ಚಿಂಚೋಳಿ: ಕಲಬುರಗಿ ಜಿಲ್ಲೆಯ ತೆಲಂಗಾಣ ಗಡಿಭಾಗಕ್ಕೆ ಹೊಂದಿಕೊಂಡಿರುವ ಚಿಂಚೋಳಿ ತಾಲೂಕಿನಲ್ಲಿ ಅನೇಕ ವರ್ಷಗಳಿಂದ ನನೆಗುದಿಗೆ ಬಿದ್ದಿರುವ ಚಿಂಚೋಳಿ ಸಕ್ಕರೆ ಕಾರ್ಖಾನೆಯನ್ನು 37.60 ಕೋಟಿ ರೂ.ಗಳಲ್ಲಿ ಟೆಂಡರ್‌ದಲ್ಲಿ ಖರೀದಿಸಲಾಗಿದೆ. ಬರುವ ಅಕ್ಟೋಬರ್ 5ರಂದು (ವಿಜಯದಶಮಿ) ಸಕ್ಕರೆ ಕಾರ್ಖಾನೆ ಪ್ರಾರಂಭಿಸಲಾಗುವುದು ಎಂದು ವಿಜಯಪುರ ಶಾಸಕರು ಹಾಗೂ ಸಿದ್ಧಸಿರಿ ಸೌಹಾರ್ದ ಸಹಕಾರಿ ಅಧ್ಯಕ್ಷ ಬಸವನಗೌಡ ಪಾಟೀಲ ಯತ್ನಾಳ ಭರವಸೆ ನೀಡಿದರು.
ತಾಲೂಕಿನ ಕುಂಚಾವರಂ ಗ್ರಾಮದಲ್ಲಿ 144ನೇ ನೂತನ ಶಾಖೆಯ ಉದ್ಘಾಟನೆ ಸಮಾರಂಭದಲ್ಲಿ ಪ್ರಾಸ್ತಾವಿಕವಾಗಿ ಅವರು ಮಾತನಾಡಿದರು.
ಚಿಂಚೋಳಿ ಸಕ್ಕರೆ ಕಾರ್ಖಾನೆಯನ್ನು ಸಿದ್ಧಸಿರಿ ಸೌಹಾರ್ದ ಸಹಕಾರಿ ನಿಯಮಿತ ವತಿಯಿಂದ ಪ್ರಾರಂಭಿಸಲು ಎಲ್ಲ ಕೆಲಸಗಳು ವೇಗವಾಗಿ ನಡೆಯುತ್ತಿವೆ. ಕಾರ್ಖಾನೆಯಿಂದ ಎಥೆನಾಲ್ ಮತ್ತು ವಿದ್ಯುತ್ ಉತ್ಪಾದಿಸಲಾಗುವುದು. ಆದರೆ ಸಕ್ಕರೆ ತಯಾರು ಮಾಡುವುದಿಲ್ಲ. ರೈತರಿಂದ ಕಬ್ಬು ಖರೀದಿಸಿ ಯೋಗ್ಯ ದರ ನೀಡುತ್ತೇವೆ ಎಂದರು.
ದೇಶದಲ್ಲಿ ಸಕ್ಕರೆ 60 ಲಕ್ಷ ಟನ್ ಸಂಗ್ರಹಣೆ ಇದೆ. ನಮ್ಮ ಕಾರ್ಖಾನೆಯಲ್ಲಿ 5 ಸಾವಿರ ಟನ್ ಕಬ್ಬು ನುರಿಸುವ ಸಾಮಥ್ಯವಿದೆ. 423 ಕೆಎಲ್‌ಪಿಡಿ 4.23ಲಕ್ಷ ಎಥೆನಾಲ್ ಉತ್ಪಾದನೆ ಮಾಡಲಾಗುವುದು. ಕಾರ್ಖಾನೆ ಪ್ರಾರಂಭದಿಂದ 16ಸಾವಿರ ಕುಟುಂಬಗಳಿಗೆ ಉದ್ಯೋಗ ಸಿಗಲಿದೆ. ಉದ್ಯೋಗ, ವ್ಯಾಪಾರ ಸಿಗಲಿವೆ. ಕೇಂದ್ರ ಸಚಿವ ನಿತಿನ ಗಡ್ಕರಿ ಅವರು ಎಥೆನಾಲ್ ಹೆಚ್ಚು ಉತ್ಪಾದನೆ ಮಾಡಲು ಪ್ರೋತ್ಸಾಹ ಕೊಡುತ್ತಿರುವುದರಿಂದ ಇನ್ನು ಮುಂದೆ ಕಾರು ಬೈಕುಗಳಿಗೆ ಎಥೆನಾಲ್ ಉಪಯೋಗ ಆಗಲಿದೆ ಎಂದರು.
ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರು ದೇಶದಲ್ಲಿರುವ ನಷ್ಟದಲ್ಲಿರುವ ಎಲ್ಲ ಸಕ್ಕರೆ ಕಾರ್ಖಾನೆಗಳಿಗೆ ಹೆಚ್ಚಿನ ಪ್ರೋತ್ಸಾಹ ನೀಡುತ್ತಿರುವುದರಿಂದ ಚಿಂಚೋಳಿ ಸಕ್ಕರೆ ಕಾರ್ಖಾನೆಯಿಂದ ಎಥೆನಾಲ್ ಉತ್ಪಾದಿಸಲಾಗುವುದು ಮತ್ತು 30 ಮೆಗ್ಯಾವಾಟ್ ವಿದ್ಯುತ ಉತ್ಪಾದಿಸಲಾಗುವುದು. ರೈತರು ಯಾವುದೇ ಊಹಾಪೋಹಗಳಿಗೆ ಕಿವಿಗೊಡಬಾರದು. ನಿಮ್ಮ ಚಿಂಚೋಳಿಯಲ್ಲಿ ಸಕ್ಕರೆ ಕಾರ್ಖಾನೆ ದೀಪಾವಳಿಯಿಂದ ಕಬ್ಬು ನುರಿಸುವುದು ಎಂದು ಶಾಸಕ ಬಸವನಗೌಡ ಪಾಟೀಲ ಯತ್ನಾಳ ತಿಳಿಸಿದರು.
ಕೇಂದ್ರ ಸಚಿವ ಭಗವಂತ ಖುಬಾ ನೂತನ ಶಾಖೆಯನ್ನು ಉದ್ಘಾಟಿಸಿ ಮಾತನಾಡಿ, ತಾಲೂಕಿನಲ್ಲಿ ದೊಡ್ಡ ಪ್ರಮಾಣದಲ್ಲಿ ಅರ್ಥ ವ್ಯವಸ್ಥೆ ಪ್ರಗತಿ ಆಗಲಿದೆ. ಅನೇಕ ವರ್ಷಗಳಿಂದ ನನೆಗುದಿಗೆ ಬಿದ್ದಿರುವ ಸಕ್ಕರೆ ಕಾರ್ಖಾನೆ ಪ್ರಾರಂಭ ಆಗುವುದರಿಂದ ರೈತರ ಕನಸು ನನಸಾಗುತ್ತಿದೆ. ರೈತರು ಹೆಚ್ಚು ಕಬ್ಬುಬೆಳೆಸಬೇಕು ಸಕ್ಕರೆ ಸಿಹಿ ಎಲ್ಲರಿಗೂ ಮುಟ್ಟಬೇಕು. ಈ ಭಾಗದ ಎಲ್ಲರ ಬದುಕಿಗೆ ದೀಪವಾಗಲಿದೆ ಎಂದರು.
ಶಾಸಕ ಡಾ|ಅವಿನಾಶ ಜಾಧವ್ ಮಾತನಾಡಿ, ಚಿಂಚೋಳಿ ಸಕ್ಕರೆ ಕಾರ್ಖಾನೆಯನ್ನು ಅನೇಕ ವರ್ಷಗಳಿಂದ ನನೆಗುದಿಗೆ ಬಿದ್ದಿರುವುದರಿಂದ ನಮಗೆ ಒಂದು ಪ್ರತಿಷ್ಠೆಯಾಗಿತ್ತು. ಚುನಾವಣೆಯಲ್ಲಿ ನೀಡಿದ ಭರವಸೆಯಂತೆ ಕಾರ್ಖಾನೆ ಪ್ರಾರಂಭಿಸಲು ಶಾಸಕ ಬಸವನಗೌಡ ಪಾಟೀಲರು ಮುಂದೆ ಬಂದಿದ್ದಾರೆ. ರೈತರ ಬೇಡಿಕೆ ಈಡೇರಿಸಲಾಗಿದೆ ಎಂದರು.
ವೀರಣ್ಣ ಸ್ವಾಮಿಗಳು ಸಾನ್ನಿಧ್ಯ ವಹಿಸಿದ್ದರು. ಸಂಗಮೇಶ, ಬಾಹುಬಲಿ, ಉಮೇಶ ಹರವಾಳ, ಗ್ರಾಪಂ ಅಧ್ಯಕ್ಷೆ ಸುಜಾತಾ ಸಂಕಟಿ, ಎಲ್. ವೆಂಕಟರಾಮರೆಡ್ಡಿ, ನಾಯಕೋಡಿ ಯಾದಗಿರಿ, ಕೊಂಡಂ ಸಂಜು, ಡಾ|ಅಂಜನಯ್ಯ, ಪಿ.ಕೃಷ್ಣಯ್ಯ ಯಾದಗಿರಿ, ಗೋಪಾಲ ಬ್ಯಾಗರಿ, ರಾಮನಗೌಡ ಪಾಟೀಲ ಯತ್ನಾಳ ಭಾಗವಹಿಸಿದ್ದರು. ಎಜಿಎಂ ಭೀಮು ಕುಳಗೇರಿ ಸ್ವಾಗತಿಸಿದರು. ರಾಜಶೇಖರ ಸ್ವಾಮಿ, ಕುಂಚಾವರಂ, ವೆಂಕಟಾಪುರ, ಶಾದೀಪುರ ಸುತ್ತಲಿನ ರೈತರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿದ್ದರು.