ನವದೆಹಲಿ: ವಿಜಯ್ ಹಜಾರೆ ಟ್ರೋಫಿ ಸೆಮಿಫೈನಲ್ ಮುಖಾಮುಖೀಯಲ್ಲಿ ಹಿಂದಿನ ಬಾರಿಯ ಚಾಂಪಿಯನ್ ಕರ್ನಾಟಕ ಆಘಾತಕಾರಿಯಾಗಿ ಸೋತಿದೆ. ಮುಂಬೈ ವಿರುದ್ಧ 72 ರನ್ನುಗಳಿಂದ ಸೋತು ಕೂಟದಿಂದ ನಿರ್ಗಮಿಸಿತು. ಖ್ಯಾತ ಕ್ರಿಕೆಟಿಗ ವಿಜಯ್ ಹಜಾರೆ ಅವರ ಜನ್ಮದಿನದಂದೇ ಮುಂಬೈ ತಂಡ ಸ್ಮರಣೀಯ ಗೆಲುವು ದಾಖಲಿಸಿದ್ದು ವಿಶೇಷ. ಭಾನುವಾರದ ಪ್ರಶಸ್ತಿ ಸಮರದಲ್ಲಿ ಮುಂಬೈ ಮತ್ತು ಉತ್ತರಪ್ರದೇಶ ತಂಡಗಳು ಸೆಣೆಸಲಿವೆ. ಇನ್ನೊಂದು ಸೆಮಿಫೈನಲ್‌ನಲ್ಲಿ ಗುಜರಾತ್ ವಿರುದ್ಧ ಯುಪಿ 5 ವಿಕೆಟ್‌ಗಳ ಜಯ ಸಾಧಿಸಿತು.
ಪೃಥ್ವಿ ಶಾ ಅಮೋಘ 165: ಬ್ಯಾಟಿಂಗಿಗೆ ಇಳಿಸಲ್ಪಟ್ಟ ಮುಂಬೈ 49.2 ಓವರ್‌ಗಳಲ್ಲಿ 322 ರನ್ ಗಳಿಸಿ ಆಲೌಟಾಯಿತು. ಇದರಲ್ಲಿ ನಾಯಕ ಪೃಥ್ವಿ ಶಾ ಗಳಿಕೆ ಅಮೋಘ 165 ರನ್. ಜವಾಬಿತ್ತ ಕರ್ನಾಟಕ 42.4 ಓವರ್‌ಗಳಲ್ಲಿ 250 ರನ್ ಗಳಿಸಿ ಸೋಲೊಪ್ಪಿಕೊಂಡಿತು. ಪಡಿಕ್ಕಲ್ ಸರ್ವಾಧಿಕ 64 ರನ್ ಮಾಡಿದರು. ಸಮರ್ಥ್ (8), ಸಿದ್ಧಾರ್ಥ್ (8), ಪಾಂಡೆ (1) ಮೊದಲಾದ ತಾರಾ ಬ್ಯಾಟ್ಸ್‌ಮನ್‌ಗಳು ವಿಫಲರಾದರು.
ಆರಂಭಕಾರ ಪೃಥ್ವಿ ಶಾ 41ನೇ ಓವರ್ ತನಕ ಕರ್ನಾಟಕದ ಬೌಲಿಂಗ್ ದಾಳಿಯನ್ನು ದಿಟ್ಟರೀತಿಯಲ್ಲಿ ನಿಭಾಯಿಸಿದರು. 122 ಎಸೆತಗಳನ್ನು ಎದುರಿಸಿ 17 ಫೋರ್, 7 ಸಿಕ್ಸರ್ ಬಾರಿಸಿ ಮೆರೆದರು. ಇದು ಪ್ರಸಕ್ತ ಪಂದ್ಯಾವಳಿಯಲ್ಲಿ ಶಾ ಬಾರಿಸಿದ 4ನೇ ಶತಕ. ಅವರ ಒಟ್ಟು ರನ್ ಗಳಿಕೆ 754ಕ್ಕೆ ಏರಿತು. ಇದು ವಿಜಯ್ ಹಜಾರೆ ಟ್ರೋಫಿ ಪಂದ್ಯಾವಳಿಯೊಂದರಲ್ಲಿ ದಾಖಲಾದ ಅತ್ಯಧಿಕ ವೈಯಕ್ತಿಕ ಮೊತ್ತವಾಗಿದೆ. ಇದನ್ನು ಇನ್ನಷ್ಟು ವಿಸ್ತರಿಸುವ ಅವಕಾಶ ಇವರ ಮುಂದಿದೆ. ಶಾ ಹೊರತುಪಡಿಸಿದರೆ 45 ರನ್ ಮಾಡಿದ ಶಮ್ಸ್ ಮುಲಾನಿ ಅವರದೇ ಮುಂಬೈ ಸರದಿಯ ಹೆಚ್ಚಿನ ಗಳಿಕೆ.
ಕರ್ನಾಟಕ ಇನಿಂಗ್ಸ್‌ನಲ್ಲಿ ಪಡಿಕ್ಕಲ್ ಎಸೆತಕ್ಕೊಂದರಂತೆ 64 ರನ್ ಬಾರಿಸಿದರು (9 ಬೌಂಡರಿ, 1 ಸಿಕ್ಸರ್). ಸತತ 4 ಶತಕ ಹೊಡೆದು ದಾಖಲೆ ನಿರ್ಮಿಸಿದ್ದ ಪಡಿಕ್ಕಲ್‌ಗೆ ಇನ್ನೊಂದು ಬದಿಯಿಂದ ಸೂಕ್ತ ಬೆಂಬಲ ಲಭಿಸಲಿಲ್ಲ. ಸರಣಿಯಲ್ಲಿ ಅವರ ಒಟ್ಟು ಗಳಿಕೆ 737ಕ್ಕೆ ಏರಿತು. ಕೀಪರ್ ಶರತ್ 61 ರನ್ ಮಾಡಿದರು.
ಸಂಕ್ಷಿಪ್ತ ಸ್ಕೋರ್: ಮುಂಬೈ 49.2 ಓವರ್‌ಗಳಲ್ಲಿ 322 (ಶಾ 165, ಮುಲಾನಿ 45, ವೈಶಾಖ್ 56ಕ್ಕೆ 4, ಪ್ರಸಿದ್ಧ್ ಕೃಷ್ಣ 64ಕ್ಕೆ 3). ಕರ್ನಾಟಕ 42.4 ಓವರ್‌ಗಳಲ್ಲಿ 250 (ಪಡಿಕ್ಕಲ್ 64, ಶರತ್ 61, ಕೋಟ್ಯಾನ್ 23ಕ್ಕೆ 2, ತುಷಾರ್ ದೇಶಪಾಂಡೆ 37ಕ್ಕೆ 2).