Advertisement

ವಿಜಯಪುರ ನಗರ ಪ್ರವಾಸಿ ರೂಟ್ ಮ್ಯಾಪ್‍ ಗಾಗಿ ಟಾಂಗಾದಲ್ಲಿ ಪಯಣಿಸಿದ ಡಿಸಿ

04:01 PM Apr 09, 2022 | keerthan |

ವಿಜಯಪುರ: ಐತಿಹಾಸಿಕ ವಿಜಯಪುರ ಮಹಾನಗರ ವ್ಯಾಪ್ತಿಯಲ್ಲಿ ಸ್ವಚ್ಛತೆ ಸವಾಲಾಗಿದೆ. ಐತಿಹಾಸಿಕ ಸ್ಮಾರಕಗಳ ಮಹಾನಗರ ವಿಜಯಪುರ ನಗರದಲ್ಲಿ ತ್ಯಾಜ್ಯ ವಿಲೇವಾರಿ ನಿರ್ವಹಿಸಿದರೆ ನಗರ ಸೌಂದರ್ಯ ಹಾಗೂ ಐತಿಹಾಸಿಕ ನೂರಾರು ಸ್ಮಾರಕಗಳ ಸಂರಕ್ಷಣೆ, ನಿರ್ವಹಣೆ ಸಾಧ್ಯವಿದೆ. ಹೀಗಾಗಿ ಮಹಾನಗರ ಪಾಲಿಕೆ ತ್ಯಾಜ್ಯ ವಿಲೇವಾರಿಯನ್ನು ಸಮರ್ಪಕವಾಗಿ ನಿರ್ವಹಿಸಬೇಕು ಎಂದು ಜಿಲ್ಲಾಧಿಕಾರಿ ಸುನಿಲಕುಮಾರ ನಿರ್ದೇಶನ ನೀಡಿದರು.

Advertisement

ನಗರದಲ್ಲಿರುವ ಸ್ಮಾರಕಗಳ ಸಂರಕ್ಷಣೆಗಾಗಿ ಹೆರಿಟೇಜ್ ವಾಕ್‍ ನ ಮುಂದುವರೆದ ಭಾಗವಾಗಿ ಶನಿವಾರ ನಗರ ಸಂಚಾರ ಆರಂಭಿಸಿದ ಜಿಲ್ಲಾಧಿಕಾರಿ ಸುನಿಲಕುಮಾರ, ಇದಕ್ಕಾಗಿ ಪಾರಂಪರಿಕ ಕುದುರೆ ಟಾಂಗಾ ಏರಿ ನಗರ ದರ್ಶನ ಮಾಡಿದರು.

ನಗರಲ್ಲಿರುವ ಐತಿಹಾಸಿಕ ಎಲ್ಲ ಸ್ಮಾರಕಗಳಿಗೂ ಪ್ರವಾಸಿಗರು ಸುಲಭವಾಗಿ ಭೇಟಿ ನೀಡಲು ಸೂಕ್ತ ವ್ಯವಸ್ಥೆ ಇಲ್ಲ. ಹೀಗಾಗಿ ಎಲ್ಲ ಸ್ಮಾರಕಗಳಿಗೆ ಪ್ರವಾಸಿಗರು ಭೇಟಿ ನೀಡಲು ಸುಲಭವಾಗಿಸಲು ಹಾಗೂ ಪ್ರವಾಸೋದ್ಯಮ ಬಲವರ್ಧನೆಗಾಗಿ ಟಾಂಗಾ ರೂಟ್ ಮ್ಯಾಪ್ ರೂಪಿಸಬೇಕಿದೆ. ಇದಕ್ಕಾಗಿ ನಾನೇ ಸ್ವಯಂ ಕುದುರೆ ಟಾಂಗಾ ಏರಿ ನಗರ ಸಂಚಾರ ನಡೆಸುತ್ತಿದ್ದೇನೆ ಎಂದರು.

ಟಾಂಗಾ ರೂಟ್‍ಗಾಗಿ ಗೋಲಗುಂಜ ಸ್ಮಾರಕದಿಂದ ಬಾರಾಕಮಾನ್, ಜೋಡಗುಮ್ಮಟದಿಂದ ದಖನಿ ಇದ್ಗಾ, ಇಬ್ರಾಹೀಂ ರೋಜಾ, ತಾಜಬಾವಡಿ, ಉಪ್ಪಲಿ ಬುರ್ಜ, ಜುಮ್ಮಾ ಮಸೀದಿ ಸೇರಿದಂತೆ ಸ್ಮಾರಕಗಳ ಹತ್ತಿರದ ಇನ್ನಿತರ ರಸ್ತೆಗಳಲ್ಲಿ ಸಂಚರಿಸಿದರು.

ಇದನ್ನೂ ಓದಿ:ಹಜ್ ನಿಷೇಧ ಅಭಿಯಾನಕ್ಕೂ ಸರ್ಕಾರಕ್ಕೂ ಯಾವುದೇ ಸಂಬಂಧವಿಲ್ಲ: ಸಿಎಂ ಬೊಮ್ಮಾಯಿ

Advertisement

ಬಳಿಕ ಅಧಿಕಾರಿಗಳೊಂದಿಗೆ ಚರ್ಚಿಸಿದ ಜಿಲ್ಲಾಧಿಕಾರಿ, ನಗರದ ರಸ್ತೆಗಳ ದುರಸ್ಥಿಗೆ ಆದ್ಯತೆ ನೀಡಬೇಕು. ಟಾಂಗಾ ರೂಟ್ ಮ್ಯಾಪ್ ನಿರ್ಮಿಸಲು ಕ್ರಮ ಕೈಗೊಳ್ಳಬೇಕು. ಕೆಲವು ಕಡೆಗಳಲ್ಲಿ ಇನ್ನಷ್ಟು ಗೈಡ್‍ಗಳನ್ನು ನಿಯೋಜಿಸಿ, ಸೂಕ್ತ ತರಬೇತಿ ನೀಡುವಂತೆ ಪ್ರವಾಸೋದ್ಯಮ ಇಲಾಖೆ ಅಧಿಕಾರಿಗಳಿಗೆ ಸೂಚನೆ ನೀಡಿದರು.

ಈ ಸಂದರ್ಭದಲ್ಲಿ ಮಹಾನಗರ ಪಾಲಿಕೆ ಆಯುಕ್ತ ವಿಜಯ ಮೆಕ್ಕಳಕಿ, ಉಪ ವಿಭಾಗಾಧಿಕಾರಿ ಬಲರಾಮ ಲಮಾಣಿ, ಪ್ರವಾಸೋದ್ಯಮ ಇಲಾಖೆ ಉಪ ನಿರ್ದೇಶಕ ಮಲ್ಲಿಕಾರ್ಜುನ ಭಜಂತ್ರಿ, ಉಪ ಆಯುಕ್ತ ಮಹಾವೀರ ಬೊರನ್ನವರ, ಸ್ಮಾರಕಗಳ ಸಂರಕ್ಷಣೆ ಪ್ರಚಾರಕ ಪೀಟರ್ ಅಲೆಗ್ಸಾಂಡರ್, ಜಿಲ್ಲಾ ಪ್ರವಾಸೋದ್ಯಮ ಇಲಾಖೆ ಸಮಾಲೋಚಕ ಅನಿಲಕುಮಾರ ಬಣಜಿಗೇರ, ಅಮೀನ್ ಹುಲ್ಲೂರ್, ವಿಠ್ಠಲ್ ಹೊನ್ನಳ್ಳಿ ಸೇರಿದಂತೆ ಇತರರು ಉಪಸ್ಥಿತರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next