ಬೆಂಗಳೂರು: ವಿಜಯ್ ಹಜಾರೆ ಟ್ರೋಫಿ ಏಕದಿನ ಕ್ರಿಕೆಟ್ ಪಂದ್ಯಾವಳಿಯಲ್ಲಿ ಕರ್ನಾಟಕ ಸತತ 2ನೇ ಗೆಲುವು ದಾಖಲಿಸಿದೆ. ಗುರುವಾರ ಬೆಂಗಳೂರಿನಲ್ಲಿ ನಡೆದ ಮುಖಾಮುಖೀಯಲ್ಲಿ ಕರುಣ್ ನಾಯರ್ ಬಳಗ 111 ರನ್ನುಗಳಿಂದ ಅಸ್ಸಾಮ್ ತಂಡವನ್ನು ಉರುಳಿಸಿತು. ಮೊದಲ ಪಂದ್ಯದಲ್ಲಿ ರಾಜ್ಯ ತಂಡ ಬರೋಡಕ್ಕೆ ಸೋಲುಣಿಸಿತ್ತು.
ಕರ್ನಾಟಕದ ಅಗ್ರ ಕ್ರಮಾಂಕದ ಬ್ಯಾಟಿಂಗ್ ವೈಭವ, ಮಧ್ಯಮ ವೇಗಿ ಪ್ರಸಿದ್ಧ್ ಕೃಷ್ಣ ಅವರ 6 ವಿಕೆಟ್ ಬೇಟೆ… ಕರ್ನಾಟಕದ ಜಯದಲ್ಲಿ ಎದ್ದು ಕಂಡ ಅಂಶಗಳು. “ಜಸ್ಟ್ ಕ್ರಿಕೆಟ್ ಅಕಾಡೆಮಿ ಗ್ರೌಂಡ್’ನಲ್ಲಿ ಬ್ಯಾಟಿಂಗಿಗೆ ಇಳಿಸಲ್ಪಟ್ಟ ಕರ್ನಾಟಕ 6 ವಿಕೆಟ್ ನಷ್ಟಕ್ಕೆ 303 ರನ್ ಪೇರಿಸಿ ಸವಾಲೊಡ್ಡಿತು. ಜವಾಬು ನೀಡಿದ ಅಸ್ಸಾಮ್ 47.2 ಓವರ್‌ಗಳಲ್ಲಿ 192 ರನ್ನಿಗೆ ತನ್ನೆಲ್ಲ ವಿಕೆಟ್‌ಗಳನ್ನು ಕಳೆದುಕೊಂಡಿತು. ಪ್ರಸಿದ್ಧ್ ಕೃಷ್ಣ 33 ರನ್ ನೀಡಿ 6 ವಿಕೆಟ್ ಉಡಾಯಿಸಿದರು.
ಕರ್ನಾಟಕದ ಬೃಹತ್ ಮೊತ್ತದಲ್ಲಿ ಮತ್ತೆ ಮಾಯಾಂಕ್ ಅಗರ್ವಾಲ್ ಸಿಂಹಪಾಲು ಸಲ್ಲಿಸಿದರು. ಬರೋಡ ವಿರುದ್ಧ ಶತಕ ಬಾರಿಸಿ ಮೆರೆದಿದ್ದ ಅಗರ್ವಾಲ್ ಇಲ್ಲಿ 84 ರನ್ ಹೊಡೆದರು (87 ಎಸೆತ, 10 ಬೌಂಡರಿ, 2 ಸಿಕ್ಸರ್). ಕರ್ನಾಟಕ ಸರದಿಯಲ್ಲಿ ಅಗರ್ವಾಲ್ ಅವರದೇ ಸರ್ವಾಧಿಕ ಗಳಿಕೆ. ನಾಯಕ ಕರುಣ್ ನಾಯರ್ 58 ರನ್ (57 ಎಸೆತ, 6 ಬೌಂಡರಿ, 1 ಸಿಕ್ಸರ್), ಆರ್. ಸಮರ್ಥ್ ಔಟಾಗದೆ 70 ರನ್ (61 ಎಸೆತ, 4 ಬೌಂಡರಿ, 1 ಸಿಕ್ಸರ್), ಪವನ್ ದೇಶಪಾಂಡೆ 43 ರನ್ ಹೊಡೆದರು. ಆರಂಭಕಾರ ಕೆ.ಎಲ್. ರಾಹುಲ್ 22 ರನ್ ಮಾಡಿ ಔಟಾದರು.
ಅಗರ್ವಾಲ್-ನಾಯರ್ ಜೋಡಿಯಿಂದ 2ನೇ ವಿಕೆಟಿಗೆ ಭರ್ತಿ 100 ರನ್ ಒಟ್ಟುಗೂಡಿತು. ಸಮರ್ಥ್-ದೇಶಪಾಂಡೆ 4ನೇ ವಿಕೆಟ್ ಜತೆಯಾಟದಲ್ಲಿ 88 ರನ್ ಪೇರಿಸಿದರು. ಅಸ್ಸಾಮ್ ಪರ ಅಬು ನೆಚಿಮ್ ಮತ್ತು ಮೃಣ್‌ಮೋಯ್ ದತ್ತ ತಲಾ 2 ವಿಕೆಟ್ ಹಾರಿಸಿದರು.
ಚೇಸಿಂಗ್ ವೇಳೆ ಅಸ್ಸಾಮ್ ಸರದಿಯಲ್ಲಿ ಮಿಂಚಿದ್ದು ಶಿಬಶಂಕರ್ ರಾಯ್ ಮಾತ್ರ. ರಾಯ್ 93 ಎಸೆತಗಳಿಂದ 64 ರನ್ ಹೊಡೆದರು (6 ಬೌಂಡರಿ, 1 ಸಿಕ್ಸರ್). ಪ್ರಸಿದ್ಧ್ ಕೃಷ್ಣ ಹೊರತುಪಡಿಸಿ ಮಿಂಚಿದ ಕರ್ನಾಟಕ ಬೌಲರ್‌ಗಳೆಂದರೆ ಟಿ. ಪ್ರದೀಪ್ ಮತ್ತು ಶ್ರೇಯಸ್ ಗೋಪಾಲ್. ಇಬ್ಬರೂ ತಲಾ 2 ವಿಕೆಟ್ ಉರುಳಿಸಿದರು.
8 ಅಂಕಗಳೊಂದಿಗೆ “ಎ’ ವಿಭಾಗದ ಅಗ್ರಸ್ಥಾನದಲ್ಲಿರುವ ಕರ್ನಾಟಕ ತನ್ನ ಮುಂದಿನ ಪಂದ್ಯವನ್ನು ಶನಿವಾರ ಹರಿಯಾಣ ವಿರುದ್ಧ ಆಡಲಿದೆ.
ಸಂಕ್ಷಿಪ್ತ ಸ್ಕೋರ್: ಕರ್ನಾಟಕ-6 ವಿಕೆಟಿಗೆ 303 (ಅಗರ್ವಾಲ್ 84, ಸಮರ್ಥ್ ಔಟಾಗದೆ 70, ನಾಯರ್ 58, ದೇಶಪಾಂಡೆ 43, ಅಹ್ಮದ್ 51ಕ್ಕೆ 2, ದತ್ತ 67ಕ್ಕೆ 2). ಅಸ್ಸಾಮ್-47.2 ಓವರ್‌ಗಳಲ್ಲಿ 192 (ರಾಯ್ 64, ಅಹ್ಮದ್ 43, ಪರಾಗ್ 22, ಪ್ರಸಿದ್ಧ್ ಕೃಷ್ಣ 33ಕ್ಕೆ 6, ಗೋಪಾಲ್ 35ಕ್ಕೆ 2, ಪ್ರದೀಪ್ 43ಕ್ಕೆ 2).