ಹೊಸದಿಲ್ಲಿ: ಸಯ್ಯದ್ ಮುಷ್ತಾಕ್ ಅಲಿ ಟ್ರೋಫಿ ಟಿ20 ಪಂದ್ಯಾವಳಿಯನ್ನು ಯಶಸ್ವಿಯಾಗಿ ನಡೆಸಿದ ಬಿಸಿಸಿಐ ಇನ್ನು “ವಿಜಯ್ ಹಜಾರೆ ಟ್ರೋಫಿ’ ಪಂದ್ಯಾವಳಿಯ ಆಯೋಜನೆಗೆ ಸತೆ ಆರಂಭಿಸಿದೆ. “ಒನ್‌ಡೇ ರಣಜಿ’ ಎಂದೇ ಜನಪ್ರಿಯಗೊಂಡಿರುವ ಈ ಏಕದಿನ ಪಂದ್ಯಾವಳಿ ಫೆ. 18ರಿಂದ ಆರಂಭವಾಗಲಿದೆ. ಆದರೆ ಪಂದ್ಯದ ತಾಣಗಳನ್ನು ಇನ್ನೂ ಪ್ರಕಟಿಸಲಾಗಿಲ್ಲ.
ಬೆಂಗಳೂರು, ಮುಂಬಯಿ, ಬರೋಡ, ಕೋಲ್ಕತಾ, ಇಂದೋರ್‌ನಲ್ಲಿ ಲೀಗ್ ಪಂದ್ಯಗಳು ನಡೆಯುವ ಸಾಧ್ಯತೆ ಇದೆ. ಬೆನ್ನು, ಬೆನ್ನಿಗೆ 2 ಟೆಸ್ಟ್ ಪಂದ್ಯಗಳನ್ನು ಆಯೋಜಿಸಿದ ಕಾರಣ ಚೆನ್ನೈಯನ್ನು ಹೊರಗಿಡಲಾಗಿದೆ. ಇದರ ಬದಲು ಕೇರಳದ ಕೇಂದ್ರವೊಂದರಲ್ಲಿ ಇದನ್ನುಆಯೋಜಿಸಲು ಬಿಸಿಸಿಐ ನಿರ್ಧರಿಸಿದೆ. ಬಹುಶಃ ತಿರುವನಂತಪುರ ಅಥವಾ ಕೊಚ್ಚಿಯನ್ನು ಆಯ್ಕೆ ಮಾಡಬಹುದು.
ನಾಕೌಟ್ ಪಂದ್ಯಗಳನ್ನು ಅಹ್ಮದಾಬಾದ್ ಹೊರತುಪಡಿಸಿ ಉಳಿದ ಕೇಂದ್ರವೊಂದರಲ್ಲಿ ನಡೆಸುವುದು ಬಿಸಿಸಿಐ ಯೋಜನೆಯಾಗಿದೆ. ಇಲ್ಲಿ ಭಾರತ-ಇಂಗ್ಲೆಂಡ್ ನಡುವಿನ 2 ಟೆಸ್ಟ್ ಪಂದ್ಯಗಳು ನಡೆಯಲಿರುವುದರಿಂದ ಆಹ್ಮದಾಬಾದನ್ನು ದೂರ ಇರಿಸಲಾಗಿದೆ.
ವನಿತಾ ಏಕದಿನ ಸರಣಿ
ವಿಜಯ್ ಹಜಾರೆ ಟ್ರೋಫಿ ಪಂದ್ಯಾವಳಿಯಂತೆ ವನಿತಾ ಏಕದಿನ ಸರಣಿಯನ್ನೂ ಬಿಸಿಸಿಐ ಆಯೋಜಿಸಲಿದ್ದು, ಇದು ಕೂಡ ಫೆ. 18ರಿಂದಲೇ ಆರಂಭವಾಗಲಿದೆ. ವಿಜಯವಾಡ, ಹೈದರಾಬಾದ್ ಮತ್ತು ಪುಣೆಯಲ್ಲಿ ಪಂದ್ಯಗಳು ನಡೆಯಲಿವೆ