ನಟ ವಿಜಯ ರಾಘವೇಂದ್ರ ತಂದೆ, ಮಗನಾಗಿ ದ್ವಿಪಾತ್ರದಲ್ಲಿ ಕಾಣಿಸಿಕೊಂಡಿರುವ ಚಿತ್ರ “ರುದ್ರಾಭಿಷೇಕಂ’ ಈಗ ಮೊದಲ ಹಂತದ ಚಿತ್ರೀಕರಣ ಪೂರ್ಣಗೊಳಿಸಿದೆ.
ಈ ಚಿತ್ರದಲ್ಲಿ ಅವರು ಮೊದಲ ಬಾರಿಗೆ ಒಬ್ಬ ವೀರಗಾಸೆ ಕಲಾವಿದನ ಪಾತ್ರಕ್ಕೆ ಬಣ್ಣ ಹಚ್ಚಿದ್ದಾರೆ. ನಮ್ಮ ನಾಡಿನ ಸಾಂಸ್ಕೃತಿಕ ಹಿನ್ನೆಲೆ, ಇತಿಹಾಸ, ಅದರ ವೈಭವವನ್ನು ಕಮರ್ಷಿಯಲ್ ಆಗಿ ಹೇಳಲು ನಿರ್ದೇಶಕ ವಸಂತ್ ಕುಮಾರ್ ಪ್ರಯತ್ನಿಸಿದ್ದಾರೆ. ದೇವನಹಳ್ಳಿ ಸುತ್ತಮುತ್ತ ಸುಮಾರು 20ಕ್ಕೂ ಹೆಚ್ಚು ದಿನಗಳ ಕಾಲ ಮೊದಲ ಹಂತದ ಚಿತ್ರೀಕರಣ ನಡೆಸಲಾಗಿದೆ. ಈ ಚಿತ್ರದಲ್ಲಿ ಪ್ರಿಯಾಂಕಾ ತಿಮ್ಮೇಶ್ ಕಾಣಿಸಿಕೊಂಡಿದ್ದಾರೆ.
ಫೆಬ್ರವರಿ ಎರಡನೇ ವಾರದಿಂದ 2ನೇ ಹಂತದ ಶೂಟಿಂಗ್ ಪ್ರಾರಂಭಿಸಲಾಗುವುದು. ಈ ಹಂತದಲ್ಲಿ ಮಾತಿನ ಭಾಗ ಹಾಗೂ ಎರಡು ಹಾಡುಗಳನ್ನು ದೇವನಹಳ್ಳಿ, ವಿಜಯಪುರದಲ್ಲಿ ಚಿತ್ರೀಕರಿಸಿ, ಉಳಿದೆರಡು ಹಾಡುಗಳನ್ನು ಮಲ್ಪೆ, ಮಂಗಳೂರು ಹಾಗೂ ಆಗುಂಬೆ ಸುತ್ತಮುತ್ತ ಚಿತ್ರೀಕರಿಸುವ ಯೋಜನೆಯಿದೆ ಎಂದು ನಿರ್ದೇಶಕ ವಸಂತ್ ಹೇಳಿದರು.
ನಿರ್ದೇಶಕ ವಸಂತ್ ಕುಮಾರ್ ಈ ಚಿತ್ರದಲ್ಲಿ ಒಬ್ಬ ತತ್ವಜ್ಞಾನಿಯ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಈ ಕಥೆಯ ಮೂಲ ಹಂದರ ವೀರಭದ್ರ ದೇವರು. ಆತ ಹೇಗೆ ಬಂದ, ಆತ ಬರಲು ಕಾರಣವೇನು ಎಂಬುದನ್ನು ರುದ್ರಾಭಿಷೇಕಂ ಚಿತ್ರದಲ್ಲಿ ಹೇಳಲಾಗಿದೆ.
ಜಯರಾಮಣ್ಣ, ಶಿವರಾಮ್, ಚಿದಾನಂದ್, ಹಡಪದ, ರಮೇಶ್, ಮಂಜುನಾಥ್, ಮುನಿಕೃಷ್ಣಪ್ಪ, ರವಿ, ಅಶ್ವಥ್, ಆನಂದ್ ಚಿತ್ರವನ್ನು ನಿರ್ಮಿಸುತ್ತಿದ್ದಾರೆ.