Advertisement

ಸರ್ಕಾರದ ಧ್ಯೇಯೋದ್ದೇಶ ಜಾರಿಗೆ ಆದ್ಯತೆ

06:00 AM Jul 01, 2018 | |

ಬೆಂಗಳೂರು: ಸರ್ಕಾರದ ಸೇವೆಗಳನ್ನು ಸಾಮಾನ್ಯ ಜನರಿಗೆ ಯಾವುದೇ ಅಡೆತಡೆಗಳಿಲ್ಲದೆ ಒದಗಿಸಲು ಪ್ರಥಮ ಆದ್ಯತೆ ನೀಡುತ್ತೇನೆಂದು 37ನೇ ಮುಖ್ಯ ಕಾರ್ಯದರ್ಶಿಯಾಗಿ ಅಧಿಕಾರ ಸ್ವೀಕರಿಸಿದ ಟಿ.ಎಂ.ವಿಜಯ ಭಾಸ್ಕರ್‌ ಹೇಳಿದ್ದಾರೆ.

Advertisement

ಅಧಿಕಾರ ವಹಿಸಿಕೊಂಡ ಬಳಿಕ “ಉದಯವಾಣಿ’ಯೊಂದಿಗೆ ಮಾತನಾಡಿದ ಅವರು, ಸರ್ಕಾರದ ಮುಂದಿರುವ ಸವಾಲು, ಶಾಸಕಾಂಗ- ಕಾರ್ಯಾಂಗದ ಸಮನ್ವಯತೆ, ಆಡಳಿತ ಬಿಗಿಗೊಳಿಸುವ ಬಗ್ಗೆ ವಿಚಾರ ಹಂಚಿಕೊಂಡಿದ್ದಾರೆ. ಅದರ ಸಂಕ್ಷಿಪ್ತ ವಿವರ ಹೀಗಿದೆ.

ನಿಮ್ಮ ಪ್ರಥಮ ಆದ್ಯತೆ?
ಸರ್ಕಾರಿ ಸೇವೆ, ಸವಲತ್ತುಗಳು ಸಾಮಾನ್ಯರಿಗೆ ನೇರವಾಗಿ ಸಿಗಬೇಕು. ಸೌಲಭ್ಯಕ್ಕಾಗಿ ಅವರು ಕಚೇರಿಯಿಂದ ಕಚೇರಿಗೆ ಓಡಾಡುವಂತಾಗಬಾರದು. ಸೇವೆ, ಸೌಲಭ್ಯಗಳನ್ನು ತ್ವರಿತವಾಗಿ ಕಲ್ಪಿಸಲು ಆದ್ಯತೆ ನೀಡಲಾಗುವುದು.

ಸೇವೆಗೆ ಸೇರಿದಾಗ ಮುಖ್ಯ ಕಾರ್ಯದರ್ಶಿಯಾಗುವ ನಿರೀಕ್ಷೆ ಇತ್ತೇ?
ಭಾರತೀಯ ಆಡಳಿತ ಸೇವೆಗೆ ಸೇರುವ ವಯಸ್ಸಿನ ಆಧಾರದ ಮೇಲೆ ಮುಖ್ಯ ಕಾರ್ಯದರ್ಶಿ ಸ್ಥಾನಕ್ಕೇರುವ ಸಾಧ್ಯತೆ
ನಿರ್ಧಾರವಾಗುತ್ತದೆ. ಅದರಂತೆ ಹಿರಿತನ, ಅನುಭವದ ಆಧಾರದ ಈ ಸ್ಥಾನ ದೊರೆತಿದೆ ಎಂದು ಭಾವಿಸಿದ್ದೇನೆ.

ಸರ್ಕಾರದ ಮುಂದಿರುವ ಸವಾಲುಗಳೇನು?
ರೈತರ ಕಲ್ಯಾಣ, ನಿರುದ್ಯೋಗ ಸಮಸ್ಯೆ ನಿವಾರಣೆ ಸೇರಿ ಇತರೆ ಸವಾಲುಗಳಿದ್ದು, ಅವುಗಳನ್ನು ನಿವಾರಿಸಲು
ಕಾರ್ಯಾಂಗದಿಂದ ಅಗತ್ಯವಿರುವ ಎಲ್ಲ ಪ್ರಯತ್ನ ಒಗ್ಗೂಡಿಸಿ ಕಾರ್ಯೋನ್ಮುಖಗೊಳಿಸಲು ಒತ್ತು ನೀಡಲಾಗುವುದು.

Advertisement

ಕಾರ್ಯಾಂಗ ಮತ್ತು ಶಾಸಕಾಂಗದ ನಡುವೆ ಸಮನ್ವಯತೆ ಇದೆಯೇ?
ಶಾಸಕಾಂಗದ ಆಶಯಗಳನ್ನು ಜಾರಿಗೊಳಿಸುವುದು ಕಾರ್ಯಾಂಗದ ಜವಾಬ್ದಾರಿ. ಎಲ್ಲರೂ ಒಂದು ತಂಡವಾಗಿ
ಕಾರ್ಯ ಪ್ರವೃತ್ತರಾದಾಗ ಸರ್ಕಾರದ ಧ್ಯೇಯೋದ್ದೇಶ ಗಳನ್ನು ಪರಿಣಾಮಕಾರಿಯಾಗಿ ಜಾರಿಗೊಳಿಸಲು ಸಾಧ್ಯ. 
ಶಾಸಕಾಂಗಕ್ಕೆ ಪೂರಕವಾಗಿ ಕಾರ್ಯಾಂಗ ಕಾರ್ಯ ನಿರ್ವಹಿಸುತ್ತಿದೆ. 

ಕೆಲ ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿಗಳ ಕಾರ್ಯನಿರ್ವಹಣೆ ಸಮರ್ಪಕವಾಗಿಲ್ಲ ಎಂಬ ಆರೋಪದ ಬಗ್ಗೆ ಏನು ಹೇಳುವಿರಿ?
ಇದರ ಬಗ್ಗೆ ಮಾಹಿತಿಯಿಲ್ಲ. ಈ ಕುರಿತು ಸಮೀಕ್ಷೆ ನಡೆಸಿ ಪರಿಶೀಲಿಸಲಾಗುವುದು. ಎಲ್ಲರನ್ನು ವಿಶ್ವಾಸಕ್ಕೆ ತೆಗೆದುಕೊಂಡು ತಮಗೆ ವಹಿಸಿರುವ ಜವಾಬ್ದಾರಿಯನ್ನು ಸಮರ್ಪಕವಾಗಿ ನಿರ್ವಹಿಸುವಂತೆ ಪ್ರೇರೇಪಿಸಲಾಗುವುದು.

3 ಅಧಿಕಾರಿಗಳ ವರ್ಗ
ಸರ್ಕಾರದ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಹಾಗೂ ಅಭಿವೃದ್ಧಿ ಆಯುಕ್ತರನ್ನಾಗಿ ವಂದಿತಾ ಶರ್ಮಾ ಅವರನ್ನು
ನೇಮಕ ಮಾಡಿ ಸರ್ಕಾರ ಆದೇಶ ಹೊರಡಿಸಿದೆ ,ಡಿ.ವಿ.ಪ್ರಸಾದ್‌ ಅವರನ್ನು ಸರ್ಕಾರದ ಹೆಚ್ಚುವರಿ ಮುಖ್ಯ 
ಕಾರ್ಯದರ್ಶಿಯನ್ನಾಗಿ ನೇಮಿಸಲಾಗಿದೆ. ಮೂಲ ಸೌಕರ್ಯ ಅಭಿವೃದ್ಧಿ ಇಲಾಖೆ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಸಂದೀಪ್‌ ದವೆ ಅವರಿಗೆ ಹೆಚ್ಚುವರಿಯಾಗಿ ಅರಣ್ಯ, ಜೀವಿಶಾಸ್ತ್ರ ಮತ್ತು ಪರಿಸರ ಇಲಾಖೆಯ ಜವಾಬ್ದಾರಿ ವಹಿಸಲಾಗಿದೆ.

ಜನರಿಗೆ ಸ್ಪಂದಿಸುವುದು ನನ್ನ ಮೊದಲ ಆದ್ಯತೆಯಾಗಿತ್ತು. ಅದರಂತೆ ಕಾರ್ಯ ನಿರ್ವಹಿಸಿದ್ದೇನೆ. ಭೇಟಿಗಾಗಿ ಮೂರ್‍ನಾಲ್ಕು ಗಂಟೆ ಕಾಯುತ್ತಾ ಕುಳಿತವರಿಗೆ ಸ್ಪಂದಿಸುವ ಕಾರ್ಯವನ್ನು ಅದ್ಭುತವಾಗಿ ನಿರ್ವಹಿಸಿದ ತೃಪ್ತಿ ಇದೆ. 
– ಕೆ.ರತ್ನಪ್ರಭಾ
ನಿರ್ಗಮಿತ ಮುಖ್ಯ ಕಾರ್ಯದರ್ಶಿ

– ಎಂ.ಕೀರ್ತಿಪ್ರಸಾದ್‌

Advertisement

Udayavani is now on Telegram. Click here to join our channel and stay updated with the latest news.

Next