Advertisement

C. H. Vijayashankar ಅಂದು ಸಿಮೆಂಟ್‌ ವ್ಯಾಪಾರಿ, ಇಂದು ರಾಜ್ಯಪಾಲ

12:30 AM Jul 29, 2024 | Team Udayavani |

ಮೈಸೂರು: ಸರಳ-ಸಜ್ಜನ, ಮೃದು ಭಾಷಿ ಜತೆಗೆ ಮಿತಭಾಷಿ, ಯಾವ ಸಂದರ್ಭದಲ್ಲೂ ಸಂಸ್ಕೃತಿಯ ಎಲ್ಲೆ ಮೀರಿ ಹೋಗದ ವಿನಯತೆಯನ್ನು ಮೈಗೂಡಿಸಿಕೊಂಡಿರುವ 67 ವರ್ಷ ವಯಸ್ಸಿನ ಸಿ.ಎಚ್‌.ವಿಜಯಶಂಕರ್‌ ಅವರಿಗೆ ರಾಜ್ಯಪಾಲರ ಹುದ್ದೆ ಹುಡುಕಿಕೊಂಡು ಬಂದಿದೆ.

Advertisement

ಬಿಜೆಪಿಯಲ್ಲೇ ತಮ್ಮ ರಾಜಕೀಯ ಜೀವನದ ಬಹುಪಾಲು ಕಳೆದಿರುವ ವಿಜಯಶಂಕರ್‌ ಅವರನ್ನು ಕಮಲ ಪಕ್ಷದ ವರಿಷ್ಠರು ಗುರುತಿಸುವ ಮೂಲಕ ಮೇಘಾಲಯದ ರಾಜ್ಯಪಾಲರನ್ನಾಗಿ ನೇಮಕ ಮಾಡಿದ್ದಾರೆ.

ವಿಜಯಶಂಕರ್‌ ಮೊದಲ ಬಾರಿಗೆ ರಾಜಕೀಯ ಅಖಾಡದ ರುಚಿ ಹತ್ತಿಸಿಕೊಂಡದ್ದು ಕಾಂಗ್ರೆಸ್‌ ಪಕ್ಷದ ಮೂಲಕ. ಆದರೆ ಅಧಿಕೃತವಾಗಿ ಚುನಾವಣಾ ರಾಜಕೀಯ ಎದುರಿಸಿದ್ದು ಬಿಜೆಪಿಯ ಕಮಲ ಚಿಹ್ನೆಯಡಿಯಲ್ಲಿ. 1991ರಲ್ಲಿ ನಡೆದ ಹುಣಸೂರು ಕ್ಷೇತ್ರದ ವಿಧಾನಸಭೆ ಉಪಚುನಾವಣೆಯಲ್ಲಿ ಬಿಜೆಪಿಯಿಂದ ಸ್ಪರ್ಧಿಸಿ ಚಿಕ್ಕಮಾದು ವಿರುದ್ಧ ಸೋತರು. ಆದರೆ ತಮ್ಮ ಸರಳ-ಸಜ್ಜನಿಕೆಯಿಂದಲೇ ಸ್ಥಳೀಯ ಜನರನ್ನು ಆಕರ್ಷಿಸಿ ಯುವ ನಾಯಕರಾಗಿ ಹೊರಹೊಮ್ಮಿದರು.

ಮೂರು ವರ್ಷದ ನಂತರ 1994ರಲ್ಲಿ ನಡೆದ ವಿಧಾನಸಭೆಯ ಸಾರ್ವತ್ರಿಕ ಚುನಾವಣೆಯಲ್ಲಿ ಹುಣಸೂರು ಕ್ಷೇತ್ರದಿಂದ ಬಿಜೆಪಿಯಿಂದಲೇ ಸ್ಪರ್ಧಿಸಿ ಗೆದ್ದರು. 1998ರಲ್ಲಿ ಬಿಜೆಪಿಯು ಅವರನ್ನು ಮೈಸೂರು-ಕೊಡಗು ಲೋಕಸಭಾ ಕ್ಷೇತ್ರಕ್ಕೆ ಅಭ್ಯರ್ಥಿಯನ್ನಾಗಿ ಕಣಕ್ಕೆ ಇಳಿಸಿತು. ಅಲ್ಲಿ ಗೆದ್ದರು. ಆದರೆ ದಿಲ್ಲಿಯ ಗದ್ದುಗೆಯಲ್ಲಿ ಎಲ್ಲ ಪಕ್ಷಗಳ ಮೇಲಾಟಗಳು ನಡೆದು ಸರಕಾರ ಪತನವಾಗಿ ಮತ್ತೆ ಚುನಾವಣೆ ಘೋಷಣೆಯಾಯಿತು. ಆಗ ರಾಜ ವಂಶಸ್ಥ ಶ್ರೀಕಂಠದತ್ತ ನರಸಿಂಹರಾಜ ಒಡೆಯರ್‌ ಅವರು ವಿಜಯ ಶಂಕರ ಅವರನ್ನು ಮಣಿಸಿ ಲೋಕಸಭೆಗೆ ಅಯ್ಕೆಯಾದರು.

2004ರಲ್ಲಿ ಒಡೆಯರ್‌ ಅವರನ್ನು ಸೋಲಿಸಿದ ವಿಜಯಶಂಕರ್‌ ಎರಡನೇ ಬಾರಿಗೆ ಸಂಸತ್ತಿನ ಮೆಟ್ಟಿಲುಗಳನ್ನು ತುಳಿದರು. 2009ರಲ್ಲಿ ಎಚ್‌.ವಿಶ್ವನಾಥ್‌ ವಿರುದ್ಧ ಸೋತಿದ್ದು, ಅನಂತರ ರಾಜ್ಯ ರಾಜಕಾರಣಕ್ಕೆ ಬಂದರು. ಆಗ ಸಿಎಂ ಆಗಿದ್ದ ಬಿ.ಎಸ್‌. ಯಡಿಯೂರಪ್ಪ ವಿಜಯಶಂಕರ ಅವರನ್ನು ವಿಧಾನ ಪರಿಷತ್‌ನ ಸದಸ್ಯರನ್ನಾಗಿ ಆಯ್ಕೆ ಮಾಡಿ, ತಮ್ಮ ಸಂಪುಟದಲ್ಲಿ ಅರಣ್ಯ ಸಚಿವರನ್ನಾಗಿಸಿದರು.

Advertisement

2013ರಲ್ಲಿ ಪಿರಿಯಾಪಟ್ಟಣ ವಿಧಾನಸಭಾ ಕ್ಷೇತ್ರದಲ್ಲಿ ಸ್ಪರ್ಧಿಸುವ ವಿಚಾರದಲ್ಲಿ ಗೊಂದಲ ಮಾಡಿಕೊಂಡು ಕೊನೆಗೆ ಕಣದಿಂದ ಹಿಂದೆ ಸರಿದರು. 2014ರಲ್ಲಿ ವಿಜಯಶಂಕರ್‌ ಅವರ ಕರ್ಮಭೂಮಿಯನ್ನು ಮೈಸೂರಿನಿಂದ ಹಾಸನಕ್ಕೆ ಬದಲು ಮಾಡಿದ ಬಿಜೆಪಿ ಹೈಕಮಾಂಡ್‌, ಮಾಜಿ ಪ್ರಧಾನಿ ಎಚ್‌.ಡಿ. ದೇವೇಗೌಡರ ವಿರುದ್ಧ ಕಣಕ್ಕೆ ಇಳಿಸಿತು. ಆದರೆ ಸೋತರು.

2023ರ ವಿಧಾನಸಭೆ ಚುನಾವಣೆಯಲ್ಲಿ ಪಿರಿಯಾಪಟ್ಟಣದಿಂದ ಬಿಜೆಪಿಯಿಂದ ಸ್ಪರ್ಧಿಸಿ, “ಇದೇ ನನ್ನ ಕೊನೆಯ ಚುನಾವಣೆ’ ಎಂದು ಘೋಷಿಸಿ ಭಾವನಾತ್ಮಕವಾಗಿ ಪ್ರಚಾರ ಮಾಡಿದರೂ ಅವರಿಗೆ ಠೇವಣಿ ಉಳಿಸಿಕೊಳ್ಳುವುದೂ ಸಾಧ್ಯವಾಗಲಿಲ್ಲ. ಇದರ ಮಧ್ಯದಲ್ಲಿ 2019ರಲ್ಲಿ ಜೆಡಿಎಸ್‌-ಕಾಂಗ್ರೆಸ್‌ ಮೈತ್ರಿಯಲ್ಲಿ ಲೋಕಸಭಾ ಚುನಾವಣೆಯಲ್ಲಿ ಸ್ಪರ್ಧಿಸಿ ಅಲ್ಲೂ ಪ್ರತಾಪ ಸಿಂಹ ವಿರುದ್ಧ ಸೋತರು. ಮತ್ತೆ ಒಂದೇ ವರ್ಷಕ್ಕೆ ಕಮಲದ ಅಂಗಳಕ್ಕೆ ವಾಪಸಾದರು.

14 ವರ್ಷಗಳ ವನವಾಸ ಅಂತ್ಯ
ಹಾಸನ ಲೋಕಸಭಾ ಚುನಾವಣೆ ಅನಂತರ ನಾನು ರಾಜಕೀಯ ಹಿನ್ನಡೆ ಅನುಭವಿಸಿದೆ. ಅಲ್ಲಿಂದ ಜನ ನನ್ನನ್ನು ಮರೆತೆಬಿಟ್ಟಿದ್ದರು. ಅಂತಹವನನ್ನು ಗುರುತಿಸಿ ಬಿಜೆಪಿ ಪಕ್ಷವು ಇಂತಹ ಉನ್ನತ ಹುದ್ದೆ ಕೊಟ್ಟಿದೆ. ಎಲ್ಲವೂ ನನ್ನ ತಾಳ್ಮೆಯಿಂದಲೇ ಸಾಧ್ಯವಾಗಿದ್ದು. ಒಂದು ರೀತಿ 14 ವರ್ಷಗಳ ವನವಾಸ ಅಂತ್ಯವಾದಂತೆ ಆಗಿದೆ
– ಸಿ.ಎಚ್‌. ವಿಜಯಶಂಕರ್‌

-ಆರ್‌. ವೀರೇಂದ್ರ ಪ್ರಸಾದ್‌

Advertisement

Udayavani is now on Telegram. Click here to join our channel and stay updated with the latest news.

Next