Advertisement

Vijay Hazare; ವಿದರ್ಭ ವಿರುದ್ಧ ವಿಜಯ: ಸೆಮಿಫೈನಲ್‌ ಪ್ರವೇಶಿಸಿದ ಕರ್ನಾಟಕ

10:56 PM Dec 11, 2023 | Team Udayavani |

ರಾಜ್‌ಕೋಟ್‌: ವಿದ ರ್ಭವನ್ನು ಸುಲಭದಲ್ಲಿ ಮಣಿಸಿದ ಕರ್ನಾಟಕ “ವಿಜಯ್‌ ಹಜಾರೆ ಟ್ರೋಫಿ’ ಏಕದಿನ ಕ್ರಿಕೆಟ್‌ ಪಂದ್ಯಾವಳಿಯ ಸೆಮಿಫೈನಲ್‌ ಪ್ರವೇಶಿಸಿದೆ. ಸೋಮವಾರ ರಾಜ್‌ಕೋಟ್‌ನಲ್ಲಿ ಏಕಪಕ್ಷೀಯವಾಗಿ ನಡೆದ ಕ್ವಾರ್ಟರ್‌ ಫೈನಲ್‌ ಪಂದ್ಯದಲ್ಲಿ ಕರ್ನಾಟಕ 7 ವಿಕೆಟ್‌ಗಳ ಜಯ ಸಾಧಿಸಿತು. ವಿದರ್ಭ 44.5 ಓವರ್‌ಗಳಲ್ಲಿ 173ಕ್ಕೆ ಕುಸಿದರೆ, ಕರ್ನಾಟಕ 40.3 ಓವರ್‌ಗಳಲ್ಲಿ 3 ವಿಕೆಟಿಗೆ 177 ರನ್‌ ಬಾರಿಸಿ ಗೆದ್ದು ಬಂದಿತು. ಗುರುವಾರದ ಸೆಮಿ ಫೈನಲ್‌ನಲ್ಲಿ ಕರ್ನಾಟಕ- ರಾಜಸ್ಥಾನ ಎದುರಾಗಲಿವೆ.

Advertisement

ಘಾತಕ ಬೌಲಿಂಗ್‌ ದಾಳಿ
ವಿದರ್ಭವನ್ನು ಸಾಮಾನ್ಯ ಮೊತ್ತಕ್ಕೆ ನಿಯಂತ್ರಿಸುವಲ್ಲಿ ವಿಜಯ್‌ಕುಮಾರ್‌ ವೈಶಾಖ್‌ (44ಕ್ಕೆ 4), ಮನೋಜ್‌ ಭಾಂಡಗೆ (27ಕ್ಕೆ 2) ಮತ್ತು ಜಗದೀಶ್‌ ಸುಚಿತ್‌ (30ಕ್ಕೆ 2) ಪ್ರಮುಖ ಪಾತ್ರ ವಹಿಸಿದರು. 70 ರನ್‌ ಆಗುವಷ್ಟರಲ್ಲಿ ಐವರನ್ನು ಕಳೆದುಕೊಂಡ ವಿದರ್ಭಕ್ಕೆ ಕೆಳ ಸರದಿಯ ಆಟಗಾರರಾದ ಶುಭಂ ದುಬೆ (41), ಯಶ್‌ ಕದಂ (38), ದರ್ಶನ್‌ ನಲ್ಕಂಡೆ (20) ಆಧಾರ ವಾದರು. ಆರಂಭಕಾರ ಅಕ್ಷಯ್‌ ವಾಡ್ಕರ್‌ ಕುಸಿತಕ್ಕೆ ತಡೆಯೊಡ್ಡಿ 32 ರನ್‌ ಗಳಿಸಿದರು.

ಚೇಸಿಂಗ್‌ ವೇಳೆ ಕರ್ನಾಟಕ ಯಾವುದೇ ಒತ್ತಡಕ್ಕೆ ಸಿಲುಕಲಿಲ್ಲ. ಆರಂಭಕಾರ ಆರ್‌. ಸಮರ್ಥ್ ಕೂಟದಲ್ಲಿ ಮೊದಲ ಸಲ ಮಿಂಚಿ ಸರ್ವಾಧಿಕ 71 ರನ್‌ ಹೊಡೆದರು. 113 ಎಸೆತಗಳ ಈ ಅಜೇಯ ಇನ್ನಿಂಗ್ಸ್‌ನಲ್ಲಿ 7 ಬೌಂಡರಿ ಸೇರಿತ್ತು. ನಾಯಕ ಮಾಯಾಂಕ್‌ ಅಗರ್ವಾಲ್‌ 51 ರನ್‌ ಕೊಡುಗೆ ಸಲ್ಲಿಸಿದರು (64 ಎಸೆತ, 6 ಬೌಂಡರಿ, 1 ಸಿಕ್ಸರ್‌). ಈ ಜೋಡಿಯಿಂದ 20.1 ಓವರ್‌ಗಳಲ್ಲಿ 82 ರನ್‌ ಒಟ್ಟುಗೂಡಿತು. ನಿಕಿನ್‌ ಜೋಸ್‌ 31, ಕೀಪರ್‌ ಕೃಷ್ಣನ್‌ ಶ್ರೀಜಿತ್‌ 15 ರನ್‌ ಮಾಡಿದರು.

ಸಂಕ್ಷಿಪ್ತ ಸ್ಕೋರ್‌: ವಿದರ್ಭ-44.5 ಓವರ್‌ಗಳಲ್ಲಿ 173 (ಶುಭಂ ದುಬೆ 41, ಯಶ್‌ ಕದಂ 38, ಅಕ್ಷಯ್‌ ವಾಡ್ಕರ್‌ 32, ದರ್ಶನ್‌ ನಲ್ಕಂಡೆ 20, ವೈಶಾಖ್‌ 44ಕ್ಕೆ 4, ಮನೋಜ್‌ ಭಾಂಡಗೆ 27ಕ್ಕೆ 2, ಜಗದೀಶ್‌ ಸುಚಿತ್‌ 30ಕ್ಕೆ 2). ಕರ್ನಾಟಕ-40.3 ಓವರ್‌ಗಳಲ್ಲಿ 3 ವಿಕೆಟಿಗೆ 177 (ಆರ್‌. ಸಮರ್ಥ್ ಔಟಾಗದೆ 72, ಅಗರ್ವಾಲ್‌ 51, ನಿಕಿನ್‌ ಜೋಸ್‌ 31, ಹರ್ಷ್‌ ದುಬೆ 32ಕ್ಕೆ 2).

ರಾಜಸ್ಥಾನ ಭರ್ಜರಿ ಜಯ
ಕರ್ನಾಟಕದ ಎದುರಾಳಿಯಾಗಿ ಕಾಣಿಸಿಕೊಂಡಿರುವ ರಾಜಸ್ಥಾನ 200 ರನ್ನುಗಳ ಭರ್ಜರಿ ಅಂತರದಿಂದ ಕೇರಳವನ್ನು ಕೆಡವಿತು. ಎಡಗೈ ಬ್ಯಾಟರ್‌ ಮಹಿಪಾಲ್‌ ಲೊನ್ರೋರ್‌ ಅವರ ಆಕರ್ಷಕ ಶತಕದ ನೆರವಿನಿಂದ (122) ರಾಜಸ್ಥಾನ 8 ವಿಕೆಟಿಗೆ 267 ರನ್‌ ಪೇರಿಸಿದರೆ, ಕೇರಳ 21 ಓವರ್‌ಗಳಲ್ಲಿ 9 ವಿಕೆಟಿಗೆ 67 ರನ್‌ ಗಳಿಸಿ ಶರಣಾಯಿತು. ವಿಷ್ಣು ವಿನೋದ್‌ ಗಾಯಾಳಾದ ಕಾರಣ ನಿವೃತ್ತರಾದರು.

Advertisement

ಶಾಬಾಜ್‌, ಅಂಕಿತ್‌ ಶತಕ
ಮೊದಲ ಕ್ವಾರ್ಟರ್‌ ಫೈನಲ್‌ನಲ್ಲಿ ಹರ್ಯಾಣ 4 ವಿಕೆಟ್‌ಗಳಿಂದ ಬಂಗಾಲವನ್ನು ಪರಾಭವಗೊಳಿಸಿತು. ಬಂಗಾಲ 225 ರನ್‌ ಗಳಿಸಿದರೆ, ಹರ್ಯಾಣ 45.1 ಓವರ್‌ಗಳಲ್ಲಿ 6 ವಿಕೆಟ್‌ ಕಳೆದುಕೊಂಡು 226 ರನ್‌ ಬಾರಿಸಿತು. ಎರಡೂ ತಂಡಗಳಲ್ಲಿ ಶತಕ ದಾಖಲಾದದ್ದು ಈ ಪಂದ್ಯದ ವಿಶೇಷ. ಬಂಗಾಲ ಪರ ಶಾಬಾಜ್‌ ಅಹ್ಮದ್‌ 100 ರನ್‌ ಮತ್ತು ಹರ್ಯಾಣದ ಚೇಸಿಂಗ್‌ ವೇಳೆ ಆರಂಭಕಾರ ಅಂಕಿತ್‌ ಕುಮಾರ್‌ 102 ರನ್‌ ಬಾರಿಸಿದರು.

ಮುಂಬಯಿ ಪರಾಭವ
4ನೇ ಕ್ವಾರ್ಟರ್‌ ಫೈನಲ್‌ ಮುಖಾಮುಖಿಯಲ್ಲಿ ಮುಂಬಯಿ 7 ವಿಕೆಟ್‌ಗಳಿಂದ ತಮಿಳುನಾಡಿಗೆ ಶರಣಾಯಿತು. ಮುಂಬಯಿ 48.3 ಓವರ್‌ಗಳಲ್ಲಿ ಕೇವಲ 227 ರನ್‌ ಮಾಡಿದರೆ, ತಮಿಳುನಾಡು 43.2 ಓವರ್‌ಗಳಲ್ಲಿ 3 ವಿಕೆಟಿಗೆ 229 ರನ್‌ ಬಾರಿಸಿ ಗೆದ್ದು ಬಂದಿತು.

Advertisement

Udayavani is now on Telegram. Click here to join our channel and stay updated with the latest news.

Next