Advertisement

ವಿಜಯ್‌ ಹಜಾರೆ ಫೈನಲ್‌ : ಯಾರಿಗೆ ವಿಜಯ ಕಿರೀಟ?

06:30 AM Feb 27, 2018 | Team Udayavani |

ನವದೆಹಲಿ: ಕಳೆದೆರಡು ವರ್ಷಗಳಿಂದ ಎಲ್ಲ ಸಾಮರ್ಥ್ಯವಿದ್ದೂ ಪ್ರಮುಖ ಕೂಟಗಳಲ್ಲಿ ಕರ್ನಾಟಕ ಸೋಲುತ್ತ ಬಂದಿದ್ದರೂ ಆ ನೋವು ಮರೆಯಲು ಇದೀಗ ಸೂಕ್ತ ಅವಕಾಶ ಲಭಿಸಿದೆ. ಮಂಗಳವಾರ ಸೌರಾಷ್ಟ್ರ ತಂಡದೆದುರು ವಿಜಯ್‌ ಹಜಾರೆ ಫೈನಲ್‌ನಲ್ಲಿ ಆಡಲಿರುವ ಕರ್ನಾಟಕಕ್ಕೆ ಪ್ರಶಸ್ತಿ ಬರ ನೀಗಿಕೊಂಡು ದೇಶೀಯ ಕ್ರಿಕೆಟ್‌ನಲ್ಲಿ ಮತ್ತೆ ಅಧಿಪತ್ಯ ಸ್ಥಾಪಿಸುವ ಅಮೋಘ ಅವಕಾಶ ಸಿಕ್ಕಿದೆ.

Advertisement

ಪ್ರಸಕ್ತ ವಿಜಯ್‌ ಹಜಾರೆ ಏಕದಿನ ಕೂಟ ಆರಂಭವಾದಾಗಿನಿಂದ ಕರ್ನಾಟಕ ತಂಡ ಸ್ಥಿರ ಪ್ರದರ್ಶನ ಕಾಯ್ದುಕೊಂಡಿದೆ. ಒಮ್ಮೆ ಕರ್ನಾಟಕ ಗೆದ್ದರೆ, 3ನೇ ಬಾರಿಗೆ ಪ್ರಶಸ್ತಿಯಾಗಲಿದೆ. ಸೌರಾಷ್ಟ್ರ ಗೆದ್ದರೆ 2ನೇ ಬಾರಿಗೆ ಪ್ರಶಸ್ತಿಯನ್ನು ತನ್ನದಾಗಿಸಿಕೊಳ್ಳಲಿದೆ.

ನವದೆಹಲಿಯ ಫಿರೋಜ್‌ ಶಾ ಕೋಟ್ಲಾ ಮೈದಾನದಲ್ಲಿ ನಡೆಯಲಿರುವ ಪಂದ್ಯದಲ್ಲಿ ಉಭಯ ತಂಡಗಳಿಂದ ಜಿದ್ದಾಜಿದ್ದಿನ ಹಣಾಹಣಿ ನಿರೀಕ್ಷಿಸಬಹುದು. ಲೀಗ್‌ ಹಂತದಲ್ಲಿ “ಎ’ ಗುಂಪಿನಲ್ಲಿದ್ದ ಕರ್ನಾಟಕ ತಂಡ 6 ಪಂದ್ಯಗಳಲ್ಲಿ 4 ಜಯ, 1 ಸೋಲು, 1 ರದ್ದಿನಿಂದ ಒಟ್ಟು 18 ಅಂಕ ಸಂಪಾದಿಸಿ ಕ್ವಾರ್ಟರ್‌ಗೆ ಪ್ರವೇಶಿಸಿದೆ. ಕ್ವಾರ್ಟರ್‌ನಲ್ಲಿ ಹೈದರಾಬಾದ್‌, ಸೆಮೀಸ್‌ನಲ್ಲಿ ಮಹಾರಾಷ್ಟ್ರವನ್ನು ಸೋಲಿಸಿದೆ. ಅದೇ ರೀತಿ ಸೌರಾಷ್ಟ್ರ ತಂಡ ಲೀಗ್‌ ಹಂತದಲ್ಲಿ “ಡಿ’ ಗುಂಪಿನಲ್ಲಿ ಸ್ಥಾನ ಪಡೆದು 6 ಪಂದ್ಯಗಳಲ್ಲಿ 4 ಜಯ, 2 ಸೋಲಿನಿಂದ 16 ಅಂಕ ಸಂಪಾದಿಸಿ ಕ್ವಾರ್ಟರ್‌ಗೆ ಪ್ರವೇಶಿಸಿದೆ. ನಂತರ ಕ್ವಾರ್ಟರ್‌ನಲ್ಲಿ ಬರೋಡ ವಿರುದ್ಧ, ಸೆಮೀಸ್‌ನಲ್ಲಿ ಆಂಧ್ರ ಪ್ರದೇಶ ವಿರುದ್ಧ ಗೆಲುವು ಸಾಧಿಸಿ ಫೈನಲ್‌ ಪ್ರವೇಶಿಸಿದೆ.

ರಾಜ್ಯಕ್ಕೆ ಮಾಯಾಂಕ್‌, ಕರುಣ್‌ ಬಲ: ರಣಜಿ ಟ್ರೋಫಿಯಲ್ಲಿ ಗರಿಷ್ಠ ರನ್‌ ಬಾರಿಸಿದ ಮಾಯಾಂಕ್‌ ಅಗರ್ವಾಲ್‌ ವಿಜಯ್‌ ಹಜಾರೆಯಲ್ಲಿಯೂ ಗರಿಷ್ಠ ರನ್‌ ಸರದಾರರಾಗಲಿದ್ದಾರೆ. ರಾಜ್ಯ ತಂಡಕ್ಕೆ ದೊಡ್ಡ ಶಕ್ತಿಯೇ ಮಾಯಾಂಕ್‌ ಎಂದರೆ ತಪ್ಪಾಗಲಾರದು. ಕೂಟದಲ್ಲಿ ಈಗಾಗಲೇ 7 ಪಂದ್ಯಗಳಿಂದ 633 ರನ್‌ ದಾಖಲಿಸಿದ್ದಾರೆ. ಅದರಲ್ಲಿ 3 ಶತಕ, 3 ಅರ್ಧಶತಕಗಳು ಸೇರಿವೆ. ಮಾಯಾಂಕ್‌ ಕ್ರೀಸ್‌ನಲ್ಲಿ ನಿಂತರೆ ಎದುರಾಳಿ ಬೌಲರ್‌ಗಳ ಬೆವರಿಳಿಯುವುದು ಖಚಿತ. ಉಳಿದಂತೆ ನಾಯಕ ಕರುಣ್‌ ನಾಯರ್‌ (279 ರನ್‌), ಆರ್‌.ಸಮರ್ಥ್ (299 ರನ್‌), ಪವನ್‌ ದೇಶಪಾಂಡೆ (261 ರನ್‌) ಅನಿವಾರ್ಯ ಸಮಯದಲ್ಲಿ ತಂಡಕ್ಕೆ ನೆರವಾಗುತ್ತಿದ್ದಾರೆ. ಆದರೆ ಬ್ಯಾಟಿಂಗ್‌ನಲ್ಲಿ ವೈಫ‌ಲ್ಯ ಕಂಡುಬರುತ್ತಿರುವುದು ಕೆಳ ಕ್ರಮಾಂಕದಲ್ಲಿ. ಇಲ್ಲಿ ತೀರಾ ಕಳಪೆ ಪ್ರದರ್ಶನ ಬರುತ್ತಿರುವುದು ತಂಡಕ್ಕೆ ಆತಂಕವಾಗಿದೆ.

ಬೌಲಿಂಗ್‌ನಲ್ಲಿ ರಾಜ್ಯ ತಂಡ ಬಲಿಷ್ಠವಾಗಿದೆ. ಈಗಾಗಲೇ ಕೂಟದಲ್ಲಿ ಪ್ರಸಿದ್ಧ್ ಕೃಷ್ಣ (14 ವಿಕೆಟ್‌), ಶ್ರೇಯಸ್‌ ಗೋಪಾಲ್‌ (13 ವಿಕೆಟ್‌) ಚುರುಕಿನ ದಾಳಿ ನಡೆಸುತ್ತಿದ್ದಾರೆ. ಕೆ.ಗೌತಮ್‌, ಟಿ.ಪ್ರದೀಪ್‌ ಹೆಚ್ಚಿನ ವಿಕೆಟ್‌ ಪಡೆಯದಿದ್ದರೂ ಎದುರಾಳಿಗೆ ಹೆಚ್ಚು ರನ್‌ ಬಿಟ್ಟುಕೊಡುತ್ತಿಲ್ಲ. ಹೀಗಾಗಿ ಕರ್ನಾಟಕವೇ ಗೆಲ್ಲುವ ನೆಚ್ಚಿನ ತಂಡವಾಗಿದೆ.

Advertisement

ಸೌರಾಷ್ಟ್ರಕ್ಕೆ ಪೂಜಾರ, ಜಡೇಜ ಶಕ್ತಿ: ಕರ್ನಾಟಕಕ್ಕೆ ಹೋಲಿಸಿದರೆ ಸೌರಾಷ್ಟ್ರ ತಂಡ ಅಷ್ಟೇನು ಪ್ರಭಾವಶಾಲಿಯಲ್ಲ. ಆದರೆ ಅನುಭವಿ ಆಟಗಾರರಾದ ಚೇತೇಶ್ವರ ಪೂಜಾರ ಮತ್ತು ಆಲ್‌ರೌಂಡರ್‌ ರವೀಂದ್ರ ಜಡೇಜ ತಂಡದಲ್ಲಿರುವುದು ಆ ತಂಡಕ್ಕೆ ಆನೆ ಬಲ ಇದ್ದಂತಾಗಿದೆ. ಎಂತಹ ಸಂದರ್ಭದಲ್ಲಿಯಾದರೂ ಪಂದ್ಯವನ್ನು ತಿರುಗಿಸುವ ಸಾಮರ್ಥ್ಯ ರವೀಂದ್ರ ಜಡೇಜಗಿದೆ. ಸೆಮಿಫೈನಲ್‌ನಲ್ಲಿ ಆಂಧ್ರ ವಿರುದ್ಧ ಗೆಲುವಿಗೆ ಜಡೇಜ ಆಟವೇ ಕಾರಣ.

ಉಳಿದಂತೆ ಬ್ಯಾಟಿಂಗ್‌ನಲ್ಲಿ ಸಮರ್ಥ್ ವ್ಯಾಸ್‌ (296 ರನ್‌) ಒಂದು ಶತಕ, ಒಂದು ಅರ್ಧಶತಕ ಬಾರಿಸಿ ತಂಡದ ಪರ ಗರಿಷ್ಠ ರನ್‌ ದಾಖಲಿಸಿದ್ದಾರೆ. ತಂಡದ ನಾಯಕನಾಗಿರುವ ಪೂಜಾರ 8 ಪಂದ್ಯಗಳಿಂದ 289 ರನ್‌ ಬಾರಿಸಿದ್ದಾರೆ. ಆದರೆ ಉಳಿದ ಬ್ಯಾಟ್ಸ್‌ಮನ್‌ಗಳಿಂದ ಹೇಳಿಕೊಳ್ಳುವಂತ ಪ್ರದರ್ಶನ ಹೊರಬರುತ್ತಿಲ್ಲ. ರವೀಂದ್ರ ಜಡೇಜ ಆಡಿರುವ 6 ಪಂದ್ಯದಲ್ಲಿ 212 ರನ್‌, 16 ವಿಕೆಟ್‌ ಕಿತ್ತಿದ್ದಾರೆ. ಹೀಗಾಗಿ ಜಡೇಜನೇ ತಂಡಕ್ಕೆ ದೊಡ್ಡ ಆಧಾರವಾಗಿದ್ದಾರೆ. ಉಳಿದಂತೆ ಬೌಲಿಂಗ್‌ನಲ್ಲಿ ಶೌರ್ಯ ಸನಂದಿಯ (13 ವಿಕೆಟ್‌), ಚಿರಾಗ್‌ ಜಾನಿ (10 ವಿಕೆಟ್‌) ಬಿಗು ದಾಳಿ ನಡೆಸುತ್ತಿದ್ದಾರೆ.

ಕರ್ನಾಟಕಕ್ಕೇ 3ನೇ ಫೈನಲ್‌
ವಿಜಯ್‌ ಹಜಾರೆ ಟ್ರೋಫಿಯಲ್ಲಿ ಕರ್ನಾಟಕ್ಕೆ ಇದು 3ನೇ ಫೈನಲ್‌ ಆಗಿದೆ. ಇದಕ್ಕೂ ಮುನ್ನ 2013-14ನೇ ಸಾಲಿನಲ್ಲಿ ಫೈನಲ್‌ ಪ್ರವೇಶಿಸಿತ್ತು. ರೈಲ್ವೇಸ್‌ ತಂಡವನ್ನು ಸೋಲಿಸಿ ಮೊದಲ ಬಾರಿಗೆ ಟ್ರೋಫಿ ಗೆದ್ದಿತ್ತು. ನಂತರ 2014-15 ಆವೃತ್ತಿಯಲ್ಲಿ ಕೂಡ ಫೈನಲ್‌ ಪ್ರವೇಶಿಸಿತ್ತು. ಪ್ರಶಸ್ತಿ ಸುತ್ತಿನಲ್ಲಿ ಪಂಜಾಬ್‌ ತಂಡವನ್ನು ಸೋಲಿಸಿ 2ನೇ ಬಾರಿಗೆ ಪ್ರಶಸ್ತಿ ಗೆದ್ದಿತ್ತು. ಆದರೆ ಸೌರಾಷ್ಟ್ರಕ್ಕೆ ಇದು 2ನೇ ಫೈನಲ್‌ ಪಂದ್ಯ. ಇದಕ್ಕೂ ಮುನ್ನ 2007-08ರ ಅವಧಿಯಲ್ಲಿ ಫೈನಲ್‌ ಪ್ರವೇಶಿಸಿತ್ತು. ಅಲ್ಲಿ ಬಂಗಾಳ ತಂಡವನ್ನು ಸೋಲಿಸಿ ಪ್ರಶಸ್ತಿ ಗೆದ್ದಿತ್ತು.

ವಿರೋಧಿ ಪಡೆಯಲ್ಲಿ ಕನ್ನಡಿಗ ಉತ್ತಪ್ಪ
ಕಳೆದ ರಣಜಿ ಟ್ರೋಫಿಯಲ್ಲಿ ಸೌರಾಷ್ಟ್ರ ತಂಡವನ್ನು ಪ್ರತಿನಿಧಿಸಿದ್ದ ಕನ್ನಡಿಗ ರಾಬಿನ್‌ ಉತ್ತಪ ವಿಜಯ್‌ ಹಜಾರೆಯಲ್ಲೂ ಇದೇ ತಂಡದಲ್ಲಿ ಆಡುತ್ತಿದ್ದಾರೆ. ಕೂಟದಲ್ಲಿ 6 ಪಂದ್ಯವಾಡಿದ್ದು, 92 ರನ್‌ ಬಾರಿಸಿ ಪೂರ್ಣ ವಿಫ‌ಲರಾಗಿದ್ದಾರೆ. ಕರ್ನಾಟಕ ಈ ಹಿಂದೆ 2 ಬಾರಿ ವಿಜಯ್‌ ಹಜಾರೆ ಟ್ರೋಫಿ ಗೆದ್ದಾಗಲೂ ರಾಬಿನ್‌ ಉತ್ತಪ್ಪ ಕರ್ನಾಟಕ ತಂಡದಲ್ಲಿದ್ದರು. ಅಷ್ಟೇ ಅಲ್ಲ, ಭರ್ಜರಿ ಬ್ಯಾಟಿಂಗ್‌ ಮೂಲಕ ತಂಡದ ಗೆಲುವಿಗೆ ಮಹತ್ವದ ಕಾಣಿಕೆ ನೀಡಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next