Advertisement

ವಿಜಯ್‌ ಹಜಾರೆ ಟ್ರೋಫಿ ಕ್ರಿಕೆಟ್‌: ಆರೂ ಲೀಗ್‌ ಪಂದ್ಯ ಗೆದ್ದ ಕರ್ನಾಟಕ

05:53 PM Mar 07, 2017 | |

ಕೋಲ್ಕತಾ: ವಿಜಯ್‌ ಹಜಾರೆ ಟ್ರೋಫಿ ಕ್ರಿಕೆಟ್‌ ಪಂದ್ಯಾವಳಿಯಲ್ಲಿ ಗೆಲುವಿನ ಓಟ ಮುಂದುವರಿಸಿದ ಕರ್ನಾಟಕ ತಂಡ ಛತ್ತೀಸ್‌ಗಢವನ್ನು 3 ವಿಕೆಟ್‌ ಅಂತರದಿಂದ ಮಣಿಸಿದೆ. ಈ ಮೂಲಕ ಲೀಗ್‌ ಹಂತದ ಎಲ್ಲ 6 ಪಂದ್ಯಗಳನ್ನು ಗೆದ್ದು ಅಜೇಯವಾಗಿ ಕ್ವಾರ್ಟರ್‌ ಫೈನಲ್‌ ಹೋರಾಟಕ್ಕೆ ಅಣಿಯಾಗಿದೆ. ಕೂಟದಲ್ಲಿ ಸೋಲು ಕಾಣದ ಏಕೈಕ ತಂಡ ಎಂಬ ಖ್ಯಾತಿ ಕರ್ನಾಟಕದ್ದೆಂಬುದು ಹೆಮ್ಮೆಯ ಸಂಗತಿ.

Advertisement

ಕರ್ನಾಟಕದ ಕ್ವಾರ್ಟರ್‌ ಫೈನಲ್‌ ಎದುರಾಳಿ ಯಾಗಿ ಕಣಕ್ಕಿಳಿಯುವ ತಂಡ ಬರೋಡಾ. ಈ ಮುಖಾಮುಖೀ ಮಾ. 13ರಂದು ನಡೆಯಲಿದೆ. ಸೋಮವಾರ ನಡೆದ ಅಂತಿಮ ಲೀಗ್‌ ಪಂದ್ಯದಲ್ಲಿ ಬ್ಯಾಟಿಂಗ್‌ ಆಯ್ದುಕೊಂಡ ಛತ್ತೀಸ್‌ಗಢ 48.5 ಓವರ್‌ಗಳಲ್ಲಿ 199 ರನ್ನಿಗೆ ಆಲೌಟ್‌ ಆಯಿತು. ಜವಾಬಿತ್ತ ಕರ್ನಾಟಕ 37.3 ಓವರ್‌ಗಳಲ್ಲಿ 7 ವಿಕೆಟಿಗೆ 200 ರನ್‌ ಬಾರಿಸಿ ವಿಜಯಿಯಾಯಿತು.

ಸುಲಭ ಗುರಿಯನ್ನು ಬೆನ್ನಟ್ಟಿದ ಕರ್ನಾಟಕಕ್ಕೆ ಆರಂಭಿಕರಾದ ರಾಬಿನ್‌ ಉತ್ತಪ್ಪ (23) ಮತ್ತು ಮಾಯಂಕ್‌ ಅಗರ್ವಾಲ್‌ (66) ಬಿರುಸಿನ ಆಟವಾಡಿ 52 ರನ್ನುಗಳ ಭದ್ರ ಬುನಾದಿ ನಿರ್ಮಿದರು. ಉತ್ತಪ್ಪ ಎಸೆತಕ್ಕೊಂದರಂತೆ 23 ರನ್‌ ಮಾಡಿದರೆ (3 ಬೌಂಡರಿ, 1 ಸಿಕ್ಸರ್‌), ಅಗರ್ವಾಲ್‌ ಪಂದ್ಯದಲ್ಲೇ ಸರ್ವಾಧಿಕ 66 ರನ್‌ ಹೊಡೆದರು. 76 ಎಸೆತಗಳ ಈ ಸೊಗಸಾದ ಆಟದ ವೇಳೆ 12 ಬೌಂಡರಿ ಸಿಡಿಯಲ್ಪಟ್ಟಿತು.  ತಂಡದ ಮೊತ್ತ 82 ರನ್‌ ಆದಾಗ ರೋಹನ್‌ ಕದಮ್‌ (17) ವಿಕೆಟ್‌ ಬಿತ್ತು. 3ನೇ ವಿಕೆಟಿಗೆ ಜತೆಯಾದ ಅಗರ್ವಾಲ್‌ ಮತ್ತು ಮನೀಷ್‌ ಪಾಂಡೆ (34) 62 ರನ್‌ ಜತೆಯಾಟ ನೀಡಿದರು. ಬಳಿಕ ಪವನ್‌ ದೇಶಪಾಂಡೆ ಮತ್ತು ಕೆ. ಗೌತಮ್‌ ಖಾತೆ ತೆರೆಯುವ ಮೊದಲೇ ಔಟಾದರು. ಅಂತಿಮವಾಗಿ ಶ್ರೇಯಸ್‌ ಗೋಪಾಲ್‌ (18) ಮತ್ತು ರೋನಿತ್‌ ಮೋರೆ (4) ಸೇರಿಕೊಂಡು ತಂಡವನ್ನು ದಡ ಸೇರಿಸಿದರು.

ಕರ್ನಾಟಕದ ಬಿಗು ದಾಳಿ
ಛತ್ತೀಸ್‌ಗಢ ಪರ ಅಭಿಮನ್ಯು ಚೌಹಾಣ್‌ (58) ಏಕೈಕ ಅರ್ಧ ಶತಕ ದಾಖಲಿಸಿದರು. ಮಾಜಿ ಟೆಸ್ಟ್‌ ಆಟಗಾರ ಮೊಹಮ್ಮದ್‌ ಕೈಫ್ 43 ರನ್‌ ಮಾಡಿದರು. ವಿನಯ್‌ ಕುಮಾರ್‌ 3 ವಿಕೆಟ್‌ ಉರುಳಿಸಿದರೆ, ಪ್ರಸಿದ್ಧ್ ಕೃಷ್ಣ 2 ವಿಕೆಟ್‌ ಪಡೆದರು. ಬಿನ್ನಿ, ಮೋರೆ, ಕೆ. ಗೌತಮ್‌, ಶ್ರೇಯಸ್‌ ಗೋಪಾಲ್‌ ತಲಾ ಒಂದು ವಿಕೆಟ್‌ ಕಿತ್ತರು.

ಸಂಕ್ಷಿಪ್ತ ಸ್ಕೋರ್‌: ಛತ್ತೀಸ್‌ಗಢ-48.5 ಓವರ್‌ಗಳಲ್ಲಿ 199 (ಅಭಿಮನ್ಯು ಚೌಹಾಣ್‌ 58, ಮೊಹಮ್ಮದ್‌ ಕೈಫ್ 43, ವಿನಯ್‌ ಕುಮಾರ್‌ 19ಕ್ಕೆ 3, ಪ್ರಸಿದ್ಧ್ ಕೃಷ್ಣ 42ಕ್ಕೆ 2). ಕರ್ನಾಟಕ 37.3 ಓವರ್‌ಗಳಳಿÉ 7 ವಿಕೆಟಿಗೆ 200 (ಮಾಯಂಕ್‌ ಅಗರ್ವಾಲ್‌ 66, ಮನೀಷ್‌ ಪಾಂಡೆ 34, ಸ್ಟುವರ್ಟ್‌ ಬಿನ್ನಿ 25, ಶುಭಂ ಠಾಕೂರ್‌ 38ಕ್ಕೆ 3, ಅಶುತೋಷ್‌ ಸಿಂಗ್‌ 16ಕ್ಕೆ 2).

Advertisement

ಝಾರ್ಖಂಡ್‌ ಕ್ವಾರ್ಟರ್‌ಫೈನಲಿಗೆ 
ಕೋಲ್ಕತಾ:
ಜಮ್ಮು ಮತ್ತು ಕಾಶ್ಮೀರ ತಂಡವನ್ನು ಆರು ವಿಕೆಟ್‌ಗಳಿಂದ ಸೋಲಿಸಿದ ಧೋನಿ ನಾಯಕತ್ವದ ಝಾರ್ಖಂಡ್‌ ತಂಡವು ವಿಜಯ್‌ ಹಜಾರೆ ಟ್ರೋಫಿಯ “ಡಿ’ ಬಣದಲ್ಲಿ ದ್ವಿತೀಯ ಸ್ಥಾನಿಯಾಗಿ ಕ್ವಾರ್ಟರ್‌ಫೈನಲ್‌ ಹಂತಕ್ಕೇರಿದೆ.

ಮಾ. 14ರಂದು ನಡೆಯುವ ಕ್ವಾರ್ಟರ್‌ಫೈನಲ್‌ ಪಂದ್ಯದಲ್ಲಿ ಝಾರ್ಖಂಡ್‌ ತಂಡವು ವಿದರ್ಭ ತಂಡವನ್ನು ಎದುರಿಸಲಿದೆ. ದಿನದ ಇನ್ನೊಂದು ಕ್ವಾರ್ಟರ್‌ಫೈನಲ್‌ ಪಂದ್ಯದಲ್ಲಿ ಬಂಗಾಲವು ಮಹಾರಾಷ್ಟ್ರವನ್ನು ಎದುರಿಸಲಿದೆ.

ಸೋಮವಾರದ ಅಂತಿಮ ಲೀಗ್‌ ಪಂದ್ಯದಲ್ಲಿ ಜಯ ಸಾಧಿಸಿದ್ದರಿಂದ ಝಾರ್ಖಂಡ್‌ “ಡಿ’ ಬಣದಲ್ಲಿ ಒಟ್ಟು 16 ಅಂಕ ಸಂಪಾದಿಸಿತು. ಹೈದರಾಬಾದ್‌ ಅಂತಿಮ ಪಂದ್ಯದಲ್ಲಿ ಸರ್ವೀಸಸ್‌ ವಿರುದ್ಧ 5 ವಿಕೆಟ್‌ಗಳಿಂದ ಸೋತ ಕಾರಣ 16 ಅಂಕದಲ್ಲಿಯೇ ಉಳಿಯಿತು. ಆದರೆ ಉತ್ತಮ ರನ್‌ಧಾರಣೆಯ ಆಧಾರದಲ್ಲಿ ಝಾರ್ಖಂಡ್‌ “ಡಿ’ ಬಣದ ಎರಡನೇ ತಂಡವಾಗಿ ಕ್ವಾರ್ಟರ್‌ಫೈನಲಿಗೇರಿತು. 24 ಅಂಕ ಗಳಿಸಿದ ಕರ್ನಾಟಕ ಅಗ್ರಸ್ಥಾನಿಯಾಗಿ ಕ್ವಾರ್ಟರ್‌ಫೈನಲಿಗೇರಿದೆ.

ಮೊದಲು ಬ್ಯಾಟಿಂಗ್‌ ಮಾಡಿದ ಜಮ್ಮು ಮತ್ತು ಕಾಶ್ಮೀರ ತಂಡವು 43 ಓವರ್‌ಗಳಲ್ಲಿ 184 ರನ್ನಿಗೆ ಆಲೌಟಾಯಿತು. ಇದಕ್ಕುತ್ತರವಾಗಿ ಝಾರ್ಖಂಡ್‌ ತಂಡವು 35 ಓವರ್‌ಗಳಲ್ಲಿ 4 ವಿಕೆಟ್‌ ಕಳೆದುಕೊಂಡು ಜಯಭೇರಿ ಬಾರಿಸಿತು.

Advertisement

Udayavani is now on Telegram. Click here to join our channel and stay updated with the latest news.

Next