Advertisement

Vijay Hazare Trophy: ದಿಲ್ಲಿಯನ್ನು ಕೆಡವಿದ ಕರ್ನಾಟಕ

11:50 PM Nov 27, 2023 | Team Udayavani |

ಅಹ್ಮದಾಬಾದ್‌: “ವಿಜಯ್‌ ಹಜಾರೆ ಟ್ರೋಫಿ’ ಕ್ರಿಕೆಟ್‌ ಪಂದ್ಯಾವಳಿಯಲ್ಲಿ ಕರ್ನಾಟಕ ಗೆಲುವಿನ ಹ್ಯಾಟ್ರಿಕ್‌ ಸಾಧಿಸಿದೆ. ಸೋಮವಾರದ ಮುಖಾಮುಖಿಯಲ್ಲಿ ದಿಲ್ಲಿಯನ್ನು 6 ವಿಕೆಟ್‌ಗಳಿಂದ ಉರುಳಿಸುವ ಮೂಲಕ ವಿಜಯದ ಓಟ ಮುಂದುವರಿಸಿದೆ.

Advertisement

“ಸಿ’ ವಿಭಾಗದ ಮುಖಾಮುಖೀಯಲ್ಲಿ ಮೊದಲು ಬ್ಯಾಟಿಂಗ್‌ ನಡೆಸಿದ ದಿಲ್ಲಿ 36.3 ಓವರ್‌ಗಳಲ್ಲಿ 143ಕ್ಕೆ ಕುಸಿದರೆ, ಕರ್ನಾಟಕ 27.3 ಓವರ್‌ಗಳಲ್ಲಿ 4 ವಿಕೆಟಿಗೆ 144 ರನ್‌ ಬಾರಿಸಿತು. ಮೊದಲೆರಡು ಪಂದ್ಯಗಳಲ್ಲಿ ಜಮ್ಮು ಮತ್ತು ಕಾಶ್ಮೀರ, ಉತ್ತರಾಖಂಡವನ್ನು ಕರ್ನಾಟಕ ಪರಾಭವಗೊಳಿಸಿತ್ತು. ಬುಧ ವಾರ ಬಿಹಾರವನ್ನು ಎದುರಿಸಲಿದೆ.

ಬದೋನಿ ಶತಕದಾಟ
ದಿಲ್ಲಿ ಗಳಿಸಿದ್ದು ಬರೀ 143 ರನ್‌ ಆದರೂ ಇದರಲ್ಲಿ ಒಂದು ಸೆಂಚುರಿ ದಾಖಲಾದದ್ದು ವಿಶೇಷ. ಮಧ್ಯಮ ಸರದಿಯ ಆಟಗಾರ ಆಯುಷ್‌ ಬದೋನಿ ಕರ್ನಾಟಕದ ದಾಳಿಯನ್ನು ದಿಟ್ಟ ರೀತಿಯಲ್ಲಿ ಎದುರಿಸಿ 100 ರನ್‌ ಬಾರಿಸಿದರು. 106 ಎಸೆತಗಳ ಈ ಅಮೋಘ ಬ್ಯಾಟಿಂಗ್‌ ವೇಳೆ 12 ಬೌಂಡರಿ, 4 ಸಿಕ್ಸರ್‌ ಸಿಡಿಯಿತು. ದಿಲ್ಲಿ ಸರದಿಯಲ್ಲಿ ಬದೋನಿ ಅವರದು ಏಕಾಂಗಿ ಹೋರಾಟವಾಗಿತ್ತು. ಇವರನ್ನು ಹೊರತುಪಡಿಸಿದರೆ 15 ರನ್‌ ಮಾಡಿದ ಆರಂಭಕಾರ ಪ್ರಿಯಾಂಶ್‌ ಆರ್ಯ ಅವರದೇ ಹೆಚ್ಚಿನ ಗಳಿಕೆ. ಎರಡಂಕೆಯ ಗಡಿ ತಲುಪಿದ ಮತ್ತೋರ್ವ ಆಟಗಾರ ನಾಯಕ ಯಶ್‌ ಧುಲ್‌ (11).
ಕರ್ನಾಟಕ ಪರ ವಿದ್ವತ್‌ ಕಾವೇರಪ್ಪ ಮತ್ತು ವಾಸುಕಿ ಕೌಶಿಕ್‌ ತಲಾ 3 ವಿಕೆಟ್‌; ವಿಜಯ್‌ಕುಮಾರ್‌ ವೈಶಾಖ್‌ ಮತ್ತು ಕೃಷ್ಣಪ್ಪ ಗೌತಮ್‌ ತಲಾ 2 ವಿಕೆಟ್‌ ಕೆಡವಿದರು.

ಪಡಿಕ್ಕಲ್‌ ಪರಾಕ್ರಮ
ಚೇಸಿಂಗ್‌ ವೇಳೆ ಕರ್ನಾಟಕ ಆರಂಭಿ ಕರನ್ನು ಬೇಗನೇ ಕಳೆದುಕೊಂಡಿತು. ಆರ್‌. ಸಮರ್ಥ್ (2) ಮತ್ತು ನಾಯಕ ಮಾಯಾಂಕ್‌ ಅಗರ್ವಾಲ್‌ (12) 35 ರನ್‌ ಆಗುವಷ್ಟರಲ್ಲಿ ಪೆವಿಲಿಯನ್‌ ಸೇರಿಕೊಂಡರು. ನಿಕಿನ್‌ ಜೋಸ್‌ (13) ಕೂಡ ಹೆಚ್ಚು ಹೊತ್ತು ಉಳಿಯಲಿಲ್ಲ.
ಈ ಸೀಸನ್‌ನಲ್ಲಿ ಉತ್ತಮ ಬ್ಯಾಟಿಂಗ್‌ ಫಾರ್ಮ್ ಪ್ರದರ್ಶಿಸುತ್ತಿರುವ ದೇವದತ್ತ ಪಡಿಕ್ಕಲ್‌ ಮತ್ತೂಂದು ಸೊಗಸಾದ ಇನ್ನಿಂಗ್ಸ್‌ ಕಟ್ಟಿದರು. ಬಿರುಸಿನ ಆಟಕ್ಕಿಳಿದು 69 ಎಸೆತಗಳಿಂದ 70 ರನ್‌ ಬಾರಿಸಿದರು. 3 ಫೋರ್‌ ಹಾಗೂ 6 ಸಿಕ್ಸರ್‌ ಸಿಡಿಸಿ ದಿಲ್ಲಿ ಬೌಲಿಂಗ್‌ ದಾಳಿಯನ್ನು ಚೆಲ್ಲಾಪಿಲ್ಲಿ ಮಾಡಿದರು. ಮನೀಷ್‌ ಪಾಂಡೆ ಅವರದು ಅಜೇಯ 28 ರನ್‌ ಗಳಿಕೆ.

ಸಂಕ್ಷಿಪ್ತ ಸ್ಕೋರ್‌
ದಿಲ್ಲಿ-36.3 ಓವರ್‌ಗಳಲ್ಲಿ 143 (ಆಯುಷ್‌ ಬದೋನಿ 100, ಪ್ರಿಯಾಂಶ್‌ ಆರ್ಯ 15, ವಿ. ಕೌಶಿಕ್‌ 19ಕ್ಕೆ 3, ವಿದ್ವತ್‌ ಕಾವೇರಪ್ಪ 25ಕ್ಕೆ 3, ವಿ. ವೈಶಾಖ್‌ 27ಕ್ಕೆ 2, ಕೆ. ಗೌತಮ್‌ 32ಕ್ಕೆ 2). ಕರ್ನಾಟಕ-27.3 ಓವರ್‌ಗಳಲ್ಲಿ 4 ವಿಕೆಟಿಗೆ 144 (ದೇವದತ್ತ ಪಡಿಕ್ಕಲ್‌ 70, ಮನೀಷ್‌ ಪಾಂಡೆ ಅಜೇಯ 28, ಮಾಯಾಂಕ್‌ ಯಾದವ್‌ 18ಕ್ಕೆ 1, ಲಲಿತ್‌ ಯಾದವ್‌ 24ಕ್ಕೆ 1).

Advertisement
Advertisement

Udayavani is now on Telegram. Click here to join our channel and stay updated with the latest news.

Next