Advertisement

Vijay Hazare Trophy: ಕರ್ನಾಟಕಕ್ಕೆ 222 ರನ್‌ ಭರ್ಜರಿ ಜಯ

12:14 AM Nov 24, 2023 | Team Udayavani |

ಅಹ್ಮದಾಬಾದ್‌: ಆರಂಭಿಕ ಆಟಗಾರರಾದ ಮಾಯಾಂಕ್‌ ಅಗರ್ವಾಲ್‌ ಮತ್ತು ರವಿಕುಮಾರ್‌ ಸಮರ್ಥ ಅವರ ಆಕರ್ಷಕ ಶತಕದಿಂದಾಗಿ ಕರ್ನಾಟಕ ತಂಡವು “ಸಿ’ ಬಣದ ಪಂದ್ಯದಲ್ಲಿ ಜಮ್ಮು ಮತ್ತು ಕಾಶ್ಮೀರ ತಂಡವನ್ನು 222 ರನ್ನುಗಳಿಂದ ಸೋಲಿಸಿ ವಿಜಯ ಹಜಾರೆ ಟ್ರೋಫಿ ಕ್ರಿಕೆಟ್‌ ಕೂಟದಲ್ಲಿ ಭರ್ಜರಿ ಗೆಲುವಿನೊಂದಿಗೆ ಶುಭಾರಂಭ ಮಾಡಿದೆ.

Advertisement

ಅಗರ್ವಾಲ್‌ (157) ಮತ್ತು ಸಮರ್ಥ (123) ಅವರ ಶತಕದಿಂದಾಗಿ ಕರ್ನಾಟಕ ತಂಡವು 2 ವಿಕೆಟಿಗೆ 402 ರನ್‌ ಪೇರಿಸಿತು. ಇದಕ್ಕುತ್ತರವಾಗಿ ಜಮ್ಮು ಮತ್ತು ಕಾಶ್ಮೀರ ತಂಡವು ವೈಶಾಖ್‌ ವಿಜಯಕುಮಾರ್‌ ದಾಳಿಗೆ ಕುಸಿದು 30.4 ಓವರ್‌ಗಳಲ್ಲಿ 180 ರನ್ನಿಗೆ ಆಲೌಟಾಯಿತು. ವೈಶಾಖ್‌ 57 ರನ್ನಿಗೆ 4 ವಿಕೆಟ್‌ ಪಡೆದರು.

ಮುಂಬಯಿ ಜಯಭೇರಿ
ಬೆಂಗಳೂರಿನ ಆಲೂರಿನಲ್ಲಿ ನಡೆದ “ಎ’ ಬಣದ ಪಂದ್ಯದಲ್ಲಿ ಮುಂಬಯಿ ತಂಡವು ಸಿಕ್ಕಿಂ ತಂಡವನ್ನು 7 ವಿಕೆಟ್‌ಗಳಿಂದ ಸೋಲಿಸಿದೆ. ತುಷಾರ್‌ ದೇಶಪಾಂಡೆ ದಾಳಿಗೆ ಕುಸಿದ ಸಿಕ್ಕಿಂ ತಂಡವು 89 ರನ್ನಿಗೆ ಆಲೌಟಾಯಿತು. ತುಷಾರ್‌ 19 ರನ್ನಿಗೆ 3 ವಿಕೆಟ್‌ ಕಿತ್ತರು. ಇದಕ್ಕುತ್ತರವಾಗಿ ಮುಂಬಯಿ ತಂಡವು 12 ಓವರ್‌ಗಳಲ್ಲಿ 3 ವಿಕೆಟ್‌ ನಷ್ಟದಲ್ಲಿ 90 ರನ್‌ ಗಳಿಸಿ ಜಯಭೇರಿ ಬಾರಿಸಿತು.

ಚಹಲ್‌ಗೆ ಆರು ವಿಕೆಟ್‌
ಆಸ್ಟ್ರೇಲಿಯ ವಿರುದ್ಧದ ಟಿ20 ಸರಣಿಗೆ ಆಯ್ಕೆಯಾಗಲು ವಿಫ‌ಲರಾದ ಯಜುವೇಂದ್ರ ಚಹಲ್‌ ವಿಜಯ ಹಜಾರೆ ಪಂದ್ಯದಲ್ಲಿ ಅಮೋಘ ಬೌಲಿಂಗ್‌ ದಾಳಿ ಸಂಘಟಸಿ ಗಮನ ಸೆಳೆದಿದ್ದಾರೆ. ಅವರ ಈ ಸಾಧನೆಯಿಂದ ಹರಿಯಾಣ ತಂಡ ಆರು ವಿಕೆಟ್‌ಗಳಿಂದ ಜಯ ಸಾಧಿಸಿತು. ಚಹಲ್‌ ದಾಳಿಗೆ ತತ್ತರಿಸಿದ ಉತ್ತರಖಂಡ ತಂಡವು 207 ರನ್ನಿಗೆ ಆಲೌಟಾಯಿತು. ಚಹಲ್‌ 26 ರನ್ನಿಗೆ 6 ವಿಕೆಟ್‌ ಪಡೆದರು. ಹರಿಯಾಣ ತಂಡವು 45 ಓವರ್‌ಗಳಲ್ಲಿ 4 ವಿಕೆಟಿಗೆ 208 ರನ್‌ ಗಳಿಸಿ ಜಯ ಸಾಧಿಸಿತು. ಯುವರಾಜ್‌ ಸಿಂಗ್‌ 68, ಅಂಕಿತ್‌ ಕುಮಾರ್‌ 49 ಮತ್ತು ಅಶೋಕ್‌ ಮನೇರಿಯ ಅಜೇಯ 44 ರನ್‌ ಹೊಡೆದರು.

ಇನ್ನೊಂದು ಪಂದ್ಯದಲ್ಲಿ ದಿಲ್ಲಿ ತಂಡವು ಬಿಹಾರ ತಂಡವನ್ನು 8 ವಿಕೆಟ್‌ಗಳಿಂದ ಸೋಲಿಸಿದೆ. ಬಿಹಾರ ತಂಡವು 39 ಓವರ್‌ಗಳಲ್ಲಿ 149 ರನ್ನಿಗೆ ಆಲೌಟಾಯಿತು. ಇಶಾಂತ್‌ ಶರ್ಮ 30ಕ್ಕೆ 3 ಮತ್ತು ಹರ್ಷಿತ್‌ ರಾಣ 17 ರನ್ನಿಗೆ 4 ವಿಕೆಟ್‌ ಉರುಳಿಸಿದರು. ದಿಲ್ಲಿ ತಂಡವು 22.1 ಓವರ್‌ಗಳಲ್ಲಿ ಎರಡು ವಿಕೆಟಿಗೆ 150 ರನ್‌ ಗಳಿಸಿ ಜಯ ಸಾಧಿಸಿತು.

Advertisement
Advertisement

Udayavani is now on Telegram. Click here to join our channel and stay updated with the latest news.

Next