ರಾಂಚಿ: ಮುಂಬರುವ ವಿಜಯ ಹಜಾರೆ ಟ್ರೋಫಿ ಕ್ರಿಕೆಟ್ ಕೂಟಕ್ಕೆ 18 ಸದಸ್ಯರ ಝಾರ್ಖಂಡ್ ತಂಡವನ್ನು ಧೋನಿ ಮುನ್ನಡೆಸಲಿದ್ದಾರೆ. 50 ಓವರ್‌ಗಳ ಈ ಕ್ರಿಕೆಟ್ ಕೂಟ ಫೆ. 25ರಿಂದ ಆರಂಭವಾಗಲಿದೆ.
ಕಳೆದ ಋತುವಿನ ವಿಜಯ ಹಜಾರೆ ಟ್ರೋಫಿ ವೇಳೆ ಧೋನಿ ಝಾರ್ಖಂಡ್ ತಂಡವನ್ನು ಪ್ರತಿನಿಧಿಸಿದ್ದರು. ಆದರೆ ಆವಾಗ ಅವರು ತಂಡದ ನಾಯಕತ್ವ ವಹಿಸಿರಲಿಲ್ಲ. ಬದಲಾಗಿ ವೇಗಿ ವರುಣ್ ಅರೋನ್ ಝಾರ್ಖಂಡ್ ತಂಡವನ್ನು ಮುನ್ನಡೆಸಿದ್ದರು. ಇದಕ್ಕಿಂತ ಮೊದಲು 2007ರಲ್ಲಿ ಧೋನಿ ರಾಜ್ಯದ ಪರ ದೇಶೀಯ ಕೂಟದಲ್ಲಿ ಅವರು ಪಾಲ್ಗೊಂಡಿದ್ದರು.
ವಿಜಯ ಹಜಾರೆ ಟ್ರೋಫಿಯಲ್ಲಿ ಝಾರ್ಖಂಡ್ ತಂಡವು ಛತ್ತೀಸ್‌ಗಢ, ಹೈದರಾಬಾದ್, ಜಮ್ಮು ಮತ್ತು ಕಾಶ್ಮೀರ, ಕರ್ನಾಟಕ, ಸೌರಾಷ್ಟ್ರ ಮತ್ತು ಸರ್ವೀಸಸ್ ಜತೆ “ಡಿ’ ಬಣದಲ್ಲಿದೆ. ಫೆ. 25ರಂದು ನಡೆಯುವ ತನ್ನ ಮೊದಲ ಪಂದ್ಯದಲ್ಲಿ ಝಾರ್ಖಂಡ್ ತಂಡವು ಕರ್ನಾಟಕ ತಂಡವನ್ನು ಎದುರಿಸಲಿದೆ. ಈ ಪಂದ್ಯ ಕೋಲ್ಕತಾದ ಈಡನ್ ಗಾರ್ಡನ್ಸ್‌ನಲ್ಲಿ ನಡೆಯಲಿದೆ.
ವಿಜಯ ಹಜಾರೆ ಟ್ರೋಫಿಯಲ್ಲಿ ಪಾಲ್ಗೊಳ್ಳಲು ಧೋನಿ ಅವರು ತಂಡದ ಸದಸ್ಯರ ಜತೆ 13 ವರ್ಷಗಳ ಬಳಿಕ ಮೊದಲ ಬಾರಿ ರೈಲಿನಲ್ಲಿ ಪ್ರಯಾಣಿಸಿದ್ದಾರೆ. ಎಸಿ ಫಸ್ಟ್ ಟಯರ್‌ನಲ್ಲಿ ಹಟಿಯಾದಿಂದ ಹೌರಾಕ್ಕೆ ಧೋನಿ ಪ್ರಯಾಣಿಸಿದ್ದಾರೆ. 13 ವರ್ಷಗಳ ಬಳಿಕ ನಾನು ರೈಲಿನಲ್ಲಿ ಪ್ರಯಾಣಿಸುತ್ತಿದ್ದೇನೆ. ಇದೊಂದು ದೀರ್ಘ ಪ್ರಯಾಣವಾದರೂ ತಂಡದ ಸದಸ್ಯರ ಜತೆ ಮಾತನಾಡುತ್ತ ಸಂತೋಷಪಡುತ್ತಿದ್ದೇನೆ ಎಂದು ಧೋನಿ ಹೇಳಿದ್ದಾರೆ.
ತಮಿಳುನಾಡು ಕ್ರಿಕೆಟ್ ಅಸೋಸಿಯೇಶನ್ (ಟಿಎನ್‌ಸಿಎ) ಆಯೋಜಿಸಿದ ಬುಚ್ಚಿಬಾಬು ಅಖೀಲ ಭಾರತ ಆಹ್ವಾನಿತ ಕ್ರಿಕೆಟ್ ಕೂಟದ ವೇಳೆ ಧೋನಿ ಅವರು ಝಾರ್ಖಂಡ್ ತಂಡಕ್ಕೆ ಸಲಹೆ ಮಾರ್ಗದರ್ಶನ ನೀಡಿದ್ದರು. ಆಬಳಿಕ ರಣಜಿ ಟ್ರೋಫಿಯ ಸೆಮಿಫೈನಲ್ ಪಂದ್ಯದ ವೇಳೆ ತಂಡದ ಮೆಂಟರ್ ಆಗಿ ಕಾರ್ಯ ನಿರ್ವಹಿಸಿದ್ದರು. ಇದೀಗ ಝಾರ್ಖಂಡ್ ತಂಡವನ್ನು ಮುನ್ನಡೆಸುತ್ತಿದ್ದಾರೆ.
ಧೋನಿ ಅವರನ್ನು ಇತ್ತೀಚೆಗೆ ಐಪಿಎಲ್ ಫ್ರಾಂಚೈಸಿ ರೈಸಿಂಗ್ ಪುಣೆ ಸೂಪರ್‌ಜಯಂಟ್ಸ್ ನಾಯಕತ್ವದಿಂದ ವಜಾಗೊಳಿಸಿತ್ತು. ಇದಕ್ಕಿಂತ ಮೊದಲು 2017ರ ಆರಂಭದಲ್ಲಿ ಅವರು ಭಾರತೀಯ ಏಕದಿನ ತಂಡದ ನಾಯಕತ್ವ ದಿಂದ ಹಿಂದೆ ಸರಿದಿದ್ದರು. ಇಂಗ್ಲೆಂಡ್ ವಿರುದ್ಧದ ಏಕದಿನ ಮತ್ತು ಟ್ವೆಂಟಿ-20 ಸರಣಿ ಮೊದಲು ಧೋನಿ ನಾಯಕತ್ವ ತ್ಯಜಿಸುವ ನಿರ್ಧಾರ ಪ್ರಕಟಿಸಿದ್ದರು.
ಝಾರ್ಖಂಡ್ ತಂಡ: ಎಂಎಸ್ ಧೋನಿ (ನಾಯಕ), ಇಶಾನ್ ಕಿಶನ್, ವಿರಾಟ್ ಸಿಂಗ್, ಇಶಾಂಕ್ ಜಗ್ಗಿ, ಸೌರಭ್ ತಿವಾರಿ, ಕೌಶಲ್ ಸಿಂಗ್, ಪ್ರತ್ಯುಷ್ ಸಿಂಗ್, ಶಬಾಜ್ ನದೀಮ್, ಸೋನು ಕುಮಾರ್ ಸಿಂಗ್, ವರುಣ್ ಅರೋನ್, ರಾಹುಲ್ ಶುಕ್ಲ, ಅಂಕುಲ್ ರಾಯ್, ಮೊನು ಕುಮಾರ್ ಸಿಂಗ್, ಜಾಸ್ಕರನ್ ಸಿಂಗ್, ಆನಂದ್ ಸಿಂಗ್, ಶಾಶೀಮ್ ರಾಠೊಡ್, ವಿಕಾಸ್ ಸಿಂಗ್, ಕುಮಾರ್ ದೇವಬ್ರತ್.