ನವದೆಹಲಿ: 1971ರಲ್ಲಿ ಪಾಕಿಸ್ತಾನ ವಿರುದ್ಧದ ಯುದ್ಧದಲ್ಲಿ ಭಾರತ ವಿಜಯಶಾಲಿಯಾದ ಹಿನ್ನೆಲೆಯಲ್ಲಿ ಶುಕ್ರವಾರ ದೇಶಾದ್ಯಂತ “ವಿಜಯ ದಿವಸ್’ ಆಚರಿಸಲಾಯಿತು.
ಈ ಹಿನ್ನೆಲೆಯಲ್ಲಿ ಟ್ವೀಟ್ ಮಾಡಿದ ರಾಷ್ಟ್ರಪತಿ ದ್ರೌಪದಿ ಮುರ್ಮು, “ವಿಜಯ್ ದಿವಸದ ಈ ಸಂದರ್ಭದಲ್ಲಿ 1971ರ ಯುದ್ಧದ ಸಮಯದಲ್ಲಿ ನಮ್ಮ ಸಶಸ್ತ್ರ ಪಡೆಗಳು ಪ್ರದರ್ಶಿಸಿದ ಅಸಾಧಾರಣ ಶೌರ್ಯವನ್ನು ನಾವು ಕೃತಜ್ಞತೆಯಿಂದ ಸ್ಮರಿಸುತ್ತೇವೆ. ಅವರ ಅಪ್ರತಿಮ ಧೈರ್ಯ ಮತ್ತು ರಾಷ್ಟ್ರಕ್ಕಾಗಿ ಅವರು ಮಾಡಿದ ತ್ಯಾಗ ಪ್ರತಿಯೊಬ್ಬ ಭಾರತೀಯನನ್ನು ಪ್ರೇರೇಪಿಸುತ್ತಲೇ ಇರುತ್ತದೆ,’ ಎಂದು ಹೇಳಿದ್ದಾರೆ.
“1971ರ ಯುದ್ಧದಲ್ಲಿ ಭಾರತವು ಅಸಾಧಾರಣ ವಿಜಯ ಸಾಧಿಸಲು ಶ್ರಮಿಸಿದ ಎಲ್ಲಾ ವೀರ ಯೋಧರಿಗೆ ವಿಜಯ್ ದಿವಸದ ಈ ಸಂದರ್ಭದಲ್ಲಿ ನಾನು ಗೌರವ ಸಲ್ಲಿಸುತ್ತೇನೆ. ದೇಶವನ್ನು ಸುಭದ್ರ ಮತ್ತು ಸುರಕ್ಷಿತವಾಗಿಡುವಲ್ಲಿ ಸಶಸ್ತ್ರ ಪಡೆಗಳ ತ್ಯಾಗಕ್ಕೆ ನಮ್ಮ ರಾಷ್ಟ್ರವು ಸದಾ ಋಣಿಯಾಗಿರುತ್ತದೆ,’ ಎಂದು ಪ್ರಧಾನಿ ನರೇಂದ್ರ ಮೋದಿ ಟ್ವೀಟ್ ಮಾಡಿದ್ದಾರೆ.
“ಭಾರತದ ಸಶಸ್ತ್ರ ಪಡೆಗಳ ಧೈರ್ಯ, ಶೌರ್ಯ ಮತ್ತು ತ್ಯಾಗವನ್ನು ರಾಷ್ಟ್ರವು ಗೌರವಿಸುತ್ತದೆ. 1971ರ ಯುದ್ಧವು ಅಮಾನವೀಯತೆಯ ವಿರುದ್ಧ ಮಾನವೀಯತೆ, ದುರ್ನಡತೆಯ ವಿರುದ್ಧ ಸದ್ಗುಣ ಮತ್ತು ಅನ್ಯಾಯದ ವಿರುದ್ಧ ನ್ಯಾಯದ ವಿಜಯವಾಗಿದೆ. ಭಾರತವು ಸದಾ ತನ್ನ ಸಶಸ್ತ್ರ ಪಡೆಗಳ ಬಗ್ಗೆ ಹೆಮ್ಮೆಪಡುತ್ತದೆ,’ ಎಂದು ರಕ್ಷಣಾ ಸಚಿವ ರಾಜನಾಥ್ ಸಿಂಗ್ ಟ್ವೀಟ್ ಮಾಡಿದ್ದಾರೆ.
1971ರಲ್ಲಿ ಪಾಕಿಸ್ತಾನದ ವಿರುದ್ಧ ಭಾರತ ವಿಜಯ ಸಾಧಿಸಿದ ನಂತರ ಸುಮಾರು 93,000 ಪಾಕ್ ಸೈನಿಕರು ಭಾರತಕ್ಕೆ ಶರಣಾದರು. ಈ ಯುದ್ಧವು ಬಾಂಗ್ಲಾದೇಶದ ಉದಯಕ್ಕೆ ಕಾರಣವಾಯಿತು.