ಬೆಂಗಳೂರು: ಆರನೇ ಹಾಗೂ ಅಂತಿಮ ಲೀಗ್ ಪಂದ್ಯದಲ್ಲಿ ರೈಲ್ವೇಸ್ ತಂಡವನ್ನು 16 ರನ್ನುಗಳಿಂದ ಮಣಿಸುವ ಮೂಲಕ ಕರ್ನಾಟಕ “ವಿಜಯ್ ಹಜಾರೆ ಟ್ರೋಫಿ’ ಏಕದಿನ ಕ್ರಿಕೆಟ್ ಪಂದ್ಯಾವಳಿಯ ಕ್ವಾರ್ಟರ್ ಫೈನಲ್ ತಲಪುವಲ್ಲಿ ಯಶಸ್ವಿಯಾಗಿದೆ.
ಕರ್ನಾಟಕ ಒಟ್ಟು 6 ಪಂದ್ಯಗಳಿಂದ 18 ಅಂಕ ಸಂಪಾದಿಸಿ “ಎ’ ವಿಭಾಗದ ದ್ವಿತೀಯ ಸ್ಥಾನಿಯಾಗಿ ನಾಕೌಟ್ ಪ್ರವೇಶಿಸಿತು (4 ಗೆಲುವು, 1 ಸೋಲು, 1 ರದ್ದು). ಬರೋಡ 20 ಅಂಕಗಳೊಂದಿಗೆ ಅಗ್ರಸ್ಥಾನ ಅಲಂಕರಿಸಿತು (5 ಗೆಲುವು, 1 ಸೋಲು).
ಶುಕ್ರವಾರ ಆಲೂರಿನ ಕೆಎಸ್‌ಸಿಎ (2) ಮೈದಾನದಲ್ಲಿ ನಡೆದ ಈ ನಿರ್ಣಾಯಕ ಮುಖಾಮುಖೀಯಲ್ಲಿ ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ನಡೆಸಿದ ಕರ್ನಾಟಕ 48.1 ಓವರ್‌ಗಳಲ್ಲಿ 257ಕ್ಕೆ ಆಲೌಟಾದರೆ, ತೀವ್ರ ಆರಂಭಿಕ ಕುಸಿತಕ್ಕೊಳಗಾಗಿ ಚೇತರಿಸಿದ ರೈಲ್ವೇಸ್ 47.1 ಓವರ್‌ಗಳಲ್ಲಿ 241 ರನ್ ಮಾಡಿ ಶರಣಾಯಿತು. 12 ಅಂಕಗಳೊಂದಿಗೆ ಲೀಗ್‌ನಲ್ಲಿ 5ನೇ ಸ್ಥಾನಿಯಾಯಿತು.
ಮಾಯಾಂಕ್ ಅಗರ್ವಾಲ್, ಪವನ್ ದೇಶಪಾಂಡೆ ಅವರ ಜವಾಬ್ದಾರಿಯುತ ಬ್ಯಾಟಿಂಗ್, ಪ್ರಸಿದ್ಧ್ ಕೃಷ್ಣ ಮತ್ತು ಪ್ರದೀಪ್ ಟಿ. ಅವರ ಘಾತಕ ಬೌಲಿಂಗ್ ಕರ್ನಾಟಕದ ಜಯದಲ್ಲಿ ಮುಖ್ಯ ಪಾತ್ರ ವಹಿಸಿತು. ಗಾಯಾಳು ವಿನಯ್ ಕುಮಾರ್ ಗೈರಲ್ಲಿ ಕರುಣ್ ನಾಯರ್ ರಾಜ್ಯ ತಂಡವನ್ನು ಮುನ್ನಡೆಸಿದ್ದರು.
ಶ್ರೇಷ್ಠ ಫಾರ್ಮ್ ಅನ್ನು ಅಂತಿಮ ಲೀಗ್ ಪಂದ್ಯಕ್ಕೂ ವಿಸ್ತರಿಸಿದ ಅಗರ್ವಾಲ್ 94 ಎಸೆತಗಳಿಂದ ಸರ್ವಾಧಿಕ 89 ರನ್ ಬಾರಿಸಿದರು. 94 ಎಸೆತಗಳ ಈ ಆಕ್ರಮಣಕಾರಿ ಬ್ಯಾಟಿಂಗ್ 15 ಬೌಂಡರಿಗಳಿಗೆ ಸಾಕ್ಷಿಯಾಯಿತು. ಕರುಣ್ ನಾಯರ್ (13), ಶರತ್ ಬಿ.ಆರ್. (6) ಮತ್ತು ಆರ್. ಸಮರ್ಥ್ (0) ಅವರನ್ನು 41 ರನ್ ಆಗುವಷ್ಟರಲ್ಲಿ ಕಳೆದುಕೊಂಡ ರಾಜ್ಯ ತಂಡಕ್ಕೆ ಅಗರ್ವಾಲ್-ದೇಶಪಾಂಡೆ ಆಸರೆಯಾದರು. ಇವರಿಂದ 4ನೇ ವಿಕೆಟಿಗೆ 132 ರನ್ ಒಟ್ಟುಗೂಡಿತು. ದೇಶಪಾಂಡೆ 67 ಎಸೆತ ಎದುರಿಸಿ 65 ರನ್ ಬಾರಿಸಿದರು (9 ಬೌಂಡರಿ, 1 ಸಿಕ್ಸರ್). ಕೆ. ಗೌತಮ್ 25, ಜೆ. ಸುಚಿತ್ 19, ಜೋಶಿ 14, ಮೋರೆ 10 ರನ್ ಮಾಡಿದರು.
54 ರನ್ನಿಗೆ ಬಿತ್ತು 6 ವಿಕೆಟ್
ಪ್ರದೀಪ್ ಟಿ., ಪ್ರಸಿದ್ಧ್ ಕೃಷ್ಣ ಮತ್ತು ರೋನಿತ್ ಮೋರೆ ಅವರ ಆರಂಭಿಕ ದಾಳಿಗೆ ತತ್ತರಿಸಿದ ರೈಲ್ವೇಸ್ 13 ಓವರ್‌ಗಳಲ್ಲಿ 54ಕ್ಕೆ 6 ವಿಕೆಟ್ ಉದುರಿಸಿಕೊಂಡು ಚಿಂತಾಜನಕ ಸ್ಥಿತಿ ತಲುಪಿತ್ತು. ಆರಂಭಿಕರಾದ ಸೌರಭ್ ವಕಾಸ್ಕರ್, ಅಸದ್ ಪಠಾಣ್, ಮಧ್ಯಮ ಕ್ರಮಾಂಕದ ಚಂದರ್‌ಪಾಲ್ ಸೈನಿ ಖಾತೆಯನ್ನೇ ತೆರೆದಿರಲಿಲ್ಲ. ಆಗ ಕರ್ನಾಟಕ ಸುಲಭದಲ್ಲಿ ಗೆಲ್ಲಬಹುದೆಂಬ ನಿರೀಕ್ಷೆ ಮೂಡಿತ್ತು. ಆದರೆ ರೈಲ್ವೇಸ್‌ನ ಕೆಳ ಸರದಿಯ ಆಟಗಾರರು ತಿರುಗಿ ಬಿದ್ದರು. ಅಂಕಿತ್ ಯಾದವ್ 51, ಅನುರೀತ್ ಸಿಂಗ್ 59, ಅವಿನಾಶ್ ಯಾದವ್ 40, ಎಸಿಪಿ ಮಿಶ್ರಾ 28 ರನ್ ಬಾರಿಸಿ ತಂಡವನ್ನು ಗೆಲುವಿನ ಬಾಗಿಲ ತನಕ ತಂದು ನಿಲ್ಲಿಸಿದರು. ಆದರೆ ಅದೃಷ್ಟ ಮಾತ್ರ ಇರಲಿಲ್ಲ.
ಸಂಕ್ಷಿಪ್ತ ಸ್ಕೋರ್: ಕರ್ನಾಟಕ-48.1 ಓವರ್‌ಗಳಲ್ಲಿ 257 (ಅಗರ್ವಾಲ್ 89, ದೇಶಪಾಂಡೆ 65, ಕೆ. ಗೌತಮ್ 25, ಅನುರೀತ್ 36ಕ್ಕೆ 3, ಮಿಶ್ರಾ 45ಕ್ಕೆ 3, ಮನ್‌ಜಿàತ್ 44ಕ್ಕೆ 2). ರೈಲ್ವೇಸ್-47.1 ಓವರ್‌ಗಳಲ್ಲಿ 241 (ಅನುರೀತ್ 59, ಅಂಕಿತ್ 51, ಅವಿನಾಶ್ 40, ಪ್ರಸಿದ್ಧ್ ಕೃಷ್ಣ 35ಕ್ಕೆ 4, ಪ್ರದೀಪ್ 48ಕ್ಕೆ 4, ಮೋರೆ 49ಕ್ಕೆ 2).