ಗದಗ: ರಾಜ್ಯದ ಹಲವು ಸಕ್ಕರೆ ಕಾರ್ಖಾನೆಗಳು ರೈತರ ಕೋಟ್ಯಂತರ ರೂ. ಬಾಕಿ ಉಳಿಸಿಕೊಂಡಿವೆ. ಪರಿಣಾಮ ಆರ್ಥಿಕ ಸಮಸ್ಯೆಯಿಂದಾಗಿ ರೈತರು ಬೀದಿಗಿಳಿಯುವಂತಾಗಿದೆ. ಆದರೆ, ಮುಂಡರಗಿ ತಾಲೂಕಿನ ವಿಜಯನಗರ ಸಕ್ಕರೆ ಕಾರ್ಖಾನೆ ಇದಕ್ಕೆ ಅಪವಾದ. ನೂರಾರು ಕೋಟಿ ರೂ. ಸಾಲದ ಹೊರೆಯಿದ್ದರೂ ಕಬ್ಬು ಬೆಳೆಗಾರರ ಒಂದು ರೂ.ವನ್ನೂ ಬಾಕಿ ಉಳಿಸಿಕೊಳ್ಳದೇ ರೈತರ ಬೆನ್ನೆಲುಬಾಗಿ ನಿಂತಿದೆ.
ಮಾಜಿ ಸಹಕಾರ ಸಚಿವ ಎಸ್.ಎಸ್. ಪಾಟೀಲ ಅವರ ಮುಂದಾಳತ್ವದಲ್ಲಿ 1994-95ರಲ್ಲಿ ಮುಂಡರಗಿ ತಾಲೂಕಿನ ಗಂಗಾಪುರ ಬಳಿ ಮುಂಡರಗಿ ಸಹಕಾರಿ ಸಕ್ಕರೆ ಕಾರ್ಖಾನೆ ಸ್ಥಾಪನೆಗೊಂಡಿತ್ತು. ಆದರೆ, ಕಟ್ಟಡ ಕಾಮಗಾರಿ ಪೂರ್ಣಗೊಂಡು ಭಾಗಶಃ ಯಂತ್ರೋಪಕರಣಗಳ ಕೊರತೆಯಿಂದ ಕೆಲ ವರ್ಷಗಳು ಕಳೆದರೂ ಕಾರ್ಖಾನೆ ಕಾರ್ಯಾರಂಭಿಸಿರಲಿಲ್ಲ. ಹೀಗಾಗಿ ಸರಕಾರ ಅದನ್ನು ವಶಕ್ಕೆ ಪಡೆದು 2007ರಲ್ಲಿ ಹೈದ್ರಾಬಾದ್ ಮೂಲದ ವಿಜಯನಗರ ಶುಗರ್ ಪ್ರç.ಮಿ. ಎಂಬ ಕಂಪನಿಗೆ 30 ವರ್ಷಗಳ ಅವ ಧಿಗೆ ಗುತ್ತಿಗೆ ನೀಡಿತು. ಆಮೇಲೆ ಮುಂಡಗಿರಿ ಸಕ್ಕರೆ ಕಾರ್ಖಾನೆ ವಿಜಯ ನಗರ ಸಕ್ಕರೆ ಕಾರ್ಖಾನೆಯಾಗಿ ಮಾರ್ಪಟ್ಟಿತು.
ಹೆಚ್ಚುತ್ತಿದೆ ಬೆಳೆಗಾರರ ಸಂಖ್ಯೆ: ಲೀಸ್ ಒಪ್ಪಂದದ ಬಳಿಕ ಹಲವು ಯಂತ್ರೋಪಕರಣಗಳ ಅಳವಡಿಕೆಯೊಂದಿಗೆ 2010ರಿಂದ ಕಾರ್ಯಾರಂಭಗೊಂಡ ವಿಜಯ ನಗರ ಸಕ್ಕರೆ ಕಾರ್ಖಾನೆ ಕಬ್ಬು ಬೆಳಗಾರರ ಹಣ ಬಾಕಿ ಉಳಿಸಿಕೊಂಡಿದ್ದಿಲ್ಲ. ಹೀಗಾಗಿ ಕಾರ್ಖಾನೆಯ ಕಬ್ಬು ಬೆಳೆ ವ್ಯಾಪ್ತಿ ಪ್ರದೇಶದಲ್ಲಿ ಕಬ್ಬು ಬೆಳೆಯುವವರ ಸಂಖ್ಯೆಯೂ ವರ್ಷದಿಂದ ವರ್ಷಕ್ಕೆ ಹೆಚ್ಚುತ್ತಿದೆ. ಕಳೆದ ವರ್ಷ ಐದು ಸಾವಿರ ಇದ್ದ ಕಬ್ಬು ಬೆಳೆಗಾರರ ಸಂಖ್ಯೆ ಈ ಬಾರಿ ಆರು ಸಾವಿರಕ್ಕೆ ತಲುಪಿದೆ ಎಂಬುದು ಗಮನಾರ್ಹ.
2626 ದರದಂತೆ ಖರೀದಿ: ಕೇಂದ್ರ ಸರಕಾರ ನಿಗದಿಗೊಳಿಸಿರುವಂತೆ ಎಫ್‌ಎಆರ್(ಫೇರ್ ಆ್ಯಂಡ್ ರೆಮ್ಯೂನೇಟರಿ ಪ್ರçಸ್) ಆಧಾರದಲ್ಲಿ 2,626 ರೂ. ಪ್ರತಿ ಟನ್ ದರದಲ್ಲಿ ರೈತರಿಂದ ಕಬ್ಬು ಖರೀದಿಸಲಾಗುತ್ತಿದೆ. ಅದರೊಂದಿಗೆ ಪ್ರತಿ 8-14 ದಿನಗಳಿಗೊಮ್ಮೆ ಕಬ್ಬು ಬೆಳೆಗಾರರ ಬ್ಯಾಂಕ್ ಖಾತೆಗೆ ನೇರವಾಗಿ ಅಥವಾ ಚೆಕ್ ಮೂಲಕ ಹಣ ಪಾವತಿಸಲಾಗುತ್ತಿದೆ ಎಂದು ಕಾರ್ಖಾನೆಯ ಅಧಿಕಾರಿಗಳು ಹೇಳುತ್ತಾರೆ.
ವಿದೇಶಕ್ಕೂ ಸಕ್ಕರೆ ರಫ್ತು: ಕೇಂದ್ರ ಸರಕಾರದ ಸೂಚನೆಯಂತೆ 25 ರೂ. ಪ್ರತಿ ಕೆಜಿ ಯುಂತೆ 10,500 ಟನ್ ಸಕ್ಕರೆಯನ್ನು ದುಬೈ ಸೇರಿ ಯುಎಇ ರಾಷ್ಟ್ರಗಳಿಗೆ ರಫ್ತು ಮಾಡಲಾಗುತ್ತಿದೆ. ಇನ್ನುಳಿದಂತೆ ಎಂ-30 ಗುಣಮಟ್ಟದ ಸಕ್ಕರೆಯನ್ನು ಸ್ಥಳೀಯ ಮಾರುಕಟ್ಟೆಗೆ ಸಾಗಿಸಲಾಗುತ್ತಿದೆ. ಅದರೊಂದಿಗೆ ಕಾರ್ಖಾನೆಯಲ್ಲಿನ ಪಾರದರ್ಶಕ ಆಡಳಿತ ಮತ್ತು ರೈತ ಪರ ನಿಲುವಿನಿಂದಾಗಿ ಕಬ್ಬು ಬೆಳೆಗಾರರಿಗೆ ಎಂದೂ ತೊಂದರೆಯಾಗಿಲ್ಲ.
ವಿಜಯನಗರ ಸಕ್ಕರೆ ಕಾರ್ಖಾನೆಗೆ ಕಬ್ಬು ಸರಬರಾಜು ಮಾಡಿರುವ ರೈತರಿಗೆ ನೀಡಬೇಕಾದ ಯಾವುದೇ ಹಣವನ್ನು ಕಾರ್ಖಾನೆ ಬಾಕಿ ಉಳಿಸಿಕೊಂಡಿಲ್ಲ. ಕಾಲಕಾಲಕ್ಕೆ ಅ ಧಿಕಾರಿಗಳು ಸಕ್ಕರೆ ದಾಸ್ತಾನು ಪರಿಶೀಲನೆ ವೇಳೆ ಕಬ್ಬು ಬೆಳೆಗಾರರ ಬಾಕಿಯನ್ನೂ ಪರಿಶೀಲಿಸುತ್ತಾರೆ. ಕಳೆದ ಮೂರು ದಿನಗಳ ಹಿಂದೆಯೂ ಈ ಕುರಿತು ವಿಚಾರಿಸಿದ್ದು, ರೈತರ ಹಣ ಬಾಕಿಯಿಲ್ಲ.
– ಎಂ.ಜಿ. ಹಿರೇಮಠ, ಜಿಲ್ಲಾಧಿಕಾರಿ
– ವೀರೇಂದ್ರ ನಾಗಲದಿನ್ನಿ