Advertisement

ಮುಂಬಯಿ ವಿರುದ್ಧ ಮುಗ್ಗರಿಸಿದ ಕರ್ನಾಟಕ

06:00 AM Sep 22, 2018 | Team Udayavani |

ಬೆಂಗಳೂರು: ಅಜಿಂಕ್ಯ ರಹಾನೆ (148), ಶ್ರೇಯಸ್‌ ಅಯ್ಯರ್‌ (110) ಸಿಡಿಸಿದ ಆಕರ್ಷಕ ಶತಕ ಹಾಗೂ ಪೃಥ್ವಿ ಶಾ (60) ಅವರ ದಿಟ್ಟ ಬ್ಯಾಟಿಂಗ್‌ ನೆರವಿನಿಂದ ಆತಿಥೇಯ ಕರ್ನಾಟಕದ ಮೇಲೆ ಸವಾರಿ ಮಾಡಿದ ಮುಂಬಯಿ, ವಿಜಯ್‌ ಹಜಾರೆ ಟ್ರೋಫಿ ಏಕದಿನ ಪಂದ್ಯದಲ್ಲಿ 88 ರನ್ನುಗಳ ಭರ್ಜರಿ ಗೆಲುವು ಸಾಧಿಸಿದೆ. ಇದು ಆತಿಥೇಯ ನೆಲದಲ್ಲೇ ಕರ್ನಾಟಕಕ್ಕೆ ಎದುರಾದ ಸತತ 2ನೇ ಸೋಲು. ಗುರುವಾರದ ಮೊದಲ ಪಂದ್ಯದಲ್ಲಿ ವಿನಯ್‌ ಪಡೆ ಮಹಾರಾಷ್ಟ್ರಕ್ಕೆ ಶರಣಾಗಿತ್ತು.

Advertisement

ಬೆಂಗಳೂರಿನ ಎಂ. ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ಮೊದಲು ಬ್ಯಾಟಿಂಗ್‌ ನಡೆಸಿದ ಮುಂಬಯಿ 5 ವಿಕೆಟಿಗೆ 362 ರನ್‌ ಪೇರಿಸಿದರೆ, ಕರ್ನಾಟಕ 45 ಓವರ್‌ಗಳಲ್ಲಿ 274ಕ್ಕೆ ಆಲೌಟ್‌ ಆಯಿತು. 363 ರನ್‌ ಗುರಿ ಬೆನ್ನಟ್ಟಿದ ರಾಜ್ಯ ಬ್ಯಾಟ್ಸ್‌ಮನ್‌ಗಳು ಭಾರೀ ವೈಫ‌ಲ್ಯ ಅನುಭವಿಸಿದರು. ಆರಂಭಿಕ ಬ್ಯಾಟ್ಸ್‌ಮನ್‌ ಮಾಯಾಂಕ್‌ ಅಗರ್ವಾಲ್‌ (66) ಅರ್ಧ ಶತಕ ಸಿಡಿಸಿದ್ದು ಬಿಟ್ಟರೆ ಉಳಿದವರಿಂದ ನಿರೀಕ್ಷಿತ ಪ್ರದರ್ಶನ ಹೊರಹೊಮ್ಮಲಿಲ್ಲ. 

ಕರುಣ್‌ ನಾಯರ್‌ 31, ಕೆ. ಗೌತಮ್‌ 38, ವಿನಯ್‌ ಕುಮಾರ್‌ 36 ರನ್‌ ಮಾಡಿದರು. ಆರ್‌. ಸಮರ್ಥ್ (20), ಸಿ.ಎಂ. ಗೌತಮ್‌ (12), ಪವನ್‌ ದೇಶಪಾಂಡೆ (15), ಸ್ಟುವರ್ಟ್‌ ಬಿನ್ನಿ (1), ಶ್ರೇಯಸ್‌ ಗೋಪಾಲ್‌ (17) ಬ್ಯಾಟಿಂಗ್‌ ಬರಗಾಲ ಅನುಭವಿಸಿದರು. ಎಡಗೈ ಸ್ಪಿನ್ನರ್‌ ಶಾಮ್ಸ್‌ ಮುಲಾನಿ 71 ರನ್ನಿಗೆ 4 ವಿಕೆಟ್‌ ಕಿತ್ತು ಮುಂಬಯಿ ದಾಳಿಯಲ್ಲಿ ಪ್ರಮುಖ ಪಾತ್ರ ವಹಿಸಿದರು.

216 ರನ್‌ ಜತೆಯಾಟ
ಮುಂಬಯಿ ಇನ್ನಿಂಗ್ಸ್‌ ಆರಂಭಿಸಿದ ಅಜಿಂಕ್ಯ ರಹಾನೆ-ಪೃಥ್ವಿ ಶಾ ಮೊದಲ ವಿಕೆಟ್‌ಗೆ 106 ರನ್‌ ಪೇರಿಸಿದರು. ಇವರಿಬ್ಬರು 18 ಓವರ್‌ಗಳ ತನಕ ಕ್ರೀಸ್‌ನಲ್ಲಿ ನಿಂತು ಮುಂಬಯಿಗೆ ಬಲ ತುಂಬಿದರು. ಬಳಿಕ ಅಜಿಂಕ್ಯ ರಹಾನೆ ಮತ್ತು ಶ್ರೇಯಸ್‌ ಅಯ್ಯರ್‌ ಭರ್ಜರಿ ಬ್ಯಾಟಿಂಗ್‌ ಪ್ರದರ್ಶಿಸಿ 2ನೇ ವಿಕೆಟಿಗೆ 216 ರನ್‌ ಪೇರಿಸಿದರು. ಈ ಸಂದರ್ಭದಲ್ಲಿ ಕರ್ನಾಟಕದ ಬೌಲಿಂಗ್‌ ಸಂಪೂರ್ಣವಾಗಿ ದಿಕ್ಕು ತಪ್ಪಿತು. ರಹಾನೆ 150 ಎಸೆತಗಳ ಮನಮೋಹಕ ಬ್ಯಾಟಿಂಗ್‌ ಪ್ರದರ್ಶಿಸಿ 13 ಬೌಂಡರಿ, 3 ಸಿಕ್ಸರ್‌ ಸಿಡಿಸಿದರು. ಶ್ರೇಯಸ್‌ ಅಯ್ಯರ್‌ 82 ಎಸೆತಗಳಲ್ಲಿ ಶತಕ ಪೂರೈಸಿದರು. 

ಸಂಕ್ಷಿಪ್ತ ಸ್ಕೋರ್‌
ಮುಂಬಯಿ-5 ವಿಕೆಟಿಗೆ 362 (ಅಜಿಂಕ್ಯ ರಹಾನೆ 148, ಶ್ರೇಯಸ್‌ ಅಯ್ಯರ್‌ 110, ಕೆ. ಗೌತಮ್‌ 40ಕ್ಕೆ 1). ಕರ್ನಾಟಕ 45 ಓವರ್‌ಗಳಲ್ಲಿ 274 (ಮಾಯಾಂಕ್‌ ಅಗರ್ವಾಲ್‌ 66, ಕೆ. ಗೌತಮ್‌ 38, ಶಾಮ್ಸ್‌ ಮಲಾನಿ 71ಕ್ಕೆ 4).

Advertisement
Advertisement

Udayavani is now on Telegram. Click here to join our channel and stay updated with the latest news.

Next