ಲಂಡನ್: ಭಾರತದ ಬ್ಯಾಂಕುಗಳಿಗೆ ಬರೋಬ್ಬರಿ 9 ಸಾವಿರ ಕೋಟಿ ರೂ. ಪಂಗನಾಮ ಹಾಕಿ ದೇಶ ಬಿಟ್ಟು ಪರಾರಿಯಾಗಿರುವ ಮದ್ಯದ ದೊರೆ ವಿಜಯ ಮಲ್ಯ ಅವರನ್ನು ಮಂಗಳವಾರ ಲಂಡನ್‌ನಲ್ಲಿ ಸ್ಕಾಟ್ಲೆಂಡ್ ಯಾರ್ಡ್ ಪೊಲೀಸರು ಬಂಧಿಸಿದ್ದಾರೆ. ಆದರೆ, ಇದಾದ ಸ್ವಲ್ಪ ಹೊತ್ತಲ್ಲೇ ಅವರಿಗೆ ವೆಸ್ಟ್‌ಮಿನ್‌ಸ್ಟರ್ ಮ್ಯಾಜಿಸ್ಟ್ರೇಟ್ ಕೋರ್ಟ್ ಜಾಮೀನು ನೀಡಿದೆ. ಹೀಗಾಗಿ, ಕೇವಲ ಮೂರೇ ಗಂಟೆಗಳ ಅವಧಿಯಲ್ಲಿ ಮಲ್ಯ ಸೆರೆ ಮತ್ತು ಬಿಡುಗಡೆ ಡ್ರಾಮಾ ಮುಕ್ತಾಯಗೊಂಡಿದೆ.
Advertisement
ವಂಚನೆ ಆರೋಪ ಹೊತ್ತಿರುವ ಮಲ್ಯ ಅವರನ್ನು ಹಸ್ತಾಂತರಿಸುವಂತೆ ಭಾರತ ಸರ್ಕಾರವು ಯುಕೆಗೆ ಈಗಾಗಲೇ ಮನವಿ ಸಲ್ಲಿಸಿದ್ದು, ಅದರ ಆಧಾರದಲ್ಲೇ ಅವರನ್ನು ಬಂಧಿಸಲಾಗಿತ್ತು. ಹಾಗಾಗಿ, ಮಲ್ಯ ಅವರ ಹಸ್ತಾಂತರವೂ ಶೀಘ್ರದಲ್ಲೇ ನಡೆಯಬಹುದು ಎಂದು ಅಂದಾಜಿಸಲಾಗಿತ್ತು. ಆದರೆ, ನ್ಯಾಯಾಲಯವು ಅವರಿಗೆ ಜಾಮೀನು ನೀಡುವ ಮೂಲಕ ಸದ್ಯಕ್ಕೆ ಹಸ್ತಾಂತರ ಸಾಧ್ಯವಿಲ್ಲ ಎಂಬ ಸಂದೇಶವನ್ನು ಪರೋಕ್ಷವಾಗಿ ರವಾನಿಸಿದಂತಾಗಿದೆ.
Related Articles
9 ಸಾವಿರ ಕೋಟಿ ರೂ. ಸಾಲದ ಸುಸ್ತಿದಾರನಾಗಿರುವ ಮಲ್ಯ ಅವರು 2016ರ ಮಾ.2ರಂದು ಯುಕೆಗೆ ಪರಾರಿಯಾಗಿದ್ದರು. ಸಾಲವನ್ನು ವಾಪಸ್ ಪಡೆಯುವ ಪ್ರಕ್ರಿಯೆ ಆರಂಭಿಸುವಂತೆ ಬ್ಯಾಂಕುಗಳಿಗೆ ಜನವರಿಯಲ್ಲಿ ಕೋರ್ಟ್ ಸೂಚಿಸಿತ್ತು.
Advertisement
ಮೊದಲ ಹೆಜ್ಜೆ ಎಂದ ಅಧಿಕಾರಿಗಳು:ಮಲ್ಯ ಅವರ ಬಂಧನವನ್ನು ಭಾರತದ ಹಿರಿಯ ಅಧಿಕಾರಿಗಳು, ಹಸ್ತಾಂತರ ಪ್ರಕ್ರಿಯೆಯ ಮೊದಲ ಹೆಜ್ಜೆ ಎಂದು ಬಣ್ಣಿಸಿದ್ದಾರೆ. ಲಂಡನ್‌ನ ನ್ಯಾಯಾಲಯದಲ್ಲಿ ವಿಚಾರಣೆ ಪೂರ್ಣಗೊಂಡ ಬಳಿಕ, ಅವರನ್ನು ಹಸ್ತಾಂತರಿಸಬೇಕೇ, ಬೇಡವೇ ಎಂಬ ನಿರ್ಧಾರ ಹೊರಬೀಳಲಿದೆ ಎಂದೂ ಅವರು ತಿಳಿಸಿದ್ದಾರೆ. ಫೆ.8ರಂದು ಭಾರತವು ಮಲ್ಯರನ್ನು ಹಸ್ತಾಂತರಿಸುವಂತೆ ಕೋರಿ ಯುಕೆಗೆ ಮನವಿ ಸಲ್ಲಿಸಿತ್ತು. ಇದಕ್ಕೆ ಕಳೆದ ತಿಂಗಳು ಪ್ರತಿಕ್ರಿಯಿಸಿದ್ದ ಯುಕೆ ಸರ್ಕಾರ, ಭಾರತದ ಮನವಿಯನ್ನು ಸ್ವೀಕರಿಸಲಾಗಿದೆ ಎಂದಿತ್ತು. ಅಲ್ಲದೆ, ಇತ್ತೀಚೆಗೆ ಲಂಡನ್‌ಗೆ ತೆರಳಿದ್ದ ವೇಳೆ ಕೇಂದ್ರ ಸಚಿವ ಅರುಣ್ ಜೇಟಿÉ ಅವರೂ ಬ್ರಿಟನ್ ಪ್ರಧಾನಿ ಥೆರೇಸಾ ಮೇ ಅವರಲ್ಲಿ ಮಲ್ಯ ಹಸ್ತಾಂತರ ಕುರಿತು ಪ್ರಸ್ತಾಪಿಸಿದ್ದರು. ಇದಕ್ಕೆ ಅಲ್ಲಿನ ಸರ್ಕಾರ ಸಕಾರಾತ್ಮಕ ಪ್ರತಿಕ್ರಿಯೆಯನ್ನು ನೀಡಿತ್ತು. ಕಣ್ಣಿಗೆ ಮಣ್ಣೆರಚಬೇಡಿ ಎಂದ ಕಾಂಗ್ರೆಸ್
ಮಲ್ಯ ಬಂಧನಕ್ಕೆ ಸಂಬಂಧಿಸಿ ಮೋದಿ ಸರ್ಕಾರವು ದೇಶದ ಜನರ ಕಣ್ಣಿಗೆ ಮಣ್ಣೆರಚುತ್ತಿದೆ ಎಂದು ಕಾಂಗ್ರೆಸ್ ಆರೋಪಿಸಿದೆ. “ವಶಕ್ಕೆ ತೆಗೆದುಕೊಂಡು, ಕಣ್ಣು ಮುಚ್ಚಿ ತೆರೆಯುವಷ್ಟರಲ್ಲಿ ಬಿಡುಗಡೆಯೂ ಆಗಿದೆ. ಇದೆಂಥಾ ಹಸ್ತಾಂತರ ಪ್ರಕ್ರಿಯೆ? ಹಾಗಾದರೆ ಮಲ್ಯರನ್ನು ವಾಪಸ್ ಕರೆತರಲು ಇನ್ನೂ 12 ವರ್ಷ, 15 ವರ್ಷ, 30 ವರ್ಷ ತಗಲುತ್ತದೋ ಅಥವಾ ಅದೂ ಸಾಧ್ಯವಿಲ್ಲವೋ? ಜನರನ್ನು ಮೂರ್ಖರನ್ನಾಗಿಸುವ ಮೊದಲು ಮೋದಿ ಮತ್ತು ಬಿಜೆಪಿ ಈ ಪ್ರಶ್ನೆಗೆ ಉತ್ತರಿಸಲಿ. 9 ಸಾವಿರ ಕೋಟಿ ರೂ. ಸಾಲವನ್ನು ವಾಪಸ್ ಪಡೆಯುವ ಕಾಲಮಿತಿಯನ್ನು ಹೇಳಲಿ,’ ಎಂದು ಕಾಂಗ್ರೆಸ್ ಆಗ್ರಹಿಸಿದೆ. ಜತೆಗೆ, ಮಲ್ಯ ಹಸ್ತಾಂತರಕ್ಕೆ ಸಂಬಂಧಿಸಿ ಮೋದಿ ಸರ್ಕಾರಕ್ಕೆ 7 ಪ್ರಶ್ನೆಗಳನ್ನೂ ಕಾಂಗ್ರೆಸ್ ಹಾಕಿದೆ.
ಇದೇ ವೇಳೆ, ಸಿಬಿಐ ಹಾಗೂ ಲಂಡನ್‌ನಲ್ಲಿರುವ ಭಾರತೀಯ ಹೈಕಮಿಷನ್ ಯುಕೆ ಕೋರ್ಟ್‌ನಲ್ಲಿ ಭಾರತದ ಪರ ವಾದ ಮಂಡಿಸಲಿದ್ದು, ಕಾನೂನು ಉಲ್ಲಂ ಸಿದರನ್ನು ಸುಮ್ಮನೆ ಬಿಡುವುದಿಲ್ಲ ಎಂಬುದನ್ನು ತೋರಿಸಿಕೊಡಲಿದೆ ಎಂದು ಸರ್ಕಾರದ ಮೂಲಗಳು ಹೇಳಿವೆ. ಇನ್ನೊಂದೆಡೆ, ಮಲ್ಯ ಅವರ ಬಂಧನವು ಜಾರಿ ನಿರ್ದೇಶನ ಸಂಸ್ಥೆಗಳ ಪ್ರಯತ್ನಕ್ಕೆ ಸಿಕ್ಕ ಜಯ. ಇದು ಅವರನ್ನು ವಾಪಸ್ ಕರೆತರುವ ಕಾರ್ಯವನ್ನು ಫಲಪ್ರದಗೊಳಿಸಲಿದೆ ಎಂದು ಸಿಬಿಐ ಮಾಜಿ ನಿರ್ದೇಶಕ ಅನಿಲ್ ಸಿನ್ಹಾ ಅಭಿಪ್ರಾಯಪಟ್ಟಿದ್ದಾರೆ. ಹೇಗೆ ನಡೆಯುತ್ತೆ ಹಸ್ತಾಂತರ ಪ್ರಕ್ರಿಯೆ?
ಗಡಿಪಾರು ಪ್ರಕ್ರಿಯೆಗೆ ಹೋಲಿಸಿದರೆ ಹಸ್ತಾಂತರ ಪ್ರಕ್ರಿಯೆ ತ್ರಾಸದಾಯಕ. ಯುಕೆಯಲ್ಲಿ ಗಡಿಪಾರು ಪ್ರಕ್ರಿಯೆಯು ಕೇವಲ ರಾಜಕೀಯ ನಾಯಕರಿಗೆ ಸಂಬಂಧಿಸಿದ್ದು. ಆದರೆ, ಹಸ್ತಾಂತರ ಪ್ರಕ್ರಿಯೆ ಕೈಗೊಳ್ಳಬೇಕಾದರೆ, ಅದಕ್ಕೆ ರಾಜಕೀಯ ಹಾಗೂ ನ್ಯಾಯಾಂಗ ಘಟಕಗಳ ಒಪ್ಪಿಗೆ ಬೇಕೇ ಬೇಕು. ಹಾಗಾದರೆ, ಹಸ್ತಾಂತರ ನಡೆಯುವ ಬಗೆ ಹೇಗೆ ಗೊತ್ತಾ?
– ಮೊದಲು ಹಸ್ತಾಂತರ ಕೋರಿಕೆಯನ್ನು ಗೃಹ ಸಚಿವರಿಗೆ ಸಲ್ಲಿಸಬೇಕು
– ಕೋರಿಕೆಯನ್ನು ಸ್ವೀಕರಿಸಬೇಕೇ, ಬೇಡವೇ ಎಂಬುದನ್ನು ಸಚಿವರು ನಿರ್ಧರಿಸುತ್ತಾರೆ
– ಆರೋಪಿಯ ಬಂಧನಕ್ಕೆ ವಾರಂಟ್ ಹೊರಡಿಸಬೇಕೇ, ಬೇಡವೇ ಎಂಬುದನ್ನು ಜಡ್ಜ್ ನಿರ್ಧರಿಸುತ್ತಾರೆ
– ನಂತರ ಆರೋಪಿಯನ್ನು ಬಂಧಿಸಿ, ನ್ಯಾಯಾಲಯಕ್ಕೆ ಹಾಜರುಪಡಿಸಲಾಗುತ್ತದೆ
– ಪ್ರಾಥಮಿಕ ವಿಚಾರಣೆ ಆರಂಭವಾಗುತ್ತದೆ
– ಬಳಿಕ ಹಸ್ತಾಂತರಕ್ಕೆ ಸಂಬಂಧಿಸಿದ ವಿಚಾರಣೆ ಶುರುವಾಗುತ್ತದೆ
– ಆರೋಪಿಯ ಹಸ್ತಾಂತರಕ್ಕೆ ಆದೇಶಿಸಬೇಕೇ, ಬೇಡವೇ ಎಂಬುದನ್ನು ಸಚಿವರು ನಿರ್ಧರಿಸುತ್ತಾರೆ ಗಡಿಪಾರು ಅಷ್ಟು ಸುಲಭವಲ್ಲ, ಏಕೆ?
1. ಗಡಿಪಾರು ವಿಚಾರದಲ್ಲಿ ಭಾರತವನ್ನು ಯುಕೆ ಸರ್ಕಾರ “ವಿಭಾಗ-2’ರಲ್ಲಿ ಪರಿಗಣಿಸಿದೆ. “ವಿಭಾಗ-1’ರಲ್ಲಿ ಅಮೆರಿಕ ಮತ್ತು ಐರೋಪ್ಯ ರಾಷ್ಟ್ರಗಳಿವೆ. ಈ ರಾಷ್ಟ್ರಗಳಿಗೆ ನೀಡುವಷ್ಟು ಆದ್ಯತೆಯನ್ನು 2ನೇ ವಿಭಾಗದಲ್ಲಿನ ರಾಷ್ಟ್ರಗಳಿಗೆ ನೀಡಲಾಗುವುದಿಲ್ಲ. ಅಂದರೆ, ಭಾರತದಂಥ ದೇಶಗಳ ಗಡಿಪಾರು ಪ್ರಕ್ರಿಯೆ ಅತ್ಯಂತ ತ್ರಾಸದಾಯಕ ಮತ್ತು ದೀರ್ಘಕಾಲ ಹಿಡಿಯುತ್ತದೆ. 2. ಒಂದು ವೇಳೆ ಯುಕೆ ಸರ್ಕಾರ ಮಲ್ಯರನ್ನು ಗಡಿಪಾರು ಮಾಡಿದ್ದೇ ಆದಲ್ಲಿ, ಅಲ್ಲಿ ಇತ್ಯರ್ಥವಾಗದೇ ಉಳಿದಿರುವ ಇತರೆ ಗಡಿಪಾರು ಕೋರಿಕೆಗಳನ್ನೂ ಇತ್ಯರ್ಥ ಮಾಡಬೇಕಾದ ಅನಿವಾರ್ಯತೆ ಸೃಷ್ಟಿಯಾಗುತ್ತದೆ. 3. ನಾನು ರಾಜಕೀಯ ಷಡ್ಯಂತ್ರದ ಬಲಿಪಶು ಎಂದು ಹೇಳಿ ಮಲ್ಯ ಅಲ್ಲಿನ ನ್ಯಾಯಾಲಯದಿಂದ ಗಡಿಪಾರನ್ನು ತಡೆಹಿಡಿಯಬಹುದು. ನಂತರ, ಅಲ್ಲಿ ಹಣಕಾಸು ಹೂಡಿಕೆ ಮಾಡಿ, ಬ್ರಿಟಿಷ್ ಪಾಸ್‌ಪೋರ್ಟ್‌ಗೆ ಅರ್ಜಿ ಹಾಕಬಹುದು.
—
ಟ್ವಿಟರ್‌ನಲ್ಲಿ ಮುಳುಗಿದ್ದ ಮಲ್ಯ
ಬಂಧನವಾಗುವ ಕೆಲವೇ ಗಂಟೆಗಳ ಮುನ್ನ ಮಲ್ಯ ಅವರು ಸಾಮಾಜಿಕ ಜಾಲತಾಣ ಟ್ವಿಟರ್‌ನಲ್ಲಿ ಮುಳುಗಿದ್ದರು. ಸಹಾರಾ ಫೋರ್ಸ್ ಇಂಡಿಯಾ ತಂಡದ ಮುಖ್ಯಸ್ಥರಾಗಿರುವ ಮಲ್ಯ ಅವರು ತಮ್ಮ ಫಾರ್ಮುಲಾ ಒನ್ ತಂಡದ ಕುರಿತು ಸರಣಿ ಟ್ವೀಟ್ ಮಾಡುತ್ತಿದ್ದರು. ಫೋರ್ಸ್ ಇಂಡಿಯಾದ ಚಾಲಕ ಅಲೊ#àನ್ಸೋ ಸೆಲಿಸ್ ಅವರು ಮರಳಿರುವುದರಿಂದ ಮಲ್ಯ ಉಲ್ಲಸಿತರಾಗಿದ್ದರು. ಬಂಧನದ ನಂತರ ಜಾಮೀನಿನಲ್ಲಿ ಬಿಡುಗಡೆಯಾಗಿ ಮನೆಗೆ ಮರಳಿದ ಅವರು, ಭಾರತದ ಮಾಧ್ಯಮಗಳ ವಿರುದ್ಧದ ಆಕ್ರೋಶವನ್ನೂ ಟ್ವಿಟರ್ ಮೂಲಕ ವ್ಯಕ್ತಪಡಿಸಿದರು. “ಸಾಮಾನ್ಯದಂತೆ ಇಂದೂ ಭಾರತೀಯ ಮಾಧ್ಯಮಗಳ ವೈಭವೀಕರಣ ಮುಂದುವರಿಯಿತು. ಕೋರ್ಟಿನಲ್ಲಿ ಗಡಿಪಾರು ವಿಚಾರಣೆಯು ನಿರೀಕ್ಷೆಯಂತೆಯೇ ಆರಂಭವಾಗಿದೆ ಅಷ್ಟೆ’ ಎಂದು ಟ್ವೀಟಿಸಿದರು.
—-
2 ತಿಂಗಳ ಹಿಂದೆಯೇ ಆರಂಭವಾಗಿತ್ತು ಪ್ರಕ್ರಿಯೆ
ಸುಮಾರು 2 ತಿಂಗಳ ಹಿಂದೆ ಬ್ರಿಟನ್ ಅಧಿಕಾರಿಗಳು ಮಲ್ಯರ ಹಸ್ತಾಂತರ ಪ್ರಕ್ರಿಯೆ ಆರಂಭಿಸಿದ್ದರು. ಫೆ.8ರಂದು ಭಾರತವು ಹಸ್ತಾಂತರ ಕೋರಿಕೆ ಸಲ್ಲಿಸಿತ್ತು. ಫೆ.21ರಂದು ನಿಮ್ಮ ಕೋರಿಕೆಯನ್ನು ಸ್ವೀಕರಿಸಲಾಗಿದೆ ಹಾಗೂ ಅದನ್ನು ವೆಸ್ಟ್‌ಮಿನಿಸ್ಟರ್ ಮ್ಯಾಜಿಸ್ಟ್ರೇಟ್ ಕೋರ್ಟ್‌ಗೆ ಸಲ್ಲಿಸಲಾಗಿದೆ. ಬಂಧನ ವಾರಂಟ್ ಹೊರಡಿಸುವ ಬಗ್ಗೆ ನ್ಯಾಯಾಲಯವೇ ನಿರ್ಧಾರ ಕೈಗೊಳ್ಳಲಿದೆ ಎಂದು ಬ್ರಿಟನ್ ಸರ್ಕಾರ ಮಾಹಿತಿ ನೀಡಿತ್ತು.