ವಿಜಯರಾಘವೇಂದ್ರ ಬರೀ ನಟರಷ್ಟೇ ಅಲ್ಲ, ಅವರೊಬ್ಬ ಗಾಯಕ, ಒಳ್ಳೆಯ ಮಾತುಗಾರ ಕೂಡ. ಈಗಾಗಲೇ ಹಲವು ಚಿತ್ರಗಳಲ್ಲಿ ಹಾಡಿರುವ ಅವರು, ಎಫ್ ಎಂವೊಂದರಲ್ಲಿ ಆರ್‌ಜೆಯಾಗಿಯೂ ಕಾರ್ಯನಿರ್ವಹಿಸಿ ಸೈ ಎನಿಸಿಕೊಂಡಿದ್ದು ಗೊತ್ತೇ ಇದೆ. ಅವರೀಗ ಸಂಪೂರ್ಣ ಹಾಡುವ ಮೂಲಕವೇ ಈ ಲಾಕ್‌ಡೌನ್ ಸಮಯದಲ್ಲಿ ತಮ್ಮ ಅಭಿಮಾನಿಗಳನ್ನು ರಂಜಿಸುತ್ತಿದ್ದಾರೆ.
ಹೌದು, ತಮ್ಮ ಫೇಸ್‌ಬುಕ್ ಖಾತೆಯಲ್ಲಿ ದಿನಕ್ಕೊಂದು ವಿಶೇಷ ಹಾಡುಗಳನ್ನು ಹಾಡುವ ಮೂಲಕ ಎಲ್ಲರ ಪ್ರೀತಿಗೆ ಪಾತ್ರರಾಗಿದ್ದಾರೆ. ಡಾ.ರಾಜಕುಮಾರ್ ಅವರು ಹಾಡಿರುವ ಹಲವು ಚಿತ್ರಗೀತೆಗಳು, ಭಾವಗೀತೆ, ದಾಸರ ಪದ, ಭಕ್ತಿಗೀತೆಗಳನ್ನು ಹಾಡುವ ಮೂಲಕ ಮುಖಪುಟದಲ್ಲಿ ಕೇಳುಗರಿಂದ ಭರಪೂರ ಮೆಚ್ಚುಗೆಯ ಪ್ರತಿಕ್ರಿಯೆಗೆ ಪಾತ್ರರಾಗಿದ್ದಾರೆ. ಅಂದಹಾಗೆ, ವಿಜಯರಾಘವೇಂದ್ರ ಅವರು, “ಬಹದ್ದೂರ್ ಗಂಡು’ ಚಿತ್ರದಲ್ಲಿ ರಾಜ್‌ಕುಮಾರ್ ಹಾಡಿರುವ “ಮುತ್ತಿನಂಥ ಮಾತೊಂದು ಗೊತ್ತೇನಮ್ಮ ‘ ಹಾಡುವುದರೊಂದಿಗೆ ಅಂದಿಗೂ ಇಂದಿಗೂ ಅರ್ಥಪೂರ್ಣ ಪದಗಳು ಎಂದು ಬರೆದುಕೊಂಡಿದ್ದಾರೆ.
ಅಷ್ಟೇ ಅಲ್ಲ, ರಾಜಕುಮಾರ್ ಹಾಡಿದ ದಾಸರ ಪದಸಿರಿ “ದಾಸ ದಾಸರ ಮನೆಯ ದಾಸಾನು ದಾಸ ನಾನು’, “ಆಡಿಸಿ ನೋಡು ಬೀಳಿಸಿ ನೋಡು ‘, “ನಮಸ್ತೇತು ಮಹಾ ಮಾಯೆ ‘, “ಶ್ರೀಕಂಠ ವಿಷಕಂಠ ‘, “ಓಂ ಬ್ರಹ್ಮಾನಂದ ಓಂಕಾರ ‘ ಹಾಗು “ನಿನ್ನ ಮನ ಮೆಚ್ಚಿಸಲು ನಿನ್ನ ಮನ ಮೆಚ್ಚಿಸಲು ಏನು ಮಾಡಲಿ ಹೇಳು ಪವನಸುತ ‘ ಹಾಡುಗಳನ್ನು ಹಾಡುವ ಮೂಲಕ ಖುಷಿಪಡಿಸಿದ್ದಾರೆ.
ಇದಷ್ಟೇ ಅಲ್ಲ, ರಾಜು ಅನಂತಸ್ವಾಮಿ ಅವರು ಹಾಡಿರುವ ಜಿ.ಎಸ್.ಶಿವರುದ್ರಪ್ಪ ರಚಿಸಿರುವ “ಎದೆತುಂಬಿ ಹಾಡಿದೆನು ಅಂದು ನಾನು ‘, ಡಾ.ವಿಷ್ಣುವರ್ಧನ್ ಅಭಿನಯದ “ಕರ್ಣ ‘ ಚಿತ್ರದ “ಆ ಕರ್ಣನಂತೆ ನೀ ದಾನಿಯಾದೆ ‘ ಹಾಡು ಹಾಡುವ ಮೂಲಕ ಈ ಹಾಡನ್ನು ತ್ಯಾಗಕ್ಕೆ ಹೆಸರಾದ ಡಾಕ್ಟರ್, ಪೊಲೀಸ್, ಸಮಾಜ ಸೇವಕರಿಗೆ, ಆಶಾ ಕಾರ್ಯಕರ್ತೆಯರಿಗೆ ಅರ್ಪಿಸಿದ್ದಾರೆ.
ಉಳಿದಂತೆ ಅವರು ಸುದೀಪ್ ಅಭಿನಯದ “ಮುಸ್ಸಂಜೆ ಮಾತು’ ಸಿನಿಮಾದ “ಏನಾಗಲಿ ಮುಂದೆ ಸಾಗು ನೀ ‘, “ಪಲ್ಲವಿ ಅನುಪಲ್ಲವಿ ‘ ಚಿತ್ರದ “ನಗುವ ನಯನ ಮಧುರ ಮೌನ ‘, “ಅಮೃತವರ್ಷಿಣಿ ‘ ಚಿತ್ರದ “ಭಲೇ ಭಲೇ ಚಂದದ.. ‘ ಹಾಡು ಸೇರಿದಂತೆ ಅನೇಕ ಗೀತೆಗಳನ್ನು ಹಾಡುವ ಮೂಲಕ ತಮ್ಮ ಫ್ಯಾನ್ಸ್‌ಗೆ ಖುಷಿಪಡಿಸುತ್ತಿದ್ದಾರೆ.