ಮುಂಬಯಿ: ವಿಜಯ ಬ್ಯಾಂಕ್ ಮುಂಬಯಿ ವಲಯದ ವತಿಯಿಂದ ವಿಜಯಾ ಬ್ಯಾಂಕಿನ 87 ನೇ ಸಂಸ್ಥಾಪನ ದಿನಾಚರಣೆಯು ನ. 3ರಂದು ವಿಲೇಪಾರ್ಲೆ ಪೂರ್ವದ ನವೀನ್ ಭಾಯಿ ಠಕ್ಕೇರ್ ಸಭಾಗೃಹದಲ್ಲಿ ವೈವಿಧ್ಯಮಯ ಕಾರ್ಯಕ್ರಮಗಳೊಂದಿಗೆ ಜರಗಿತು.
ಸಮಾರಂಭದಲ್ಲಿ ಮುಖ್ಯ ಅತಿಥಿ ಯಾಗಿ ಪಾಲ್ಗೊಂಡ ಯೂನಿಯನ್ ಬ್ಯಾಂಕ್ ಆಫ್ ಇಂಡಿಯಾ ಮತ್ತು ದೇನಾ ಬ್ಯಾಂಕ್‌ನ ಮಾಜಿ ಮುಖ್ಯ ಆಡಳಿತ ನಿರ್ದೇಶಕ ಎಂ. ವಿ. ನಾಯರ್ ಅವರು ದೀಪ ಪ್ರಜ್ವಲಿಸಿ ಸಮಾರಂಭಕ್ಕೆ ಚಾಲನೆ ನೀಡಿದರು.
ಇದೇ ಸಂದರ್ಭದಲ್ಲಿ ಅತಿಥಿ ಎಂ. ವಿ. ನಾಯರ್ ಅವರು ಮೂಲ್ಕಿ ಸುಂದರ್‌ರಾಮ್ ಶೆಟ್ಟಿ ಮೆಮೋರಿಯಲ್ ಉಪನ್ಯಾಸ ನೀಡಿ, ಇಂದಿನ ಯಾಂತ್ರೀಕೃತ ಯುಗದಲ್ಲಿ ಗ್ರಾಹಕರ ಅನುಕೂಲತೆಗಳನ್ನು ಹಾಗೂ ಆಶಯಗಳನ್ನು ಅರ್ಥೈಯಿಸಿಕೊಂಡು ನಡೆದಾಗ ಮಾತ್ರ ಬ್ಯಾಂಕ್ ಅಭಿವೃದ್ಧಿಯ ಪಥದತ್ತ ಸಾಗಲು ಸಾಧ್ಯವಿದೆ. ಇನ್ನೊಂದು ಸ್ಪರ್ಧಾತ್ಮಕ ಯುಗದಲ್ಲಿ ಪಬ್ಲಿಕ್ ಸೆಕ್ಟರ್ ಬ್ಯಾಂಕ್‌ಗಳು ಬ್ಯಾಂಕ್‌ನ ಉದ್ಯೋಗಿಗಳ ನಿಸ್ವಾರ್ಥ ಹಾಗೂ ಶ್ರದ್ಧೆಯ ಕಾರ್ಯಗಳೊಂದಿಗೆ ನಿಂತಿರುತ್ತವೆ. ಗ್ರಾಹಕರಿಗೆ ವಿನೂತನ ತಂತ್ರಜ್ಞಾನಗಳ ಮುಖಾಂತರ ಕೈಗೆಟುವ ವ್ಯವಸ್ಥೆಯಲ್ಲಿ ಬ್ಯಾಂಕ್‌ಗಳು ಸ್ಪಂದಿಸುವುದು ಅನಿವಾರ್ಯವಾಗಿದೆ. ಉದ್ಯೋಗಿಗಳು ಐದು ಅಂಶಗಳನ್ನು ಅರ್ಥೈಸಿಕೊಂಡು ಗ್ರಾಹಕರೊಂದಿಗೆ ಉತ್ತಮ ಸಂಬಂಧವನ್ನು ಇಟ್ಟುಕೊಂಡಾಗ ಮಾತ್ರ ಬ್ಯಾಂಕ್‌ಗಳತ್ತ ಗ್ರಾಹಕರು ಆಕರ್ಷಿತರಾಗುತ್ತಾರೆ. ವಿಜಯ ಬ್ಯಾಂಕ್ ಈ ನಿಟ್ಟಿನಲ್ಲಿ ಮಹತ್ತರವಾದ ಸಾಧನೆ ಮಾಡಿದೆ ಎಂದರು.
ಸಂಸ್ಥಾಪನ ದಿನಾಚರಣೆಯನ್ನು ವಿವಿಧ ವಲಯಗಳ ಸಿಎಸ್‌ಆರ್ ಕಾರ್ಯಕರ್ತರು ಆಯೋಜಿಸಿದ್ದು, ಇದೇ ಸಂದರ್ಭದಲ್ಲಿ ಬ್ಯಾಂಕ್ ವತಿಯಿಂದ ಪಾಡ್ಗಾ ಹಳ್ಳಿಯ ಜಿಲ್ಲಾ ಪರಿಷದ್ ಶಾಲೆಗಳಿಗೆ ನೀರು ಶುದ್ಧಿಕರಣ ಯಂತ್ರಗಳನ್ನು ವಿತರಿಸಿತು. ಅಲ್ಲದೆ ಅಂಗವಿಕಲರಿಗೆ 10 ವ್ಹೀಲ್ ಚೇರ್‌ಗಳನ್ನು ನಗರದ ಜೆ. ಜೆ. ಆಸ್ಪತ್ರೆಗೆ ವಿತರಿಸಲಾಯಿತು. ಗಣ್ಯರ ಸಮ್ಮುಖದಲ್ಲಿ ಮೂವರು ಹೆಣ್ಮಕ್ಕಳು ಸೇರಿದಂತೆ ವಿದ್ಯಾರ್ಥಿಗಳನ್ನು ಶೈಕ್ಷಣಿಕವಾಗಿ ದತ್ತು ಸ್ವೀಕರಿಸಲಾಯಿತು.
ಮುಂಬಯಿಯ ಆರ್‌ಒ ಜನರಲ್ ಮ್ಯಾನೇಜರ್ ರಮೇಶ್ ಮಿಗ್ಲಾನಿ ಅವರು ಸ್ವಾಗತಿಸಿದರು. ಡಿಜಿಎಂ ಗಿರೀಶ್ ದಲ್ಕೊಟಿ ಅವರು ವಂದಿಸಿದರು. ಸಾಂಸ್ಕೃತಿಕ ಕಾರ್ಯಕ್ರಮವಾಗಿ ಬ್ಯಾಂಕಿನ ವಿವಿಧ ಶಾಖೆಗಳ ಪ್ರತಿಭಾವಂತ ಕಲಾವಿದರಿಂದ ವಿವಿಧ ವಿನೋದಾವಳಿಗಳು ಪ್ರದರ್ಶನಗೊಂಡವು. ಮುಂಬಯಿ ವಲಯದ ವಿವಿಧ ಶಾಖೆಗಳ ಅಧಿಕಾರಿಗಳು, ಉದ್ಯೋಗಿಗಳು, ಗ್ರಾಹಕರು, ಸದಸ್ಯ ಬಾಂಧವರು, ತುಳು-ಕನ್ನಡಿಗರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡು ಕಾರ್ಯಕ್ರಮದ ಯಶಸ್ಸಿಗೆ ಸಹಕರಿಸಿದರು.