ಸದಾ ಜಾತಿ ತಾರತಮ್ಯ, ಧರ್ಮಗಳ ನಡುವಿನ ಸಂಘರ್ಷದಲ್ಲಿ ಮಾನವೀಯತೆ ದಿನೇ ದಿನೇ ಮೌಲ್ಯ ಕಳೆದುಕೊಳ್ಳುತ್ತಿದೆ. ಇಂಥ ಸಂದರ್ಭದಲ್ಲಿ ಜಾತಿ, ಧರ್ಮ ಮತ್ತು ಮಾನವೀಯತೆಯಲ್ಲಿ ಮನುಷ್ಯನಿಗೆ ಯಾವುದು ದೊಡ್ಡದು? ಇಂದಿನ ಸಮಾಜಕ್ಕೆ ಬೇಕಾಗಿರುವುದು ಯಾವುದು? ಅಂತಿಮವಾಗಿ ನಮ್ಮೊಳಗೆ ಉಳಿಯುವುದು ಯಾವುದು, ಅಳಿಯುವುದು ಯಾವುದು? ಇಂಥದ್ದೊಂದು ಗಂಭೀರ ಪ್ರಶ್ನೆಯನ್ನು ಜೊತೆಗೆ ಕಾಮಿಡಿ ಕಚಗುಳಿ ಇಡುತ್ತಾ ಪ್ರೇಕ್ಷಕರ ಮುಂದೆ ಬಂದಿರುವ ಸಿನಿಮಾ “ತೋತಾಪುರಿ’.
ಆಗಾಗ್ಗೆ ಗಂಭೀರ ಚರ್ಚೆಯಾಗುವ, ರಾಜಕೀಯ ಬಣ್ಣ ಪಡೆದುಕೊಳ್ಳುವ, ಒಬ್ಬರ ಮೇಲೊಬ್ಬರು ಸವಾರಿ ಮಾಡುವಂಥ ಜಾತಿ, ಧರ್ಮ, ಲಿಂಗ ತಾರತಮ್ಯ ಹೀಗೆ ಪ್ರಸ್ತುತ ಸಮಾಜದಲ್ಲಿ ಬೂದಿ ಮುಚ್ಚಿದ ಕೆಂಡದಂತಿರುವ ವಿಷಯಗಳನ್ನು ಹುಡುಕಿ ಅದನ್ನು ತನ್ನದೇ ಧಾಟಿಯಲ್ಲಿ ದೃಶ್ಯರೂಪದಲ್ಲಿ ಕಟ್ಟಿ ಕೊಟ್ಟಿರುವ ನಿರ್ದೇಶಕ ವಿಜಯ ಪ್ರಸಾದ್ ಪ್ರಯತ್ನ ಪ್ರಶಂಸನಾರ್ಹ. ಹಿಂದೂ, ಮುಸ್ಲಿಂ ಮತ್ತು ಕ್ರಿಶ್ಚಿಯನ್ ಮೂರು ಪಾತ್ರಗಳನ್ನು ಸಾಂಕೇತಿಕವಾಗಿ ಇಟ್ಟುಕೊಂಡು ಕಥೆಯನ್ನು ಹೇಳಿರುವ ರೀತಿ ಹೊಸದಾಗಿದೆ.
ಇನ್ನು “ತೋತಾಪುರಿ’ ಸಿನಿಮಾದ ಟೀಸರ್, ಟ್ರೇಲರ್‌ನಲ್ಲಿ ಪ್ರೇಕ್ಷಕರ ಗಮನ ಸೆಳೆಯುವಲ್ಲಿ ಯಶಸ್ವಿಯಾಗಿದ್ದ ಡೈಲಾಗ್ಸ್ ನೋಡುಗರಿಗೆ ಕಚಗುಳಿಯಿಡುತ್ತಲೇ ಕೊನೆಯವರೆಗೂ ಕರೆದುಕೊಂಡು ಹೋಗುತ್ತದೆ. ಗಂಭೀರ ವಿಷಯವನ್ನು ಹಾಸ್ಯಮಯ ದೃಶ್ಯಗಳು, ಡೈಲಾಗ್ಸ್ ಮತ್ತು ಸಾಂಗ್ಸ್ ಮೂಲಕ ಎಂಟರ್‌ಟೈನಿಂಗ್ ಆಗಿ ಹೇಳಿರುವುದರಿಂದ, ಥಿಯೇಟರ್‌ನಿಂದ ಹೊರಗೆ ಬರುವಾಗ ಒಂದಷ್ಟು ವಿಷಯಗಳು ಕಾಡುತ್ತಲೇ ಉಳಿದಿರುತ್ತವೆ.
ಸಿನಿಮಾದಲ್ಲಿ ಮಧ್ಯ ವಯಸ್ಸಿನ ಸಾಮಾನ್ಯ ವ್ಯಕ್ತಿಯಾಗಿ ಜಗ್ಗೇಶ್, ಮುಸ್ಲಿಂ ಹುಡುಗಿಯಾಗಿ ಅದಿತಿ ಪ್ರಭುದೇವ ಕಾಂಬಿನೇಶನ್ ಸ್ಕ್ರೀನ್ ಮೇಲೆ ವರ್ಕೌಟ್ ಆಗಿದೆ. ವೀಣಾ ಸುಂದರ್, ಹೇಮಾದತ್ ಪಾತ್ರಗಳು ಅಲ್ಲಲ್ಲಿ ಕಣ್ಣಂಚನ್ನು ಒದ್ದೆ ಮಾಡಿಸಿದರೆ, ಮರುಕ್ಷಣವೇ ಕಚಗುಳಿ ಇಡುವಂತಿದೆ. ಜಗ್ಗೇಶ್, ಅದಿತಿ ಪ್ರಭುದೇವ, ವೀಣಾ ಸುಂದರ್, ಹೇಮಾದತ್ ನಾಲ್ವರು ಕೂಡ ತಮ್ಮ ಪಾತ್ರವನ್ನು ಅಚ್ಚುಕಟ್ಟಾಗಿ ನಿಭಾಯಿಸಿ ಗಮನ ಸೆಳೆಯುತ್ತಾರೆ. ಉಳಿದಂತೆ ದತ್ತಣ್ಣ, ಸುಮನ್ ರಂಗನಾಥ್ ತಮ್ಮ ಪಾತ್ರಗಳಲ್ಲಿ ನೋಡುಗರಿಗೆ ಇಷ್ಟವಾಗುತ್ತಾರೆ.
ತಾಂತ್ರಿಕವಾಗಿ ಸಿನಿಮಾದ ಛಾಯಾಗ್ರಹಣ, ಸಂಕಲನ, ಕಲರಿಂಗ್, ಕಲಾ ನಿರ್ದೇಶನ, ಹಿನ್ನೆಲೆ ಸಂಗೀತ ಸಿನಿಮಾವನ್ನು ಪರದೆಯಲ್ಲಿ ಕಲರ್‌ಫುಲ್ ಆಗಿ ಕಾಣುವಂತೆ ಮಾಡುತ್ತದೆ. ಅನೂಪ್ ಸೀಳಿನ್ ಸಂಗೀತ ಸಂಯೋಜನೆಯ “ಬಾಗ್ಲು ತೆಗಿ ಮೇರಿ ಜಾನ್…’ ಹಾಡು ಥಿಯೇಟರ್‌ನಲ್ಲಿ ಪ್ರೇಕ್ಷಕರನ್ನು ಕೂತಲ್ಲೇ ಹೆಜ್ಜೆ ಹಾಕಿಸುವಂತಿದೆ. ನಗು ನಗುತ್ತಲೇ ಇಡೀ ಸಿನಿಮಾವನ್ನು ಎಂಜಾಯ್ ಮಾಡ ಬೇಕೆಂದುಕೊಂಡವರು “ತೋತಾಪುರಿ’ ಸಿನಿಮಾವನ್ನು ಆರಾಮವಾಗಿ ಕಣ್ತುಂಬಿ ಕೊಳ್ಳಬಹುದು
ಜಿ.ಎಸ್.ಕಾರ್ತಿಕ ಸುಧನ್