ಚೆನ್ನೈ: ವಿಜಯ್ ಸೇತುಪತಿ (Vijay Sethupathi) ಅವರ 50ನೇ ಸಿನಿಮಾ ʼಮಹಾರಾಜʼ (Maharaja) ಥಿಯೇಟರ್ ಹಾಗೂ ಬಾಕ್ಸ್ ಆಫೀಸ್‌ನಲ್ಲಿ ಭರ್ಜರಿ ಸದ್ದು ಮಾಡಿದ ಬಳಿಕ ಈಗ ಓಟಿಟಿಯಲ್ಲೂ ಹೊಸ ದಾಖಲೆಯನ್ನು ಬರೆದಿದೆ.
ಇತ್ತೀಚೆಗೆ ಓಟಿಟಿಗೆ ಬಂದ ಬಳಿಕವೂ ʼಮಹಾರಾಜʼ ತನ್ನ ಸಕ್ಸಸ್ ಓಟವನ್ನು ನಿಲ್ಲಿಸಿಲ್ಲ. ಓಟಿಟಿ ವೀಕ್ಷಕರನ್ನೂ ಚಿತ್ರ ರಂಜಿಸಿದೆ. ಕಾಲಿವುಡ್‌ನ ʼಮಹಾರಾಜʼ ಈಗ ಬೇರೆ ಭಾಷೆಗೆ ರಿಮೇಕ್ ಆಗುವತ್ತ ಸಾಗುತ್ತಿದೆ.
ಖ್ಯಾತ ನಟ ಆಮೀರ್ ಖಾನ್ ಅವರ ನಿರ್ಮಾಣ ಸಂಸ್ಥೆ ʼಮಹಾರಾಜʼ ಹಿಂದಿ ರಿಮೇಕ್ ಹಕ್ಕನ್ನು ಖರೀದಿಸಲು ಮುಂದೆ ಬಂದಿದ್ದು, ಇದರಲ್ಲಿ ಆಮೀರ್ ಅವರೇ ಪ್ರಮುಖ ಪಾತ್ರವನ್ನು ಮಾಡಲಿದ್ದಾರೆ ಎಂದು ವರದಿಯಾಗಿದೆ.
ಜುಲೈ 12ರಂದು ನೆಟ್ ಫ್ಲಿಕ್ಸ್‌ನಲ್ಲಿ ರಿಲೀಸ್ ಆಗಿರುವ ʼಮಹಾರಾಜʼ ಓಟಿಟಿಯಲ್ಲಿ ಹೊಸ ದಾಖಲೆಯನ್ನು ಬರೆದಿದೆ.
ವಿಜಯ್ ಸೇತುಪತಿ ಅಭಿನಯದ ʼಮಹಾರಾಜʼ ನೆಟ್‌ಫ್ಲಿಕ್ಸ್‌ನಲ್ಲಿ ಅತಿ ಹೆಚ್ಚು ವೀಕ್ಷಿಸಿದ ಸಿನಿಮಾವಾಗಿ ಮೂಡಿಬಂದಿದೆ. 18.6 ಮಿಲಿಯನ್ ವೀಕ್ಷಣೆಯೊಂದಿಗೆ ಅಗ್ರಸ್ಥಾನದಲ್ಲಿದೆ. ಮತ್ತೊಂದೆಡೆ ʼದಿ ಕ್ರ್ಯೂʼ(The Crew) (17.9 ಮಿಲಿಯನ್) , ʼಲಾಪತಾ ಲೇಡೀಸ್ʼ (Laapataa Ladies) 17.1 ಮಿಲಿಯನ್ ವೀಕ್ಷಣೆ ಕಂಡಿದೆ.
ನಿಥಿಲನ್ ಸ್ವಾಮಿನಾಥನ್ (Nithilan Swaminathan) ನಿರ್ದೇಶನದಲ್ಲಿ ಬಂದ ಈ ಚಿತ್ರದ ಕ್ರೈಮ್ ಥ್ರಿಲ್ಲರ್ ಕಥಾಹಂದರವನ್ನು ಒಳಗೊಂಡಿದೆ. ಸೇತುಪತಿ ಅವರ ರಗಡ್ ಅವತಾರವನ್ನು ನೋಡಿ ಪ್ರೇಕ್ಷಕರು ಫಿದಾ ಆಗಿದ್ದಾರೆ.
ಮನೆ ಕಳ್ಳತನ ಬಳಿಕ ಸೇಡು ತೀರಿಸಿಕೊಳ್ಳಲು ಹೊರಡುವ ಕ್ಷೌರಿಕನೊಬ್ಬ ಹಿಂದೆ ಚಿತ್ರದ ಕಥೆ ಸಾಗುತ್ತದೆ. ಕಾಣೆಯಾದ ʼಲಕ್ಷ್ಮೀʼ ಸುತ್ತ ಸಾಗುವ ಚಿತ್ರವನ್ನು ಥ್ರಿಲ್ಲರ್ ಹಾಗೂ ಕ್ರೈಮ್ ಜಾನರ್ ನಲ್ಲಿ ಕಟ್ಟಿಕೊಡಲಾಗಿದೆ.
ʼಮಹಾರಾಜʼದಲ್ಲಿ ಸೇತುಪತಿ ಜೊತೆ ಅನುರಾಗ್ ಕಶ್ಯಪ್, ಮಮತಾ ಮೋಹನ್ ದಾಸ್, ಮುನಿಷ್ಕಾಂತ್, ಮಣಿಕಂದನ್ ಮುಂತಾದವರು ನಟಿಸಿದ್ದಾರೆ.
ಮುಂದೆ ಸೇತುಪತಿ ʼವಿಧುತಲೈ-2ʼನಲ್ಲಿ ಕಾಣಿಸಿಕೊಳ್ಳಲಿದ್ದಾರೆ.