ಬೆಂಗಳೂರು: ಸರ್ಕಾರಿ ಸ್ವಾಮ್ಯದ ವಿಜಯ ಬ್ಯಾಂಕ್ ಪ್ರಸಕ್ತ ಹಣಕಾಸು ವರ್ಷದ ಮೊದಲನೇ ತ್ತೈಮಾಸಿಕದಲ್ಲಿ 144 ಕೋಟಿ ರೂ. ನಿವ್ವಳ ಲಾಭ ಗಳಿಸಿದೆ.
ಸೋಮವಾರ ನಗರದ ಕೇಂದ್ರ ಕಚೇರಿಯಲ್ಲಿ ಆಯೋಜಿಸಿದ್ದ ಪತ್ರಿಕಾಗೋಷ್ಠಿಯಲ್ಲಿ ಈ ಕುರಿತು ಮಾಹಿತಿ ನೀಡಿದ ಬ್ಯಾಂಕಿನ ವ್ಯವಸ್ಥಾಪಕ ನಿರ್ದೇಶಕ ಮತ್ತು ಸಿಇಒ ಆರ್.ಎ. ಶಂಕರ ನಾರಾಯಣನ್ ಅವರು, ಕಳೆದ ಆರ್ಥಿಕ ವರ್ಷದ ಅಂತಿಮ ತ್ತೈಮಾಸಿಕಕ್ಕೆ ಹೋಲಿಸಿದ್ದಲ್ಲಿ ಈ ಸಾಲಿನ ಪ್ರಥಮ ತ್ತೈಮಾಸಿಕಾಂತ್ಯದಲ್ಲಿ ಬ್ಯಾಂಕು ತನ್ನ ಕಾರ್ಯಾಚರಣಾ ಲಾಭವನ್ನು ಶೇ.13.24ರಷ್ಟು ಹೆಚ್ಚಿಸಿಕೊಂಡಿದೆ.
ಸಾರ್ವಜನಿಕ ಕ್ಷೇತ್ರದ ಇತರ ಬ್ಯಾಂಕುಗಳಿಗೆ ಹೋಲಿಸಿದಲ್ಲಿ ನಮ್ಮ ಬ್ಯಾಂಕು 2018-19ನೇ ಸಾಲಿನಲ್ಲಿ 144 ಕೋಟಿ ರೂ. ನಿವ್ವಳ ಲಾಭ ಗಳಿಸಿ ಸಾಧನೆ ಮಾಡಿದೆ ಎಂದರು. ವಿತ್ತ ವರ್ಷ ಆರಂಭದ ಮೂರು ಮಾಸಗಳಲ್ಲಿ ಒಟ್ಟು 2,79,674 ಕೋಟಿ ರೂ. ವಹಿವಾಟು ಆಗಿದ್ದು, ಶೇ.24.12ರಷ್ಟು ಏರಿಕೆಯಾಗಿದೆ.
ಇದರಲ್ಲಿ ಸಾಲ ಪ್ರಮಾಣ ಶೇ.31.06ರಷ್ಟು ಹೆಚ್ಚಳವಾದರೆ ಠೇವಣಿ ಪ್ರಮಾಣ ಶೇ.19.22ರಷ್ಟು ಏರಿಕೆಯಾಗಿದೆ. ಒಟ್ಟು ಬಡ್ಡಿ ಆದಾಯ 1207 ಕೋಟಿ ರೂ.ಗಳಾಗಿದ್ದು, ನಿವ್ವಳ ಬಡ್ಡಿ ಅಂಚು (ಎನ್‌ಐಎಂ) 20 ಬಿ.ಪಿ.ಎಸ್‌ನಿಂದ ಸುಧಾರಣೆಗೊಂಡು ಶೇ.3.12 ತಲುಪಿರುವುದು ಬ್ಯಾಂಕಿನ ಅಭಿವೃದ್ಧಿಯನ್ನು ಸೂಚಿಸುತ್ತದೆ.
ರಿಟೇಲ್ ಸಾಲದಲ್ಲಿ ಶೇ.25.44ರಷ್ಟು ಹಾಗೂ ಗೃಹ ಸಾಲ ಶೇ.30.33ರಷ್ಟು ಹೆಚ್ಚಳ ಮಾಡಲಾಗಿದೆ. ಒಟ್ಟಾರೆ ಕಳೆದ ಸಾಲಿನ ಇದೇ ಅವಧಿಗಿಂತ 7,705 ಕೋಟಿ ರೂ. ಅಧಿಕ ಸಾಲ ನೀಡಲಾಗಿದೆ. ಸಾಲ ವಸೂಲಾತಿಯಲ್ಲಿ ಹಲವು ನೂತನ ಕ್ರಮಗಳನ್ನು ಅನುಸರಿಸಿದ್ದರಿಂದ ನಿರೀಕ್ಷಿತ ಸಾಧನೆ ಮಾಡಲಾಗಿದೆ.
ಇದೆಲ್ಲದರ ಹೊರತಾಗಿಯೂ ಬ್ಯಾಂಕಿನ ಕಾರ್ಯಸಾಧನೆ ಕಳೆದ ಬಾರಿಗಿಂತ ಉತ್ತಮವಾಗಿರುವುದರಿಂದ ನಿವ್ವಳ ಎನ್‌ಪಿಎ ಶೇ.5.24 ರಿಂದ ಶೇ.4.10ಕ್ಕೆ ಇಳಿದಿದೆ. ಆದರೂ ಎನ್‌ಪಿಎ ಪ್ರಮಾಣವನ್ನು ಶೇ.4ಕ್ಕಿಂತ ಕೆಳಗಿಸುವುದು ನಮ್ಮ ಗುರಿ ಎಂದು ಅವರು ಹೇಳಿದರು. ಈ ಸಂದರ್ಭದಲ್ಲಿ ಬ್ಯಾಂಕಿನ ಕಾರ್ಯನಿರ್ವಾಹಕ ನಿರ್ದೇಶಕರಾದ ವೈ. ನಾಗೇಶ್ವರ ರಾವ್ ಹಾಗೂ ಮುರಳಿ ರಾಮಸ್ವಾಮಿ ಉಪಸ್ಥಿತರಿದ್ದರು.