ಅಹಮದಾಬಾದ್: ವಿಜಯ್ ಹಜಾರೆ ಟ್ರೋಫಿ ಕೂಟದಲ್ಲಿ ತನ್ನ ಉತ್ತಮ ಪ್ರದರ್ಶನ ಮುಂದುವರಿಸಿದ ಕರ್ನಾಟಕ ತಂಡವು ಶುಕ್ರವಾರ (ಜ.03) ಸೌರಾಷ್ಟ್ರ ವಿರುದ್ದ 60 ರನ್ ಅಂತರದ ಗೆಲುವು ಸಾಧಿಸಿದೆ. ಸೌರಾಷ್ಟ್ರದೆಡೆಗೆ ಸಾಗುತ್ತಿದ್ದ ಪಂದ್ಯವನ್ನು ವಿ ಕೌಶಿಕ್ ಮತ್ತು ಶ್ರೇಯಸ್ ಗೋಪಾಲ್ ತನ್ನ ಬೌಲಿಂಗ್ ಚಾಕಚಕತ್ಯೆಯಿಂದ ತಮ್ಮೆಡೆಗೆ ತಿರುಗಿಸಿದರು.
ಎಡಿಎಸ್‌ಎ ರೈಲ್ವೇ ಕ್ರಿಕೆಟ್ ಮೈದಾನದಲ್ಲಿ ನಡೆದ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ಮಾಡಿದ ಕರ್ನಾಟಕ ತಂಡವು ಏಳು ವಿಕೆಟ್ ನಷ್ಟಕ್ಕೆ 349 ರನ್ ಮಾಡಿದರೆ, ಸೌರಾಷ್ಟ್ರ ತಂಡವು 47.5 ಓವರ್ ಗಳಲ್ಲಿ 289 ರನ್ ಗೆ ಆಲೌಟಾಯಿತು.
ಕರ್ನಾಟಕ ತಂಡಕ್ಕೆ ನಾಯಕ ಮಯಾಂಕ್ ಅಗರ್ವಾಲ್, ನಿಕಿನ್ ಜೋಸ್ ಉತ್ತಮ ಆರಂಭ ಒದಗಿಸಿದರು. ನಿಕಿನ್ 34 ರನ್ ಮಾಡಿದರೆ, ಅಗರ್ವಾಲ್ 69 ರನ್ ಗಳಿಸಿದರು. ಅನೀಶ್ ಕೆವಿ 93 ರನ್ ಮಾಡಿದರು. ಅನೀಶ್ ಮತ್ತು ಅಗರ್ವಾಲ್ ಎರಡನೇ ವಿಕೆಟ್ ಗೆ 137 ರನ್ ಜೊತೆಯಾಟವಾಡಿದರು. ಸ್ಮರಣ್ ಆರ್ 40 ರನ್, ಅಭಿನವ್ ಮನೋಹರ್ ಅಜೇಯ 44 ರನ್ ಗಳಿಸಿದರು.
ಗುರಿ ಬೆನ್ನತ್ತಿದ್ದ ಸೌರಾಷ್ಟ್ರ ತಂಡಕ್ಕೆ ಹಾರ್ದಿಕ್ ದೇಸಾಯಿ ಉತ್ತಮ ಆರಂಭ ನೀಡಿದರು. ಶತಕ ಬಾರಿಸಿದ ದೇಸಾಯಿ 114 ರನ್ ಮಾಡಿದರು. ತರಂಗ್ ಗೊಹೆಲ್ 33 ರನ್, ಹೇ ಗೊಹೆಲ್ ಮತ್ತು ಅರ್ಪಿತ್ ವಸವಾಡ ತಲಾ 40 ರನ್ ಗಳಿಸಿದರು. 240 ರನ್ ವರೆಗೆ ಸೌರಾಷ್ಟ್ರ ಕೇವಲ ಎರಡು ವಿಕೆಟ್ ಕಳೆದುಕೊಂಡು ಸುಸ್ಥಿತಿಯಲ್ಲಿತ್ತು. ಬಳಿಕ ಸತತ ವಿಕೆಟ್ ಕಳೆದುಕೊಂಡ ಉನಾದ್ಕತ್ ನಾಯಕತ್ವದ ತಂಡ 289 ರನ್ ಗೆ ಆಲೌಟಾಯಿತು.
ಕರ್ನಾಟಕ ಪರ ವಾಸುಕಿ ಕೌಶಿಕ್ ಐದು ವಿಕೆಟ್ ಕಿತ್ತರೆ, ಶ್ರೇಯಸ್ ಗೋಪಾಲ್ ನಾಲ್ಕು ವಿಕೆಟ್ ಪಡೆದರು. ಒಂದು ವಿಕೆಟ್ ವಿದ್ಯಾಧರ್ ಪಾಟೀಲ್ ಪಾಲಾಯಿತು. ವಾಸುಕಿ ಕೌಶಿಕ್ ಪಂದ್ಯಶ್ರೇಷ್ಠ ಪ್ರಶಸ್ತಿ ಪಡೆದರು.