Advertisement

ವಿಜಯ ಬ್ಯಾಂಕ್‌ ಈಗ ಬ್ಯಾಂಕ್‌ ಆಫ್ ಬರೋಡ

09:48 AM Apr 05, 2019 | Sriram |

ಬೆಂಗಳೂರು: 2019-20ನೇ ಸಾಲಿನ ಹಣಕಾಸು ವರ್ಷದ ಮೊದಲ ದಿನ ದೇಶದ ಮೂರು ಪ್ರಮುಖ ಬ್ಯಾಂಕ್‌ಗಳು ಅಧಿಕೃತವಾಗಿ ವಿಲೀನಗೊಂಡು “ಬ್ಯಾಂಕ್‌ ಆಫ್ ಬರೋಡ’ ಆಗಿ ಕಾರ್ಯಾರಂಭ ಮಾಡಿದವು.

Advertisement

ಈ ವಿಲೀನದಿಂದ ಬ್ಯಾಂಕ್‌ ಆಫ್ ಬರೋಡ ದೇಶದ ಎರಡನೇ ಅತಿದೊಡ್ಡ ಸಾರ್ವಜನಿಕ ಬ್ಯಾಂಕ್‌ ಆಗಿ ಹೊರಹೊಮ್ಮಿತು. ಇದರ ಬೆನ್ನಲ್ಲೇ ಕರ್ನಾಟಕ ಮೂಲದ ವಿಜಯ ಬ್ಯಾಂಕ್‌ ಮತ್ತು ದೇನಾ ಬ್ಯಾಂಕ್‌ ಅಧಿಕೃತವಾಗಿ ಇತಿಹಾಸದ ಪುಟ ಸೇರಿದವು. ಎರಡೂ ಬ್ಯಾಂಕ್‌ಗಳು ವಿಲೀನಗೊಂಡ ಹಿನ್ನೆಲೆಯಲ್ಲಿ ಜುಲೈನಲ್ಲಿ ಬಿಡುಗಡೆ ಆಗಲಿರುವ ಮೊದಲ ತ್ತೈಮಾಸಿಕ ಫ‌ಲಿತಾಂಶವನ್ನು ಬ್ಯಾಂಕ್‌ ಆಫ್ ಬರೋಡ ಪ್ರಕಟಿಸಲಿದೆ ಎಂದು ಬ್ಯಾಂಕ್‌ ಆಫ್ ಬರೋಡದ ಪ್ರಧಾನ ವ್ಯವಸ್ಥಾಪಕ ಬಿರೇಂದ್ರ ಕುಮಾರ್‌ ಸೋಮವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

ಈ ವಿಲೀನ ಪ್ರಕ್ರಿಯೆಯಿಂದ ಬ್ಯಾಂಕ್‌ ಆಫ್ ಬರೋಡದ ಕಾರ್ಯವ್ಯಾಪ್ತಿ ಸಾಕಷ್ಟು ವಿಶಾಲವಾಗಿದ್ದು, 12 ಕೋಟಿಗೂ ಅಧಿಕ ಗ್ರಾಹಕರನ್ನು ಒಳಗೊಂಡಂತಾಗಿದೆ. ವಾರ್ಷಿಕ 15 ಲಕ್ಷ ಕೋಟಿ ರೂ. ವ್ಯವಹಾರ ನಡೆಸಲಿದ್ದು, ಇದರಲ್ಲಿ 8.75 ಲಕ್ಷ ಕೋಟಿ ಠೇವಣಿಗಳು ಹಾಗೂ 6.25 ಲಕ್ಷ ಕೋಟಿ ಮುಂಗಡ ಹೊಂದಿದೆ. 9,500 ಶಾಖೆಗಳು ಹಾಗೂ 13,400ಕ್ಕೂ ಅಧಿಕ ಎಟಿಎಂಗಳನ್ನು ಹೊಂದಿದೆ.

ಸುಮಾರು 85 ಸಾವಿರ ಜನ ಉದ್ಯೋಗಿಗಳು ಇದರಡಿ ಕಾರ್ಯನಿರ್ವಹಿಸಲಿದ್ದಾರೆ. ಇದರಿಂದ ಗ್ರಾಹಕರಿಗೆ ಮತ್ತಷ್ಟು ಗುಣಮಟ್ಟದ ಸೇವೆ ದೊರೆಯಲಿದೆ. ಏಪ್ರಿಲ್‌ ಅಂತ್ಯದೊಳಗೆ ಬ್ಯಾಂಕ್‌ನ ಎಲ್ಲ ಪ್ರಮುಖ ಶಾಖೆಗಳಲ್ಲಿ ಅಂತರ ಸೇವೆ, ಮಾಹಿತಿ ತಂತ್ರಜ್ಞಾನಕ್ಕೆ ಸಂಬಂಧಿಸಿದ ಪಕ್ರಿಯೆ ಪೂರ್ಣಗೊಳ್ಳಲು ಸಮಯ ಬೇಕಾಗುತ್ತದೆಂದು ಸ್ಪಷ್ಟಪಡಿಸಿದರು.

ಈ ಮಧ್ಯೆ ವಿಲೀನಗೊಂಡ ಬ್ಯಾಂಕ್‌ಗಳ ಆದ್ಯತಾ ವಲಯಗಳು ಎಂದಿನಂತೆ ಮುಂದುವರಿಯಲಿವೆ. ಉದಾಹರಣೆಗೆ ವಿಜಯ ಬ್ಯಾಂಕ್‌ ಕೃಷಿಗೆ ಹೆಚ್ಚು ಆದ್ಯತೆ ನೀಡುತ್ತದೆ. ಬ್ಯಾಂಕ್‌ ಆಫ್ ಬರೋಡ ಮಧ್ಯಮ, ಸಣ್ಣ ಮತ್ತು ಸೂಕ್ಷ್ಮ ಕೈಗಾರಿಕೆಗಳಿಗೆ ಆದ್ಯತೆ ನೀಡುತ್ತದೆ ಎಂದು ಮಾಹಿತಿ ನೀಡಿದ ಅವರು, ಮುಂದಿನ ದಿನಗಳಲ್ಲಿ ಗ್ರಾಹಕರಿಗೆ ಹೆಚ್ಚು ಅನುಕೂಲ ಆಗಲಿದೆ ಎಂದು ಹೇಳಿದರು.

Advertisement

ಬ್ಯಾಂಕ್‌ ಆಫ್ ಬರೋಡ ತನ್ನ ಇತಿಹಾಸದಲ್ಲೇ ಅನುತ್ಪಾದಕ ಆಸ್ತಿ (ಎನ್‌ಪಿಎ) ಪ್ರಮಾಣ ಶೇ. 6 ಗಡಿ ದಾಟಿಲ್ಲ. ಬ್ಯಾಂಕ್‌ ಸದೃಢವಾಗಿದ್ದು, ಉತ್ತಮವಾಗಿ ಕಾರ್ಯನಿರ್ವಹಿಸುತ್ತಿದೆ. ಇದರೊಂದಿಗೆ ಎರಡು ಬ್ಯಾಂಕ್‌ಗಳು ವಿಲೀನಗೊಳ್ಳುವುದರಿಂದ ಸಾಮರ್ಥ್ಯ ವೃದ್ಧಿ ಆಗಲಿದೆ ಎಂದು ಪ್ರಶ್ನೆಯೊಂದಕ್ಕೆ ಪ್ರತಿಕ್ರಿಯಿಸಿದ ಅವರು, ಇದು ಮೊದಲ ವಿಲೀನ ಅಲ್ಲ; ಈ ಹಿಂದೆ ಹತ್ತಕ್ಕೂ ಹೆಚ್ಚು ವಿವಿಧ ಬ್ಯಾಂಕ್‌ಗಳ ವಿಲೀನ ಪ್ರಕ್ರಿಯೆಗಳು ನಡೆದಿವೆ. ಅವು ಈಗಲೂ ಯಶಸ್ವಿಯಾಗಿ ಕಾರ್ಯನಿರ್ವಹಿಸುತ್ತಿವೆ ಎಂದರು.

ಜಾಗತಿಕವಾಗಿ ತೆರೆದುಕೊಳ್ಳಲು ಪೂರಕ ವಾತಾವರಣ ಸೃಷ್ಟಿ ಆಗಲಿದೆ. ಉದ್ಯೋಗಿಗಳ ಸೇವೆ ಮೇಲೆ ಯಾವುದೇ ಪರಿಣಾಮ ಬೀರುವುದಿಲ್ಲ. ಹಾಗೂ ಅವರ ಹಿತಾಸಕ್ತಿಗಳನ್ನು ರಕ್ಷಿಸಲಾಗುವುದು ಎಂದರು. ವಿಜಯ ಬ್ಯಾಂಕ್‌ ಪ್ರಧಾನ ವ್ಯವಸ್ಥಾಪಕ ಸುದರ್ಶನ್‌, ದೇನಾ ಬ್ಯಾಂಕ್‌ ವಲಯ ಮುಖ್ಯಸ್ಥ ರಾಘವೇಂದ್ರನ್‌ ಇತರರಿದ್ದರು.

ವಿಲೀನದ ಎಫೆಕ್ಟ್
ಚಾಲ್ತಿ ಖಾತೆ ಮತ್ತು ಉಳಿತಾಯ ಖಾತೆ (ಕಾಸ)ಗಳ ಸಂಖ್ಯೆ 1.5 ಲಕ್ಷ ಕೋಟಿಯಿಂದ 2.76 ಲಕ್ಷ ಕೋಟಿಗೆ ಏರಿಕೆ.
ಕೃಷಿ ಸಾಲ 52 ಸಾವಿರ ಕೋಟಿಯಿಂದ 80 ಸಾವಿರ ಕೋಟಿಗೆ ಹೆಚ್ಚಳ.
ಸಾಲ ವಿತರಣೆ ಸಾಮರ್ಥ್ಯ 1.80 ಲಕ್ಷ ಕೋಟಿಯಿಂದ 2.41 ಕೋಟಿಗೆ ಏರಿಕೆ.
12 ಕೋಟಿಗೂ ಅಧಿಕ ಗ್ರಾಹಕರು ಈ ವ್ಯಾಪ್ತಿಗೆ ಬರಲಿದ್ದಾರೆ.
ವಾರ್ಷಿಕ ವಹಿವಾಟು 15 ಲಕ್ಷ ಕೋಟಿ ಆಗಲಿದೆ.
9,500 ಶಾಖೆಗಳು ಮತ್ತು 13,400 ಎಟಿಎಂಗಳು ಇದರಡಿ ಬರಲಿವೆ.

Advertisement

Udayavani is now on Telegram. Click here to join our channel and stay updated with the latest news.

Next