Advertisement

ಯಶಸ್ವೀ ಸಮಗ್ರ ಕೃಷಿಕ ವಿಜಯ ಕುಮಾರ್‌ ಸಾವಯವ ಕೃಷಿ ಪ್ರೀತಿ

10:03 AM Dec 20, 2019 | mahesh |

ಹೆಸರು: ವಿಜಯ ಕುಮಾರ್‌
ಏನೇನು ಕೃಷಿ: ಭತ್ತ, ತರಕಾರಿ. ದ್ವಿದಳ ಧಾನ್ಯ
ಎಷ್ಟು ವರ್ಷ: 6
ಕೃಷಿ ಪ್ರದೇಶ: ಎರಡೂವರೆ ಎಕರೆ
ಸಂಪರ್ಕ: 7760649508

Advertisement

ನಾವು ಅದೆಷ್ಟು ಆಧುನಿಕಗೊಂಡರೂ ಉಣ್ಣುವ ಅನ್ನವನ್ನು ಸೃಷ್ಟಿಸಲಾರೆವು; ಅದನ್ನು ಬಿತ್ತಿ ಬೆಳೆದೇ ಆಗಬೇಕು. ಕೃಷಿಗೆ ಮಹತ್ವದ ಸ್ಥಾನವಿದೆ. ಇದೇ ಹಿನ್ನೆಲೆಯಲ್ಲಿ ಉದಯವಾಣಿಯು ಕಿಸಾನ್‌ ದಿನಾಚರಣೆಯ ಸಂದರ್ಭ ರೈತರ ಸಾಧನೆಯ ಚಿತ್ರಣ ನೀಡುವ “ಕೃಷಿ ಕಥನ’ವನ್ನು ಆರಂಭಿಸಿದೆ. ಈ ಹೊಸ ಸರಣಿಯು ಇನ್ನಷ್ಟು ಮಂದಿಗೆ ಪ್ರೇರಣೆಯಾಗಲೆಂದು ಸರಕಾರದಿಂದ ಪ್ರಶಸ್ತಿ ಪುರಸ್ಕಾರಗಳಿಂದ ಗುರುತಿಸಲ್ಪಟ್ಟ ರೈತರನ್ನು ಪರಿಚಯಿಸುವ ಪ್ರಯತ್ನ.

ಉದ್ಯಾವರ: ಸಾಂಪ್ರದಾಯಿಕವಾಗಿ ಸಂಪೂರ್ಣ ಹಟ್ಟಿಗೊಬ್ಬರವನ್ನು ಬಳಸಿಯೇ ಸಾವಯವ ಕೃಷಿಯನ್ನು ನಡೆಸುತ್ತಿರುವ ಕೃಷಿ ನಿಲಾಖೆಯಿಂದ ಶ್ರೇಷ್ಠ ಕೃಷಿಕ ಪ್ರಶಸ್ತಿ ಪುರಸ್ಕೃತ ವಿಜಯ ಕುಮಾರ್‌ ಕಲಾಯಿಬೈಲ್‌ ಅವರಿಗೆ, ಕೃಷಿಯಲ್ಲಿ ಲಾಭ ನಷ್ಟದ ಲೆಕ್ಕಾಚಾರ ಇಲ್ಲ. ಕೃಷಿಯೇ ಎಲ್ಲವೂ ಆಗಿದ್ದು ಸುಮಾರು ಎರಡೂವರೆ ಎಕರೆಯಲ್ಲಿ ಯಶಸ್ವೀ ಭತ್ತದ ಸಹಿತ ಸಮಗ್ರ ಕೃಷಿ ನಡೆಸುವ ಮೂಲಕ ಕೃಷಿ ಪ್ರೀತಿಯನ್ನು ಮೆರೆದಿದ್ದಾರೆ.

ಒಟ್ಟು ಸುಮಾರು ಎರಡೂವರೆ ಎಕರೆ ಭೂಮಿಯನ್ನು ಹೊಂದಿರುವ ಇವರು ಸುಮಾರು ನಾಲ್ಕು ಕ್ವಿಂಟಾಲ್‌ ಅಕ್ಕಿಯನ್ನು ಪಡೆಯುವಂತಹ ಒಂದು ಬೆಳೆಯಾಗಿ ಭತ್ತದ ಕೃಷಿಯನ್ನು ಪತ್ನಿ ವತ್ಸಲಾ ವಿ. ಕುಂದರ್‌ ಮಕ್ಕಳಾದ ವಿಶಾಲ್‌ ಕುಮಾರ್‌, ವಂಶಿಕಾ ಜತೆಗೂಡಿ ಮುನ್ನಡೆಸುತ್ತಾ ಬಂದಿರುತ್ತಾರೆ. ಇವರದ್ದು ಕೇವಲ ಹಟ್ಟಿ ಗೊಬ್ಬರವನ್ನೇ ಬಳಸುವ ಸಮಗ್ರ ಕೃಷಿ ಕಾಯಕ ನಿರತರಾಗಿದ್ದಾರೆ.

ವಾಣಿಜ್ಯ ಬೆಳೆ
ಭತ್ತದ ಕೃಷಿಯೊಂದಿಗೆ ಅಲಸಂಡೆ, ಹರಿವೆ, ಬಸಳೆ, ಗುಳ್ಳ, ಕುಂಬಳಕಾಯಿ, ಪಟ್ಲುಕೋಡು, ಸೋರೆಕಾಯಿ, ಹೀರೆಕಾಯಿ, ಬೆಂಡೆಕಾಯಿ, ತೊಂಡೆಕಾಯಿ, ಸೌತೆಕಾಯಿ, ಸೋರೆಕಾಯಿ, ಮೂಲಂಗಿ, ಗೆಣಸು ಸಹಿತ ಇತರೇ ವಾಣಿಜ್ಯ ಬೆಳೆಗಳನ್ನು ಕೂಡಾ ಸಾವಯವ ಗೊಬ್ಬರ ಬಳಸಿಯೇ ಬೆಳೆಸುವುದರಿಂದ ಇವರು ಬೆಳೆದ ತರಕಾರಿಗಳಿಗೆ ಮನೆಯ ಪ್ರದೇಶದಲ್ಲಿಯೇ ಖಾಯಂ ಗ್ರಾಹಕರು ಖರೀದಿದಾರರಾಗಿರುತ್ತಾರೆ. ಇನ್ನುಳಿದ ತರಕಾರಿಗಳಿಗೆ ಉದ್ಯಾವರ ಪೇಟೆಯ ಅಂಗಡಿಗಳೇ ಮಾರುಕಟ್ಟೆಯಾಗಿದೆ.

Advertisement

ಉದ್ಯಾವರಕ್ಕೆ ಶಂಕರಪುರ ಮಲ್ಲಿಗೆ ಕಂಪು
ಉದ್ಯಾವರದ ಕಲಾಯಿ ಬೈಲು ಪ್ರದೇಶದ ಮಣ್ಣಿನ ಗುಣಕ್ಕೆ ಮಲ್ಲಿಗೆ ಬೆಳೆ ಅಸಾಧ್ಯವಾಗಿದೆ. ಆದರೆ ಕೃಷಿಕ ವಿಜಯ ಕುಮಾರ್‌ ಕೆಂಪು ಮಣ್ಣನ್ನು ಬಳಸಿಕೊಂಡು ಉದ್ಯಾವರಕ್ಕೆ ಮಲ್ಲಿಗೆಯ ಕಂಪನ್ನು ಸೂಸುವಂತೆ ಮಾಡಿದ ಮೊದಲ ಕೀರ್ತಿಯನ್ನು ಹೊಂದಿದ್ದು, ಪರಿಣಾಮಕಾರಿಯಾಗಿತ್ತು. ಅದನ್ನು ಅನುಸರಿಸಿ ಸುಮಾರು 10ರಷ್ಟು ಕುಟುಂಬಗಳು ಮಲ್ಲಿಗೆ ಕೃಷಿಯನ್ನು ಅವಲಂಬಿತರಾಗಿದ್ದು ವಿಶೇಷವಾಗಿದೆ.

ಉದ್ದು, ಹೆಸರು ದ್ವಿದಳ ಧಾನ್ಯದ ಬೆಳೆಯನ್ನು ಬೆಳೆಸುವ ಅವರು ಭತ್ತದ ಬೆಳೆಯ ಸಂದರ್ಭ ಉಳುಮೆಗೆ ಟ್ರ್ಯಾಕ್ಟರ್‌, ಕಟಾವು ಯಂತ್ರ ಬಳಸುತ್ತಾರೆ. ಬೆಳೆಗಳಿಗೆ ನವಿಲು ಸಹಿತ ಪಾರಿವಾಳ ಮತ್ತು ಇತರೇ ಪಕ್ಷಿಗಳ ಕಾಟ ಇದೆ ಎನ್ನುವ ಈ ಸಮಗ್ರ ಕೃಷಿಕ ಅರ್ಹವಾಗಿಯೇ ಹಲವು ಸಂಘ ಸಂಸ್ಥೆಗಳಿಂದ ಸಮ್ಮಾನಕ್ಕೆ ಭಾಜನರಾಗಿರುತ್ತಾರೆ.

ಕೃಷಿ ಸಂಸ್ಕೃತಿ ನಮ್ಮ ದೇಶದ ಸಂಸ್ಕೃತಿ. ಪ್ರಸ್ತುತ ಕೃಷಿಯಿಂದ ವಿಮುಖರಾಗುತ್ತಿರುವ ಕಾಲಘಟ್ಟದಲ್ಲಿ ವಿಶೇಷ ಎಂಬಂತೆ ವಿದೇಶಿ ವ್ಯಾಮೋಹ ಬಿಟ್ಟು, ಹುಟ್ಟೂರಿನಲ್ಲಿ ಕೃಷಿಯನ್ನು ಪ್ರೀತಿಸುವ ಮೂಲಕ ವಿಜಯ ಕುಮಾರ್‌ ಕಲಾಯಿ ಬೈಲ್‌ ತನ್ನ ಆಹಾರಕ್ಕಾಗಿ, ಕುಟುಂಬ ಪೋಷಣೆಗಾಗಿ ಸ್ವಾವಲಂಬಿಯಾಗುತ್ತಿದ್ದಾರೆ.

ಹೈನುಗಾರಿಕೆ
ಸುಮಾರು 10ರಷ್ಟು ದನಗಳನ್ನು ಪೋಷಣೆ ಮಾಡುವ ಮೂಲಕ ಹೈನುಗಾರಿಕೆಯನ್ನೂ ನಡೆಸುತ್ತಿದ್ದು, ಉದ್ಯಾವರ ಡೈರಿಯಲ್ಲಿ ವರ್ಷವೂ ಪ್ರಶಸ್ತಿಗಳನ್ನು ಬಾಚುತ್ತಲೇ ಇದ್ದಾರೆ.

ವಿದೇಶದ ಲಕ್ಷ ಹಣಕ್ಕಿಂತ ಕೃಷಿಯಲ್ಲಿ ಸಂತೃಪ್ತಿ :
21 ವರ್ಷಗಳ ಕಾಲ ವಿದೇಶದಲ್ಲಿ ದುಡಿಯುತ್ತಿದ್ದ ವಿಜಯ ಕುಮಾರ್‌ ಅದನ್ನು ಬಿಟ್ಟು, 2013ರಿಂದ ಸಮಗ್ರ ಕೃಷಿಯಲ್ಲಿ ತೊಡಗಿಸಿಕೊಂಡು ಸಮಗ್ರ ಕೃಷಿಯ ಸಾಧನೆಯನ್ನು ಮಾಡಿರುತ್ತಾರೆ. ಮೊದಲಾಗಿ ಮಲ್ಲಿಗೆ ಕೃಷಿಯನ್ನು ಆರಂಭಿಸಿ ಯಶಸ್ಸು ಸಾಧಿಸಿದ ಬಳಿಕ ಸಮಗ್ರ ಕೃಷಿಯಲ್ಲಿ ಸಮರ್ಥವಾಗಿ ತೊಡಗಿಸಿಕೊಂಡಿದ್ದು, ಉದ್ಯಾವರ ಹಾಲು ಉತ್ಪಾದಕರ ಸಂಘದ ನಿರ್ದೇಶಕ, ಬಯಲು ಆತ್ಮಸಂಘ(ಕೃಷಿ ಇಲಾಖೆ) ಇದರ ಸ್ತಳೀಯ ಘಟಕದ ಅಧ್ಯಕ್ಷರಾಗಿರುತ್ತಾರೆ.

ಮನಸ್ಸಿಗೆ ನೆಮ್ಮದಿ
ಕೃಷಿ ಕಾಯಕ ಸ್ವಯಂ ತೊಡಗಿಸಿಕೊಂಡಲ್ಲಿ ಲಾಭದಾಯಕ. ಭತ್ತದ ಕೃಷಿ, ಹೈನುಗಾರಿಕೆ, ಮಲ್ಲಿಗೆ, ವಾಣಿಜ್ಯ ಬೆಳೆಯಾಗಿ ತರಕಾರಿ ಬೆಳೆಯುವ ಮೂಲಕ ಹೆಚ್ಚು ಕೃಷಿಯಲ್ಲಿ ತೊಡಗಿಸಿಕೊಂಡಿದ್ದೇನೆ. ನಾಟಿ ಸಂದರ್ಭ ಮಾತ್ರ ಕೃಷಿ ಕೂಲಿಯಾಳುಗಳ ಬಳಕೆ. ಉಳಿದಂತೆ ಯಂತ್ರೋಪಕರಣ ಬಳಕೆಯಿಂದ ಕೃಷಿಯಲ್ಲಿ ಖರ್ಚು ಕಡಿಮೆ ಆಗುತ್ತದೆ. ವಿದೇಶದಲ್ಲಿನ ಸಂಪಾದನೆಗಿಂತ ಕೃಷಿ ಸಂಪಾದನೆ ಕಡಿಮೆ ಆದರೂ ಬರುವ ಲಾಭದಲ್ಲಿ ಮನಸ್ಸಿಗೆ ನೆಮ್ಮದಿ ತೃಪ್ತಿ ಇದೆ. ನಿರಂತರ ಕೃಷಿ ಚಟುವಟಿಕೆಯಿಂದ ಆರೋಗ್ಯವೂ ಉತ್ತಮವಾಗಿದೆ. ಸಮಗ್ರವಾದ ಸಾವಯವ ಕೃಷಿಯಿಂದ ಸ್ಥಳೀಯರೇ ಗ್ರಾಹಕರಾಗಿದ್ದು ಮಾರುಕಟ್ಟೆಯ ಬಗ್ಗೆ ಹೆಚ್ಚಿನ ಚಿಂತೆ ಹೊಂದಿಲ್ಲ. ಕೃಷಿಯಿಂದ ಹೆಚ್ಚಿನವರೂ ಮುಕ್ತಿ ಪಡೆಯಲು ಬಯಸುತ್ತಿದ್ದಾರೆ. ಯುವಶಕ್ತಿಗೂ ಸರಕಾರ ಕೃಷಿಯಲ್ಲಿ ತೊಡಗಿಸಿಕೊಳ್ಳುವಂತೆ ಪ್ರೋತ್ಸಾಹ ನೀಡಬೇಕಾದ ಅವಶ್ಯಕತೆ ಬಹಳಷ್ಟಿದೆ .
ವಿಜಯ ಕುಮಾರ್‌ ಕಲಾಯಿಬೈಲ್‌, ಶ್ರೇಷ್ಠ ಕೃಷಿಕ ಪ್ರಶಸ್ತಿ ಪುರಸ್ಕೃತ ಸಮಗ್ರ ಕೃಷಿಕ

ವಿಜಯ ಆಚಾರ್ಯ ಕಟಪಾಡಿ

Advertisement

Udayavani is now on Telegram. Click here to join our channel and stay updated with the latest news.

Next