ಬೆಂಗಳೂರು: “ನಾನು, ನನ್ನ ಸಹೋದರ ವಿಜಯಕುಮಾರ್ ಅವರ ಪ್ರತಿರೂಪ. ಅವರ ಹಾದಿಯಲ್ಲೇ ಸಾಗುತ್ತೇನೆ ಮತ್ತು ಅವರ ಆದರ್ಶಗಳನ್ನು ಪಾಲಿಸುತ್ತೇನೆ. ಒಗ್ಗಟ್ಟಿನಿಂದ ಕೆಲಸ ಮಾಡಿ ಅತ್ಯಧಿಕ ಮತಗಳಿಂದ ಗೆಲ್ಲಿಸಿ,’ ಇದು ಜಯನಗರ ವಿಧಾನಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಹಾಗೂ ಶಾಸಕರಾಗಿದ್ದ ದಿವಂಗತ ಬಿ.ಎನ್. ವಿಜಯಕುಮಾರ್ ಅವರ ಸಹೋದರ ಬಿ.ಎನ್. ಪ್ರಹ್ಲಾದ್ ಬಾಬು ಪಕ್ಷದ ಕಾರ್ಯಕರ್ತರಲ್ಲಿ ಮಾಡಿದ ಮನವಿ.
ಶುಕ್ರವಾರ ನಾಮಪತ್ರ ಸಲ್ಲಿಸಿದ ಬಳಿಕ ಚುನಾವಣಾ ಪ್ರಚಾರದ ಮೊದಲ ಭಾಗವಾಗಿ ಶನಿವಾರ ಕ್ಷೇತ್ರದ ವಿವಿಧ ವಾರ್ಡ್‌ಗಳಲ್ಲಿ ಬೂತ್ ಮಟ್ಟದ ಕಾರ್ಯಕರ್ತರ ಸಭೆ ನಡೆಸಿದ ಪ್ರಹ್ಲಾದ್ ಬಾಬು, ಜಯನಗರ ಕ್ಷೇತ್ರವನ್ನು ವಿಜಯಕುಮಾರ್ ಅವರ ಕನಸಿನ ಮಾದರಿ ಕ್ಷೇತ್ರವನ್ನಾಗಿ ಮಾಡಲು ಎಲ್ಲರೂ ಒಂದಾಗಿ ಶ್ರಮಿಸುವಂತೆ ಕರೆ ನೀಡಿದರು.
ಶನಿವಾರ ಬೆಳಗ್ಗೆ ಪಟ್ಟಾಭಿರಾಮನಗರ ವಾರ್ಡ್‌ನಲ್ಲಿ ಬೂತ್ ಮಟ್ಟದ ಕಾರ್ಯಕರ್ತರ ಸಭೆ ನಡೆಯಿತು. ವಾರ್ಡ್ ಸದಸ್ಯೆ ನಾಗರತ್ನ ರಾಮಮೂರ್ತಿ, ಮಾಜಿ ಸದಸ್ಯ ಸಿ.ಕೆ. ರಾಮಮೂರ್ತಿ, ವಾರ್ಡ್ ಅಧ್ಯಕ್ಷ ಕೆ.ಜಿ. ಮಹೇಶ್ ಸಭೆಯಲ್ಲಿ ಉಪಸ್ಥಿತರಿದ್ದರು.
ಬಳಿಕ ಶಾಖಾಂಬರಿನಗರ, ಜೆ.ಪಿ.ನಗರ ಹಾಗೂ ಸಾರಕ್ಕಿ ವಾರ್ಡ್‌ಗಳಲ್ಲಿ ಪ್ರಹ್ಲಾದ್ ಬಾಬು, ಬೂತ್ ಮಟ್ಟದ ಕಾರ್ಯಕರ್ತರ ಸಭೆ ನಡೆಸಿದರು. ಈ ವೇಳೆ ಪಾಲಿಕೆ ಸದಸ್ಯರು, ಸ್ಥಳೀಯ ಮುಖಂಡರು ಪ್ರಹ್ಲಾದ್ ಬಾಬು ಅವರಿಗೆ ಸಾಥ್ ನೀಡಿದರು. ಸಭೆಯಲ್ಲಿ ನೂರಾರು ಕಾರ್ಯಕರ್ತರು ಭಾಗವಹಿಸಿದ್ದರು.
ಕಾರ್ಯಕರ್ತರ ಸಭೆ ಕುರಿತು “ಉದಯವಾಣಿ’ಗೆ ಮಾಹಿತಿ ನೀಡಿದ ಬಿಜೆಪಿ ಅಭ್ಯರ್ಥಿ ಪ್ರಹ್ಲಾದ್ ಬಾಬು, ನನ್ನ ನಿರೀಕ್ಷೆಗೂ ಮೀರಿ ಕಾರ್ಯಕರ್ತರಿಂದ ಬೆಂಬಲ ಮತ್ತು ಸ್ಪಂದನೆ ಸಿಗುತ್ತಿದೆ. ವಿಶೇಷವಾಗಿ ಯುವಕರು ಹೆಚ್ಚಿನ ಸಂಖ್ಯೆಯಲ್ಲಿ ಸಭೆಯಲ್ಲಿ ಪಾಲ್ಗೊಂಡಿದ್ದು ನನ್ನ ವಿಶ್ವಾಸ ಇಮ್ಮಡಿಗೊಳಿಸಿದೆ. ಎಲ್ಲ ಕಾರ್ಯಕರ್ತರು ಹಾಗೂ ಮುಖಂಡರು ಒಗ್ಗಟ್ಟಿನ ಪ್ರದರ್ಶನ ಮತ್ತು ಶಪಥ ಮಾಡಿದ್ದಾರೆ ಎಂದರು.
ಎರಡು ಬಾರಿ ಶಾಸಕರಾಗಿ ವಿಜಯಕುಮಾರ್ ಕ್ಷೇತ್ರದಲ್ಲಿ ಸಾಕಷ್ಟು ಅಭಿವೃದ್ಧಿ ಕೆಲಸಗಳನ್ನು ಕೈಗೊಳ್ಳುವ ಮೂಲಕ ಜಯನಗರವನ್ನು ಒಂದು ಮಾದರಿ ಕ್ಷೇತ್ರವನ್ನಾಗಿ ಮಾಡಿದ್ದಾರೆ. ಕ್ಷೇತ್ರದ ಬಗ್ಗೆ ಅವರಿಗೆ ತಮ್ಮದೇ ಆದ ಕನಸುಗಳು ಇದ್ದವು.
ಆ ಕನಸುಗಳನ್ನು ನನಸು ಮಾಡುವ ಜವಾಬ್ದಾರಿ ಪ್ರತಿಯೊಬ್ಬ ಕಾರ್ಯಕರ್ತನ ಮೇಲಿದೆ. ಈ ಚುನಾವಣೆಯಲ್ಲಿ ನಾನು ಸ್ಪರ್ಧಿಸಿರಬಹುದು. ಆದರೆ, ನಾನು ವಿಜಯಕುಮಾರ್ ಅವರ ಪ್ರತಿರೂಪ, ಅವರ ಹಾದಿಯಲ್ಲೇ ಸಾಗುತ್ತೇನೆ, ಅವರ ಆದರ್ಶಗಳನ್ನೇ ಪಾಲಿಸುತ್ತೇನೆ. ಕ್ಷೇತ್ರದ ಸಮಸ್ಯೆಗಳ ಪರಿಹಾರವೇ ನನ್ನ ಮೊದಲ ಆದ್ಯತೆ ಎಂದು ಹೇಳಿದರು.