಕೆಗೆ ಅಗತ್ಯ ಮಾಹಿತಿ ನೀಡಬೇಕು ಎಂದು ವಿಜಯನಗರ ಜಿಲ್ಲೆಯ ವಿಶೇಷಾಧಿಕಾರಿ ಅನಿರುದ್ಧ ಶ್ರವಣ್ ಅಧಿಕಾರಿಗಳಿಗೆ ಸೂಚಿಸಿದರು.
ನಗರದ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ವಿಜಯನಗರ ಜಿಲ್ಲೆಯಲ್ಲಿ ವಿವಿಧ ಇಲಾಖೆಗಳ ಜಿಲ್ಲಾಮಟ್ಟದ ಕಚೇರಿಗಳ ಕಾರ್ಯನಿರ್ವಹಣೆ ಕುರಿತು ಮಂಗಳವಾರ ನಡೆದ ಸಭೆಯಲ್ಲಿ ಅವರು ಮಾತನಾಡಿದರು.
ವಿಜಯನಗರ ಜಿಲ್ಲಾ ಕೇಂದ್ರವಾಗಿರುವ ಹೊಸಪೇಟೆಯಲ್ಲಿ ಈಗಾಗಲೇ ಕೆಲ ಕಚೇರಿಗಳು ಕಾರ್ಯನಿರ್ವಹಿಸುತ್ತಿವೆ. ಅವುಗಳ ಸಮಸ್ಯೆ ಇಲ್ಲ. ಆದರೆ ಹೊಸದಾಗಿ ಕಚೇರಿಗಳು ಆರಂಭಿಸಲು ನಮೂನೆಗಳನ್ನು ಸಿದ್ಧಪಡಿಸಲಾಗಿದ್ದು ಅವುಗಳನ್ನು ಸಂಪೂರ್ಣ ಮಾಹಿತಿಯೊಂದಿಗೆ ಭರ್ತಿ ಮಾಡಿ ನೀಡುವಂತೆ ಸೂಚಿಸಿದರು.
ಬಳ್ಳಾರಿ ಜಿಲ್ಲೆಯಲ್ಲಿ ತಮ್ಮ ತಮ್ಮ ಇಲಾಖೆಗಳಲ್ಲಿ ಕಾರ್ಯನಿರ್ವಹಿಸುತ್ತಿರುವ ಸಿಬ್ಬಂದಿಗಳ ಸಂಖ್ಯೆ ಮತ್ತು ನೂತನ ಜಿಲ್ಲೆಗೆ ಎಷ್ಟು ಜನ ಸಿಬ್ಬಂದಿ ನಿಯೋಜಿಸುತ್ತಿದ್ದೀರಿ, ನೂತನ ಜಿಲ್ಲೆಯಲ್ಲಿ ಇಲಾಖೆಯ ಜಿಲ್ಲಾ ಕಚೇರಿ ತಾತ್ಕಾಲಿಕವಾಗಿ ಆರಂಭಿಸುವುದಕ್ಕೆ ನಿಗದಿಮಾಡಿರುವ ಸ್ಥಳ ಯಾವುದು ಮತ್ತು ಮತ್ತು ಹೊಸಪೇಟೆಯಲ್ಲಿಯೇ ಇರುವ ತಮ್ಮ ತಮ್ಮ ತಾಲೂಕು ಕಚೇರಿಯನ್ನೇ ವಿಸ್ತರಣೆ ಮಾಡುವಿರಾ? ನೂತನ ಜಿಲ್ಲೆಯಲ್ಲಿರುವ ತಮ್ಮ ತಮ್ಮ ಇಲಾಖೆಗಳಲ್ಲಿರುವ ಆಸ್ತಿಗಳ ಪ್ರಮಾಣ (ಚರ ಮತ್ತು ಸ್ಥಿರಾಸ್ತಿ ಸೇರಿದಂತೆ), ತಮ್ಮ ಇಲಾಖೆಗಳ ವ್ಯಾಪ್ತಿಯ ಮರುಹಂಚಿಕೆಗಳ ವಿವರ ಹಾಗೂ ಇತರೇ ವಿವರಗಳನ್ನು ಕೂಡಲೇ ಸಲ್ಲಿಸಬೇಕು. ಈ ಎಲ್ಲ ವಿವರಗಳನ್ನು ಪಡೆದುಕೊಂಡು ಸರ್ಕಾರದ ಮಟ್ಟದಲ್ಲಿ ಪರಿಶೀಲನೆ ನಡೆಸಿ ನೋಟಿಫಿಕೇಶನ್ ಹೊರಡಿಸಲಾಗುವುದು ಎಂದರು.
ವಿಜಯನಗರ ಹೆಸರು ನಮೂದಿಸಿ:ವಿಜಯನಗರ ಜಿಲ್ಲೆಗಳಲ್ಲಿರುವ 6 ತಾಲೂಕುಗಳಲ್ಲಿ ಸರ್ಕಾರಿ ಸಂಬಂಧಿಸಿದ ಯಾವುದೇ ರೀತಿಯ ಕಾಮಗಾರಿಗಳ ಉದ್ಘಾಟನೆ ಹಾಗೂ ಶಂಕುಸ್ಥಾಪನೆ ನೆರವೇರಿಸುವ ಸಂದರ್ಭದಲ್ಲಿ ಹಾಗೂ ಸರ್ಕಾರಿ ಕಾರ್ಯಕ್ರಮಗಳಲ್ಲಿ ಕಡ್ಡಾಯವಾಗಿ ವಿಜಯನಗರ ಜಿಲ್ಲೆ ಹೆಸರನ್ನು ನಮೂದಿಸಬೇಕು. ಆ ಭಾಗದ ಜನರು ಈಗಾಗಲೇ ಜಿಲ್ಲೆ ಘೋಷಣೆಯಾದರೂ ಅ ಧಿಕಾರಿಗಳು ವಿಜಯನಗರ ಜಿಲ್ಲೆ ಹೆಸರು ನಮೂದಿಸುತ್ತಿಲ್ಲ ಎಂದು ತಿಳಿದುಕೊಳ್ಳಲಿದ್ದಾರೆ ಎಂದು ಡಿಸಿ ಪವನಕುಮಾರ್ ಮಾಲಪಾಟಿ ಮತ್ತು ವಿಜಯನಗರ ಜಿಲ್ಲೆ ವಿಶೇಷಾಧಿ ಕಾರಿ ಅನಿರುದ್ಧ ಶ್ರವಣ್ ಅವರು ಹೇಳಿದರು.
ವಿಜಯನಗರಕ್ಕೂ ಬಳ್ಳಾರಿ ಡಿಸಿ: ಫೆ. 8ರಿಂದ ವಿಜಯನಗರ ಜಿಲ್ಲೆಗೂ ಬಳ್ಳಾರಿ ಜಿಲ್ಲಾಧಿಕಾರಿಗಳೇ ಪ್ರಭಾರಿ ಅ ಧಿಕಾರಿಗಳಾಗಿ ಕರ್ತವ್ಯ ನಿರ್ವಹಿಸುವುದಕ್ಕೆ ಸರ್ಕಾರದ ಮುಖ್ಯ ಕಾರ್ಯದರ್ಶಿಗಳು ಆದೇಶ ಹೊರಡಿಸಿದ್ದು, ಅದರಂತೆ ಎಲ್ಲರೂ ಕಾರ್ಯನಿರ್ವಹಿಸಬೇಕು. ಆ ಭಾಗದ ಸರ್ಕಾರಿ ಕಡತಗಳಲ್ಲಿಯೂ ಕಡ್ಡಾಯವಾಗಿ ವಿಜಯನಗರ ಜಿಲ್ಲೆ ಅಂತ ನಮೂದು ಮಾಡಬೇಕು ಎಂದು ಸೂಚಿಸಿದರು.
ದೊಡ್ಡ ಕಾಂಪ್ಲೆಕ್ಸ್‌ಗಳನ್ನು ಗುರುತಿಸಿ: ಜಿಲ್ಲಾಮಟ್ಟದ ಕಚೇರಿಗಳನ್ನು ಆರಂಭಿಸಲು ಹೊಸಪೇಟೆಯಲ್ಲಿ ದೊಡ್ಡ ದೊಡ್ಡ ಕಾಂಪ್ಲೆಕ್ಸ್‌ಗಳನ್ನು ಗುರುತಿಸಿ ವರದಿ ನೀಡುವಂತೆ ವಿಶೇಷಾ ಧಿಕಾರಿ ಅನಿರುದ್ಧ ಶ್ರವಣ್
ಅವರು ಸಹಾಯಕ ಆಯುಕ್ತ ಸಿದ್ದರಾಮೇಶ್ವರ ಅವರಿಗೆ ಸೂಚಿಸಿದರು. ಜೊತೆಗೆ ತಮ್ಮ ತಮ್ಮ ಇಲಾಖೆಗಳ ಕಚೇರಿಯು ವಿಜಯನಗರ ಜಿಲ್ಲಾ ಕೇಂದ್ರದಲ್ಲಿ ಆರಂಭಿಸುವುದಕ್ಕೆ ಸಂಬಂಧಿ ಸಿದಂತೆ ಇನ್ನಿತರೆ ಮಾಹಿತಿಗಳು ಅಗತ್ಯವಿದ್ದಲ್ಲಿ ಅದರ ಮಾಹಿತಿಯನ್ನೂ ಸಹ ತಾವು ನೀಡಬಹುದಾಗಿದೆ ಎಂದು ಅವರು ಹೇಳಿದರು.
ಸಭೆಯಲ್ಲಿ ಜಿಪಂ ಸಿಇಒ ಕೆ.ಆರ್. ನಂದಿನಿ, ಎಸ್‌ಪಿ ಸೈದುಲು ಅಡಾವತ್, ಅಪರ ಜಿಲ್ಲಾಧಿಕಾರಿ ಪಿ.ಎಸ್. ಮಂಜುನಾಥ, ಹೆಚ್ಚುವರಿ ಎಸ್‌ಪಿ ಬಿ.ಎನ್. ಲಾವಣ್ಯ, ಡಿಎಫ್‌ಒ ಸಿದ್ದರಾಮೇಶ್ವರ ಸೇರಿದಂತೆ ವಿವಿಧ ಇಲಾಖೆಗಳ ಜಿಲ್ಲಾಮಟ್ಟದ ಅಧಿಕಾರಿಗಳು ಇದ್ದರು.