Advertisement

Vijay Hazare: ಬಿಹಾರ ವಿರುದ್ಧವೂ ಕರ್ನಾಟಕದ ಜಯ ಹಾರ

11:54 PM Nov 29, 2023 | Team Udayavani |

ಅಹ್ಮದಾಬಾದ್‌: “ವಿಜಯ್‌ ಹಜಾರೆ ಟ್ರೋಫಿ’ ಏಕದಿನ ಕ್ರಿಕೆಟ್‌ ಪಂದ್ಯಾವಳಿಯಲ್ಲಿ ಕರ್ನಾಟಕದ ಗೆಲುವಿನ ನಾಗಾಲೋಟ 4ನೇ ಪಂದ್ಯಕ್ಕೆ ವಿಸ್ತರಿಸಿದೆ. ಬುಧವಾರದ ಮುಖಾಮುಖೀಯಲ್ಲಿ ಮಾಯಾಂಕ್‌ ಅಗರ್ವಾಲ್‌ ಪಡೆ 7 ವಿಕೆಟ್‌ಗಳಿಂದ ಬಿಹಾರವನ್ನು ಪರಾಭವಗೊಳಿಸಿತು.

Advertisement

ಅಹ್ಮದಾಬಾದ್‌ನ “ನರೇಂದ್ರ ಮೋದಿ ಸ್ಟೇಡಿಯಂ”ನಲ್ಲಿ ಮೊದಲು ಬ್ಯಾಟಿಂಗ್‌ ಮಾಡಿದ ಬಿಹಾರ 7 ವಿಕೆಟಿಗೆ 217 ರನ್‌ ಗಳಿಸಿದರೆ, ಕರ್ನಾಟಕ 33.4 ಓವರ್‌ಗಳಲ್ಲೇ 3 ವಿಕೆಟಿಗೆ 218 ರನ್‌ ಬಾರಿಸಿ ಜಯಭೇರಿ ಮೊಳಗಿಸಿತು.

ಚೇಸಿಂಗ್‌ ವೇಳೆ ದೇವದತ್ತ ಪಡಿಕ್ಕಲ್‌ ತಮ್ಮ ಪ್ರಚಂಡ ಫಾರ್ಮ್ ಮುಂದುವರಿಸಿ ಅಜೇಯ 93 ರನ್‌ ಬಾರಿಸಿದರು. ಸ್ಫೋಟಕ ಆಟಕ್ಕೆ ಮುಂದಾದ ಅವರು 9 ಬೌಂಡರಿ ಹಾಗೂ 5 ಸಿಕ್ಸರ್‌ ಸಿಡಿಸಿ ಬಿಹಾರದ ಬೌಲರ್‌ಗಳಿಗೆ ಬೆವರಿಳಿಸಿದರು. ಎದುರಿ ಸಿದ್ದು 57 ಎಸೆತ ಮಾತ್ರ. ನಿಕಿನ್‌ ಜೋಸ್‌ 69 ರನ್‌ ಕೊಡುಗೆ ಸಲ್ಲಿಸಿದರು. 73 ಎಸೆತಗಳ ಈ ಆಕರ್ಷಕ ಆಟದಲ್ಲಿ 7 ಫೋರ್‌, 2 ಸಿಕ್ಸರ್‌ ಒಳಗೊಂಡಿತ್ತು.

ಆರಂಭಕಾರ ಮಾಯಾಂಕ್‌ ಅಗರ್ವಾಲ್‌ 28 ರನ್‌ ಮಾಡಿದರೆ, ಇವರ ಜತೆಗಾರ ಆರ್‌. ಸಮರ್ಥ್ ಮಿಂಚಲು ವಿಫ‌ಲರಾದರು (4). ಪಡಿಕ್ಕಲ್‌ ಜತೆ ಅಜೇಯರಾಗಿ ಉಳಿದ ಆಟಗಾರ ಮನೀಷ್‌ ಪಾಂಡೆ (17).

ಸಕಿಬುಲ್‌ ಗನಿ ಶತಕ
ಬಿಹಾರ ಸರದಿಯಲ್ಲಿ ಮಧ್ಯಮ ಕ್ರಮಾಂಕದ ಆಟಗಾರ ಸಕಿಬುಲ್‌ ಗನಿ ಅವರದು ಏಕಾಂಗಿ ಹೋರಾಟ ವಾಗಿತ್ತು. ಒಂದೆಡೆ ವಿಕೆಟ್‌ ಉರುಳು ತ್ತಿದ್ದರೂ ಕರ್ನಾಟಕದ ಬೌಲಿಂಗ್‌ ದಾಳಿಯನ್ನು ದಿಟ್ಟ ರೀತಿಯಲ್ಲಿ ನಿಭಾಯಿಸಿದ ಸಕಿಬುಲ್‌ ಭರ್ತಿ 100 ಎಸೆತ ಎದುರಿಸಿ ಅಜೇಯ 113 ರನ್‌ ಮಾಡಿದರು. ಸಿಡಿಸಿದ್ದು 9 ಬೌಂಡರಿ ಹಾಗೂ 5 ಸಿಕ್ಸರ್‌. ಇವರನ್ನು ಹೊರತುಪಡಿಸಿದರೆ ಅಜೇಯ 33 ರನ್‌ ಮಾಡಿದ ನಾಯಕ ಅಶುತೋಷ್‌ ಅಮನ್‌ ಅವರದೇ ಹೆಚ್ಚಿನ ಗಳಿಕೆ.

Advertisement

ಕರ್ನಾಟಕದ ಬೌಲಿಂಗ್‌ ಸರದಿ ಯಲ್ಲಿ 8 ಮಂದಿ ದಾಳಿಗೆ ಇಳಿದರು. 8ನೇ ವಿಕೆಟಿಗೆ ಜತೆಗೂಡಿದ ಗನಿ-ಅಮನ್‌ ಕ್ರೀಸ್‌ ಆಕ್ರಮಿಸಿಕೊಂಡದ್ದೇ ಇದಕ್ಕೆ ಕಾರಣ. ಕೊನೆಗೂ ಈ ಜೋಡಿಯನ್ನು ಬೇರ್ಪಡಿಸಲು ಕರ್ನಾಟಕಕ್ಕೆ ಸಾಧ್ಯ ವಾಗಲಿಲ್ಲ. ಇವರಿಬ್ಬರು ಸೇರಿ ಕೊಂಡು 117 ರನ್‌ ಜತೆಯಾಟ ನಿಭಾ ಯಿಸಿದರು. 27ಕ್ಕೆ 3 ವಿಕೆಟ್‌ ಉರುಳಿಸಿದ ಜಗದೀಶ್‌ ಸುಚಿತ್‌ ಹೆಚ್ಚಿನ ಯಶಸ್ಸು ಸಾಧಿಸಿದರು.

ಶುಕ್ರವಾರ ಕರ್ನಾಟಕ ತಂಡ ಚಂಡೀಗಢವನ್ನು ಎದುರಿಸಲಿದೆ.

ಸಂಕ್ಷಿಪ್ತ ಸ್ಕೋರ್‌
ಬಿಹಾರ-7 ವಿಕೆಟಿಗೆ 217 (ಸಕಿಬುಲ್‌ ಗನಿ ಔಟಾಗದೆ 113, ಅಶುತೋಷ್‌ ಅಮನ್‌ ಔಟಾಗದೆ 33, ಜೆ. ಸುಚಿತ್‌ 27ಕ್ಕೆ 3). ಕರ್ನಾಟಕ-33.4 ಓವರ್‌ಗಳಲ್ಲಿ 3 ವಿಕೆಟಿಗೆ 218 (ದೇವದತ್ತ ಪಡಿಕ್ಕಲ್‌ ಔಟಾಗದೆ 93, ನಿಕಿನ್‌ ಜೋಸ್‌ 69, ಮಾಯಾಂಕ್‌ ಅಗರ್ವಾಲ್‌ 28, ವೀರ್‌ಪ್ರತಾಪ್‌ 31ಕ್ಕೆ 1).

Advertisement

Udayavani is now on Telegram. Click here to join our channel and stay updated with the latest news.

Next