ಧಾರವಾಡ: ಆರ್‌ಎಸ್‌ಎಸ್ ಕಾರ್ಯಕರ್ತ ಶರತ್‌ಕುಮಾರ ಮಡಿವಾಳ ಹತ್ಯೆಗೆ ಕಾರಣರಾದ ಆರೋಪಿಗಳನ್ನು ಬಂಧಿಸಿ, ಗಲ್ಲು ಶಿಕ್ಷೆಗೆ ಗುರಿಪಡಿಸುವಂತೆ ಆಗ್ರಹಿಸಿ ವಿಶ್ವ ಹಿಂದೂ ಪರಿಷದ್ ಹಾಗೂ ಬಜರಂಗದಳ ಕಾರ್ಯಕರ್ತರು ನಗರದ ಡಿಸಿ ಕಚೇರಿ ಎದುರು ಸೋಮವಾರ ಪ್ರತಿಭಟನೆ ನಡೆಸಿದರು.
ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಹಿಂದೂಗಳಿಗೆ ರಕ್ಷಣೆ ಇಲ್ಲದಂತಾಗಿದೆ. ಹತ್ಯೆ ಹಿಂದೆ ಮುಸ್ಲಿಂ ಸಂಘಟನೆಗಳ ಕೈವಾಡವಿರುವುದು ನಿಶ್ಚಿತ. ರಾಜ್ಯ ಸರ್ಕಾರ ಕೊಲೆಪ್ರಕರಣವನ್ನು ಸಮರ್ಪಕವಾಗಿ ನಡೆಸುತ್ತದೆ ಎಂಬ ಭರವಸೆ ಇಲ್ಲದ ಕಾರಣ ಈ ಪ್ರಕರಣವನ್ನು ಸಿಬಿಐಗೆ ವಹಿಸುವಂತೆ ಡಿಸಿ ಮೂಲಕ ರಾಜ್ಯಪಾಲರಿಗೆ ಮನವಿ ಸಲ್ಲಿಸಲಾಯಿತು.
ಪಿಎಫ್ ಹಾಗೂ ಎಸ್‌ಡಿಪಿಐ ಸೇರಿದಂತೆ ಇನ್ನೂ ಹಲವು ಮುಸ್ಲಿಂ ಸಂಘಟನೆಗಳು ಈ ಪ್ರಕರಣದಲ್ಲಿ ಭಾಗಿಯಾಗಿರುವ ಸಂಶಯವಿದೆ. ರಾಜ್ಯದಲ್ಲಿ ಕೂಡಲೇ ಈ ಸಂಘಟನೆಗಳಿಗೆ ನಿಷೇಧ ಹೇರಬೇಕು. ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದ ನಂತರದಲ್ಲಿ 27ಕ್ಕೂ ಹೆಚ್ಚು ಆರ್‌ಎಸ್‌ಎಸ್ ಕಾರ್ಯಕರ್ತರ ಹತ್ಯೆ ನಡೆದಿವೆ.
ಇಂತಹ ಕೃತ್ಯಗಳನ್ನು ಲಘುವಾಗಿ ಪರಿಗಣಿಸಿರುವ ಸರ್ಕಾರ ರಾಷ್ಟ್ರ ಭಕ್ತರನ್ನು ತಾಲಿಬಾನ್ ಜೊತೆ ಹೋಲಿಕೆ ಮಾಡುವ ಮನಸ್ಥಿತಿ ಹೊಂದಿದೆ ಎಂದು ದೂರಿದರು. ಮಂಗಳೂರಿನಲ್ಲಿ ನಿರಂತರವಾಗಿ ಕೋಮು ದ್ವೇಷ ಹರಡುವ ಮಂಗಳೂರು ಮುಸ್ಲಿಂ ಫೇಸ್ ಬುಕ್ ಪೇಜ್ ಅಡ್ಮಿನ್‌ಗಳ ವಿರುದ್ಧ ಪ್ರಕರಣ ದಾಖಲಿಸಿ ಸೂಕ್ತ ಕ್ರಮ ಕೈಗೊಳ್ಳಬೇಕು.
ಇದಲ್ಲದೇ ಕೋಮು ಪ್ರಚೋದನೆ ನೀಡುತ್ತಿರುವ ಸಚಿವರಾದ ರಮಾನಾಥ ರೈ ಹಾಗೂ ಯು.ಟಿ. ಖಾದರ ಅವರನ್ನು ಶೀಘ್ರ ಸಂಪುಟದಿಂದ ಕೈ ಬಿಡಬೇಕು. ತಪ್ಪಿತ್ಥರನ್ನು ಶೀಘ್ರ ಬಂಧಿಸದಿದ್ದಲ್ಲಿ ಚಲೋ ದಕ್ಷಿಣ ಕನ್ನಡ ಜಿಲ್ಲೆ ಹಮ್ಮಿಕೊಳ್ಳಲಾಗುವುದು ಎಂದು ಎಚ್ಚರಿಸಿದರು.
ಬಜರಂಗದಳ ಜಿಲ್ಲಾ ಸಂಚಾಲಕ ಶಿವಾನಂದ ಸತ್ತಿಗೇರಿ, ವಿಶ್ವ ಹಿಂದೂ ಪರಿಷತ್ ಜಿಲ್ಲಾಧ್ಯಕ್ಷ ಎಸ್.ಎಚ್. ಪಾಟೀಲ, ಕಾರ್ಯದರ್ಶಿ ಪ್ರಭಾಕರ ದೇಶಪಾಂಡೆ, ಲಕ್ಷ್ಮಣ ಹೂಗಾರ, ಓಂಕಾರ ರಾಯಚೂರ, ಮಹೇಶ ಸುಲಾಖೆ, ಸಂತೋಷ ಪೂಜಾರಿ, ಹರೀಶ ದೊಡವಾಡ, ಭಾಸ್ವಾನ್ ಹೆಗಡೆ ಇದ್ದರು.