Advertisement

ವಿಜಯ್‌ ಹಜಾರೆ ಟ್ರೋಫಿ ಕ್ರಿಕೆಟ್‌: ಸೌರಾಷ್ಟ್ರ, ಸರ್ವೀಸಸ್‌ ಸೆಮಿ ಪ್ರವೇಶ

11:40 PM Dec 22, 2021 | Team Udayavani |

ಜೈಪುರ: ಸೌರಾಷ್ಟ್ರ ಮತ್ತು ಸರ್ವೀಸಸ್‌ ತಂಡಗಳು ವಿಜಯ್‌ ಹಜಾರೆ ಟ್ರೋಫಿ ಏಕದಿನ ಪಂದ್ಯಾವಳಿಯ ಸೆಮಿಫೈನಲ್‌ ಪ್ರವೇಶಿಸಿವೆ. ಬುಧವಾರದ ಪಂದ್ಯಗಳಲ್ಲಿ ಈ ತಂಡಗಳು ಕ್ರಮವಾಗಿ ವಿದರ್ಭ ಹಾಗೂ ಕೇರಳವನ್ನು 7 ವಿಕೆಟ್‌ಗಳಿಂದ ಮಣಿಸಿದವು.

Advertisement

ಶುಕ್ರವಾರದ ಸೆಮಿಫೈನಲ್‌ ಪಂದ್ಯಗಳಲ್ಲಿ ಹಿಮಾಚಲ ಪ್ರದೇಶ-ಸರ್ವೀಸಸ್‌ ಮತ್ತು ತಮಿಳುನಾಡು-ಸೌರಾಷ್ಟ್ರ ಸೆಣಸಲಿವೆ.

ಸಣ್ಣ ಮೊತ್ತಕ್ಕೆ ಆಲೌಟ್‌
ಎರಡೂ ಪಂದ್ಯಗಳಲ್ಲಿ ಮೊದಲು ಬ್ಯಾಟಿಂಗ್‌ ನಡೆಸಿದ ತಂಡಗಳು ಸಣ್ಣ ಮೊತ್ತಕ್ಕೆ ಕುಸಿದವು. “ಸವಾಯ್‌ ಮಾನ್‌ಸಿಂಗ್‌ ಸ್ಟೇಡಿಯಂ’ನಲ್ಲಿ ನಡೆದ ಮುಖಾಮುಖಿಯಲ್ಲಿ ವಿದರ್ಭ 40.3 ಓವರ್‌ಗಳಲ್ಲಿ 150 ರನ್ನಿಗೆ ಆಲೌಟಾದರೆ, ಸೌರಾಷ್ಟ್ರ 29.5 ಓವರ್‌ಗಳಲ್ಲಿ 3 ವಿಕೆಟಿಗೆ 151 ರನ್‌ ಬಾರಿಸಿ ಸುಲಭ ಜಯ ಸಾಧಿಸಿತು.

ಸೌರಾಷ್ಟ್ರ ಸಂಘಟಿತ ಬೌಲಿಂಗ್‌ ದಾಳಿಯ ಮೂಲಕ ಮೇಲುಗೈ ಸಾಧಿಸಿತು. ಬೌಲಿಂಗಿಗೆ ಇಳಿದ ಎಲ್ಲ 6 ಮಂದಿ ಯಶಸ್ಸು ಕಂಡರು. ನಾಯಕ ಜೈದೇವ್‌ ಉನಾದ್ಕತ್‌, ಚಿರಾಗ್‌ ಜಾನಿ, ಧರ್ಮೇಂದ್ರಸಿನ್ಹ ಜಡೇಜ ಮತ್ತು ಯುವರಾಜ್‌ ಚುಡಾಸಮ ತಲಾ 2 ವಿಕೆಟ್‌ ಕಿತ್ತು ವಿದರ್ಭಕ್ಕೆ ಕಡಿವಾಣ ಹಾಕಿದರು. ವಿದರ್ಭ ಸರದಿಯಲ್ಲಿ ಅಪೂರ್ವ್‌ ವಾಂಖೇಡೆ ಅವರದು ಏಕಾಂಗಿ ಹೋರಾಟವಾಗಿತ್ತು (72).

ಇದನ್ನೂ ಓದಿ:ಪ್ರೊ ಕಬಡ್ಡಿ: ಬುಲ್ಸ್‌ ಗೆ ತಿವಿದ ಯು ಮುಂಬಾ

Advertisement

ಸರ್ವೀಸಸ್‌ ಸಾಹಸ
“ಕೆ.ಎಲ್‌. ಸೈನಿ ಗ್ರೌಂಡ್‌’ನಲ್ಲಿ ಸರ್ವೀಸಸ್‌ ಕೂಡ ಸಂಘಟಿತ ಬೌಲಿಂಗ್‌ ಮೂಲವೇ ಯಶಸ್ಸು ಕಂಡಿತು. ಎಲ್ಲ 5 ಮಂದಿ ವಿಕೆಟ್‌ ಉರುಳಿಸಿದರು. ಕೇರಳ 40.4 ಓವರ್‌ಗಳಲ್ಲಿ 175ಕ್ಕೆ ಸರ್ವಪತನ ಕಂಡಿತು. ಇದರಲ್ಲಿ ಆರಂಭಕಾರ ರೋಹನ್‌ ಕುನ್ನುಮ್ಮಾಳ್‌ ಗಳಿಕೆಯೇ 85 ರನ್‌. ವಿ. ಮನೋಹರನ್‌ 41 ರನ್‌ ಮಾಡಿದರು. ಜವಾಬಿತ್ತ ಸರ್ವೀಸಸ್‌ 30.5 ಓವರ್‌ಗಳಲ್ಲಿ 3 ವಿಕೆಟಿಗೆ 176 ರನ್‌ ಹೊಡೆಯಿತು. ಓಪನರ್‌ ರವಿ ಚೌಹಾಣ್‌ 95 ರನ್‌ ಬಾರಿಸಿದರು.
ಸರ್ವೀಸಸ್‌ ಬೌಲಿಂಗ್‌ನಲ್ಲಿ ಮಿಂಚಿದವರು ದಿವೇಶ್‌ ಪಠಾಣಿಯ (19ಕ್ಕೆ 3). ಅಭಿಷೇಕ್‌ ತಿವಾರಿ ಮತ್ತು ಪುಲ್ಕಿತ್‌ ನಾರಂಗ್‌ ತಲಾ 2 ವಿಕೆಟ್‌ ಕಿತ್ತರು.

Advertisement

Udayavani is now on Telegram. Click here to join our channel and stay updated with the latest news.

Next