Advertisement

ವಿಜಯ್‌ ಹಜಾರೆ: ಕ್ವಾ. ಫೈನಲ್‌ಗೆ ಕರ್ನಾಟಕ

10:38 AM Oct 14, 2019 | sudhir |

ಬೆಂಗಳೂರು: ವಿಜಯ್‌ ಹಜಾರೆ ಏಕದಿನ ಕ್ರಿಕೆಟ್‌ ಪಂದ್ಯಾವಳಿಯ ಶನಿವಾರದ ಮುಖಾಮುಖೀಯಲ್ಲಿ ಆತಿಥೇಯ ಕರ್ನಾಟಕ ತಂಡ ಸೌರಾಷ್ಟ್ರ ವಿರುದ್ಧ 8 ವಿಕೆಟ್‌ ಗೆಲುವು ಸಾಧಿಸಿ ಕ್ವಾರ್ಟರ್‌ ಫೈನಲ್‌ ಪ್ರವೇಶಿಸಿತು. ಇದು ಕರ್ನಾಟಕದ 6ನೇ ಗೆಲುವಾಗಿದ್ದು, 24 ಅಂಕಗಳೊಂದಿಗೆ ಅಗ್ರಸ್ಥಾನದಲ್ಲಿ ಮುಂದುವರಿದಿದೆ.
“ಚಿನ್ನಸ್ವಾಮಿ ಕ್ರೀಡಾಂಗಣ’ದಲ್ಲಿ ನಡೆದ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್‌ ನಡೆಸಿದ ಸೌರಾಷ್ಟ್ರ ವೇಗಿ ಪ್ರಸಿದ್ಧ್ ಕೃಷ್ಣ (19ಕ್ಕೆ 5) ಮತ್ತು ವಿ. ಕೌಶಿಕ್‌ (23ಕ್ಕೆ 3) ಅವರ ಮಾರಕ ಬೌಲಿಂಗ್‌ ದಾಳಿಗೆ ಸಿಲುಕಿ 47.2 ಓವರ್‌ಗಳಲ್ಲಿ 212ಕ್ಕೆ ಆಲೌಟಾಯಿತು. ಸುಲಭ ಗುರಿ ಬೆನ್ನಟ್ಟಿದ ರಾಜ್ಯ ತಂಡ 36.4 ಓವರ್‌ಗಳಲ್ಲಿ ಕೇವಲ 2 ವಿಕೆಟಿಗೆ 213 ರನ್‌ ಗಳಿಸಿ ಜಯ ಸಾಧಿಸಿತು. ಕರ್ನಾಟಕ ಅ. 16ರಂದು ಕೊನೆಯ ಲೀಗ್‌ ಪಂದ್ಯದಲ್ಲಿ ಗೋವಾವನ್ನು ಎದುರಿಸಲಿದೆ.

Advertisement

ಆರ್ಭಟಿಸಿದ ಪಡಿಕ್ಕಲ್‌
ಆರಂಭಕಾರ ದೇವದತ್‌ ಪಡಿಕ್ಕಲ್‌ ಅವರ ಅಜೇಯ 103 ರನ್‌ (104 ಎಸೆತ, 13 ಬೌಂಡರಿ, 1 ಸಿಕ್ಸರ್‌) ಕರ್ನಾಟಕ ಸರದಿಯ ಆಕರ್ಷಣೆ ಆಗಿತ್ತು. ಅವರೊಂದಿಗೆ ನಾಯಕ ಮನೀಷ್‌ ಪಾಂಡೆ 67 ರನ್‌ ಬಾರಿಸಿ ಔಟಾಗದೆ ಉಳಿದರು (53 ಎಸೆತ, 7 ಬೌಂಡರಿ, 2 ಸಿಕ್ಸರ್‌). ಇವರಿಬ್ಬರಿಂದ ಮುರಿಯದ 3ನೇ ವಿಕೆಟಿಗೆ 134 ರನ್‌ ಹರಿದು ಬಂತು. ಕೆ.ಎಲ್‌. ರಾಹುಲ್‌ (23), ಕರುಣ್‌ ನಾಯರ್‌ (16) ಬೇಗ ಪೆವಿಲಿಯನ್‌ ಕಡೆಗೆ ನಡೆದರು. ಈ ಎರಡೂ ವಿಕೆಟ್‌ ಪ್ರೇರಕ್‌ ಮಂಕಡ್‌ ಪಾಲಾದವು.

ಪ್ರೇರಕ್‌, ಚಿರಾಗ್‌ ನೆರವು
ಸೌರಾಷ್ಟ್ರ ತಂಡ ಕರ್ನಾಟಕದ ಮಾರಕ ಬೌಲಿಂಗಿಗೆ ತತ್ತರಿಸಿತು. ನಿರಂತರ ವಿಕೆಟ್‌ ಕಳೆದುಕೊಳ್ಳುತ್ತಲೇ ಸಾಗಿತು. ಒಂದು ಹಂತದಲ್ಲಿ ಬರೀ 37 ರನ್ನಿಗೆ 6 ವಿಕೆಟ್‌ ಉದುರಿತ್ತು. ಆದರೆ ಪ್ರೇರಕ್‌ ಮಂಕಡ್‌ (86) ಮತ್ತು ಚಿರಾಗ್‌ ಜಾನಿ (66) ಹೋರಾಟ ಸಂಘಟಿಸಿ ತಂಡದ ಮೊತ್ತವನ್ನು ಇನ್ನೂರರ ಗಡಿ ದಾಟಿಸಿದರು.
ಸಂಕ್ಷಿಪ್ತ ಸ್ಕೋರ್‌: ಸೌರಾಷ್ಟ್ರ-47.2 ಓವರ್‌ಗಳಲ್ಲಿ 212 (ಮಂಕಡ್‌ 86, ಜಾನಿ 66, ಪ್ರಸಿದ್ಧ್ ಕೃಷ್ಣ 19ಕ್ಕೆ 5, ವಿ. ಕೌಶಿಕ್‌ 23ಕ್ಕೆ 3). ಕರ್ನಾಟಕ-36.4 ಓವರ್‌ಗಳಲ್ಲಿ 2 ವಿಕೆಟಿಗೆ 213 (ಪಡಿಕ್ಕಲ್‌ ಔಟಾಗದೆ 103, ಪಾಂಡೆ ಔಟಾಗದೆ 67, ಮಂಕಡ್‌ 33ಕ್ಕೆ 2).

Advertisement

Udayavani is now on Telegram. Click here to join our channel and stay updated with the latest news.

Next