Advertisement

ವಿಜಯ್‌ ಹಜಾರೆ: ಬಂಗಾಲಕ್ಕೆ ಶರಣಾದರೂ ಮುನ್ನಡೆದ ಕರ್ನಾಟಕ

11:07 PM Dec 14, 2021 | Team Udayavani |

ತಿರುವನಂತಪುರ: ಬಂಗಾಲ ವಿರುದ್ಧದ ಅಂತಿಮ ಲೀಗ್‌ ಪಂದ್ಯದಲ್ಲಿ ಪರಾಭವಗೊಂಡ ಹೊರತಾಗಿಯೂ ಕರ್ನಾಟಕ ತಂಡ “ವಿಜಯ್‌ ಹಜಾರೆ ಟ್ರೋಫಿ’ ಕ್ರಿಕೆಟ್‌ ಪಂದ್ಯಾವಳಿಯ ನಾಕೌಟ್‌ ಪ್ರವೇಶಿಸುವಲ್ಲಿ ಯಶಸ್ವಿಯಾಗಿದೆ.

Advertisement

“ಬಿ’ ವಿಭಾಗದ ಸ್ಪರ್ಧೆಯಲ್ಲಿ 4 ತಂಡಗಳು ತಲಾ 12 ಅಂಕ ಸಾಧಿಸಿದ್ದು, ಅಗ್ರಸ್ಥಾನದಲ್ಲಿದ್ದ ತಮಿಳುನಾಡು (+1.047) ನೇರವಾಗಿ ಕ್ವಾರ್ಟರ್‌ ಫೈನಲ್‌ ಟಿಕೆಟ್‌ ಪಡೆಯಿತು. ದ್ವಿತೀಯ ಸ್ಥಾನಿ ಕರ್ನಾಟಕ (+0.784) ಪ್ರಿ-ಕ್ವಾರ್ಟರ್‌ ಫೈನಲ್‌ ಪ್ರವೇಶಿಸಿತು. ಬಂಗಾಲ ಮತ್ತು ಪುದುಚೇರಿ ಕೂಡ 12 ಅಂಕ ಹೊಂದಿದ್ದರೂ ಎರಡೂ ತಂಡಗಳ ರನ್‌ರೇಟ್‌ ಮೈನಸ್‌ನಲ್ಲಿತ್ತು. ಕೊನೆಯ ಪಂದ್ಯದಲ್ಲಿ ಪುದುಚೇರಿಗೆ ಶರಣಾದ ಮುಂಬಯಿ “ಬಿ’ ವಿಭಾಗದ ಕೊನೆಯ ಸ್ಥಾನದ ಅವಮಾನಕ್ಕೆ ಸಿಲುಕಿತು.

ಪಾಂಡೆ ಕಪ್ತಾನನ ಆಟ
ಟಾಸ್‌ ಗೆದ್ದು ಮೊದಲು ಬ್ಯಾಟಿಂಗ್‌ ಆಯ್ದುಕೊಂಡ ಕರ್ನಾಟಕ 8 ವಿಕೆಟಿಗೆ 252 ರನ್‌ ಗಳಿಸಿದರೆ, ಬಂಗಾಲ 48.3 ಓವರ್‌ಗಳಲ್ಲಿ 6 ವಿಕೆಟಿಗೆ 253 ರನ್‌ ಬಾರಿಸಿತು.

ಕರ್ನಾಟಕ ಪರ ನಾಯಕ ಮನೀಷ್‌ ಪಾಂಡೆ 90 ರನ್‌ ಹೊಡೆದರು. ಆಕ್ರಮಣಕಾರಿ ಆಟವಾಡಿದ ಪಾಂಡೆ 85 ಎಸೆತ ಎದುರಿಸಿ, 4 ಸಿಕ್ಸರ್‌ ಹಾಗೂ 4 ಬೌಂಡರಿ ಬಾರಿಸಿ ಮಿಂಚಿದರು. ಆರಂಭಕಾರ ರೋಹನ್‌ ಕದಂ ಮತ್ತು ಪ್ರವೀಣ್‌ ದುಬೆ ತಲಾ 47 ರನ್‌ ಮಾಡಿದರು. ಎಡಗೈ ಸ್ಪಿನ್ನರ್‌ ಪ್ರದೀಪ್‌ ಪ್ರಾಮಾಣಿಕ್‌ 4 ವಿಕೆಟ್‌ ಕೀಳುವಲ್ಲಿ ಯಶಸ್ವಿಯಾದರು.

ಸಂಕ್ಷಿಪ್ತ ಸ್ಕೋರ್‌: ಕರ್ನಾಟಕ-8 ವಿಕೆಟಿಗೆ 252 (ಪಾಂಡೆ 90, ಕದಂ 47, ದುಬೆ ಔಟಾಗದೆ 47, ಪ್ರಾಮಾಣಿಕ್‌ 48ಕ್ಕೆ 4, ರಿತಿಕ್‌ ಚಟರ್ಜಿ 51ಕ್ಕೆ 2). ಬಂಗಾಲ-48.3 ಓವರ್‌ಗಳಲ್ಲಿ 6 ವಿಕೆಟಿಗೆ 253 (ಸುದೀಪ್‌ ಚಟರ್ಜಿ 63, ಅಭಿಷೇಕ್‌ ದಾಸ್‌ 58, ರಿತಿಕ್‌ ಚೌಧರಿ 49, ಜೈನ್‌ 56ಕ್ಕೆ 3).

Advertisement

ಇದನ್ನೂ ಓದಿ:ಪ್ರವಾಹ ಪರಿಹಾರ ನೀಡುವಲ್ಲಿ ಸರ್ಕಾರ ವಿಫಲ: ಸಿದ್ದರಾಮಯ್ಯ

ಪುದುಚೇರಿಗೆ ಶರಣಾದ ಮುಂಬಯಿ!
ಕೂಟದುದ್ದಕ್ಕೂ ತೀರಾ ಕಳಪೆ ಪ್ರದರ್ಶನ ನೀಡಿದ ಮುಂಬಯಿ, ಮಂಗಳವಾರದ ಅಂತಿಮ ಲೀಗ್‌ ಪಂದ್ಯದಲ್ಲಿ ಪುದುಚೇರಿಗೆ 18 ರನ್ನುಗಳಿಂದ ಶರಣಾಗಿ ತೀವ್ರ ಮುಖಭಂಗ ಆನುಭವಿಸಿತು. ಪುದುಚೇರಿ ಮೊದಲು ಬ್ಯಾಟಿಂಗ್‌ ನಡೆಸಿ 157 ರನ್ನುಗಳ ಸಣ್ಣ ಮೊತ್ತಕ್ಕೆ ಕುಸಿದರೂ ಮುಂಬಯಿಗೆ ಈ ಮೊತ್ತವನ್ನು ಹಿಂದಿಕ್ಕಲಾಗಲಿಲ್ಲ. ಫಾಬಿದ್‌ ಅಬಿದ್‌ (16ಕ್ಕೆ 4), ಸಾಗರ್‌ ಉದೇಶಿ, ಸಾಗರ್‌ ತ್ರಿವೇದಿ ಮತ್ತು ಭರತ್‌ ಶರ್ಮ (ತಲಾ 2 ವಿಕೆಟ್‌) ದಾಳಿಗೆ ತತ್ತರಿಸಿದ ಮುಂಬಯಿ 48.1 ಓವರ್‌ಗಳಲ್ಲಿ 139ಕ್ಕೆ ಆಲೌಟ್‌ ಆಯಿತು.

ನಾಕೌಟ್‌ ಪಂದ್ಯಗಳು
ತಮಿಳುನಾಡು, ಹಿಮಾಚಲ ಪ್ರದೇಶ, ಸೌರಾಷ್ಟ್ರ ಕೇರಳ ಮತ್ತು ಸರ್ವೀಸಸ್‌ ತಂಡಗಳು ನೇರವಾಗಿ ಕ್ವಾರ್ಟರ್‌ ಫೈನಲ್‌ ಪ್ರವೇಶಿಸಿವೆ. ಕರ್ನಾಟಕ-ರಾಜಸ್ಥಾನ, ವಿದರ್ಭ-ತ್ರಿಪುರ, ಉತ್ತರಪ್ರದೇಶ-ಮಧ್ಯಪ್ರದೇಶ ತಂಡಗಳು ಪ್ರಿ-ಕ್ವಾರ್ಟರ್‌ ಫೈನಲ್‌ನಲ್ಲಿ ಮುಖಾಮುಖಿ ಆಗಲಿವೆ. ಈ ಮೂರೂ ಪಂದ್ಯಗಳು ರವಿವಾರ ಜೈಪುರದಲ್ಲಿ ನಡೆಯಲಿವೆ.

ಗಾಯಕ್ವಾಡ್‌ 4ನೇ ಶತಕ!
ಪ್ರಚಂಡ ಫಾರ್ಮ್ ಮುಂದುವರಿಸಿದ ಮಹಾರಾಷ್ಟ್ರದ ಆರಂಭಕಾರ ಹಾಗೂ ನಾಯಕ ಋತುರಾಜ್‌ ಗಾಯಕ್ವಾಡ್‌ ಕೂಟದ 4ನೇ ಶತಕ ಬಾರಿಸಿ ಮೆರೆದಾಡಿದರು. ಛತ್ತೀಸ್‌ಗಢ ವಿರುದ್ಧ 309 ರನ್‌ ಚೇಸ್‌ ಮಾಡುವ ಹಾದಿಯಲ್ಲಿ ಗಾಯಕ್ವಾಡ್‌ 132 ಎಸೆತಗಳಿಂದ 168 ರನ್‌ ಸೂರೆಗೈದರು (12 ಬೌಂಡರಿ, 6 ಸಿಕ್ಸರ್‌).

ಗಾಯಕ್ವಾಡ್‌ ವಿಜಯ್‌ ಹಜಾರೆ ಟ್ರೋಫಿ ಸರಣಿಯೊಂದರಲ್ಲಿ 4 ಶತಕ ಬಾರಿಸಿದ 4ನೇ ಆಟಗಾರ. ಉಳಿದವರೆಂದರೆ ವಿರಾಟ್‌ ಕೊಹ್ಲಿ, ಪೃಥ್ವಿ ಶಾ ಮತ್ತು ದೇವದತ್ತ ಪಡಿಕ್ಕಲ್‌.

ಗಾಯಕ್ವಾಡ್‌ ಈ ಕೂಟದಲ್ಲಿ 600 ರನ್‌ ಪೇರಿಸಿದ ಮೊದಲ ಬ್ಯಾಟ್ಸ್‌ಮನ್‌ ಎಂಬ ಹಿರಿಮೆಗೂ ಪಾತ್ರರಾದರು. ಅವರು 150.75 ಸರಾಸರಿಯಲ್ಲಿ 603 ರನ್‌ ಪೇರಿಸಿದ್ದಾರೆ. ಕ್ರಮವಾಗಿ 136, ಅಜೇಯ 154, 124, 21 ಮತ್ತು 168 ರನ್‌ ಬಾರಿಸಿದ ಸಾಧನೆ ಗಾಯಕ್ವಾಡ್‌ ಅವರದು.

Advertisement

Udayavani is now on Telegram. Click here to join our channel and stay updated with the latest news.

Next